ಮಂಗಳೂರು : ನಾಟಕಗಾರ, ಹವ್ಯಾಸಿ ಯಕ್ಷಗಾನ ಕಲಾವಿದ, ನಿರೂಪಕ, ಸಂಘಟಕ ಕದ್ರಿ ನವನೀತ ಶೆಟ್ಟಿಯವರಿಗೆ ಸೀತಾರಾಮ ಕುಲಾಲ್ ಪ್ರತಿಷ್ಠಾನ, ಕಡಲನಾಡ ಕಲಾವಿದರ ಟ್ರಸ್ಟ್ ವತಿಯಿಂದ ಮಂಗಳೂರಿನ ಶ್ರೀ ಶರವು ಕ್ಷೇತ್ರದಲ್ಲಿ 'ರಂಗ ಕಲಾ ಬಂಧು' ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಶರವು ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶರವು ದೇವಸ್ಥಾನದ ಶಿಲೆ ಶಿಲೆ ರಾಘವೇಂದ್ರ ಶಾಸ್ತ್ರಿಗಳು ಸ್ವರ್ಗೀಯ ಸೀತಾರಾಮ ಕುಲಾಲರ ಸಂಸ್ಮರಣೆ ಮಾಡುತ್ತಾ, ಕುಲಾಲರು ತುಳು ಸಿನೇಮಾ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯನ್ನು ನೆನಪಿಸಿದರು. ಪೌರಾಣಿಕ, ಚಾರಿತ್ರಿಕ ನಾಟಕ ಕೃತಿರಚನೆಯ ಮೂಲಕ ಕುಲಾಲರ ದಾರಿಯಲ್ಲಿ ನಡೆಯುತ್ತಿರುವ ನವನೀತ ಶೆಟ್ಟಿಯವರನ್ನು ಅಭಿನಂದಿಸಿದರು.
ಮುನ್ನೂರು ಪ್ರದರ್ಶನ ಕಂಡ ಮೊದಲ ತುಳು ಪೌರಾಣಿಕ ನಾಟಕ ಎನ್ನುವ ಗೌರವಕ್ಕೆ ಪಾತ್ರವಾಗಿರುವ 'ಕಟೀಲ್ದಪ್ಪೆ ಉಳ್ಳಾಲ್ದಿ' ನಾಟಕವೇ ಮೊದಲಾದ ಮೂವತ್ತಕ್ಕೂ ಹೆಚ್ಚಿನ ತುಳು ಕನ್ನಡ ಪೌರಾಣಿಕ, ಚಾರಿತ್ರಿಕ, ಜಾನಪದ ನಾಟಕಗಳನ್ನು ರಚಿಸಿ, ಐದು ಬಾರಿ ತುಳುಕೂಟ ಪ್ರಶಸ್ತಿ, ಎರಡು ಬಾರಿ ಅಕಾಡಮಿ ಪುಸ್ತಕ ಪ್ರಶಸ್ತಿ ಪಡೆದ ನವನೀತರ ಕೃತಿಗಳ ಬಗ್ಗೆ ಕಡಲನಾಡ ಕಲಾವಿದರು ಸಂಸ್ಥೆಯ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ ಮಾತನಾಡಿದರು.
ಚಿತ್ರನಟ ಮೋಹನ್ ಕೊಪ್ಪಲ ಕದ್ರಿ , ಕುಲಾಲರ ಶಿಷ್ಯೆ ರಂಗನಟಿ ಶೋಭಾ ಶೆಟ್ಟಿ ಉಪಸ್ಥಿತರಿದ್ದರು. ರಮೇಶ ಭಟ್ ಕದ್ರಿ ಮತ್ತು ಬಳಗದವರಿಂದ ಸುಧನ್ವ ಮೋಕ್ಷ ಯಕ್ಷಗಾನ ನಡೆಯಿತು.