ಮಂಗಳೂರು: ಮಹಾಕವಿ, ಸಾಹಿತಿ ಡಾ| ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರನ್ನು ಪಠ್ಯ ಪುಸ್ತಕದಿಂದ ಕೈ ಬಿಡುವ ಮೂಲಕ ಕಯ್ಯಾರರಿಗೆ ಅಗೌರವ ತೋರಿದ್ದು ಬಂಟ ಸಮಾಜಕ್ಕೆ ನೋವಾಗಿದ್ದು, ತಪ್ಪು ಸರಿ ಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಂಟರು ಹೋರಾಟ ಮಾಡುವುದಾಗಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದ್ದಾರೆ.
ಅವರು ಬಂಟ್ಸ್ ಹಾಸ್ಟೆಲ್ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿಗೆ ಪಾತ್ರರಾಗಿದ್ದ ಮಹಾಕವಿ ಕಯ್ಯಾರರ ಹೆಸರನ್ನು ಪಠ್ಯ ಪುಸ್ತಕದಿಂದ ಕೈ ಬಿಟ್ಟಿರುವದು ಅನ್ಯಾಯದ ಕೆಲಸವಾಗಿದೆ. ಈಗಾಗಲೇ ಇತರ ಸಮಾಜದವರು ತಿದ್ದುಪಡಿ ವಿರುದ್ಧ ಹೋರಾಟ ಶುರು ಮಾಡಿದ್ದಾರೆ. ಬಂಟ ಸಮಾಜವು ಕೂಡ ಕಯ್ಯಾರ ಹೆಸರನ್ನು ಕೈ ಬಿಟ್ಟಿರುವ ಬಗ್ಗೆ ಹೋರಾಟಕ್ಕೆ ಸಿದ್ದರಿದ್ದು ಅದಕ್ಕೆ ಅವಕಾಶ ಕೊಡದೆ ತಪ್ಪನ್ನು ಸರಿಪಡಿಸುವಂತೆ ಕೋರಿದರು.
ಇತ್ತೀಚೆಗೆ ಸ್ಮಾರ್ಟ್ ಸಿಟಿ ಹೆಸರಲ್ಲಿ ನಮ್ಮ ಜಿಲ್ಲೆ, ರಾಜ್ಯಕ್ಕೆ ತಮ್ಮ ಅನನ್ಯವಾದ ಸೇವೆಯನ್ನು ನೀಡಿದ್ದ ಎಬಿ ಶೆಟ್ಟಿ ಅವರ ಗೌರವಪೂರ್ವಕವಾಗಿದ್ದ ಎ.ಬಿ ಶೆಟ್ಟಿ ಸರ್ಕಲನ್ನು ಕೆಡವಿ ನಾಮಫಲಕ ಕಿತ್ತು ಅವಮಾನಿಸಲಾಗಿದೆ. ಎಲ್ಲರೊಂದಿಗೆ ಸಹಬಾಳ್ವೆಯಿಂದ ಇರುವ ಬಂಟರ ತಾಳ್ಮೆ ಪರೀಕ್ಷಿಸುವುದು ಸರಿಯಲ್ಲ. ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಗಮನ ಹರಿಸಿ ಎ.ಬಿ ಶೆಟ್ಟಿ ಸರ್ಕಲ್ ಪುನರ್ ನಿರ್ಮಾಣ ಮಾಡಿ ನಾಮಫಲಕ ಆಳವಡಿಸುವಂತೆ ಮಾಲಾಡಿ ಮನವಿ ಮಾಡಿದರು.
ಕಯ್ಯಾರರ ಸುಪುತ್ರ ಪ್ರಸನ್ನ ರೈ ಮಾತನಾಡಿ, ಕನ್ನಡ ಭಾಷೆಗಾಗಿ ಹೋರಾಡಿದ ನಮ್ಮ ತೀರ್ಥರೂಪರ ಹೆಸರನ್ನು ಪಠ್ಯ ಪುಸ್ತಕದಿಂದ ಕೈಬಿಟ್ಟಿರುವುದು ವಿಪರ್ಯಾಸ. ಹಿರಿಯ ಲೇಖಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕವಿಯಾಗಿ ಕನ್ನಡ ಭಾಷೆಗಾಗಿ ಕೊನೆ ಕ್ಷಣದವರೆಗೆ ಹೋರಾಟ ಮಾಡಿರುವ ತಂದೆ ಕಯ್ಯಾರರ ಹೆಸರನ್ನು ತೆಗೆದಿರುವುದು ದುಃಖ ತಂದಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಎ.ಬಿ ಶೆಟ್ಟಿ ಅವರ ಮೊಮ್ಮಗಳು ಲಕ್ಷ್ಮಿ ಮಾತನಾಡಿ, ಎಬಿ ಶೆಟ್ಟಿ ಅವರು ರಾಜ್ಯ, ಜಿಲ್ಲೆಗೆ ಸೇವೆ ಮಾಡಿರುವ ಮಹನೀಯರು. ಮನಪಾ ಕೂಡಲೇ ಅವರ ಹೆಸರಿನ ವೃತ್ತವನ್ನು ಪುನರ್ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಉಪಾಧ್ಯಕ್ಷ ಎ. ಹೇಮನಾಥ ಶೆಟ್ಟಿ ಕಾವು, ಖಜಾಂಚಿ ಕೃಷ್ಣಪ್ರಸಾದ್ ರೈ, ವಸಂತ್ ಶೆಟ್ಟಿ, ರವೀಂದ್ರನಾಥ ಶೆಟ್ಟಿ ಹಾಗೂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.