ಕಾಂತಾರದ ಬಳಿಕ ಬಹು ನಿರೀಕ್ಷೆ ಮೂಡಿಸುತ್ತಿರುವ 'ಕಂಬಳ' - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಾಂತಾರದ ಬಳಿಕ ಬಹು ನಿರೀಕ್ಷೆ ಮೂಡಿಸುತ್ತಿರುವ 'ಕಂಬಳ'

Share This
ಮಂಗಳೂರು: ಪ್ರೇಕ್ಷಕರು ಯಾವಾಗ ಎಂಥ ಅಭಿರುಚಿಯನ್ನು ಬೆಳೆಸಿಕೊಳ್ಳುತ್ತಾರೆ ಹಾಗೂ ಹೇಗೆ ಬದಲಾಗುತ್ತಾರೆ ಎಂಬುದನ್ನು ಹೇಳುವುದು ಕಷ್ಟ. ಆದರೆ ಪ್ರೇಕ್ಷಕರ ಅಂತರಾಳವನ್ನು ಅರಿತು ಸಿನಿಮಾ ಮಾಡುವುದೇ ಒಂದು ಕಲೆ ಹಾಗೂ ಅಂಥ ಸಿನಿಮಾದಲ್ಲಿ ಗೆಲ್ಲುವುದು ಮತ್ತೊಂದು ಕಲೆ. ಈಗ ಎಲ್ಲ ದಾಖಲೆಗಳನ್ನೂ ಮುರಿದು ಮುನ್ನುಗ್ಗುತ್ತಿರುವ ಕಾಂತಾರ ಸಿನಿಮಾವು ದೇಶದ ಸಿನಿಮಾ ರಂಗದಲ್ಲೇ ಒಂದು ಸಂಚಲನ ಮೂಡಿಸಿದೆ. ಹೊಡೆಬಡಿ ಸಿನಿಮಾ, ಪ್ರೇಮ ಕಥೆ, ಭೂಗತ ಲೋಕದ ಕಥೆಗಳನ್ನೆಲ್ಲ ಬದಿಗೆ ಸರಿಸಿ ಪ್ರೇಕ್ಷಕರು ಕಾಂತಾರಕ್ಕೆ ಮಣೆ ಹಾಕಿರುವುದು ನಮ್ಮ ಸಂಸ್ಕೃತಿ ಹಾಗೂ ಧಾರ್ಮಿಕ ನಂಬಿಕೆಗಿರುವ ಶಕ್ತಿ, ಸೆಳೆತವನ್ನು ತೋರಿಸುತ್ತದೆ.
ಈಗ ಇಂಥದ್ದೇ ಒಂದು ಹೊಸ ನಿರೀಕ್ಷೆ ತುಳು ಹಾಗೂ ಕನ್ನಡದಲ್ಲಿ ಬರಲಿರುವ ಬಿದ್೯ದ ಕಂಬುಲ ಮತ್ತು ವೀರ ಕಂಬುಳ ಸಿನಿಮಾದಲ್ಲಿ ಮೂಡಿದೆ. ಪ್ರಖ್ಯಾತ ನಿರ್ದೇಶಕ ರಾಜೇಂದ್ರ ಬಾಬು ಅವರ ನಿರ್ದೇಶನದಲ್ಲಿ ಅರುಣ್ ರೈ ತೋಡಾರ್ ಅವರು ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಖ್ಯಾತನಾಮರಾದ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರು ಸಂಭಾಷಣೆ ಬರೆದಿದ್ದಾರೆ. ಇದೆಲ್ಲವೂ ಈ ಸಿನಿಮಾ ಕಾಂತಾರದ ಮಟ್ಟದಲ್ಲೇ ಸಕ್ಸಸ್ ಆಗಲಿದೆ ಎಂಬ ನಿರೀಕ್ಷೆ ಹುಟ್ಟಿಸಲು ಪ್ರಮುಖ ಕಾರಣವಾಗಿದೆ.

ಇದೊಂದು ತುಳುನಾಡಿನ ಪ್ರಮುಖ ಜಾನಪದ ಕ್ರೀಡೆ ಹಾಗೂ ಪ್ರಾಣಿಪ್ರಿಯರ ಕೆಂಗಣ್ಣಿಗೆ ಸಿಲುಕಿ ಒಂದಷ್ಟು ಕಾನೂನು ಸುಳಿಗೂ ಸಿಕ್ಕಿದ್ದ ಕಂಬಳದ ಸುತ್ತ ಹೆಣೆದ ಕಥೆಯನ್ನು ಹೊಂದಿರುವ ಸಿನಿಮಾ. ಇದರಲ್ಲಿ ಪ್ರಕಾಶ್ ರೈ ಮತ್ತು ರವಿ ಶಂಕರ್ ಎರಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಪ್ರಕಾಶ್ ರೈ ಅವರು ಕಂಬಳದ ಪರವಾಗಿದ್ದರೆ, ರವಿಶಂಕರ್ ಅವರು ಕಂಬಳದ ವಿರುದ್ಧ ಇರುತ್ತಾರೆ. ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಅವರ ಪಾಂಡಿತ್ಯ ಹಾಗೂ ಪಂಚಿಂಗ್ ಸಂಭಾಷಣೆ ಇಡೀ ಸಿನಿಮಾ ಹಾಗೂ ಕಂಬಳದ ಘನತೆಯನ್ನು ಹೊಸ ಎತ್ತರಕ್ಕೆ ಏರಿಸುವ ವಿಶ್ವಾಸ ಎಲ್ಲರಲ್ಲಿದೆ.

ಜೀಟಿಗೆ ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವ ಅರುಣ್ ರೈ ತೋಡಾರ್, ಒರಿಯರ್ದೊರಿ ಅಸಲ್ ಮೂಲಕ ತುಳು ಸಿನಿಮಾರಂಗಕ್ಕೆ ಹೊಸ ತಿರುವು ನೀಡಿರುವ ಕೊಡಿಯಾಲ್‌ಬೈಲ್, ಬಂಧನದಂಥ ಅಸಂಖ್ಯಾತ ಸೂಪರ್‌ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಸ್ಯಾಂಡಲ್‌ವುಡ್‌ಗೆ ನೀಡಿರುವ ರಾಜೇಂದ್ರ ಸಿಂಗ್ ಬಾಬು ಮುಂತಾದ ಪ್ರತಿಭಾನ್ವಿತರೆಲ್ಲರೂ ಈ ಸಿನಿಮಾಕ್ಕಾಗಿ ಒಂದಾಗಿದ್ದಾರೆ. ಜತೆಗೆ ಕಂಬಳ ಓಟಗಾರ ಶ್ರೀನಿವಾಸ ಗೌಡ, ಖ್ಯಾತನಾಮ ಕಲಾವಿದರಾದ ಆದಿತ್ಯ, ನವೀನ್ ಡಿ ಪಡೀಲ್, ಸ್ವರಾಜ್ ಶೆಟ್ಟಿ, ಮೊದಲಾದವರು ಇದರಲ್ಲಿ ನಟಿಸಿದ್ದು, ಖಂಡಿತವಾಗಿಯೂ ಸಿನಿಮಾ ಒಂದು ದಾಖಲೆ ಬರೆಯುವುದು ಖಚಿತ ಎನ್ನಲಾಗಿದೆ.

ಎಲ್ಲವೂ ಈಗಿನ ಲೆಕ್ಕಾಚಾರದಂತೆ ಸಾಗಿದರೆ ಮುಂದಿನ ವರ್ಷದ ಆರಂಭದಲ್ಲೇ ಬಿದ್೯ದ ಕಂಬುಳ ಮತ್ತು ವೀರ ಕಂಬುಳವು ತೆರೆಗೆ ಬರಲಿದೆ. ಅಲ್ಲಿಯವರೆಗೆ ನಿರೀಕ್ಷೆಗಳ ಲೆಕ್ಕಾಚಾರದಲ್ಲಿ ಇರುವುದು ಅನಿವಾರ್ಯ.

ಕಂಬಳದ ವಿಷಯವೇ ಕುತೂಹಲದ್ದು: ಕಾನೂನು ಸಮರಕ್ಕೆ ಒಳಗಾಗಿದ್ದ ಕಂಬಳದ ವಿಷಯವು ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರಿಂದ ಯಾವ ರೀತಿ ಈ ಸಿನಿಮಾದಲ್ಲಿ ಪರ-ವಿರೋಧ ಅಂಶಗಳನ್ನು ಹೆಣೆದುಕೊಟ್ಟಿದೆ ಎಂಬ ಕುತೂಹಲ ಸಹಜವಾಗಿಯೇ ಮೂಡಿದೆ. ಅದನ್ನು ಕಥೆಯಲ್ಲಿ ಹೇಗೆ ಬಳಸಲಾಗಿದೆ ಹಾಗೂ ಅಂತಿಮ ಜಯದ ವಾದ ಹೇಗಿದೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

ವೀರ ಕಂಬಳ (ಕನ್ನಡ) ಮತ್ತು ಬಿರ್ದ್‌ದ ಕಂಬುಲ (ತುಳು) ಸಿನಿಮಾವು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ಮಾಪಕ ಅರುಣ್ ರೈ ತೋಡಾರ್ ನಿರ್ಮಾಣದಲ್ಲಿ ಚಂದ್ರಶೇಖರ್ ಸ್ವಾಮೀಜಿಯವರ ಶುಭಾಶೀರ್ವಾದಿಂದ ಎಸ್.ವಿ. ಬಾಬು ರಾಜೇಂದ್ರ ಸಿಂಗ್ ಕಥೆ, ಚಿತ್ರಕಥೆ, ನಿರ್ದೇಶನದೊಂದಿಗೆ ಸಿನಿಮಾ ತಯಾರಾಗಿದೆ.

ಇಲ್ಲಿ ಮುಖ್ಯವಾಗಿ ಖ್ಯಾತಿ ಪಡೆದಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಕನ್ನಡ-ತುಳುವಿನಲ್ಲಿ ತಯಾರಾಗುತ್ತಿರುವ ಸಿನಿಮಾಗಳಿಗೆ ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ಒದಗಿಸಿದ್ದಾರೆ. ರಾಜೇಶ್ ಕುಡ್ಲ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಛಾಯಾಗ್ರಹಣ ಆರ್.ಗಿರಿ, ಸಂಕಲನ ಶ್ರೀನಿವಾಸ ಪಿ.ಬಾಬು, ನೃತ್ಯ ಮದನ್-ಹರಿಣಿ, ಸಾಹಸ ಡಿಫರೆಂಟ್ ಡ್ಯಾನಿ, ಮಾಸ್‌ಮಾದ, ಕಲಾ ನಿರ್ದೇಶನ ಚಂದ್ರಶೇಖರ್ ಸುವರ್ಣ, ಸಹ ನಿರ್ದೇಶನ ಕೊಟ್ರೇಶ್, ಅಕ್ಷತ್ ವಿಟ್ಲ. ಕಂಬಲ ಸಿನಿಮಾ 2023 ರಲ್ಲಿ ತೆರೆ ಕಾಣಲಿದೆ. ಸಹಜವಾಗಿ ಪ್ರೇಕ್ಷಕರಿಗೆ ಈ ಸಿನಿಮಾದ ಬಗ್ಗೆ ಕುತೂಹಲ ಕಾತರ ಇದೆ.

ಕಂಬಲ ನನ್ನೂರಿನ ನೆಲದ ಕತೆ, ಪವರ್‌ಫುಲ್ ಡೈಲಾಗ್ - ಪ್ರಕಾಶ್ ರೈ : ನೆಲದ ಸಂಸ್ಕೃತಿ, ಭಾವನೆ ಆಗಿರುವ ಕಂಬಳದ ಪರವಾಗಿ ವಾದ ಮಾಡುವ ಲಾಯರ್ ಪಾತ್ರ ತುಂಬಾ ಚೆನ್ನಾಗಿ ಇದೆ. ಲೇಖಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ರವರ ಪವರ್ ಫುಲ್ ಡೈಲಾಗ್‌ಗಳ ಜತೆಗೆ ನನ್ನ ಪಾತ್ರವನ್ನು ನಿರ್ದೇಶಕರು ರೂಪಿಸಿದ್ದಾರೆ. ಅಲ್ಲದೆ ಇದು ನನ್ನ ಮೊದಲ ತುಳು ಚಿತ್ರ. ನನ್ನ ಪಾತ್ರಕ್ಕೆ ನಾನೇ ತುಳುವಿನಲ್ಲಿ ಡಬ್ ಮಾಡುತ್ತಿದ್ದೇನೆ. ಕಂಬುಲದಲ್ಲಿ ತುಂಬಾ ಒಳ್ಳೆಯ ಕತೆ ಮಾಡಿದ್ದಾರೆ. ಕಂಬಳ ನನ್ನೂರಿನ ನೆಲದ ಕತೆ, ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರೂ ನನ್ನ ಮೂಲ ದಕ್ಷಿಣ ಕನ್ನಡ. ಅಲ್ಲಿನ ಬಹುದೊಡ್ಡ ಆಚರಣೆ, ಸಂಭ್ರಮ ಮತ್ತು ಪರಂಪರೆ ಎಂದರೆ ಅದು ಕಂಬಳ. ಇಂತಹ ಆಚರಣೆಯ ಕತೆಯನ್ನು ಹೇಳುವ ಚಿತ್ರದ ಭಾಗವಾಗಿರುವುದಕ್ಕೆ ಹೆಮ್ಮೆ ಆಗುತ್ತಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳುತ್ತಾರೆ.

Pages