ಬಂಟ್ವಾಳ : ಬಂಟರ ಸಂಘ ಸಾಲೆತ್ತೂರು ಇದರ ಮಹಾಸಭೆಯು ಕುಳಾಲಿನ ಯುವಕ ಮಂಡಲದ ವಾರಾಹಿ ಸಭಾಭವನದಲ್ಲಿ ನಡೆಯಿತು.
![](https://blogger.googleusercontent.com/img/b/R29vZ2xl/AVvXsEgdalNuub21CRXO3zJB4W65znfMzE3AXUgVZAc7ra5LIYsx5EllkNWXvubl8GjyJoVOOWXDlfkEYI2alkjocZAoPjHbXe8AqBH9BwGkh5_MXemA5gKqfQOUzaeqwO91kqvw5iSYCUNvGT-rI6QgmfrUF0u078QL77gGy3G4XVcamDKv5EEh_5N6VtvfHA/s16000/IMG_20220413_183323_copy_640x516.jpg)
![](https://blogger.googleusercontent.com/img/b/R29vZ2xl/AVvXsEh_b5V9Z11AGbG6PgcZEE6JsC7qm_-_XWtxGA7-GbDAvkXsKA7MXiPZJeh06xwr1zJIdaR7bSbNXAmk7CQut75qjrtyFp28dQdTcxqcPVXblB1IqJbeG8woZAXL8AKX5ETutScJGaae2n_NC9wFo_LeVByjE_Nqof5-M6XA_x7nIcVWl-5WoxAGc22dBg/s16000/IMG_20220413_182939_copy_640x377.jpg)
ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಘದ ಕಾರ್ಯಸಾಧನೆಯ ಬಗ್ಗೆ ಮೆಚ್ಚುಗೆ ಸೂಚಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವ ಶಕ್ತಿ ಬರಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟರ ಸಂಘ ಸಾಲೆತ್ತೂರು ಅಧ್ಯಕ್ಷ ದೇವಪ್ಪ ಶೇಖ ಪೀಲ್ಯಡ್ಕರವರು, ಆರಂಭ ಕಾಲದಿಂದ ನಡೆದು ಬಂದ ಹೆಜ್ಜೆಗಳನ್ನು ನೆನಪಿಸಿಕೊಂಡು ಕಳೆದ ಮೂರು ವರ್ಷಗಳಲ್ಲಿ ನಡೆದ ಸಮಾಜಮುಖಿ ಕಾರ್ಯಗಳ ಬಗ್ಗೆ ವಿವರಿಸಿದರು. ಸಂಘವು ಉತ್ತಮ ಕೆಲಸ ಕಾರ್ಯ ನಿರ್ವಹಿಸಲು ಸಹಕರಿಸಿದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ದೇವಪ್ಪ ಶೇಖ ಪೀಲ್ಯಡ್ಕರವರು, ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರದೊಂದಿಗೆ ಸಂಘವನ್ನು ಬೆಳೆಸಬೇಕೆಂದು ಮನವಿ ಮಾಡಿದರು ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭಾಶಯಗಳನ್ನು ಸಲ್ಲಿಸಿದರು.
ತಾಲೂಕು ಕಾರ್ಯಕಾರಿ ಸಮಿತಿಗೆ ನೂತನವಾಗಿ ಆಯ್ಕೆಯಾದ ವಲಯದ ಸದಸ್ಯರಿಗೆ ಶಾಲುಹಾಕಿ ಪುಷ್ಪ ನೀಡಿ ಗೌರವಿಸಲಾಯಿತು. ಕಾರ್ಯದರ್ಶಿ ಶಶಿಧರ್ ರೈ ಕುಳಾಲು ಸಂಘದ ವರದಿಯನ್ನು ವಿಸ್ತಾರವಾಗಿ ವಾಚಿಸಿದರು. ಜಾಗತಿಕ ಬಂಟರ ಸಂಘ, ಬೆಂಗಳೂರು ಬಂಟರ ಸಂಘ, ಮಾತೃ ಸಂಘ, ಎಮ್ ಆರ್ ಜಿ ಗ್ರೂಪ್, ತಾಲೂಕು ಬಂಟರ ಸಂಘದಿಂದ ಸಾಲೆತ್ತೂರು ವಲಯಕ್ಕೆ ಮನೆ ನಿರ್ಮಾಣ, ಮನೆ ದುರಸ್ಥಿ, ಅನಾರೋಗ್ಯ, ಅಂಗವಿಕಲತೆ, ವಿವಾಹ, ವಿದ್ಯಾರ್ಥಿ ವೇತನಗಳಿಗೆ ಬಂದ ಅನುದಾನಗಳ ಬಗ್ಗೆ ಹಾಗೂ ಅದರ ಫಲಾನುಭವಿಗಳ ಬಗ್ಗೆ ವಿವರವಾಗಿ ತಿಳಿಸಿ ಸಾಲೆತ್ತೂರು ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರು ನೀಡಿದ ಧನ ಸಹಾಯಗಳ ಬಗ್ಗೆ ವಿವರಿಸಿದರು. ಸಾಲೆತ್ತೂರು ವಲಯದ ದುರ್ಬಲ ಕುಟುಂಬಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಜಾಗತಿಕ ಬಂಟರ ಸಂಘಗಳ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದರು.
ತಾಲೂಕು ಕಾರ್ಯದರ್ಶಿಯವರಾದ ಜಗನ್ನಾಥ ಚೌಟರು, ತಾಲೂಕು ಬಂಟರ ಸಂಘದ ಇಂದಿನ ಸ್ಥಿತಿಯ ಬಗ್ಗೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸುತ್ತಾ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಗಳು ಜೊತೆಯಾಗಿ ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವಂತಾಗಲೆಂದು ಹಾರೈಸಿದರು.
ಬಂಟರ ಸಂಘದ ನೂತನ ಪದಾಧಿಕಾರಿಗಳನ್ನು ಜಾಗತಿಕ ಬಂಟರ ಸಂಘಗಳ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈಯವರು ಘೋಷಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ದೇವಪ್ಪ ಶೇಖರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ರಂಗೋಲಿ ಹಾಗೂ ಕಾರ್ಯದರ್ಶಿ ಜಗನ್ನಾಥ ಚೌಟರು ಭಾಗವಹಿಸಿದ್ದರು.
ಸಾಲೆತ್ತೂರು ಬಂಟರ ಸಂಘದ ಗೌರವಾಧ್ಯಕ್ಷ ಮಂಜುನಾಥ ರೈ ಅಗರಿ,ಕಾರ್ಯದರ್ಶಿ ಶಶಿಧರ್ ರೈ ಕುಳಾಲು, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿಜಯಾ ಶೆಟ್ಟಿ ಸಾಲೆತ್ತೂರು ಉಪಸ್ಥಿತರಿದ್ದರು.
ತಾಲೂಕಿನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಸ್ವಾಗತಿಸಿದರು. ಉದಯ ಕುಮಾರ್ ರೈ ಪ್ರಾರ್ಥಿಸಿದರು. ಸದಸ್ಯರಾದ ಅರವಿಂದ ರೈ ಮೂರ್ಜೆಬೆಟ್ಟು ವಂದಿಸಿದರು. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಮೇಶ್ ಶೆಟ್ಟಿ ಕಾರಾಜೆ ಹಾಗೂ ಗಣೇಶ್ ಶೆಟ್ಟಿ ಬಾರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು.