ಬಂಗ್ರಕೂಳೂರಿನಲ್ಲಿ 'ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ' ಪ್ರದಾನ ಕಾರ್ಯಕ್ರಮ
ಮಂಗಳೂರು: ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಕಾರ್ಯಕ್ರಮ ಆದಿತ್ಯವಾರ ಸಂಜೆ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಜರುಗಿತು. ಗುರ್ಮೆ ಸುರೇಶ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. "ಆಲದ ಮರದಂತೆ ನೊಂದವರ ಆಶಾಕಿರಣವಾಗಿರುವ ಪ್ರಕಾಶ್ ಶೆಟ್ಟಿ ಅವರು ತಾವು ಕಷ್ಟಪಟ್ಟು ದುಡಿದ ಹಣವನ್ನು ಕೂಡಿಡದೆ ಸಮಾಜಕ್ಕೆ ಇಂತಿಷ್ಟು ಪಾಲು ನೀಡುತ್ತಿದ್ದಾರೆ. ಇದು ಇನ್ನಷ್ಟು ಮಂದಿಗೆ ಸ್ಫೂರ್ತಿಯಾಗಲಿ. ನೊಂದವರು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಪ್ರಕಾಶ್ ಶೆಟ್ಟಿಯವರ ಸಂಖ್ಯೆ ಸಾವಿರವಾಗಲಿ. ಪ್ರತೀ ವರ್ಷ ತಮ್ಮ ಹುಟ್ಟುಹಬ್ಬದ ದಿನದಂದು ಸಮಾಜಕ್ಕೆ ನೆರವಿನ ಸಹಾಯಹಸ್ತ ಚಾಚುವ ಅವರ ಗುಣ ಶ್ಲಾಘನೀಯವಾದುದು. ಕಳೆದ ಬಾರಿ ಹೇಳಿದಂತೆ ಈ ಬಾರಿ ಮೂರು ಕೋಟಿ ರೂಪಾಯಿಯನ್ನು ಸಹಾಯಹಸ್ತದ ರೂಪದಲ್ಲಿ ವಿತರಣೆ ಮಾಡುತ್ತಿದ್ದಾರೆ ಅವರಿಗೆ ನಮ್ಮೆಲ್ಲರ ಆಶೀರ್ವಾದವಿರಲಿ" ಎಂದರು.
ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಎಂಆರ್ ಜಿ ಗ್ರೂಪ್ ಚೇರ್ ಮೆನ್ ಕೆ. ಪ್ರಕಾಶ್ ಶೆಟ್ಟಿ ಅವರು, "ಇಂದಿನ ದಿನ ನನ್ನ ಜೀವನದಲ್ಲಿ ಅತ್ಯಂತ ಸಂತೋಷ ಮತ್ತು ತೃಪ್ತಿ ಕೊಡುವ ದಿನವಾಗಿದೆ. 2019ರಲ್ಲಿ ನನ್ನ 60ನೇ ಹುಟ್ಟುಹಬ್ಬವನ್ನು "ಪ್ರಕಾಶಾಭಿನಂದನ" ಹೆಸರಲ್ಲಿ ಇದೇ ವೇದಿಕೆಯಲ್ಲಿ ಅಭಿಮಾನಿಗಳು ಬಹಳಷ್ಟು ಅದ್ಧೂರಿಯಿಂದ ನಡೆಸಿದ್ದರು. ಅಂದಿನ ವೇದಿಕೆಯಲ್ಲಿ ನಾನು ಪ್ರತೀ ವರ್ಷ ಒಂದು ಕೋಟಿ ರೂ. ಹಣವನ್ನು ಸಮಾಜಕ್ಕೆ ನೆರವಿನ ರೂಪದಲ್ಲಿ ನೀಡುವುದಾಗಿ ಘೋಷಿಸಿದ್ದೆ. ಅದರಂತೆ 2019ರಲ್ಲಿ ಒಂದೂವರೆ ಕೋಟಿ ರೂ. ನೆರವು ನೀಡಲಾಗಿದೆ. 2020-21ರಲ್ಲಿ ಕೊರೋನಾ ಹಾವಳಿ ಇದ್ದರೂ ತಲಾ 2 ಕೋಟಿ ರೂ. ನೆರವು ನೀಡಲಾಯಿತು. ಈ ವರ್ಷ 1,250 ಮಂದಿಗೆ ಸುಮಾರು 3 ಕೋಟಿಯಷ್ಟು ಹಣವನ್ನು ನೆರವಿನ ರೂಪದಲ್ಲಿ ನೀಡಲಾಗುತ್ತಿದೆ. 10,000 ರೂ. ನಿಂದ 5 ಲಕ್ಷ ರೂ. ತನಕ ವಿದ್ಯಾಭ್ಯಾಸ, ಆರೋಗ್ಯ, ಬಡ ಕುಟುಂಬಗಳಿಗೆ ಆಸರೆಯಾಗಲು ಸಹಾಯ ಧನವನ್ನು ಹಂಚಲಾಗುತ್ತಿದೆ. 2,000 ಅರ್ಜಿಗಳು ಬಂದಿದ್ದು ಎಲ್ಲವನ್ನೂ ಸ್ವೀಕರಿಸಲು ಸಾಧ್ಯವಾಗಿಲ್ಲ ಅದಕ್ಕಾಗಿ ಕ್ಷಮಿಸಿ ಮುಂದಿನ ಬಾರಿ ಎಲ್ಲಾ ಅರ್ಜಿಗಳನ್ನು ಸ್ವೀಕರಿಸಿ ಎಲ್ಲರಿಗೂ ನೆರವು ನೀಡಲು ಪ್ರಯತ್ನಿಸುತ್ತೇನೆ. ನನ್ನ ಸಂಸ್ಥೆಯಲ್ಲಿ 4,000 ಮಂದಿ ಸಿಬ್ಬಂದಿ ದುಡಿಯುತ್ತಿದ್ದಾರೆ. ನನ್ನ ಧರ್ಮಪತ್ನಿ ನನ್ನ ಕಾರ್ಯಕ್ಕೆ ಬೆನ್ನೆಲುಬಾಗಿದ್ದು ಮಗ-ಸೊಸೆ ನನ್ನ ಈ ಕಾರ್ಯದಲ್ಲಿ ಜೊತೆಗೆ ನಿಂತಿದ್ದಾರೆ. ಕುಟುಂಬ ನನಗೆ ಬೆಂಬಲ ನೀಡುತ್ತಿದೆ. ಅವರು ಮತ್ತು ನಾನು ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಹಂಚುವ ಮೂಲಕ ನಿಮ್ಮ ಆಶೀರ್ವಾದ ಪಡೆಯುತ್ತಿದ್ದೇವೆ" ಎಂದರು.
"ಬಾಲ್ಯದಲ್ಲಿ ನನ್ನ ಮನೆಯ ಒಳಗೂ ಹೊರಗೂ ಮಳೆ ಸುರಿಯುತ್ತಿತ್ತು, ಚಂದ್ರನನ್ನು ನಾನು ಮನೆಯ ಒಳಗಡೆಯೇ ಮಲಗಿ ನೋಡಿದ್ದೇನೆ. ಬಡತನ ಕಣ್ಣಾರೆ ಕಂಡವನು ನಾನು. ಸ್ವಾಭಿಮಾನ ಬಿಟ್ಟು ಸಹಾಯ ಪಡೆದುಕೊಳ್ಳಿ ಮುಂದಿನ ದಿನಗಳು ಖಂಡಿತ ಒಳ್ಳೆಯದಾಗುತ್ತದೆ. ನಾನು ದುಡಿಯಲು ಊರು ಬಿಟ್ಟು ಹೋದ ಸಂದರ್ಭದಲ್ಲಿ ಅನೇಕ ಮಂದಿ ನೆರವು ನೀಡಿದ್ದಾರೆ. ಅವರೆಲ್ಲರ ಋಣ ನನ್ನ ಮೇಲಿದೆ. ಆತ್ಮತೃಪ್ತಿಗಾಗಿ ಈ ಯೋಜನೆ ಹಾಕಿಕೊಂಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವೇ ನನಗೆ ಬಲುದೊಡ್ಡ ಆಸ್ತಿಯಾಗಿದೆ" ಎಂದು ಹೇಳಿದರು.
ಬಳಿಕ ಮಾತು ಮುಂದುವರಿಸಿದ ಸಾಲುಮರದ ತಿಮ್ಮಕ್ಕನ ದತ್ತುಪುತ್ರ ಉಮೇಶ್ ಅವರು, "ಸಾಲುಮರದ ತಿಮ್ಮಕ್ಕ ಹುಲ್ಲು ಜೋಪಡಿಯಲ್ಲಿ ಸಮಾಜದ ಕಟ್ಟಕಡೆಯ ಕುಟುಂಬದಲ್ಲಿ ಜನಿಸಿದ್ರು. ಮದುವೆಯಾಗಿ ಮತ್ತೊಂದು ಹುಲ್ಲಿನ ಮನೆಗೆ ಹೋದರು. ಆದರೆ ಹಲವು ವರ್ಷಗಳ ಕಾಲ ಮಕ್ಕಳಾಗಲಿಲ್ಲ ಇದಕ್ಕಾಗಿ ಸಮಾಜದ ಅವಮಾನ ಅನುಭವಿಸಿದರು. ಕೊನೆಗೆ ವೃಕ್ಷಗಳೇ ನನ್ನ ಮಕ್ಕಳು ಅಂತ ನಿರ್ಧರಿಸಿ ಸಾಲು ಮರಗಳನ್ನು ನೆಡಲು ಪ್ರಾರಂಭಿಸಿದರು. ಅಲ್ಲಿಂದ ಅವರ ಸಾಧನೆ ಪದ್ಮಶ್ರೀ ತನಕ ಸಾಗಿದೆ. ಸದ್ಯ 112ನೇ ವಯಸ್ಸಿನಲ್ಲಿ ಕರ್ನಾಟಕ ಸರಕಾರ "ಪರಿಸರ ರಾಯಭಾರಿ" ಎಂದು ಗುರುತಿಸಿ ಸ್ಥಾನಮಾನ ನೀಡಿದೆ. ತಿಮ್ಮಕ್ಕ ಅವರಿಗೆ ಎಷ್ಟೋ ಮಂದಿ ಘೋಷಣೆಯಾದ ಅದೆಷ್ಟೋ ಲಕ್ಷದ ಚೆಕ್ ಗಳು ಬೌನ್ಸ್ ಆಗಿವೆ. ಅನೇಕ ನೆರವು ತಲುಪಲೇ ಇಲ್ಲ. ಆದರೆ ಪ್ರಕಾಶ್ ಶೆಟ್ಟಿ ಅವರು ನೇರವಾಗಿ ಮನೆಗೆ ಬಂದು 5 ಲಕ್ಷ ರೂಪಾಯಿ ಚೆಕ್ ನೀಡಿದರು. ಇಂತಹ ಜನನಾಯಕರು ರಾಜಕೀಯಕ್ಕೆ ಬರಬೇಕು. ಸರಕಾರದ ನೆರವು ಬಡಜನರಿಗೆ ಸಿಗುವಂತಾಗಬೇಕು" ಎಂದರು.
ಹರೇಕಳ ಹಾಜಬ್ಬ ಮಾತಾಡುತ್ತಾ, "ನನ್ನ ಜೀವನವನ್ನು ಬಸ್ ನಿಲ್ದಾಣದಲ್ಲಿ ಕಿತ್ತಳೆ ಮಾರಿಕೊಂಡು ಕಳೆದವನು. ನನಗೆ ಮನೆ, ಭೂಮಿ ಕೊಟ್ಟು ಬೆಳೆಸಿದವರು ಬಂಟ ಸಮುದಾಯದವರು. ನನ್ನ ಎದುರಲ್ಲಿ ಇಂದು ಪ್ರಕಾಶ್ ಶೆಟ್ಟಿ ಅವರು ನನ್ನಂತಹ ಸಾವಿರಾರು ಮಂದಿಗೆ ನೆರವು ನೀಡಿದ್ದಾರೆ. ಅವರಿಗೆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ" ಎಂದರು.
ಅಮೈ ಮಹಾಲಿಂಗ ನಾಯ್ಕ ಮಾತಾಡುತ್ತಾ, "ನೀವು ನಿಮಗೆ ಅಲ್ಪ ಜಮೀನು ಇದ್ದರೂ ಅದರಲ್ಲಿ ಒಂದು ತೆಂಗು ಕಂಗು ಗಿಡವನ್ನಾದರೂ ನೆಟ್ಟುಬಿಡಿ. ಅದು ನಿಮ್ಮ ಕುಟುಂಬಕ್ಕೆ ಬೆಳಕು ನೀಡುತ್ತದೆ. ನಾನು ವಾರಗಟ್ಟಲೆ ಊಟಕ್ಕೂ ಇಲ್ಲದೆ ಪರದಾಡುತ್ತಿದ್ದ ಕಾಲವಿತ್ತು. ಈಗ ನನ್ನನ್ನು ಅಲ್ಲಲ್ಲಿ ಜನರು ಗುರುತಿಸುತ್ತಿದ್ದಾರೆ. ಸಮಾಜಕ್ಕೆ ಅಲ್ಪ ಮೊತ್ತದ ಸಹಾಯ ಸಲ್ಲಿಸುತ್ತಿದ್ದೇನೆ. ಪಟ್ಟಣಕ್ಕೆ ಹೋಗುವ ಬದಲು ಹಳ್ಳಿಯಲ್ಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ" ಎಂದರು.
1250 ಕುಟುಂಬಗಳಿಗೆ 3 ಕೋಟಿ ರೂ. ಮೊತ್ತದ ಸಹಾಯಹಸ್ತ ವಿತರಣೆ ಮಾಡಲಾಯಿತು. ಸಾಂಕೇತಿಕವಾಗಿ 7 ಮಂದಿಗೆ ವೇದಿಕೆಯಲ್ಲಿ ಸಹಾಯ ಹಸ್ತ ವಿತರಿಸಲಾಯಿತು.
ವೇದಿಕೆಯಲ್ಲಿ ಕೆ. ಪ್ರಕಾಶ್ ಶೆಟ್ಟಿ - ಆಶಾ ಪ್ರಕಾಶ್ ಶೆಟ್ಟಿ ದಂಪತಿ ಸಾಲುಮರದ ತಿಮ್ಮಕ್ಕ, ಹರೇಕಳ ಹಾಜಬ್ಬ, ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಿದರು.
ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ, ತಿಮ್ಮಕ್ಕನ ದತ್ತುಪುತ್ರ ಉಮೇಶ್, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ, ಗುರ್ಮೆ ಫೌಂಡೇಶನ್ ನ ಗುರ್ಮೆ ಸುರೇಶ್ ಶೆಟ್ಟಿ, ಎಂ ಆರ್ ಜಿ ಗ್ರೂಪ್ ಚೇರ್ ಮೆನ್ ಕೆ. ಪ್ರಕಾಶ್ ಶೆಟ್ಟಿ, ಆಶಾ ಪ್ರಕಾಶ್ ಶೆಟ್ಟಿ, ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.