ಮಂಗಳೂರು: ಡಿಸೆಂಬರ್ 25 ರಂದು ಭಾನುವಾರ ಸಂಜೆ 3 ಗಂಟೆಗೆ ಕೂಳೂರಿನಲ್ಲಿರುವ ಗೋಲ್ಡ್ ಪಿಂಚ್ ಮೈದಾನದಲ್ಲಿ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ ಕಾರ್ಯಕ್ರಮ ನಡೆಯಲಿದ್ದು, ಸಹಾಯ ಹಸ್ತ ಯೋಜನೆಯಲ್ಲಿ ಸುಮಾರು 1,250 ಕುಟುಂಬಗಳಿಗೆ ಸುಮಾರು 2.50 ಕೋಟಿ ರೂಪಾಯಿ ಸಹಾಯ ಧನವನ್ನು ವಿತರಿಸಲಾಗುವುದು ಎಂದು ಎಂಆರ್ ಜಿ ಗ್ರೂಪ್ ನ ಚೇರ್ಮೆನ್ ಕೆ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಈ ಬಾರಿ ಸಹಾಯ ಹಸ್ತ ಯೋಜನೆಗೆ ಸಂಬಂಧಿಸಿ ಅರ್ಜಿಗಳನ್ನು ವಿತರಣೆ ಮಾಡಿ ಬಳಿಕ ಅವುಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ಪರಿಶೀಲಿಸಿ, ಅವಶ್ಯವೆನಿಸಿದಲ್ಲಿ ಅರ್ಜಿದಾರರ ಮನೆಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ ಬಳಿಕ ಅವರನ್ನು ಆಯ್ಕೆ ಮಾಡಲಾಗಿದೆ. ತೀರಾ ಅವಶ್ಯಕತೆ ಇರುವವರನ್ನು ಗುರುತಿಸಿದ್ದೇವೆ ಎಂಬ ತೃಪ್ತಿ ನಮಗಿದೆ ಎಂದು ಸಹಾಯ ಹಸ್ತ ಯೋಜನೆಯ ಕುರಿತಂತೆ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಪ್ರಕಾಶ್ ಶೆಟ್ಟಿ ವಿವರಿಸಿದರು.
ಸಮಾಜ ಸೇವೆ, ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸಂಘ ಸಂಸ್ಥೆಗಳನ್ನೂ ನೆರವಿಗೆ ಆಯ್ಕೆ ಮಾಡಲಾಗಿದೆ. ಜಾತಿ, ಧರ್ಮಗಳನ್ನು ಪರಿಗಣಿಸದೆ ಸಹಾಯವನ್ನು ವಿತರಿಸಲಾಗುತ್ತಿದೆ. 1,250 ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಂದಲೂ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆ ಮಾಡುವಾಗ ವೈದ್ಯಕೀಯ ನೆರವಿಗಾದರೆ ಆಧಾರ್ ಕಾರ್ಡ್, ವೈದ್ಯಕೀಯ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ವಿದ್ಯಾರ್ಥಿಗಳಿಗೆ ನೀಡುವ ನೆರವಿಗಾದರೆ ಅವರ ಅಂಕಗಳನ್ನು ಮತ್ತು ಆರ್ಥಿಕ ಪರಿಸ್ಥಿತಿಯನ್ನು ನೋಡಿ ಆಯ್ಕೆ ಮಾಡಲಾಗಿದೆ. ಸ್ವತಂತ್ರ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದರಿಂದ ಇದರಲ್ಲಿ ಯಾರದೇ ಶಿಫಾರಸುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸಹಾಯ ಸಲ್ಲಬೇಕೆನ್ನುವ ಆಶಯದಲ್ಲಿ ಬೇರೆ ಬೇರೆ ಸಮಿತಿಗಳನ್ನು ರಚಿಸಿಕೊಂಡು ಕಳೆದ ಎರಡು ತಿಂಗಳಿನಿಂದ ಕಾರ್ಯನಿರತವಾಗಿ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಡಿಸೆಂಬರ್ 25 ರಂದು ಸಂಜೆ 3 ಗಂಟೆಗೆ ಫಲಾನುಭವಿಗಳನ್ನು ವಾಹನದ ಮೂಲಕ ಕೂಳೂರು ಬಳಿಯ ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕರೆದುಕೊಂಡು ಅವರಿಗೆ ಅಲ್ಲಿಯೇ ಸಹಾಯವನ್ನು ನೀಡಿ ಬಳಿಕ ಅವರನ್ನು ವಾಹನದಲ್ಲಿ ಅವರ ಮನೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ.
ಅಂದು ಕೂಳೂರು ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ್, ಮೂಡಬಿದ್ರೆ ಆಳ್ವಾಸ್ ಶಿಕ್ಣಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಗುರ್ಮೆ ಫೌಂಡೇಶನ್ ನ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಎಂಆರ್ ಜಿ ಗ್ರೂಪ್ ನ ನಿರ್ದೇಶಕ ಗೌರವ್ ಪಿ ಶೆಟ್ಟಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರ್ಮೆ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಮಾಜೀ ಅಧ್ಯಕ್ಷ ಉಪೇಂದ್ರ ಶೆಟ್ಟಿ ಬೆಂಗಳೂರು ಉಪಸ್ಥಿತರಿದ್ದರು.
ಎಂಆರ್ ಜಿ ಸಮೂಹ ಸಂಸ್ಥೆ ತನ್ನ ಸಾಮಾಜಿಕ ಕಳಕಳಿಯ ವಿಸ್ತೃತ ರೂಪವಾಗಿ ಸಮಾಜದ ಆರ್ಥಿಕ ಅಶಕ್ತರಿಗೆ ನೆರವಾಗಿ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಿ, ಅವರು ಮುಖ್ಯ ವಾಹಿನಿಯಲ್ಲಿ ಘನತೆಯ ಬದುಕು ಕಟ್ಟಿಕೊಳ್ಳ ಬೇಕೆಂಬುದು ಎಂಆರ್ ಜಿ ಗ್ರೂಪ್ ಆಶಯವಾಗಿದೆ.
ಕಷ್ಟದಲ್ಲಿರುವವರಿಗೆ ಕಿರು ಸಹಾಯ ಮಾಡಲು ಸಾಧ್ಯವಾ ಎನ್ನುವ ಆಲೋಚನೆಯ ಮೂರ್ತ ರೂಪ ನಮ್ಮ ಈ ಯೋಜನೆ. ನಿಜಕ್ಕೂ ಆರ್ಥಿಕ ದುಸ್ಥಿತಿಯಲ್ಲಿದ್ದು, ಎಲ್ಲಿಂದಲಾದರೂ ಒಂದು ಸಣ್ಣ ಆಸರೆ ಒದಗಿದರೆ ಎನ್ನುವ ನಿರೀಕ್ಷೆಯಲ್ಲಿರುವವರ ಪಾಲಿಗೆ ಭರವಸೆಯಾಗಿ ನಾವಿದ್ದೇವೆ. ನಮ್ಮ ಸಂಸ್ಥೆಯ ಈ ಅಳಿಲು ಸೇವೆ ಅತ್ಯಂತ ಅರ್ಹರಿಗೆ ತಲುಪಿದರೆ ಸಾರ್ಥಕ ಭಾವದಿಂದ ನಾವು ಸಂತೃಪ್ತರು .ಕಳೆದ ಮೂರು ವರ್ಷಗಳಲ್ಲಿ ಎಂಆರ್ ಜಿ ಗ್ರೂಪ್ ಸಂಸ್ಥೆ ಆರ್ಥಿಕವಾಗಿ ಕಷ್ಟದಲ್ಲಿರುವ ಕುಟುಂಬಗಳ ಕಣ್ಣೀರನ್ನು ಒರೆಸುವ ಕೆಲಸದಲ್ಲಿ ತೊಡಗಿಸಿ ಕೊಂಡಿರುವುದಕ್ಕೆ ನಮ್ಮಲ್ಲಿ ಧನ್ಯತಾ ಭಾವನೆಯಿದೆ. ಎಲ್ಲರೂ ಆರ್ಥಿಕವಾಗಿ ಸದೃಡರಾಗಬೇಕೆಂಬುದು ನಮ್ಮ ಸಂಕಲ್ಪವಾಗಿದೆ ಎನ್ನುತ್ತಾರೆ ಕೆ.ಪ್ರಕಾಶ್ ಶೆಟ್ಟಿ.