ಕ್ರೀಡಾಲೋಕದ ದೈತ್ಯ, ಬಹುಮುಖ ಪ್ರತಿಭೆಯ ಕ್ರೀಡಾಪಟು ಶ್ರೀ ಬಾಬು ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕ್ರೀಡಾಲೋಕದ ದೈತ್ಯ, ಬಹುಮುಖ ಪ್ರತಿಭೆಯ ಕ್ರೀಡಾಪಟು ಶ್ರೀ ಬಾಬು ಶೆಟ್ಟಿ

Share This
ಮಂಗಳೂರು: ತುಳುನಾಡು ಎಂದಾಕ್ಷಣ ಕಣ್ಣ ಮುಂದೆ ತಟ್ಟನೆ ಬಂದು ನಿಲ್ಲುವುದು ನಾಡಿನ ಶ್ರಮಿಕ ವರ್ಗ ಅಂದರೆ ಕ್ರಷಿಕರು. ಪ್ರಕ್ರತಿಯ ಆರಾಧಕರಾಗಿ, ಹಸಿರಿನೊಂದಿಗೆ ಉಸಿರನ್ನು ಉಳಿಸಿಕೊಂಡು ಪ್ರಕ್ರತಿ ಮಾತೆಯೊಂದಿಗೆ ನಾಗಾರಾಧನೆ, ದೈವಾರಾಧನೆಯೊಂದಿಗೆ ಕಾಯಕವೇ ಕೈಲಾಸ ಎಂಬ ಧ್ಯೇಯ ವಾಕ್ಯದೊಂದಿಗೆ ಬದುಕಿನ ತೊಟ್ಟಿಲನ್ನು ಕಟ್ಟಿಕೊಂಡವರು ತುಳುವರು. ಹತ್ತು ಹಲವು ಜಾತಿ ಹತ್ತು ಹಲವು ರೀತಿ ನೀತಿ ಕಟ್ಟುಪಾಡುಗಳೇನೇ ಇದ್ದರೂ ಒಂದೇ ತಾಯಿಯ ಮಕ್ಕಳಂತೆ ಜೊತೆಯಾಗಿ ಪರಸ್ಪರ ಸಹಕಾರ ಭಾವ ದಿಂದ ಬದುಕುತ್ತಾ ಬಂದಿರುವುದು ತುಳುವರ ವಿಶೇಷತೆ.
ಪೊಡವಿಗೊಡೆಯ ಶ್ರೀ ಕ್ರಷ್ಣನ ನಾಡು ಉಡುಪಿ ಜಿಲ್ಲೆಯ ಭಕ್ತರ ಅಭೀಷ್ಟವನ್ನು ಈಡೇರಿಸುವ ದಕ್ಷ ದ್ವಂಸಕ ಶಿವಸಂಕಲ್ಪದಲ್ಲಿ ಹುಟ್ಟಿದ ಶ್ರೀ ವೀರಭದ್ರ ಸ್ವಾಮಿಯು ನೆಲೆ ನಿಂತ ಪುಣ್ಯ ಕ್ಷೇತ್ರ ಹಿರಿಯಡಕ. ಇಲ್ಲಿನ ಪಾಲೆಮಾರ್ ಎಂಬಲ್ಲಿನ ಪ್ರತಿಷ್ಠಿತ ಬಂಟ ಸಮುದಾಯದ ಕ್ರಷಿಕ ಮದ್ಯಮ ವರ್ಗದ ಕುಟುಂಬದ ಮುತ್ತಯ್ಯ ಶೆಟ್ಟಿ ಮತ್ತು ಕಮಲ ಶೆಟ್ಟಿ ದಂಪತಿಗಳ ಪಂಚಮ ಗರ್ಭ ಸಂಭೂತರಾಗಿ ಜಗತ್ತಿನ ಬೆಳಕನ್ನು ಕಂಡವರು ಇಲ್ಲಿ ಪರಿಚಯಿಸಲ್ಪಡುವ ಹೆಮ್ಮೆಯ ಕ್ರೀಡಾ ಪಟು ಶ್ರೀ ಬಾಬು ಶೆಟ್ಟರು.

ಮೊದಲೇ ಹೇಳಿದಂತೆ ಇವರದ್ದು ಕ್ರಷಿ ಕುಟುಂಬ. ಕ್ರಷಿಯಿಂದಲೇ ಬದುಕಿನ ಬಂಡಿ ಸಾಗಬೇಕು. ಹಳ್ಳಿಯ ಪ್ರದೇಶ ಬೇರೆ. ಅಂದರೆ ಹಳ್ಳಿಯ ಬದುಕು. ಬೆಳಿಗ್ಗೆ ಎದ್ದು ಕ್ರಷಿ ಕಾರ್ಯವನ್ನು ಮುಗಿಸಿಯೇ ಶಾಲೆಗೆ ಹೋಗಬೇಕು. ತಂದೆಯೊಂದಿಗೆ ಕ್ರಷಿ ಕಾರ್ಯದಲ್ಲಿ ತೊಡಗಿಕೊಂಡು ಬಾಲ್ಯದಲ್ಲಿಯೇ ಕ್ರಷಿಯಲ್ಲಿ ಆಸಕ್ತಿ ಹೊಂದಿದ್ದ ಬಾಬು ಶೆಟ್ಟರು ಮುಂದೊಂದು ದಿನ ಅಗ್ರಮಾನ್ಯ ಕ್ರೀಡಾ ಪಟುವಾಗಿ ಮೆರೆಯುತ್ತಾರೆಂದು ಬಹುಷಾ ಸ್ವತಃ ಬಾಬು ಶೆಟ್ಟರೇ ಯೋಚಿಸಿರಲಿಕ್ಕಿಲ್ಲ, ಆದರೆ ದೈವೇಚ್ಚೆ ಮುಂದೆ ನಡೆದದ್ದೇ ಇತಿಹಾಸ.

ಪುಟ್ಟ ಬಾಲಕ ಬಾಬು ವಿದ್ಯಾರಂಭ ಮಾಡಿದ್ದು ತನ್ನೂರು ಬೊಮ್ಮರ ಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಅಲ್ಲಿಂದ ಪ್ರೌಢ ಶಿಕ್ಷಣಕ್ಕಾಗಿ ಹಿರಿಯಡಕ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಯಾತ್ರೆ ಮುಂದುವರಿಯಿತು. ಆ ಸಮಯಕ್ಕಾಗಲೇ ಕ್ರಷಿ ಕಾರ್ಯದ ಪರಿಣಾಮವಾಗಿ ಸ್ವಲ್ಪ ಗಟ್ಟಿ ದೇಹಸ್ಥಿಯೊಂದಿಗೆ ಬೆಳೆಯುತ್ತಿದ್ದ ಬಾಬು ಶೆಟ್ಟರಲ್ಲಿ ಕ್ರಷಿಯ ಜೊತೆ ಜೊತೆಗೆ ಕ್ರೀಡೆಯತ್ತಲೂ ಆಸಕ್ತಿ ಬೆಳೆಯಲಾರಂಭಿಸಿತು. ಕ್ರೀಡಾ ಪಟುಗಳು ಧರಿಸುವ ಬಣ್ಣ ಬಣ್ಣದ ಟೀ ಷರ್ಟು, ಪ್ಯಾಂಟು, ಶೂ ಗಳನ್ನು ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ಕಂಡ ಶೆಟ್ಟರ ಮನದಲ್ಲಿ ತಾನೂ ಹೀಗೆ ಆದರೆ ಎಂಬ ಕಲ್ಪನೆ ಮೂಡಿತು. ನಾನೂ ಹೀಗಾಗಬೇಕು ಎಂಬ ಆಸೆ ಚಿಗುರೊಡೆಯಿತು.

ಆಸೆಯ ಕಂಗಳಿಂದ ಕಾಯುತಿದ್ದ ಬಾಬು ಶೆಟ್ಟರಿಗೆ ಅವಕಾಶವೊಂದು ತಾನೇ ತಾನಾಗಿ ಬಂತು. ಅದು 1978. ಹಿರಿಯಡಕ ಶಾಲೆಯಲ್ಲಿನಡೆದ ತಾಲೂಕು ಮಟ್ಟದ ಕ್ರೀಡಾ ಕೂಟ. ಶೂ ಇಲ್ಲದೇ ಬರಿಗಾಲಲ್ಲಿ ಓಡಿ ನೂರು ಮೀಟರ್ ಓಟ, ಇನ್ನೂರು ಮೀಟರ್ ಓಟಗಳೆರಡರಲ್ಲೂ ಪ್ರಥಮ , ಲಾಂಗ್ ಜಂಪ್ ನಲ್ಲಿ ಪ್ರಥಮ, ಭಾಗವಹಿಸಿದ ಎಲ್ಲಾ ಸ್ವರ್ಧೆಗಳಲ್ಲೂ ಪ್ರಥಮ ಸ್ಥಾನಿಯಾಗಿ ಚಾಂಪಿಯನ್ ಆಗಿ ಹೊರ ಹೊಮ್ಮಿದರು ಬಾಬು ಶೆಟ್ಟರು.ಪ್ರಥಮದಲ್ಲೇ ಚಾಂಪಿಯನ್ ಮತ್ತೆ ಹಿಂದುಳಿಯುವ ಮಾತೇ ಇಲ್ಲ. ಓಟದ ಕುದುರೆಯಂತೆ ಕ್ರೀಡಾ ಲೋಕದ ಯಶಸ್ಸಿನ ನಾಗಾಲೋಟ ಮುಂದುವರಿಯಿತು.

ಕ್ರೀಡೆಯ ಜೊತೆಗೆ ವಿದ್ಯೆಯನ್ನು ಮುಂದುವರಿಸಿದ ಬಾಬು ಶೆಟ್ಟಿಯವರು ಪ್ರಥಮ ವರ್ಷದ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಮುಗಿಸಿದರು ಅಷ್ಟರಲ್ಲಾಲೇ ಇವರ ಕ್ರೀಡಾ ಕ್ಷಮತೆ ಕ್ರೀಡೆಯಲ್ಲಿರುವ ಉತ್ಸಾಹ, ಛಲವನ್ನು ಕಂಡ ಎಮ್ ಜಿ ಎಮ್ ಕಾಲೇಜಿನ ದೈಹಿಕ ಶಿಕ್ಷಕರು ಇವರನ್ನು ತಮ್ಮ ಕಾಲೇಜಿಗೆ ಕರೆಯಿಸಿಕೊಂಡರು. ಇದು ಬೆಳೆಯುತ್ತಿರುವ ಪ್ರತಿಭೆಗೆ ಸರಿಯಾದ ಸಮಯದಲ್ಲಿ ನೀರು ಗೊಬ್ಬರ ಒದಗಿಸಿದಂತಾಯಿತು.

ಡೆಕತ್ಲಾನ್ ನಲ್ಲಿ ಹಲವಾರು ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ ಶೆಟ್ಟರು ಹಲವಾರು ಬಹುಮಾನಗಳನ್ನು ಪಡೆದರು. ನೂರು ಮೀಟರ್ ಹರ್ಡಲ್ಸ್ ನಲ್ಲಿ ಇವರದ್ದೇ ಹೊಸ ದಾಖಲೆಯೊಂದನ್ನು ಸ್ಥಾಪಿಸಿದರು ಕೇವಲ ಓಟ, ಲಾಂಗ್ ಜಂಪ್, ಶಾಟ್೯ಫುಟ್ ಅಲ್ಲದೇ ಕಬಡ್ಡಿ ಆಟದಲ್ಲೂ ಪ್ರವೀಣರಾದ ಬಾಬು ಶೆಟ್ಟರು ಇತ್ತೀಚೆಗೆ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾದರು.

ಬಾಬು ಶೆಟ್ಟರ ಕ್ರೀಡಾ ಸಾಧನೆಯನ್ನು ನೋಡುತ್ತಾ ಹೋಗುವುದಾದರೆ ನಾಲ್ಕು ಸಲ ಲಾಂಗ್ ಜಂಪ್ ನಲ್ಲಿ ಚಾಂಪಿಯನ್, ಮೂರು ಬಾರಿ 110 ಮೀಟರ್ ಹರ್ಡಲ್ಸ್ ನಲ್ಲಿ ಚಾಂಪಿಯನ್ ಎರಡು ಬಾರಿ ನೇಶನಲ್ ಗೇಮ್ಸ್ ನಲ್ಲಿ ರಾಷ್ಟ್ರೀಯ ಚಾಂಪಿಯನ್ ಶಾಲಾ ಮಟ್ಟದ ಲಾಂಗ್ ಜಂಪ್ ರೆಕಾಡ್೯ ಇಂದಿಗೂ ಬಾಬು ಶೆಟ್ಟಿಯವರ ಹೆಸರಿನಲ್ಲೇ ಉಳಿದು ಬಿಟ್ಟಿದೆ. ರಾಜ್ಯ ಮಟ್ಟದ 110 ಹರ್ಡಲ್ಸ್ ಲಾಂಗ್ ಜಂಪ್ ಡೆಕತ್ಲಾನ್ ರೆಕಾರ್ಡೂ ಅವರ ಹೆಸರಿನಲ್ಲಿದೆ. ಇವರ ಕ್ರೀಡಾ ಸಾಧನೆಯನ್ನು ಮೆಚ್ಚಿದ ಭಾರತೀಯ ರೈಲ್ವೇ ಉನ್ನತ ಹುದ್ದೆಯನ್ನು ನೀಡಿ ಶೆಟ್ಟರನ್ನು ಗೌರವಿಸಿದೆ.

ಈ ದೈತ್ಯ ಪ್ರತಿಭೆಗೆ ಒಲಿದು ಬಂದ ಪ್ರಶಸ್ತಿಗಳು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ಮೈಸೂರು ದಸರ ಪ್ರಶಸ್ತಿ, ತುಳುವ ಶ್ರೀ ಪ್ರಶಸ್ತಿ
ರೈಲ್ವೇ ಬೋಡ್೯ ಪ್ರಶಸ್ತಿ.

ಬಾಬು ಶೆಟ್ಟಿಯವರು ಭಾಗವಹಿಸಿದ ಕ್ರೀಡಾಲೋಕ: ಸಾಫ್(SAF) ಗೇಮ್ಸ್ ನಲ್ಲಿ 1985ರಲ್ಲಿ ನೇಪಾಲ, 1987 ಪಾಕಿಸ್ಥಾನ, 1989 ಶ್ರೀಲಂಕಾ, 1991 ಬಾಂಗ್ಲಾ ದೇಶ, ಇದರೊಂದಿಗೆ ನಾಲ್ಕು ಬಾರಿ ಲಾಂಗ್ ಜಂಪ್ ನಲ್ಲಿ ಚಾಂಪಿಯನ್ 1992 ದೆಹಲಿಯಲ್ಲಿ ನಡೆದ ಒಲಿಂಪಿಕ್ ಪೂರ್ವ ಕ್ರೀಡಾ ಕೂಟದಲ್ಲಿ ಲಾಂಗ್ ಜಂಪ್ ದಂತಕತೆ ಕಾಲ್೯ ಲೂಯಿಸ್ ರವರೊಂದಿಗೆ ಭಾಗವಹಿಸಿರುವ ಅವಿಸ್ಮರಣೀಯ ಕ್ಷಣ. ಜೊತೆಗೆ 8 ಬಾರಿ ಡೆಕತ್ಲಾನ್ ನಲ್ಲಿ ರಾಷ್ಟ್ರೀಯ ಚಾಂಪಿಯನ್.

ಹಳ್ಳಿಯೊಂದರಲ್ಲಿ ಕ್ರಷಿಕ ಕುಟುಂಬದಲ್ಲಿ ಜನಿಸಿ ಕ್ರೀಡಾ ಲೋಕ ಪ್ರವೇಶಿಸಿ, ತನ್ನಲ್ಲಿರುವ ದೈತ್ಯ ಪ್ರತಿಭೆಯನ್ನು ಅನಾವರಣಗೊಳಿಸಿ, ಅಚ್ಚರಿ ಪಡುವಂತಾ ಸಾಧನೆ ಮಾಡಿದ ಬಾಬು ಶೆಟ್ಟಿ ಅಂದು ಬರಿಗಾಲಲ್ಲಿ ಆರಂಭ ಮಾಡಿದ ಕ್ರೀಡಾ ಬದುಕು ಇಂದು ಅದ್ಬುತ ಪ್ರತಿಭಾವಂತ ಸಾಧಕನಾಗಿ ಕ್ರೀಡಾ ತಾರೆಗಳ ಪಂಕ್ತಿಯಲ್ಲಿ ಕಾಣಿಸಿಕೊಳ್ಳುಂತೆ ಆಗಿರುವುದು ನಿಜಕ್ಕೂ ವಿಸ್ಮಯ.

ಸಾಂಸಾರಿಕ ಜೀವನದಲ್ಲೂ ಬಾಬು ಶೆಟ್ಟರದ್ದು ಸಂತ್ರಪ್ತ ಬದುಕು. ಪುತ್ತೂರಿನ ಪ್ರತಿಷ್ಠಿತ ಬಂಟ ಮನೆತನದ ಸೌಮ್ಯ ಇವರ ಮನದೊಡತಿ ಮನೆಯೊಡತಿ. ಪತಿಯ ಪ್ರತಿ ಹೆಜ್ಜೆಯಲ್ಲೂ ಪ್ರೀತಿ ಪ್ರೋತ್ಸಾಹ ನೀಡುತ್ತಿರುವ ಸಹಧರ್ಮಿಣಿ ಪತಿಯ ಗೆಲುವಲ್ಲಿ ಹೆಮ್ಮೆ ಪಡುವ ಅರ್ಧಾಂಗಿ ಈಕೆಯಾದರೆ.

ತಂದೆಯ ಶಿಸ್ತುಬದ್ಧ ಜೀವನ, ಗಾಂಭೀರ್ಯತೆ, ಸರಳತೆ ನಯ ವಿನಯ ಎಲ್ಲವನ್ನೂ ಬಳುವಳಿಯಾಗಿ ಪಡೆದು ಸಧ್ಯ ಜರ್ಮನ್ ನಲ್ಲಿ M.S ಮಾಡುತ್ತಿರುವ ಸುಪುತ್ರಿ ರಿಷಿಕಾ ಹೀಗೆ ಸಾಂಸಾರಿಕವಾಗಿಯೂ ಶೆಟ್ಟರು ಸಂತ್ರಪ್ತರು.

ಇಂದು ಮಹಾನ್ ಕ್ರೀಡಾ ಪಟುವಾಗಿ ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳನ್ನು ಪಡೆದುಕೊಂಡು ಕ್ರೀಡಾ ಲೋಕದ ನಿಜವಾದ ಏಕಲವ್ಯನಾಗಿ ಗುರುತಿಸಿಕೊಂಡರೂ ವಿನಯ ಸರಳತೆ, ಸಜ್ಜನಿಕೆಯಿಂದ ಎಲ್ಲರೊಡನೆ ಬೆರೆಯುವ ಬಾಬು ಶೆಟ್ಟಿಯವರು ತಮ್ಮ ಹಿರಿಯರು ನಂಬಿಕೊಂಡು ಬಂದಿರುವ ಕ್ರಷಿಯನ್ನು ಮರೆತಿಲ್ಲ. ಒಂದೆಡೆ ಕ್ರೀಡಾ ಕ್ಷಮತೆಯನ್ನು ಉಳಿಸಿಕೊಂಡು, ಕ್ರಷಿಯಲ್ಲೂ ಇಮ್ಮಡಿ ಉತ್ಸಾಹದಲ್ಲಿ ತೊಡಗಿಸಿ ಕೊಳ್ಳುವ ಶೆಟ್ಟರದ್ದು ಅದ್ಬುತ ಸಾಧನೆಯೊಂದಿಗೆ ಅನುಕರಣೀಯ ಬದುಕು.

Pages