ಮಂಗಳೂರು: ಬಂಟರ ಸಂಘ ಪುಣೆ ಇದರ ಬಂಟರ ಭವನದ ನಾಲ್ಕನೇ ವರ್ಷದ ವಾರ್ಷಿಕ ಸಂಭ್ರಮ ಕಲ್ಪವೃಕ್ಷ ಸೇವಾ ಯೋಜನೆಯ ಕಾರ್ಯಕ್ರಮ ಬಂಟರ ಭವನದಲ್ಲಿ ನೆರವೇರಿತು.
ಈ ಸಂದರ್ಭ ಪುಣೆ ಬಂಟರ ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಎಲ್ಲರೂ ಜೊತೆಯಾಗಿ ಪುಣೆಯಲ್ಲಿ ಸುಮಾರು 30 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಬಂಟರ ಭವನ ನಿರ್ಮಿಸುವಲ್ಲಿ ಅದರ ಸಂಪೂರ್ಣ ನಾಯಕತ್ವ ವಹಿಸಿ ಕೊಂಡಿರುವ ನಿರಂತರವಾಗಿ ಸಮಾಜ ಮುಖಿ ಚಿಂತನೆಯ ಬೇರೆ ಬೇರೆ ಯೋಜನೆಯಲ್ಲಿ ಸಕ್ರಿಯರಾಗಿರುವ ಸಂತೋಷ್ ಕುಮಾರ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆ ಇವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ಬಂಟ ಸೇನಾಧಿಪತಿ ಬಿರುದನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂತೋಷ್ ಕುಮಾರ್ ಶೆಟ್ಟಿ ಪುಣೆಯಲ್ಲಿ 25 ಕೋಟಿ ರೂ ವೆಚ್ಚದಲ್ಲಿ ದಾನಿಗಳ ನೆರವಿನಿಂದ ವಿದ್ಯಾಸಂಸ್ಥೆಯನ್ನು ನಿರ್ಮಿಸುವುದಾಗಿ ತಿಳಿಸಿದರು. ಈ ಯೋಜನೆಯು ಶೀಘ್ರದಲ್ಲೇ ಕಾರ್ಯಪ್ರವೃತ್ತವಾಗಲಿದೆ. ಕಲ್ಪವೃಕ್ಷ ಯೋಜನೆಯಲ್ಲಿ, ವಿದ್ಯಾದಾತ, ಅನ್ನದಾತ, ಕ್ರೀಡಾದಾತ, ಆರೋಗ್ಯದಾತ, ಆಶ್ರಯದಾತ ಮೊದಲಾದ ಬೇರೆ ಬೇರೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಬಂಟ ಸಮುದಾಯದ ಸಾಧನೆ ಮೆಚ್ಚಿದ ಸಿಎಂ: ವ್ಯಾಪಾರ, ವ್ಯವಹಾರದಲ್ಲಿ ಸಾಹಸಕ್ಕೆ ಕೈ ಹಾಕಿ ಯಶಸ್ಸು ಸಾಧಿಸುವ ಬಂಟ ಸಮುದಾಯದವರು ದೇಶದ ಉದ್ದಗಲಕ್ಕೂ ಗೌರವ ಸಂಪಾದಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಟರು ಎನ್ನುವ ಹೆಸರಿನಲ್ಲೇ ಶಕ್ತಿಯಿದೆ. ದೇಶದ ಉದ್ದಗಲಕ್ಕೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬಂಟರು ಗೌರವ ಗಳಿಸಿದ್ದಾರೆ. ಬಂಟರಾಗಬೇಕಾದರೆ ಎಂಟೆದೆ ಇರಬೇಕು. ಅದು ಈ ಸಮುದಾಯದವರ ರಕ್ತದ ಕಣಕಣದಲ್ಲಿದೆ ಎಂದು ಪ್ರಶಂಸಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇತರರು ಪಾಲ್ಗೊಂಡಿದ್ದರು.
ಸಂತೋಷ್ ಕುಮಾರ್ ಶೆಟ್ಟಿ ಸಮಾಜ ಸೇವೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.
ತನ್ನ ಹುಟ್ಟೂರಿನಲ್ಲಿ ಸ್ವಂತ ವೆಚ್ಚದಲ್ಲಿ ರಸ್ತೆ ನಿರ್ಮಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸಹಾಯ, ಕಿಟ್ ವಿತರಣೆ ಹೀಗೆ ಅವರ ಸಮಾಜ ಸೇವೆ ಪ್ರಚಾರವಿಲ್ಲದೆ ಸಾಗಿದೆ. ಪ್ರಕಾಶ್ ಶೆಟ್ಟಿಯವರ 60ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಕಾಶಾಂಭಿನಂದನ ಸಮಿತಿಯಲ್ಲಿ ಗುರ್ಮೆ ಸುರೇಶ್ ಶೆಟ್ಟಿಯವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದಾರೆ.