ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಚಂದ್ರಿಕ ಹರೀಶ್ ಶೆಟ್ಟಿ ದಂಪತಿಗಳ ಹುಟ್ಟುಹಬ್ಬದ ಪ್ರಯುಕ್ತ ಅವರ ಮೇಲಿನ ಅಪಾರ ಅಭಿಮಾನದಿಂದ ಐಕಳ ದಂಪತಿಯ ಭಾವಚಿತ್ರವನ್ನು ಗ್ಲೋ ಪೇಂಟಿಂಗ್ ಚಿತ್ರಕಲೆಯ ಮೂಲಕ ವಿಶೇಷ ರೀತಿಯಲ್ಲಿ ಕಲಾವಿದೆ ಆಶ್ರಿತಾ ರೈ ಅವರು ಚಿತ್ರಿಸಿದ್ದರು.
ಅವರು ಮೇ.3ರಂದು ಬಂಟ್ಸ್ ಹಾಸ್ಟೇಲ್ ಬಳಿಯ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮದಲ್ಲಿ ತಾವು ಅಪೂರ್ವವಾಗಿ ಚಿತ್ರಿಸಿದ ಐಕಳ ದಂಪತಿಯ ಚಿತ್ರವನ್ನು ಐಕಳರಿಗೆ ಉಡುಗೊರೆಯಾಗಿ ನೀಡಿದರು.
ಆಶ್ರಿತಾ ರೈ ಅವರು ಪೆರ್ಮನ್ನೂರು ಗ್ರಾಮದ ನಿವಾಸಿ ಧನಂಜಯ ರೈ ಹಾಗೂ ಶ್ರೀಮತಿ ಲಾವಣ್ಯ ಡಿ. ರೈ ಇವರ ಸುಪುತ್ರಿ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತೃತೀಯ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ.