ವಿಶಿಷ್ಟ ಪದ್ಧತಿಯ ‘ಬೊಜ್ಜ’ ಆಚರಣೆ ಮೂಡುಶೆಡ್ಡೆಯಲ್ಲಿ : ತುಳುನಾಡಿನ ದೇಲಗೂಡು, ಪೂಕರೆ, ನೀರ್ ನಿರೆಲ್..! - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವಿಶಿಷ್ಟ ಪದ್ಧತಿಯ ‘ಬೊಜ್ಜ’ ಆಚರಣೆ ಮೂಡುಶೆಡ್ಡೆಯಲ್ಲಿ : ತುಳುನಾಡಿನ ದೇಲಗೂಡು, ಪೂಕರೆ, ನೀರ್ ನಿರೆಲ್..!

Share This
ಕೈಕಂಬ: ತುಳುನಾಡಿನ ಆಚಾರ-ವಿಚಾರಗಳು ಮತ್ತು ಆಚರಣೆಗಳು ವಿಶಿಷ್ಟವೂ, ವಿನೂತನವೂ ಆಗಿದ್ದು, ಕಾಲಾಂತರದಲ್ಲಿ ಅರ್ಥಾತ್ ಆಧುನಿಕ ಯುಗದಲ್ಲಿ ಎಲ್ಲವೂ ಕಣ್ಮರೆಯಾಗಿವೆ. ನಂಬಿಕೆ ಆಧರಿತ ಇಂತಹ ಆಚರಣೆಗಳ ಹಿಂದೆ ಒಂದು ಸಂಸ್ಕೃತಿ ಅಕಡವಾಗಿದೆ. ಈ ನಿಟ್ಟಿನಲ್ಲಿ ತುಳುನಾಡಿನಲ್ಲಿ ಸುಮಾರು 30-40 ವರ್ಷಗಳ ಹಿಂದೆ ತುಳುವರು 'ಉತ್ತರಕ್ರಿಯೆ' ಅಥವಾ ಬೊಜ್ಜದ ಸಂದರ್ಭದಲ್ಲಿ ಆಚರಿಸುತ್ತಿದ್ದ ಒಂದು ವಿಶಿಷ್ಟ ಪದ್ಧತಿಯು ಹೆಚ್ಚು ಅರ್ಥಪೂರ್ಣವಾಗಿದ್ದು, ಇತ್ತೀಚೆಗೆ ಮಂಗಳೂರಿನ ಮೂಡುಶೆಡ್ಡೆಯ ಹೊಸಲಕ್ಕೆ ಎಂಬಲ್ಲಿನ ‘ಶ್ರೀ ದುರ್ಗಾಪರಮೇಶ್ವರಿ ಕೃಪಾಗೃಹ’ದಲ್ಲಿ ಅಂತಹದೊಂದು ಆಚರಣೆ ಕಂಡು ಬಂತು. ಬಂಟ ಸಮಾಜದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ‘ಬೊಜ್ಜ’ದ ಸಂಪ್ರದಾಯಬದ್ಧ ಆಚರಣೆ ಇದಾಗಿದೆ.
ಮೂಡುಶೆಡ್ಡೆ ಹೊಸಲಕ್ಕೆಯ ದಿ. ಸಂಜೀವ ಶೆಟ್ಟಿಯವರ ಪತ್ನಿ ದೇವಕಿ ಎಸ್ ಶೆಟ್ಟಿ(81) ಜೂ. 19ರಂದು ಭಾನುವಾರ ಸ್ವಗೃಹದಲ್ಲಿ ನಿಧನ ಹೊಂದಿದ್ದು, ಜೂ. 21ರಂದು ಮಂಗಳವಾರ ಪುತ್ರರಾದ ಮುಂಬೈ ಥಾಣೆ ಭಿವಂಡಿಯ ಹೋಟೆಲು ಉದ್ಯಮಿ ವಿಶ್ವನಾಥ ಎಸ್. ಶೆಟ್ಟಿ,ಮೂಡುಶೆಡ್ಡೆಯ ಉದ್ಯಮಿಗಳಾದ ಕರುಣಾಕರ ಶೆಟ್ಟಿ, ದಿನೇಶ್ ಎಸ್. ಶೆಟ್ಟಿ ಹಾಗೂ ವಕೀಲ ಉಮೇಶ ಎಸ್. ಶೆಟ್ಟಿ ಇವರ ಮನದಿಚ್ಛೆಯಂತೆ ಹಳೆಯ ಸಂಪ್ರದಾಯ ಆಧರಿಸಿ ತಾಯಿಯ ಉತ್ತರಕ್ರಿಯೆಯ ವಿಧಿವಿಧಾನಗಳು ಮನೆಯಲ್ಲೇ ನಡೆಯಿತು. ಮೃತರ ಆತ್ಮಸದ್ಗತಿಗಾಗಿ ಹಿಂದೆ ತುಳುನಾಡಿನಲ್ಲಿ ಆಚರಿಸುತ್ತಿದ್ದ ಪದ್ಧತಿ ಅದು. ಅದಕ್ಕೊಂದು ವಿಸ್ತೃತವಾದ ಹಿನ್ನೆಲೆ ಇದೆ. ಕಾರಣ, ಮೂಡುಶೆಡ್ಡೆಯ ಹೊಸಲಕ್ಕೆಯಲ್ಲಿ ನಡೆದ ಬೊಜ್ಜದ `ಕ್ರಿಯೆ’ ಕಣ್ತುಂಬಿಸಿಕೊಳ್ಳಲು ಅಂದು ದೇವಕಿಯವರ ಕುಟುಂಬಿಕರ ಸಹಿತ ಊರ ನೂರಾರು ಮಂದಿ ಮನೆಯಲ್ಲಿ ನೆರೆದಿದ್ದರು.

ಇತ್ತೀಚಿನ ವರ್ಷಗಳಲ್ಲಿ ಇತರ ಕಾರ್ಯಕ್ರಮಗಳಂತೆ ಉತ್ತರಕ್ರಿಯೆಯೂ ಸಭಾಗೃಹಗಳಲ್ಲಿ ನಡೆಯುವುದು ವಾಡಿಕೆ. ಆದರೆ ಹೊಸಲಕ್ಕೆಯಲ್ಲಿ ದಿವಂಗತ ದೇವಕಿಯವರ ಉತ್ತರಕ್ರಿಯೆಯ ವಿಧಿವಿಧಾನಗಳು ನಡೆದ ಬಳಿಕ, ಮಳೆಯ ಕಾರಣಕ್ಕಾಗಿ ಊಟೋಪಚಾರ ಮಾತ್ರ ಸಭಾಗೃಹದಲ್ಲಿ ಇರಿಸಲಾಗಿತ್ತು. ಹಾಗಾದರೆ ನಾವೀಗ ನೇರವಾಗಿ ಅಂದಿನ ಕ್ರಿಯೆಯ ಹಳೆಯ ವೈಶಿಷ್ಟ್ಯತೆಯ ಬಗ್ಗೆ ಸಂಕ್ಷಿಪ್ತವಾಗಿ ನೋಡುತ್ತ ಬರೋಣ.

ದೇವಕಿಯವರು ಕುಟುಂಬದಲ್ಲಿ ಹಿರಿಯ ವ್ಯಕ್ತಿಯಾಗಿದ್ದರಿಂದ 14ನೇ ದಿನದಲ್ಲಿ ಉತ್ತರಕ್ರಿಯೆ. ಹೊಸಲಕ್ಕೆ ಮನೆಯೊಳಗೆ ‘ನೀರ್ ನಿರೆಲ್’(ತಿಳಿ ಕೆಂಪು ಬಟ್ಟೆಯಿಂದ ಮಾಡಲಾದ ತ್ರಿಕೋನಾಕಾರದ ಕಿರು ಮಂಟಪ !). ಮಕ್ಕಳ ಸಹಿತ ಶುದ್ಧಾಚಾರದಲ್ಲಿದ್ದ ಕುಟುಂಬಿಕರೆಲ್ಲ ಶ್ರದ್ಧೆಯಿಂದ ‘ನೀರರ್ ನಿರೆಲ್’ನ ಎದುರು ಪ್ರಾರ್ಥಿಸಿಕೊಳ್ಳುತ್ತಾರೆ. ಅಲ್ಲಿ ಮೃತರಿಗೆ ಪ್ರಿಯವಾದ ತಿಂಡಿ ಇತ್ಯಾದಿ ಖಾದ್ಯ ಇರಿಸಲಾಗಿದ್ದು, ಶುದ್ಧೀಕರಿಸಲಾದ ಜಲ ಇಡಲಾಗಿತ್ತು. ತಾಯಿ ಮೃತರಾದ ಮೂರನೇ ದಿನಕ್ಕೆ ನಡೆಯುವ ಶಾಸ್ತ್ರದಂತೆ ತಲೆಬೋಳಿಸಿಕೊಂಡ ಮಕ್ಕಳು, ಅಲ್ಲಿ ಸೇರಿರುವ ಕುಟುಂಬಿಕರು ಮತ್ತು ಗಣ್ಯರ ಸಮ್ಮುಖದಲ್ಲಿ ಮಾತೆಯ ಸ್ಮರಿಸಿಕೊಳ್ಳುತ್ತಾರೆ. ಶೆಟ್ಟಿ ಕುಟುಂಬದ ನಿಕಟವರ್ತಿಗಳಾದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಂದು ಮನೆಗೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿರುವುದು ಮತ್ತೊಂದು ವಿಶೇಷತೆ.

ದೇಲಗೂಡು: ವ್ಯಕ್ತಿ ಮೃತಪಟ್ಟ ಮೂರು ದಿನದಂದು ‘ಬೂದಿಒಪ್ಪ’ ಮಾಡಲಾದ ಸ್ಥಳದಲ್ಲಿ ನಿರ್ಮಿಸಲಾದ ‘ದೇಲಗೂಡು’ವಿನ ಸುತ್ತ ನಾಲ್ಕು ಕಂಬ ಹಾಕಿ ಚೌಕಾಕಾರದ ‘ಪೂಕರೆ’ ಕಟ್ಟಲಾಗುತ್ತದೆ. ಬಾಳೆಕಾಯಿ, ತೆಂಗಿನಕಾಯಿ, ಬೂದು ಕುಂಬಳಕಾಯಿ ಮತ್ತು ಹೂವಿನಿಂದ ಪೂಕರೆ ಸಿಂಗರಿಸಲಾಗುತ್ತದೆ. ಮೃತರ ಆತ್ಮ ದೇಲಗೂಡಿನಲ್ಲಿರುತ್ತದೆ ಎಂಬುದು ನಂಬಿಕೆ. ಭವಿಷ್ಯದಲಿವಿದೇ ಜಾಗದಲ್ಲಿ ಮೃತರಿಗೆ ‘ಗೋರಿ’ ಕಟ್ಟುವ ವಾಡಿಕೆಯೂ ತುಳುನಾಡಿನಲ್ಲುಂಟು. ಮೃತರು ಹೆಂಗಸಾದರೆ ಚಿಕ್ಕ ಪೂಕರೆಯೊಳಗಿನ ದೇಲಗೂಡಿನಲ್ಲಿ ಒಂದು ‘ದುರ್ಜಿ’(ಬಟ್ಟೆಯ ಅಂಕಣ) ನಿರ್ಮಿಸಲಾಗುತ್ತದೆ. ಗಂಡಸಾದರೆ ದೇಲಗೂಡಿನ ಹಿಂದೆ ಕೆಂಪು ಮತ್ತು ಬಿಳಿ ಬಟ್ಟೆಯ ಸುಮಾರು 11 ಅಂಕಣದ ‘ದುರ್ಜಿ’ ನಿರ್ಮಿಸಲಾಗುತ್ತದೆ. ಇದು ಮಡಿವಾಳರು ಮಾಡುವ ಕೆಲಸವಾಗಿದ್ದು, ಇಲ್ಲಿ ಸನ್ನು ಮಡಿವಾಳರ ಮಕ್ಕಳಾದ ರಮೇಶ್, ಗೋಪಾಲ, ರಮೇಶ್ ಮತ್ತು ಬಾಲಕೃಷ್ಣ ಈ ಕೆಲಸ ಅಚ್ಚಕಟ್ಟಾಗಿ ಮಾಡಿದ್ದಾರೆ.

ನೀರ್ ನಿರೆಲ್‌ನಲ್ಲಿ ಪ್ರಾರ್ಥಿಸಿದ ಬಳಿಕ, ಅಲ್ಲಿನ ಖಾದ್ಯ ವಸ್ತುಗಳನ್ನು ಕಂಗಿನ ಸೋಗೆಯಿಂದ ನಿರ್ಮಿಸಲಾದ ಪುಟ್ಟ ಮೇನೆಯಲ್ಲಿ ದೇಲಗೂಡಿಗೆ ತರಲಾಗುತ್ತದೆ. ಅದರಲ್ಲಿದ್ದ ಎಲ್ಲ ಪದಾರ್ಥ ಬಡಿಸಿ ಎಲ್ಲರೂ ಕೈ ಮುಗಿಯುತ್ತಾರೆ. ಅದು ಕಾಗೆಗೆ ಅನ್ನಾಹಾರ ನೀಡಿ ಮೃತರೆದುರು ಮಕ್ಕಳು ಕೃತಾರ್ಥರಾಗುವ ಒಂದು ಹಳೆಯ ಭಾವ-ಸಂಪ್ರದಾಯವಾಗಿದೆ. ಬಳಿಕ ಬಾವಿಕಟ್ಟೆಯ ಬಳಿ ನಡೆಯುವ ವಿಧಿಯೊಂದರ ಬಳಿಕ ಮಕ್ಕಳಿಗೆಲ್ಲರಿಗೂ ಮಡಿವಾಳರು ನೀರು ಚುಮುಕಿಸುತ್ತಾರೆ. ಇದಾದ ತಕ್ಷಣ ಎಲ್ಲರೂ ಅಲ್ಲೇ ಸ್ನಾನ ಮಾಡಿ ಮನೆಯೊಳಗೆ ಹೋಗಿ ಹೊಸ ಬಟ್ಟೆ ಹಾಕಿ ಮುಂದಿನ ಕ್ರಿಯೆಗೆ ಸಿದ್ಧರಾಗುತ್ತಾರೆ.

ಅಂದು ಮಳೆಯ ಕಾರಣ ವಾಜೂಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ರಜತಗಿರಿ ಸಭಾಗೃಹದಲ್ಲಿ ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಅಲ್ಲಿಗೆ ತೆರಳಿ, ಮೊದಲಾಗಿ ಮೃತರ ಆತ್ಮಸದ್ಗತಿಗಾಗಿ ಮತ್ತೊಮ್ಮೆ `ನುಡಿ ನಮನ’ದೊಂದಿಗೆ ಪ್ರಾರ್ಥಿಸುತ್ತಾರೆ. ಬಳಿಕ ನೆರೆದವರಿಗೆ ಕಾಯಿ, ಕುಂಬಳ, ಲಾಡು, ಹೋಳಿಗೆ ಪಾಯಸದ ಔತಣ ಬಡಿಸಲಾಯಿತು. ಹಳೆಯ ಸಂಪ್ರದಾಯದ ಉತ್ತರಕ್ರಿಯೆಯ ವಿಧಿವಿಧಾನ ಕಣ್ಣಾರೆ ಕಂಡ ಬಹುಮಂದಿ ಈ ಹಿಂದೆ ‘ಬೊಜ್ಜ’ಕ್ಕೆ ಇಷ್ಟೊಂದು ಶಾಸ್ತ್ರಗಳಿತ್ತೇ ಎಂಬ ಉದ್ಗಾರ ತೆಗೆದಿದ್ದರೆ ಅಚ್ಚರಿಯೇನಲ್ಲ.

Pages