ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಿದ ಹಿನ್ನಲೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಒಕ್ಕೂಟದ ಪದಾಧಿಕಾರಿಗಳು ಹೆಗ್ಗಡೆಯವರ ನಿವಾಸದಲ್ಲಿ ಭೇಟಿ ಮಾಡಿ ಗೌರವ ಸಲ್ಲಿಸಿದರು.
ಸದಾ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಗಮನ ಸೆಳೆದಿರುವ ಹೆಗ್ಗಡೆ ಅವರನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಗುರುತಿಸಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿರುವುದು ಅಭಿನಂದನಾರ್ಹ. ಧರ್ಮ ಸಮನ್ವಯತೆಗೆ ಹೆಗ್ಗಡೆ ಅವರ ಕೊಡುಗೆ ಮಹತ್ತರವಾದದು. ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣ ಮಾಡಿರುವುದು ಸಮಾಜಕ್ಕೆ ಹೆಮ್ಮೆ ಹಾಗೂ ಸಂಭ್ರಮದ ವಿಚಾರವಾಗಿದೆ. ಇದರಿಂದ ತುಳುನಾಡಿಗೆ ಹರ್ಷ ತಂದಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಒಕ್ಕೂಟದ ನೂತನ ನಿರ್ದೇಶಕ ಶಶಿಧರ ಶೆಟ್ಟಿ ಬರೋಡ, ರವಿಶೆಟ್ಟಿ ಜತ್ತಬೆಟ್ಟು, ಜೊತೆಗೆ ಮಾಜೀ ಸಚಿವ ಅಭಯಚಂದ್ರ ಜೈನ್ ಉಪಸ್ಥಿತರಿದ್ದು ಡಾ ಹೆಗ್ಗಡೆ ಅವರನ್ನು ಅಭಿನಂದಿಸಿದರು.