ರವಿತೇಜ ಪುಸ್ತಕ ಬಿಡುಗಡೆ ಸಮಾರಂಭ : ದೋಹಾ-ಕತಾರಿನಲ್ಲಿ ಮುಗಿಲೇರಿದ ಅಕ್ಷರ ಸಂಭ್ರಮ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ರವಿತೇಜ ಪುಸ್ತಕ ಬಿಡುಗಡೆ ಸಮಾರಂಭ : ದೋಹಾ-ಕತಾರಿನಲ್ಲಿ ಮುಗಿಲೇರಿದ ಅಕ್ಷರ ಸಂಭ್ರಮ

Share This
ಮಂಗಳೂರು: ಕತಾರ್ ರಾಷ್ಟ್ರದ ಖ್ಯಾತ ಕನ್ನಡಿಗ ಉದ್ಯಮಿ, ಸಮುದಾಯ ನಾಯಕ, ಸಾಮಾಜಿಕ ಚಟುವಟಿಕೆಗಳಲ್ಲಿನ ಕ್ರಿಯಾಶೀಲ, ಸಂಸ್ಕೃತಿ, ಪರಂಪರೆ, ನೆಲ, ಜಲ ಮತ್ತು ನಾಡ ಭಾಷೆಗಳ ಪ್ರತಿಪಾದಕ, ಡಾ.ಮೂಡಂಬೈಲು ರವಿಶೆಟ್ಟಿಯವರ ಬದುಕಿನ‌ ಚಿತ್ರಣದ 'ರವಿತೇಜ' ಪುಸ್ತಕ ಬಿಡುಗಡೆ ಸಮಾರಂಭ ದೋಹಾದಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಜರುಗಿತು.
ಸಾಂಪ್ರದಾಯಿಕ ಜ್ಯೋತಿ ಬೆಳಗುವ ಕಾರ್ಯಕ್ರಮದೊಂದಿಗೆ ಚಾಲನೆಯಾದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕತಾರಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಬಾಬುರಾಜನ್ ವಹಿಸಿದ್ದರು. ಭಾರತೀಯ ಸಮುದಾಯ ಸಹಾಯಾರ್ಥ ವೇದಿಕೆ (ICBF) ಸಂಸ್ಥೆಯ ಹಂಗಾಮಿ ಅಧ್ಯಕ್ಷ ವಿನೋದ್ ನಾಯರ್ ಅತಿಥಿಯಾಗಿ ಆಗಮಿಸಿದ್ದರು. ಕತಾರಿನ ಇನ್ನೋರ್ವ ಉದ್ಯಮಿ, DPS ಶಾಲೆಯ ನಿರ್ದೇಶಕ ರಾಕಿ ಫರ್ನಾಂಡೀಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಕತಾರಿನ‌ ಉದ್ಯಮಿಗಳಾದ ಜೆರಾಲ್ಡ್ ಡಿಮೆಲ್ಲೊ,, ಅಬ್ದುಲ್ಲಾ ಮೋನು, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ ಮಿಲನ್ ಅರುಣ್, ಕತಾರ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಹೆಚ್.ಕೆ ಮಧು ಗೌರವಾನ್ವಿತ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ, ಮಿಲನ್ ಅರುಣ್ ಎಲ್ಲರಿಗೂ ಸ್ವಾಗತ ಕೋರಿ, ರವಿಶೆಟ್ಟಯವರ ಸವಿಸ್ತಾರವಾದ ಪರಿಚಯ ಮಾಡಿಕೊಟ್ಟರು. ರವಿತೇಜ ಕನ್ನಡ ಆವೃತ್ತಿಯ ಪುಸ್ತಕ ಬಿಡುಗಡೆ ಮಾಡಿದ ಬಾಬುರಾಜನ್‌, ರವಿಶೆಟ್ಟಿಯವರ ಜೊತೆಗಿನ ಒಡನಾಟ, ಸ್ನೇಹ, ಸಂಬಂಧ ಮತ್ತು ನೆರವಿನ ಗುಣಗಳನ್ನು ಶ್ಲಾಘಿಸಿದರು. ರವಿಶೆಟ್ಟಿಯವರ ಸಮುದಾಯದ ಕಾಳಜಿಯ ಪರಿಯನ್ನು ಕೊಂಡಾಡಿದರು.

ರವಿತೇಜ ಪುಸ್ತಕದ ಇಂಗ್ಲೀಷ್ ಆವೃತ್ತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ವಿನೋದ್ ನಾಯರ್ ಪುಸ್ತಕದ ಗಾತ್ರ ಮತ್ತು ವಿಷಯದ ಬಗ್ಗೆ ಬೆಳಕು ಚೆಲ್ಲಿದರು. ಯಾವುದೇ ನೆರವಿನ‌ ಕರೆಗೆ ಸದಾ ಸನ್ನದ್ಧರಾಗಿರುವ ರವಿಶೆಟ್ಟಿಯವರ ಗುಣಗಾನ ಮಾಡಿದರು. ಇದೇ ಸಮಾರಂಭದಲ್ಲಿ,, ರವಿಶೆಟ್ಟಿಯವರು ಇಂಗ್ಲೀಷ್ ಗೆ ಭಾಷಾಂತರಿಸಿದ ಮಹಾಬಲ ಸೀತಾಳಭಾವಿಯರ ಆಯ್ದ 101 ಸಂಸ್ಕೃತ ಸುಭಾಷಿತಗಳ ಪುಸ್ತಕವನ್ನು ಜೆರಾಲ್ಡ್ ಡಿಮೆಲ್ಲೊ ಬಿಡುಗಡೆ ಮಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಕಿ ಫರ್ನಾಂಡೀಸ್, ರವಿಶೆಟ್ಟಿಯವರ ವ್ಯಕ್ತಿತ್ವ ಮತ್ತು ಸಾಮರ್ಥ್ಯದ ಧೀರ್ಘ ಅನುಭವದ ಅನೇಕ ಪ್ರಸಂಗಗಳನ್ನು ಸ್ಮರಿಸಿದರು. ರವಿಶೆಟ್ಟಿಯವರು ತುಳುನಾಡಿನ‌ ಹೆಮ್ಮೆಯೆಂದು ಅಭಿನಂದಿಸಿದರು.

ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಹೆಚ್.ಕೆ ಮಧು ಪುಸ್ತಕಗಳ ಬಗ್ಗೆ ವಿವರಣೆಯನ್ನು ನೀಡಿದರು. ವ್ಯಕ್ತಿಯೊಬ್ಬ ಸಮಾಜದಲ್ಲಿ, ಸ್ನೇಹವಲಯದಲ್ಲಿ ಹಾಗೂ ಸಮುದಾಯಗಳ ನಡುವೆ ಅಣ್ಣನಾಗಿ ಗುರುತಿಸಲ್ಪಡುವುದು ಸಾಮಾನ್ಯ ಸಂಗತಿಯಲ್ಲ. ಸಾಮಾನ್ಯನೊಬ್ಬ ತನ್ನ ಸರಳತೆ, ಆಪ್ತತೆ, ಆತ್ಮೀಯತೆ, ಔದಾರ್ಯಗಳಿಂದ ಪ್ರತಿಫಲಾಪೇಕ್ಷೆಗಳಿಲ್ಲದೆ, ಸ್ವಾರ್ಥರಹಿತ ಸೇವೆಯನ್ನು ನಿರಂತರವಾಗಿ ಮಾಡಿದಾಗ ಅಸಾಮಾನ್ಯನಾಗಿ ಜನಸಾಮಾನ್ಯರ ಮಾನಸದಲ್ಲಿ ಅಣ್ಣನಾಗಿಬಿಡುತ್ತಾನೆ. ವಯಸ್ಸಿನ ಅಂತರವಿಲ್ಲದೆ ರವಿಯಣ್ಣಯೆಂದು ಕರೆಸಿಕೊಳ್ಳುವ ಶ್ರೇಯಸ್ಸಿಗೆ ಭಾಜನರಾಗಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯೆಂದು ತಿಳಿಸಿದರು.

ಪಾಮರರು, ಪಂಡಿತರು, ಗಣ್ಯರು, ಸಾಧಕರು, ವೃತ್ತಿಪರರು, ದೇಶಿಗರು, ವಿದೇಶಿಗರು, ಹೀಗೆ ಸಮಾಜದ ಎಲ್ಲಾ ಸ್ತರದ ಮಂದಿ ರವಿ ಶೆಟ್ಟಿಯವರ ಬಗೆಗೆ ಮೆಚ್ಚುಗೆಯ ಮಾತುಗಳನ್ನು ತಮ್ಮ‌ಬರಹದ ಮೂಲಕ ಪುಸ್ತಕದಲ್ಲಿ ಉಲ್ಲೇಖಿಸಿರುವುದನ್ನು
ಪ್ರಸ್ತಾಪಿಸಿದರು.

ರವಿತೇಜ ಪುಸ್ತಕದ ಮೂಲ ಕೇಂದ್ರಬಿಂದು ರವಿಶೆಟ್ಟಿಯವರು ಸಮಾರಂಭದಲ್ಲಿ ಮಾತನಾಡಿ ಪುಸ್ತಕದ ಪ್ರಕಟಣೆಯ ಹಿನ್ನೆಲೆ, ಅದನ್ನು ಕಾರ್ಯರೂಪಕ್ಕೆ ತಂದ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ, ಐಲೇಸಾದ ಶಾಂತರಾಮ್ ಶೆಟ್ಟಿ, ತಮ್ಮ ಸಂಸ್ಥೆಯ ವಿಜಯ್, ಮುನ್ನಡಿ ಬರೆದ ಪ್ರೊ. ವಿವೇಕ್ ರೈ, ರವಿಶೆಟ್ಟಿಯವರನ್ನು ಸಮಾಜಮುಖಿ, ಸಮಾಜದ ಮುಕುಟಮಣಿಯೆಂದು ಬಣ್ಣಿಸಿದ ಡಾ.ದೊಡ್ಡರಂಗೇಗೌಡರು, ನ್ಯಾಯಮೂರ್ತಿ ಸಂತೋಷ್ ಹೆಗಡೆ, ಡಾ.ಬಿ.ಎಂ ಹೆಗಡೆ, ಸಾಹಿತಿ -ಕವಿ ಜಯಂತ್ ಕಾಯ್ಕಿಣಿಯವರ ಅದ್ಭುತ ಲೇಖನಗಳು, ತಮ್ಮ ಜನ್ಮದಾತೆ, ಮಡದಿ- ಮಕ್ಕಳು, ಬಂಧು-ಬಳಗ, ಅಸಂಖ್ಯಾತ ಮಿತ್ರರು, ಪುಸ್ತಕ ಕ್ಕೆ ಲೇಖನಗಳನ್ನು ಒದಗಿಸಿದ ಖ್ಯಾತನಾಮರು ಮತ್ತು ಎಲ್ಲಾ ಬರಹಗಾರರು, ಸಂಪಾದಕಿ ಡಾ.ಪೂರ್ಣಿಮಾ ಸುಧಾಕರ್ ಶೆಟ್ಟಿ, ಅನುವಾದಕಿ ಮಿಥಾಲಿ ಪ್ರಸನ್ನ ರೈ ಹಾಗೂ ಈ ಯೋಜನೆಗೆ ದುಡಿದ ಎಲ್ಲರನ್ನೂ ಸ್ಮರಿಸಿ ಧನ್ಯವಾದಗಳನ್ನರ್ಪಿಸಿದರು.

ಕೊರೋನಾ ಸಂಕಷ್ಟ ಸಮಯದಲ್ಲಿ, ಸಂಸ್ಕೃತ ಸುಭಾಷಿತಗಳನ್ನು ತರ್ಜುಮೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಬರೆಯಲು ಹಾಗೂ ಅದರ 101 ಸುಭಾಷಿತಗಳ ಪುಸ್ತಕ ಪ್ರಕಟಣೆಗೆ ಪ್ರೇರಕ ಮತ್ತು ಪ್ರೇರಣೆಯಾದ ಮಹಾಬಲ ಸೀತಾಳಭಾವಿಯವರಿಗೆ ಕೃತಜ್ಞತೆ ಸಲ್ಲಿಸಿದರು.

ಕರ್ನಾಟಕ ಮೂಲದ ಸಂಘಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ರವಿಶೆಟ್ಟಿಯವರ ಒಡೆತನದ ATS ಕಂಪನಿಯ ಸಿಬ್ಬಂದಿ ವರ್ಗ, ಕುಟುಂಬ ಸದಸ್ಯರು, ಹಿರಿಯ-ಕಿರಿಯ ಮಿತ್ರರು, ಹಿತೈಷಿಗಳು ಅಪಾರ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್ ಉಪಾಧ್ಯಾರವರ ಸಹಕಾರ ಮತ್ತು ಸಹಯೋಗದೊಂದಿಗೆ ಹೊರ ತಂದಿರುವ ರವಿತೇಜ ಕನ್ನಡ ಆವೃತ್ತಿಯ ಪುಸ್ತಕ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿಯವರ ಸಂಪಾದಕತ್ವದಲ್ಲಿ ಮೂಡಿಬಂದಿದೆ. ಮಿಥಾಲಿ ಪ್ರಸನ್ನ ರೈ ಇಧೇ ಪುಸ್ತಕವನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಹಾಗೂ ಅದರ ನಿಮಿತ್ತ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಬಾಬುರಾಜನ್ ಹಾಗೂ ಅಂತರರಾಷ್ಟ್ರೀಯ ಮೇಧಾವಿ ಪ್ರತಿರೂಪದ ಪ್ರಶಸ್ತಿ ಪಡೆದ ಭಾರತೀಯ ಸಮುದಾಯ ಸಹಾಯಾರ್ಥ ವೇದಿಕೆಯ ಹಂಗಾಮಿ ಅಧ್ಯಕ್ಷ ವಿನೋದ್ ನಾಯರ್ರನ್ನು ಶಾಲು ಹೊದಿಸಿ ಆತ್ಮೀಯವಾಗಿ ಗೌರವಿಸಿ, ಸನ್ಮಾನಿಸಲಾಯಿತು. 

ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲಾ ಗೌರವಾನ್ವಿತ ಅತಿಥಿ ಗಣ್ಯರಿಗೆ ರವಿಶೆಟ್ಟಿ ಮತ್ತು ಕುಟುಂಬದವರಿಂದ ಸ್ಮರಣಿಕೆ ಪ್ರದಾನ ಮಾಡಲಾಯಿತು. ನಿರೂಪಣೆಯನ್ನು ಕತಾರಿನ ಕರ್ನಾಟಕ ಟೋಸ್ಟ್ ಮಾಸ್ಟರ್ ನ ಅಧ್ಯಕ್ಷೆ ಹಾಗೂ ಲೇಖಕಿ ಸುಷ್ಮಾಹರೀಶ್ ನಿರ್ವಹಿಸಿದರು. ಅಬ್ದುಲ್ಲಾ ಮೋನುರವರು ವಂದಿಸಿದರು.

Pages