ಉಡುಪಿ: ಹಿರಿಯಡಕ ಬಂಟರ ಒಕ್ಕೂಟದ ಆಶ್ರಯದಲ್ಲಿ ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮವು ಸಂಘದ ಅಧ್ಯಕ್ಷ ನಿತೀಶ್ ಕುಮಾರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಹಿರಿಯಡಕದಲ್ಲಿ ನಡೆಯಿತು.
ಶ್ರೇಯ ಮತ್ತು ಶ್ರಾವ್ಯರವರ ಪ್ರಾರ್ಥನೆಗೈದರು. ಅಧ್ಯಕ್ಷರೊಂದಿಗೆ ಅತಿಥಿಗಳು ದೀಪ ಬೆಳಗಿಸಿ, ತೆಂಗಿನ ಗರಿಯಿಂದ ಕಡ್ಡಿ ಬೇರ್ಪಡಿಸಿ ಹಿಡಿಸೂಡಿ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ , ಖ್ಯಾತ ವಾಗ್ಮಿ, ಧಾರ್ಮಿಕ ಪ್ರವಚನಗಾರ ಕುದಿ ವಸಂತ ಶೆಟ್ಟಿಯವರು, ಆಟಿ ತಿಂಗಳ ವಿಶೇಷತೆ, ಆಟಿ ಕೂಟ, ತುಳುವರ ಆಟಿ ತಿಂಗಳು, ಆಟಿ ತಿಂಗಳ ತಿಂಡಿ ತಿನಸುಗಳು ಮತ್ತು ಆಚರಣೆ, ಬಂಟ ಸಮುದಾಯದ ಆಟಿ ಆಚರಣೆಯ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಆಟಿಡೊಂಜಿ ದಿನ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಕ್ರೀಡಾ ಕೂಟದಲ್ಲಿ ವಿಜೇತರಾದ ಕ್ರೀಡಾ ಪಟುಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಹಿರಿಯಡಕ ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ವಿಶ್ವನಾಥ ರೈಯವರು ಸಂಘದ ಆರಂಭದ ದಿನಗಳು, ಸಂಘ ನಡೆದುಕೊಂಡು ಬಂದ ದಾರಿ, ಪ್ರಸ್ತುತ ಸಂಘದ ಬೆಳವಣಿಗೆ, ಇಂದಿನ ಆಟಿಡೊಂಜಿ ದಿನ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.
ಸಂಘದ ಉಪಾಧ್ಯಕ್ಷ ರವೀಂದ್ರನಾಥ್ ಶೆಟ್ಟಿ, ಕಾರ್ಯದರ್ಶಿ ನವೀನ್ ಶೆಟ್ಟಿ, ಜತೆ ಕಾರ್ಯದರ್ಶಿ ಭವ್ಯ ಶೆಟ್ಟಿ, ಕೋಶಾಧಿಕಾರಿ ಯಶೋಧ ಶೆಟ್ಟಿ, ಸಂಜನಾ ರೈ ವೇದಿಕೆಯಲ್ಳಿದ್ದರು. ಸುರೇಶ್ ಶೆಟ್ಟಿ ಹಾಗೂ ಸಂಜನಾ ರೈ ಕ್ರೀಡಾ ಕೂಟವನ್ನು ನಡೆಸಿಕೊಟ್ಟರು.
ರವೀಂದ್ರನಾಥ್ ಶೆಟ್ಟಿ ಸ್ವಾಗತಿಸಿ, ನವೀನ್ ಶೆಟ್ಟಿ ವಂದಿಸಿದರು. ನೀತಾ ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಬಳಿಕ ಆಟಿ ತಿಂಗಳ ತುಳುವರ ಬಗೆ ಬಗೆಯ ತಿಂಡಿ ತಿನಸುಗಳ ಪ್ರದರ್ಶನ ಮತ್ತು ಸಹಭೋಜನ ನೆರವೇರಿತು.