ಮಂಗಳೂರು: ಚಲನಚಿತ್ರ ನಟ, ಆರ್‌ಜೆ ರೂಪೇಶ್ ಶೆಟ್ಟಿ ಅವರು ಈಗ ಪ್ರತಿಷ್ಠಿತ ಬಿಗ್ ಬಾಸ್‌ಗೆ ಆಯ್ಕೆ ಆಗಿದ್ದಾರೆ. ಈ ಬಾರಿ ಬಿಗ್ ಬಾಗ್ ಕಾರ್ಯಕ್ರಮವು ಒಟಿಟಿ ಮೂಲಕ ನಡೆಯಲಿದ್ದು, ಸಂಪೂರ್ಣವಾಗಿ ಡಿಜಿಟಲ್ ಆಗಿರಲಿದೆ. ವೂಟ್ ಆಪ್‌ನಲ್ಲಿ ಮಾತ್ರ ವೀಕ್ಷಣೆಗೆ ಲಭ್ಯ.
ಈ ಬಾರಿ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಸಹಿತ ಒಟ್ಟು 18 ಸ್ಪರ್ಧಿಗಳಿದ್ದು, 42 ದಿನಗಳ ಕಾಲ ದಿನದ 24 ಗಂಟೆಯೂ ಇವರು ವೀಕ್ಷಕರನ್ನು ರಂಜಿಸಲಿದ್ದಾರೆ. ಈ ಹಿಂದಿನಂತೆಯೇ ಈ ಬಾರಿಯೂ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ.
ಈ ಬಾರಿಯ ವಿಶೇಷದ ಬಗ್ಗೆ ಮಾತನಾಡಿರುವ ಸುದೀಪ್ ಅವರು, ಈ ಹಿಂದೆ ಎಷ್ಟು ಕಷ್ಟವಾಗಿದ್ದರೂ ಒಂದೇ ಒಂದು ಎಪಿಸೋಡ್ ತಪ್ಪಿಸದೆ ಜನರಿಗೆ ನೀಡಿದ್ದೆ. ಆರೋಗ್ಯ ಸಮಸ್ಯೆ ಇದ್ದಾಗಲೂ ಬೆನ್ನಿಗೆ ಐಸ್ ಕ್ಯೂಬ್ ಇಟ್ಟುಕೊಂಡು, ಕಾಲಿಗೆ ಪ್ಲಾಸ್ಟರ್ ಹಾಕಿಕೊಂಡು ಎಸಿಸೋಡ್ ನೀಡಿದ್ದೆ. ವಿದೇಶದಲ್ಲಿ ಚಿತ್ರೀಕರಣವಿದ್ದಾಗಲೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಎರಡ್ಮೂರು ವಿಮಾನಗಳ ಟಿಕೆಟ್ ಬುಕ್ ಮಾಡಿಕೊಂಡದ್ದೂ ಇದೆ. ಈ ರೀತಿ ಕಳೆದ ವರ್ಷ ಹೊರತುಪಡಿಸಿ ಉಳಿದೆಲ್ಲ ಸೀಸನ್‌ನಲ್ಲೂ ಕಿಂಚಿತ್ತೂ ಲೋಪವಿಲ್ಲದೆ ಕಾರ್ಯಕ್ರಮ ನಡೆಸಿಕೊಟ್ಟ ಹೆಮ್ಮೆಯಿದೆ.
ಯಾವತ್ತೂ ನಾನು ಹಣದ ಮುಖ ನೋಡಿ ಅಥವಾ ಹಣ ಮಾಡುವ ಉದ್ದೇಶದಲ್ಲಿ ಈ ಕಾರ್ಯಕ್ರಮವನ್ನು ನೀಡಿಲ್ಲ. ಆದರೆ ಕಳೆದ ವರ್ಷ ಕೋವಿಡ್ ಸೋಂಕಿಗೆ ಒಳಗಾದ ಕಾರಣ ಎಪಿಸೋಡ್ ಅನ್ನು ಸರಿಯಾಗಿ ನಡೆಸಿಕೊಡಲಾಗಲಿಲ್ಲ. ಆ ಬೇಸರ ನನಗೆ ಇದ್ದೇ ಇದೆ. ಆದ್ದರಿಂದ ಈ ಬಾರಿ ಸಂಪೂರ್ಣವಾಗಿ ವೂಟ್‌ನಲ್ಲಿ ಮಾತ್ರ ಕಾರ್ಯಕ್ರಮ ಪ್ರಸಾರ ಆಗಲಿದೆ. ಹಿಂದಿಗಿಂತ ಹೆಚ್ಚಿನ ಪ್ರೇಕ್ಷಕರ ನಿರೀಕ್ಷೆ ಇದೆ. ಈ ಬಾರಿ ಹೆಚ್ಚಾಗಿ ಯುವ ಸ್ಪರ್ಧಿಗಳನ್ನೇ ಆರಿಸಿಕೊಳ್ಳಲಾಗಿದೆ ಹಾಗೂ ಹೆಚ್ಚು ಕಲಾವಿದರೇ ತಂಡದಲ್ಲಿದ್ದಾರೆ. ಈ ಬಾರಿಯದ್ದು ಒಂದು ಹೊಸ ಅನುಭವವೂ ಆಗಿದೆ ಎಂದು ಸುದೀಪ್ ಹೇಳಿದ್ದಾರೆ.
ಈ ಬಾರಿ ಮಂಗಳೂರಿನ ಖ್ಯಾತ ಯುವ ಸಿನಿಮಾ ನಟ, ಆರ್ ಜೆ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್‌ಗೆ ಆಯ್ಕೆ ಆಗಿರುವುದು ಅವರ ಅಭಿಮಾನಿಗಳಿಗೆಲ್ಲ ಸಂತೋಷವಾಗಿದೆ. ಅವರಿಗೆ ಎಲ್ಲರ ಹಾರೈಕೆಗಳ ಜತೆಗೆ ವೋಟ್ ಕೂಡ ಅಗತ್ಯವಾಗಿದೆ. ಅವರನ್ನು ಗೆಲ್ಲಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಅವರ ಅಭಿಮಾನಿ ಬಳಗ ತಿಳಿಸಿದೆ.
ನಿಮ್ಮ ಆಶೀರ್ವಾದ, ಪ್ರೋತ್ಸಾಹ ಇರಲಿ: ನಮಸ್ಕಾರ, ನಾನು ನಿಮ್ಮ ರೂಪೇಶ್ ಶೆಟ್ಟಿ. ನಿಮೆಲ್ಲರ ಪ್ರೋತ್ಸಾಹ, ಆಶೀರ್ವಾದದಿಂದ ಬಿಗ್ ಬಾಸ್ ಎನ್ನುವಂತಹ ದೊಡ್ಡ ವೇದಿಕೆಯ ಮನೆಯ ಒಳಗಡೆ ಹೋಗುವ ಅವಕಾಶ ದೊರೆತಿದೆ. ನಿಮ್ಮ ಪ್ರೀತಿಗೆ, ಪ್ರೋತ್ಸಾಹಕ್ಕೆ ನಾನು ಯಾವತ್ತೂ ಚಿರ ಋಣಿ. ಇದೇ ರೀತಿ ನಿಮ್ಮ ಪ್ರೋತ್ಸಾಹ ಇರಲಿ, ತುಂಬು ಹೃದಯದ ಧನ್ಯವಾದಗಳು. ನನ್ನ ಜರ್ನಿ ಮುಂದುವರಿಯ ಬೇಕಾದರೆ ಬಿಗ್ ಬಾಸ್ ನಲ್ಲಿ ನಿಮ್ಮ ಪ್ರೋತ್ಸಾಹ ಅತೀ ಅಗತ್ಯ. ಅದು ಯಾವತ್ತೂ ಇರಲಿ. - ರಾಕ್ ಸ್ಟಾರ್ ರೂಪೇಶ್ ಶೆಟ್ಟಿ (ನಟ)