ಮಂಗಳೂರು: ಸಮಗ್ರ ಬಂಟರ ಸಹಕಾರದಿಂದ ಮತ್ತು ಎಲ್ಲರ ಅಳಿಲಸೇವೆಯ ಮೂಲಕ ವಿಶ್ವ ಬಂಟರ ಮಾಹಿತಿ ಸಂಗ್ರಹಗೊಳ್ಳಲು ಸಾಧ್ಯ ಎಂದು ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ಕೆ. ಪೃಥ್ವಿರಾಜ್ ರೈ ಅವರು ಅಭಿಪ್ರಾಯಪಟ್ಟರು.
ಸೆ. 23ರಂದು ನಡೆಯಲಿರುವ ವಿಶ್ವ ಬಂಟರ ಮಾಹಿತಿ ಕೋಶದ ಮಾಹಿತಿ ಸಂಗ್ರಹದ ಚಾಲನೆಯ ಕರಪತ್ರವನ್ನು ಬಂಟ್ಸ್ ಹಾಸ್ಟೇಲ್ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಅನಸೂಯ ರೈ ಅವರು ಸೆ.24 ರಂದು ನಡೆಯುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯ ಪ್ರತಿಷ್ಠಿತ ವಿದ್ಯಾರ್ಥಿನಿ ನಿಲಯವು ಅಮೃತೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸ್ತ್ರೀ ಶಿಕ್ಷಣವನ್ನು ಪ್ರೋತ್ಸಾಹಿಸಲು ಆ ಕಾಲದಲ್ಲಿ ಇಂತಹ ಹಾಸ್ಟೆಲ್ ಸ್ಥಾಪಿಸಿದ ಹಿರಿಯರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್‌ಕುಮಾರ್ ರೈ ಮಾಲಾಡಿ ಅವರು ಮಾತನಾಡಿ, 'ಬಾಂಧವ್ಯ' ಎಂಬ ಕಾರ್ಯಕ್ರಮದ ಮೂಲಕ ವಿಶ್ವದೆಲ್ಲೆಡೆ ಪಸರಿಸಿರುವ ಬಂಟರ ಮಾಹಿತಿಯನ್ನು ಒಂದೆಡೆ ದೊರಕಿಸುವ ನಿಟ್ಟಿನಲ್ಲಿ ಈ ಮಹತ್ವದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತೋತ್ಸವ ಸಮಿತಿಯ ಸಂಚಾಲಕಿ ಶಾಲಿನಿ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಕೋರಿದರು. ಸ್ವಾಗತ ಸಮಿತಿಯ ಅಧ್ಯಕ್ಷ ವಸಂತ ಶೆಟ್ಟಿ, ತಾಲೂಕು ಬಂಟರ ಸಂಘದ ಸಂಚಾಲಕ ಉಲ್ಲಾಸ್ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷೆ ವೀಣಾ ಟಿ. ಶೆಟ್ಟಿ ಅವರು ಪ್ರಸ್ತಾವನೆಗೈದು ಸ್ವಾಗತಿಸಿದರು. ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಂದಿಸಿದರು. ಮಂಜುಳಾ ಶೆಟ್ಟಿ ಹಾಗೂ ಕವಿತಾ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.