ಮೇ. 29ರ ಯಕ್ಷಧ್ರುವ ಪಟ್ಲ ಸಂಭ್ರಮ 2022ರ ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಯಕ್ಷಧ್ರುವ ಪಟ್ಲ ಸಂಭ್ರಮ - 2022ರ ಸಮಾರಂಭವು ಮೇ. 29ರಂದು ಅಡ್ಯಾರ್ ಗಾರ್ಡನ್'ನಲ್ಲಿ ನಡೆಯಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಫೌಂಡೇಶನ್'ನ ಗೌರವಾಧ್ಯಕ್ಷರಾದ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಬಿಡುಗಡೆಗೊಳಿಸಿದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ, ಇಂದು ಯಕ್ಷಗಾನ ಜಾಗತಿಕವಾಗಿ ಬೆಳೆದಿದೆ. ಪೌರಾಣಿಕ ಕಥೆಗಳನ್ನು ಸರಳವಾಗಿ ಜನರಿಗೆ ಮುಟ್ಟಿಸುವ ಕೆಲಸವನ್ನು ಯಕ್ಷಗಾನ ಮಾಡುತ್ತಿದೆ. ಪಟ್ಲ ಸತೀಶ್ ಶೆಟ್ಟಿ ಹೃದಯವಂತಿಕೆ ಇರುವ ಮಹಾನ್ ಕಲಾವಿದ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ಫೌಂಡೇಶನ್ ಮೂಲಕ ಸಹಾಯ ಮಾಡುವ ಮೂಲಕ ಬೆಳಕಾಗಿದ್ದಾರೆ. ಫೌಂಡೇಶನಿನ ಕಾರ್ಯಗಳಿಗೆ ಪ್ರತ್ಯಕ್ಷ, ಪರೋಕ್ಷವಾಗಿ ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮುಂದೆ ನಡೆಯಲಿರುವ ಯಕ್ಷಧ್ರುವ ಪಟ್ಲ ಸಂಭ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಫೌಂಡೇಶನ್'ನ ಮಹಾಪೋಷಕರಾದ ಕುಸುಮೋದರ ಶೆಟ್ಟಿ ಚೆಲ್ಲಡ್ಕ ಮಾತನಾಡಿ, ಯಾವುದೇ ಕಾರ್ಯವನ್ನು ದೇವರನ್ನು ನಂಬಿ ಮಾಡಿದಾಗ ಯಶಸ್ವಿಯಾಗುತ್ತದೆ. ಇಂದು ಪಟ್ಲ ಕಲಾವಿದರ ದೇವರಾಗಿದ್ದಾರೆ. ಫೌಂಡೇಶನ್'ನ ಕಾರ್ಯದಲ್ಲಿ ಕೈ ಜೋಡಿಸುವುದು ಪುಣ್ಯದ ಕೆಲಸ. ಫೌಂಡೇಶನ್'ಗೆ ಸದಾಶಿವ ಶೆಟ್ಟಿ ಅವರು ಗೌರವಾಧ್ಯಕ್ಷರಾಗಿ ಬಂದಿರುವುದು ಸಂತೋಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪೋಷಕರಾದ ಯೋಗೇಂದ್ರ ಭಟ್, ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂತೋಷ್ ರೈ ಬೋಳಿಯಾರ್, ರಾಜಾರಾಂ ಭಟ್, ಭುಜಬಲಿ ಧರ್ಮಸ್ಥಳ, ನಿರ್ದೇಶಕ ವಿಜಯ್ ಕುಮಾರ್ ಶೆಟ್ಟಿ ಕೊಡಿಯಲ್'ಬೈಲ್, ಸಿಎ ಸುರೇಶ್ ಹಾಗೂ ಫೌಂಡೇಶನ್'ನ ಬೇರೆ ಬೇರೆ ಘಟಕದ ಪದಾಧಿಕಾರಿಗಳು ಮತ್ತಿತರರು ಇದ್ದರು.
ಪ್ರಖ್ಯಾತ್ ಶೆಟ್ಟಿ ಪಾರ್ಥಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ನಿರೂಪಿಸಿದರು. ಜತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ವಂದಿಸಿದರು.