ದುಬೈ : ಯಕ್ಷಗಾನ ಅಭ್ಯಾಸ ತರಗತಿ ದುಬೈ ಇವರ ನೇತೃತ್ವದಲ್ಲಿ ಯಕ್ಷಗುರು ಯಕ್ಷ ಮಯೂರ್ ಶೇಖರ್ ಶೆಟ್ಟಿಗಾರ್ ರವರ ನಿರ್ದೇಶನದಲ್ಲಿ 'ದುಬೈ ಯಕ್ಷೋತ್ಸವ-2022' ಜೂ.11 ರಂದು ಜರಗಲಿರುವುದು. ಇದರ ಅಂಗವಾಗಿ 'ಶ್ರೀ ದೇವಿ ಲಲಿತೋಪಖ್ಯಾನ' ಯಕ್ಷಗಾನದ ಆಮಂತ್ರಣ ಪತ್ರಿಕೆ ಹಾಗೂ ಟಿಕೆಟ್ ಬಿಡುಗಡೆ ಸಮಾರಂಭವು ನಗರದ ಅಲ್ ಕಿಸಸ್ ನ ಫಾರ್ಚ್ಯೂನ್ ಗ್ರಾಂಡ್ ಸಭಾಂಗಣದಲ್ಲಿ ಯಕ್ಷಗಾನೀಯ ಹಿಮ್ಮೇಳ ವಾದನದ ಘೋಷಗಳೊಂದಿಗೆ ಅತಿಥಿ ಗಣ್ಯರ, ಕಲಾ ಪ್ರೇಮಿಗಳ ಸಹಭಾಗಿತ್ವದಲ್ಲಿ ವೈವಿಧ್ಯಮಯವಾಗಿ ಜರುಗಿತು. ದುಬೈಯ ಯಕ್ಷಗಾನ ಸಂಘಟಕ ದಿವಂಗತ ವಿಠಲ ಶೆಟ್ಟಿಯವರಿಗೆ ಮೌನ ಪ್ರಾರ್ಥನೆಯ ಸಂತಾಪ ಸೂಚಿಸುವ ಮೂಲಕ ಹಾಗೂ ಯಕ್ಷಗಾನ ಅಭ್ಯಾಸ ತರಗತಿಯ ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತ್ತು.
ಗಣ್ಯತೀಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಕ್ಷಗಾನ ಅಭ್ಯಾಸ ತರಗತಿ ದುಬೈ ಇದರ ಗುರುಗಳಾದ ಶೇಖರ್ ಡಿ ಶೆಟ್ಟಿಗಾರ್ ರವರ ಈ ಸಂಸ್ಥೆ ನಡೆದು ಬಂದ ಹಾದಿ ಹಾಗೂ ಶ್ರೀ ದೇವಿ ಲಲಿತೋಪಖ್ಯಾನ ಪ್ರಸಂಗ ಆಯ್ಕೆಯಾದ ಪ್ರಕ್ರಿಯೆ ಮತ್ತು ಯಕ್ಷ ತವರಿನಿಂದ ಯಾರೆಲ್ಲ ಕಲಾವಿದರು ಆಹ್ವಾನಿತರೆಂಬುದನ್ನು ಪ್ರಾಸ್ತಾವಿಕ ಮಾತಿನ ಮೂಲಕ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುಎಇ ತುಳು ಕನ್ನಡಿಗರ ಪೊತ್ಸಾಹಕ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಸರ್ವರ ಸಹಭಾಗಿತ್ವದಲ್ಲಿ ದೀಪ ಪ್ರಜ್ವಲಿಸಿ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿ, 'ಗಲ್ಫ್ ರಾಷ್ಟ್ರದಂತಹ ಪರದೇಶದಲ್ಲೂ ನಮ್ಮ ಧಾರ್ಮಿಕ ಶ್ರದ್ಧಾ ಸಾಂಸ್ಕೃತಿಕತೆಯನ್ನು ಕಾಯ್ದುಕೊಳ್ಳುವಂತಹ ಮಹತ್ಕಾರ್ಯವನ್ನು ಈ ಯಕ್ಷಗಾನ ಅಭ್ಯಾಸ ಕೇಂದ್ರವು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದು ಅಭಿಮಾನದ ವಿಚಾರವಾಗಿದೆ. ಅಬಾಲ ವೃದ್ಧರಾದಿಗಳಿಗೆ ಯಕ್ಷ ಕಲಿಕೆಗೆ ಅವಕಾಶ ನೀಡುವ ಮೂಲಕ ಮಹತ್ತರವಾದ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇದೇ ಪ್ರಥಮತಃ ಇಂತಹವೊಂದು ಯಕ್ಷ ಕಲಾರಾಧನೆ ಆಯೋಜನೆಗೊಂಡಿರುವುದಕ್ಕೆ ಸರ್ವರು ಸಹಕರಿಸಿ ಪ್ರೋತ್ಸಾಹಿಸಬೇಕಾದುದು ನಮ್ಮ ಕರ್ತವ್ಯ ಎಂದರು.
ಫಾರ್ಚ್ಯೂನ್ ಗ್ರೂಪ್ ಅಫ್ ಹೋಟೆಲ್ ನ ಮಾಲಕರು ಹಾಗೂ ಯುಎಇ ತುಳು ಕನ್ನಡಿಗರ ಪೋತ್ಸಹಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಚಿತ್ರ ನಿರ್ಮಾಪಕರು ಉದ್ಯಮಿಗಳಾದ ಹರೀಶ್ ಶೇರಿಗಾರ್, ಹರೀಶ್ ಬಂಗೇರ, ಉದ್ಯಮಿ ಸುಂದರ ಶೆಟ್ಟಿ ಅಬುಧಾಬಿ, ಬಿಲ್ಲವಾಸ್ ದುಬೈಯ ಸತೀಶ್ ಪೂಜಾರಿ, ಬಿಲ್ಲವಾಸ್ ಅಬುಧಾಬಿಯ ಮನೋಹರ ತೋನ್ಸೆ, ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಆನಂದ ಬೈಲೂರು, ಉದ್ಯಮಿ ವಾಸು ಭಟ್, ಕಲಾತ್ಮಕ ನಿರ್ದೇಶಕರಾದ ಬಿ.ಕೆ.ಗಣೇಶ್ ರೈ, ಉದ್ಯಮಿ ಗುಣಶೀಲ್ ಶೆಟ್ಟಿ, ದುಬೈ ಕನ್ನಡ ಪಾಠಶಾಲೆಯ ಶಶಿಧರ್ ನಾಗರಾಜಪ್ಪ, ಉದ್ಯಮಿ ಪೋತ್ಸಹಕ ಸುಜಾತ್ ಶೆಟ್ಟಿ, ಪದ್ಮಶಾಲಿ ಸಮಾಜದ ರಘುರಾಮ ಶೆಟ್ಟಿಗಾರ್, ತುಳು ಪಾತೆರ್ಗ ತುಳು ಒರಿಪಾಗದ ಪ್ರೇಮ್ ಜಿತ್, ಬ್ರಾಹ್ಮಣ ಸಮಾಜದ ದಯಾನಂದ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಗಾನ ಅಭ್ಯಾಸ ತರಗತಿಯ ರೂವಾರಿ ದುಬೈಯ ದಿನೇಶ್ ಶೆಟ್ಟಿ ಕೊಟ್ಟಿಂಜ ಬಂದಂತಹ ಗಣ್ಯರನ್ನು ಸಂಪೂರ್ಣವಾಗಿ ಪರಿಚಯಿಸಿ ಸ್ವಾಗತಿಸಿದರು. ಸಂಘದ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ವಸಂತ ಶೆಟ್ಟಿ, ಶರತ್ ಕುಮಾರ್, ಭವಾನಿಶಂಕರ್ ಶರ್ಮಾ, ಬಾಲಕೃಷ್ಣ ಶೆಟ್ಟಿಗಾರ್, ಶರತ್ ಕುಡ್ಲ, ರಮನಂದ ಹಾಗೂ ಯಕ್ಷಯೋದಸ್ನ ಸದಸ್ಯರಾದ ಸಂದಿಪ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಗಗನ್ ಶೆಟ್ಟಿ, ಪ್ರಥ್ವನ್ ಶೆಟ್ಟಿ, ಕೌಸಿಕ್, ಸಚ್ಚು ಕುಲಾಲ್, ಪ್ರವೀಣ್ ಕಾರ್ಯಕ್ರಮ ಯಶಸ್ವಿಗೆ ಸಾಥ್ ನೀಡಿದರು. ಸಂಘದ ಸದಸ್ಯರಾದ ಗಿರೀಶ್ ನಾರಯಣ್, ರಾಜೇಶ್ ಕುತ್ತಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ವಂದಿಸಿದರು.