ಸದಾಶಿವ ಶೆಟ್ಟಿ ಕನ್ಯಾನರು ಒಕ್ಕೂಟದ ದೇವರಿದ್ದಂತೆ, ಇಂತಹ ವಿಶೇಷ ವ್ಯಕ್ತಿಗಳು ಸಮಾಜದಲ್ಲಿ ಹುಟ್ಟಿದರೆ ಅನೇಕರ ಕಷ್ಟಗಳು ದೂರವಾಗುತ್ತದೆ : ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸದಾಶಿವ ಶೆಟ್ಟಿ ಕನ್ಯಾನರು ಒಕ್ಕೂಟದ ದೇವರಿದ್ದಂತೆ, ಇಂತಹ ವಿಶೇಷ ವ್ಯಕ್ತಿಗಳು ಸಮಾಜದಲ್ಲಿ ಹುಟ್ಟಿದರೆ ಅನೇಕರ ಕಷ್ಟಗಳು ದೂರವಾಗುತ್ತದೆ : ಐಕಳ ಹರೀಶ್ ಶೆಟ್ಟಿ

Share This

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಕಾರ್ಯಕ್ರಮ

ಮಂಗಳೂರು: ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರು ಒಕ್ಕೂಟದ ದೇವರಿದ್ದಂತೆ, ಇಂತಹ ವಿಶೇಷ ವ್ಯಕ್ತಿಗಳು ಸಮಾಜದಲ್ಲಿ ಹುಟ್ಟಿದಾಗ ಕಷ್ಟಗಳು, ಸಮಸ್ಯೆಗಳು ದೂರವಾಗುತ್ತದೆ. ಸಮಾಜದಲ್ಲಿ ದುಡಿದ ಸ್ಪಲ್ಪ ಪಾಲನ್ನು ಸಮಾಜಕ್ಕೆ ನೀಡುವವರಿದ್ದಾರೆ. ಅಂತಹವರ ನಡುವೆ ದೊಡ್ಡ ಮೊತ್ತದ ಪಾಲನ್ನು ಸಮಾಜ ಕಲ್ಯಾಣಕ್ಕಾಗಿ ನೀಡುತ್ತಿದ್ದಾರೆ. ಇವರಿಗೆ ದೇವರು ಉತ್ತಮ ಆರೋಗ್ಯ, ಇನ್ನಷ್ಟು ನೀಡುವ ಶಕ್ತಿಯನ್ನು ನೀಡಲೆಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹಾರೈಸಿದರು. 
ಅವರು ಮೇ.3ರಂದು ಬಂಟ್ಸ್ ಹಾಸ್ಟೇಲ್ ಬಳಿಯ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಸಮಾಜ ಕಲ್ಯಾಣ ಯೋಜನೆ ಹಾಗೂ ಬಂಟ ಸಮಾಜದ ದೈವದ ಮುಕ್ಕಾಲ್ದಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಲವು ಭಾರಿ ಸಮಾಜದ ರಾಜಕಾರಣಿಗಳಲ್ಲಿ ಒಕ್ಕೂಟಕ್ಕೆ ಸರ್ಕಾರದಿಂದ ಅನುದಾನ ದೊರೆಕಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾರಿಯಾದರೂ ಸರ್ಕಾರದ ವತಿಯಿಂದ ಒಕ್ಕೂಟದ ಕಾರ್ಯ ಗುರುತಿಸಿ ಅನುದಾನ ನೀಡುವಲ್ಲಿ ಸಹಕರಿಸುವಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರಲ್ಲಿ ಮನವಿ ಮಾಡಿದರು. ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಅವರು ಸಚಿವರಾಗಿದ್ದಾಗ ಅವರ ಅವಧಿಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ, ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡಿದ್ದರು. ಅವರ ಕಾರ್ಯವನ್ನು ಸಮಾಜ ಇಂದಿಗೂ ನೆನಪಿನಲ್ಲಿಟ್ಟುಕೊಂಡಿದೆ ಎಂದರು.

ಒಕ್ಕೂಟಕ್ಕೆ ಬೇರೆ ಸಮಾಜದಿಂದ ದೇಣಿಗೆ ನೀಡಿದವರಿದ್ದರೆ ಅದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್. ಅವರು ಮೊದಲು 5 ಲಕ್ಷ ರೂ. ಹಾಗೂ ಈಗ 20 ಲಕ್ಷ ರೂ ನೀಡಿದ್ದಾರೆ. ಒಟ್ಟು 25 ಲಕ್ಷ ರೂ. ಹಣವನ್ನು ಒಕ್ಕೂಟಕ್ಕೆ ಬೇರೆ ಸಮಾಜದವರು ನೀಡಿರುವುದು ದೊಡ್ಡ ವಿಚಾರ. ಒಕ್ಕೂಟವು ಕೂಡ ಬಂಟ ಸಮಾಜದ ಮಾತ್ರವಲ್ಲದೆ ಬೇರೆ ಸಮಾಜದ ಕಷ್ಟಕ್ಕೂ ಧ್ವನಿಯಾಗಿ ಕೆಲಸ ಮಾಡುತ್ತಿದ್ದು ಎಲ್ಲರ ಸಹಕಾರ ಬೆಂಬಲ ಕೋರಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಒಕ್ಕೂಟದ ಯೋಜನೆಗಳು ಮಕ್ಕಳ ಶಿಕ್ಷಣ, ಕ್ರೀಡೆ ಇನ್ನಿತರ ವಿಚಾರಗಳಿಗೆ ಸಹಾಯಹಸ್ತ ನೀಡಿ ಸಹಕಾರ ನೀಡುತ್ತಿವೆ. ಅದೇ ರೀತಿ ಮುಂದೆ ಮಕ್ಕಳಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆಯಾಗಬೇಕು. ಸಂಘಗಳು ದೊಡ್ಡ ಉದ್ದಿಮೆ ಪ್ರಾರಂಭಿಸಿ ನಮ್ಮ ಸಮಾಜದ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಕೆಲಸವಾಗಬೇಕು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಗವಹಿಸಿಸಲು ಪ್ರೋತ್ಸಾಹಿಸಬೇಕು ಎಂದರು. ಇದೇ ಸಂದರ್ಭ ಹಿಂದುಳಿದ ವರ್ಗಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡಿರುವ ಮೀಸಲಾತಿಗಳ ಬಗ್ಗೆ ಮಾಹಿತಿ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿ, ಸಮಾಜದಲ್ಲಿ ಬಂಟ ಸಮಾಜಕ್ಕೆ ವಿಶೇಷವಾದ ಸ್ಥಾನಮಾನವಿದೆ. ಎಂಟೆದೆಯ ಬಂಟರಾಗಿ ಐಕಳ ಹರೀಶ್ ಶೆಟ್ಟಿ ಎಲ್ಲಾ ಸಮಾಜದ ಕಷ್ಟಕ್ಕೆ ಒಕ್ಕೂಟದ ಮೂಲಕ ಧ್ವನಿಯಾಗಿರೋದು ಶ್ಲಾಘನೀಯವಾದುದು. ಹಿಂದೆ ಹೆಚ್ಚಿನ ದೇವಸ್ಥಾನ, ದೇವಸ್ಥಾನಗಳ ಅಧಿಕಾರ ಜೈನರು ಹಾಗೂ ಬಂಟರಲ್ಲಿತ್ತು. ಈ ಬಗ್ಗೆ ಗಮನ ಹರಿಸಿ ಸಮಾಜದದಲ್ಲಿನ ನಮ್ಮ ಅಧಿಕಾರವನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.

ಮುಂಬಯಿ ಹೇರಂಬ ಇಂಡಸ್ಟ್ರೀಸ್ ನ ಅಧ್ಯಕ್ಷ, ಒಕ್ಕೂಟದ ನಿರ್ದೇಶಕ ಸದಾಶಿವ ಶೆಟ್ಟಿ ಕುಳೂರು-ಕನ್ಯಾನ ಮಾತನಾಡಿ, ಬಂಟ ಸಮಾಜದಲ್ಲಿ ಬಡ, ಮಧ್ಯಮ, ಶ್ರೀಮಂತರೆಂಬ ವರ್ಗವಿದೆ. ಇವರಲ್ಲಿ ಆರ್ಥಿಕ ಸಂಕಷ್ಟದಲ್ಲಿವವರನ್ನು ಗುರುತಿಸಿ ಒಕ್ಕೂಟವು ಸಹಾಯ ಮಾಡುತ್ತಿರುವುದು ಸಂತೋಷದ ವಿಷಯ. ಹಿಂದೆ ಬಂಟರ ಸಂಘ ನೆಪ ಮಾತ್ರಕ್ಕೆ ಆಸ್ತಿತ್ವದಲ್ಲಿತ್ತು. ಬಂಟರ ವಲಯ ಸಂಘಗಳು ತಮ್ಮ ವ್ಯಾಪ್ತಿಯ ಬಡವರ ಮಾಹಿತಿ ಒಕ್ಕೂಟಕ್ಕೆ ನೀಡಬೇಕು. ಜತೆಗೆ ದಾನಿಗಳಿಂದ ದೇಣಿಗೆ ನೀಡುವ ಕಾರ್ಯಕ್ಕೂ ಕೈ ಜೋಡಿಸಿದಾಗ ಒಕ್ಕೂಟಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂದರು. 

ಬಂಟ ಸಮಾಜ ಬೆಳೆಯಲು ಗಂಡು-ಹೆಣ್ಣು ಒಂದು ಮಾಡಲು ಉತ್ತಮ 'ವಿವಾಹ ವೇದಿಕೆ' ಅಗತ್ಯವಿದೆ. ನಮ್ಮ ಒಂದು ವರ್ಗ ಇಂದಿಗೂ ವೈದ್ಯಕೀಯ, ವಸತಿ, ಉದ್ಯೋಗ, ಶಿಕ್ಷಣ ಇನ್ನಿತರ ಸಮಸ್ಯೆಯಲ್ಲಿದ್ದಾರೆ. ಇಂತಹವರನ್ನು ಗುರುತಿಸಿ ಸಹಾಯ ಮಾಡುವ ಮೂಲಕ ದೇವರು ಮೆಚ್ಚುವ ಕಾರ್ಯವನ್ನು ಒಕ್ಕೂಟ ಮಾಡುತ್ತಿದೆ. ದೇವಸ್ಥಾನ, ದೈವಸ್ಥಾನ ಕಟ್ಟುವ ಪವಿತ್ರ ಕಾರ್ಯದಂತೆ ಒಕ್ಕೂಟದ ಮೂಲಕ ಉತ್ತಮ ಕೆಲಸವನ್ನು ಹರೀಶಣ್ಣ ಮಾಡುತ್ತಿದ್ದಾರೆ. ಅವರ ಈ ಸಮಾಜಮುಖಿ ಕೆಲಸಕ್ಕೆ ಮುಂದಿನ ದಿನಗಳಲ್ಲಿ 'ಪದ್ಮಶ್ರೀ ಪ್ರಶಸ್ತಿ' ಲಭಿಸಲಿ ಎಂದು ಹಾರೈಸಿದರು.

ಮಾಜೀ ಸಚಿವ ಬಿ‌ ನಾಗರಾಜ ಶೆಟ್ಟಿ ಮಾತನಾಡಿ, ಬಂಟ ಸಮಾಜ ತುಂಬಾ ಅಗ್ರಗಣ್ಯತೆಯ ಸಮಾಜ. ಆದರೆ ಏಡಿಯ ತರಹ ಕಾಳೆಲೆಯುವ ಗುಣದಿಂದ ಕೆಳಗೆ ಬೀಳುತ್ತಿದ್ದೇವೆ. ನಾವು ಒಗ್ಗಟ್ಟಾದರೆ ಸಮಾಜ ಅನೇಕ ಕನಸು ನನಸು ಮಾಡಲು ಸಾಧ್ಯ. ಮೊದಲು ನಮ್ಮ ಸಮಾಜವನ್ನು ಅಭಿವೃದ್ಧಿ ಮಾಡಬೇಕಾಗಿದೆ. ಹಾಗಾಗಿ ಸಂಕಷ್ಟದಲ್ಲಿರುವ ಮಾಹಿತಿಯನ್ನು ಒಕ್ಕೂಟದ ಗಮನಕ್ಕೆ ತರುವಂತೆ ಸೂಚಿಸಿದರು. 

ಒಕ್ಕೂಟದ ನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಸಂಸ್ಥೆಗೆ ಸಂಸ್ಥೆಯೇ ದೊಡ್ಡದು ಹೊರತು ಮನುಷ್ಯನಲ್ಲ. ವ್ಯಕ್ತಿಗೆ ಸಾವಿದೆ, ಆದರೆ ಸಂಘಕ್ಕೆ ಸಾವಿಲ್ಲ. ಸಂಘ ಮಾಡಿದ ಕೆಲಸವನ್ನು ವ್ಯಕ್ತಿ ಮಾಡಲು ಸಾಧ್ಯವಿಲ್ಲ. ಇಂದು ಐಕಳ ಹರೀಶ್ ಶೆಟ್ಟಿ ಅವರ ನಾಯಕತ್ವದಲ್ಲಿ ಹಲವಾರು ಕೋಟಿ ರೂ. ಸಮಾಜ ಕಲ್ಯಾಣ ಕಾರ್ಯಕ್ರಮದ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ತಲುಪುತ್ತಿದೆ ಎಂದು ಶ್ಲಾಘಿಸಿದರು. ದುಡ್ಡು ಮಾಡಿ ಕೂಡಿಡುವುದಕಿಂತ ದಾನ ಮಾಡುವುದರಲ್ಲಿ ಹೆಚ್ಚಿನ ಸಂತೋಷ ಪಡೆಯಬಹುದು ಎಂದರು. ಇದೇ ಸಂದರ್ಭ ಐಕಳರಿಗೆ ಶುಭ ಕೋರುವ ಪತ್ರದ ಜತೆಗೆ 5 ಲಕ್ಷ ರೂ ದೇಣಿಗೆಯ ಚೆಕ್ಕನ್ನು ಹಸ್ತಾಂತರಿಸಿದರು.

ಹುಬ್ಬಳ್ಳಿ ಪಂಜುರ್ಲಿ ಗ್ರೂಪ್ ನ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಹುಬ್ಬಳ್ಳಿ ಮಾತನಾಡಿ, ಎನೂ ಇಲ್ಲದಿದ್ದ ನಾನು ತುಳುನಾಡಿನ ಕಾರಣಿಕ ದೈವ ಪಂಜುರ್ಲಿಯ ದಯೆಯಿಂದ ನಾನು ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಹೋಟೆಲ್ ಉದ್ಯಮ ಮಾಡುತ್ತಿದ್ದೇನೆ. ಧರ್ಮವಿದ್ದಲ್ಲಿ ದೈವವಿರುತ್ತದೆ. ಐಕಳ ಹರೀಶಣ್ಣ ಒಕ್ಕೂಟದ ಮೂಲಕ ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ಕೆ ಶಿರಬಾಗುವೆ. ಮುಂದಿನ ದಿನಗಳಲ್ಲಿ ಒಕ್ಕೂಟಕ್ಕೆ ತನ್ನಿಂದಾಗುವ ಸಹಕಾರ ನೀಡುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಬಂಟ ಸಮಾಜದ ದೈವ ಪಾತ್ರಿಗಳಾದ (ಮುಕ್ಕಾಲ್ದಿಗಳು) ಹಿರಿಯರಾದ ಶ್ರೀಧರ ಶೆಟ್ಟಿ ಪಾಲಡ್ಕ, ಪೂವಪ್ಪ ಶೆಟ್ಟಿ ಕರೀಂಜೆ, ಲಾಡಿ ಅಣ್ಣು ಶೆಟ್ಟಿ, ಪದ್ಮನಾಭ ಶೆಟ್ಟಿ ಮಲಾರಬೀಡು, ನಾರಾಯಣ ಶೆಟ್ಟಿ ಪುದ್ದರಕೋಡಿ, ಪ್ರಸಾದ್ ಶೆಟ್ಟಿ ಪೆರ್ವಾಜೆ, ಸುನೀಲ್ ನಾರಾಯಣ ಶೆಟ್ಟಿ ಕಾಪು, ಪ್ರಭಾಕರ ಶೆಟ್ಟಿ ದರೆಗುಡ್ಡೆ, ಸುನೀಲ್ ಶೆಟ್ಟಿ ಮಾರೂರು, ಅಭಿಲಾಷ್ ಚೌಟ ಕೊಡಿಪಾಡಿ ಬಾಳಿಕೆ, ಬಾಲಕೃಷ್ಣ ಉಪ್ಪೂರು, ಸೌರವ್ ಶೆಟ್ಟಿ ಮೇರಮಜಲುಗುತ್ತು ಹಾಗೂ ರಮೇಶ್ ಶೆಟ್ಟಿ ಮಾರ್ನಾಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ| ಸುಧಾರಾಣಿ, ಡಾ| ಮಂಜುಳಾ ಶೆಟ್ಟಿ ಹಾಗೂ ಡಾ| ಪ್ರಿಯಾ ಹರೀಶ್ ಶೆಟ್ಟಿ ಸನ್ಮಾನಿತರ ವಿವರ ವಾಚಿಸಿದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುನೀಲ್ ಶೆಟ್ಟಿ ಮಾರೂರು, ಬಂಟ ಸಮಾಜದ ಮುಕ್ಕಾಲ್ದಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟಾಗಿ ಸನ್ನಾನಿಸಿದಕ್ಕೆ ಅಭಾರಿಯಾಗಿದ್ದೇವೆ. ತಾವು ಆರಾಧಿಸುವ ಉಳ್ಳಾಯ, ಕೊಡಮಣಿತ್ತಾಯ ದೈವಗಳು ಒಕ್ಕೂಟವನ್ನು ಬೆಳಗಿಸಲಿ ಎಂದು ಹಾರೈಸಿದರು. ಅಭಿಲಾಷ್ ಚೌಟ ಮಾತನಾಡಿ, ಕರೋನ ಸಂದರ್ಭ ಮುಕ್ಕಾಲ್ದಿಗಳ ಕಷ್ಟ ಅರಿತು ಹರೀಶಣ್ಣ ಒಕ್ಕೂಟದ ಮೂಲಕ ಸಹಾಯ ಮಾಡಿದ್ದಾರೆ, ಅದು ನಮಗೆ ಸಿಕ್ಕ ಮೊದಲ ಸನ್ಮಾನ ಎಂದು ಅಭಿಪ್ರಾಯ ಹಂಚಿಕೊಂಡಿದರು.

ಸಮಾರಂಭದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಶಿಕ್ಷಣ, ಮದುವೆ, ಮನೆ‌ ನಿರ್ಮಾಣ, ಕ್ರೀಡೆ, ವೈದ್ಯಕೀಯ ಮೊದಲಾದ ಫಲಾನುಭವಿಗಳಿಗೆ 47 ಲಕ್ಷ ರೂ. ಮೊತ್ತಕ್ಕೂ ಮಿಕ್ಕಿ ಚೆಕ್'ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಆಶ್ರೀತಾ ರೈ ಅವರು ಐಕಳ ಹರೀಶ್ ಶೆಟ್ಟಿ ದಂಪತಿಗಳ ಬಗ್ಗೆ ತಾವು ಬಿಡಿಸಿದ ಚಿತ್ರವನ್ನು ಹರೀಶಣ್ಣರಿಗೆ ನೀಡಿದರು. ಸಾಲೆತ್ತೂರು, ಜಪ್ಪು ಹಾಗೂ ವಿವಿಧ ವಲಯ ಬಂಟರ ಸಂಘಗಳು ಐಕಳ ಹರೀಶ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಕದ್ರಿ ನವನೀತ ಶೆಟ್ಟಿ ಹಾಗೂ ಪುರುಷೋತ್ತಮ ಭಂಡಾರಿ ನಿರೂಪಿಸಿದರು. ಡಾ. ಪ್ರತಿಭಾ ರೈ ಪ್ರಾಥಿಸಿದರು. ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಕ ಮಾತುಗಳನ್ನಾಡಿದ. ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಒಕ್ಕೂಟದ ಜತೆ ಕಾರ್ಯದರ್ಶಿ ಸತೀಶ ಅಡಪ ಸಂಕಬೈಲ್, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಲ್ಕೆಬೈಲು, ವಿವಿಧ ವಲಯ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

Pages