ಮುಂಬೈ ವಿವಿ ಕನ್ನಡ ವಿಭಾಗದಿಂದ ಐಕಳ ಹರೀಶ್ ಶೆಟ್ಟಿ ಗೌರವ ಗ್ರಂಥ ಪ್ರಕಟಣೆ : ಪೂರ್ವಭಾವಿ ಸಮಾಲೋಚನ ಸಭೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮುಂಬೈ ವಿವಿ ಕನ್ನಡ ವಿಭಾಗದಿಂದ ಐಕಳ ಹರೀಶ್ ಶೆಟ್ಟಿ ಗೌರವ ಗ್ರಂಥ ಪ್ರಕಟಣೆ : ಪೂರ್ವಭಾವಿ ಸಮಾಲೋಚನ ಸಭೆ

Share This
ಮುಂಬಯಿ : ಮುಂಬಯಿನ ಖ್ಯಾತ ಸಂಘಟಕ, ಸಮಾಜಸೇವಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐಕಳ ಹರೀಶ್ ಶೆಟ್ಟಿ ಅವರಿಗೆ ಅರವತ್ತು ತುಂಬಿದ ಹಿನ್ನೆಲೆಯಲ್ಲಿ ಗೌರವ ಗ್ರಂಥವೊಂದನ್ನು ಅರ್ಪಿಸಲು ನಿರ್ಧರಿಸಲಾಗಿದ್ದು ಅದರ ಪೂರ್ವಭಾವಿ ಸಭೆಯನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದಲ್ಲಿ ದಿನಾಂಕ 23ರ ಬುಧವಾರ ಆಯೋಜಿಸಲಾಗಿತ್ತು.
ಐಕಳ ಹರೀಶ್ ಶೆಟ್ಟಿ ಅವರು ಅಪೂರ್ವ ಸಂಘಟಕರಾಗಿ, ಜನಕಲ್ಯಾಣಕ್ಕೆ ತಮ್ಮನ್ನು ಅರ್ಪಿಸಿಕೊಂಡವರು. ಅವರ ಜೀವನ ಸಾಧನೆ ನಾಡಿಗೆ ಮಾದರಿ. ಮುಂಬಯಿ ತುಳು ಕನ್ನಡಿಗರ ಕಣ್ಮಣಿಯಾಗಿರುವ ಐಕಳ ಅವರ ಸಾಹಸ ಸಾಧನೆಯನ್ನು ಸಮಗ್ರವಾಗಿ ದಾಖಲಿಸುವ ದೃಷ್ಟಿಯಿಂದ ‘ಸಾರ್ವಭೌಮ’ ಎಂಬ ಗೌರವ ಗ್ರಂಥವೊಂದನ್ನು ಅರ್ಪಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಚರ್ಚಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸ್ವತ: ಐಕಳ ಹರೀಶ್ ಶೆಟ್ಟಿ ಅವರು ಪಾಲ್ಗೊಂಡು ಮಾತನಾಡುತ್ತಾ ಸಮಾಜಸೇವೆ ಮಾಡುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ನಾನು ನನಗಾಗಿ ಏನನ್ನೂ ಯಾರಿಂದಲೂ ಬಯಸಿದವನಲ್ಲ. ಸಮಾಜದಲ್ಲಿನ ಬಡವರ, ನೊಂದವರ ಕಷ್ಟ ನಷ್ಟಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಸಮಾಜಸೇವೆಯಲ್ಲಿ, ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಜಾಗತಿಕ ಬಂಟರ ಸಂಘದ ಮೂಲಕ ವಿನೂತನವಾದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದೇವೆ. ಇದು ನನಗೆ ಧನ್ಯತಾ ಭಾವ ಮೂಡಿಸಿದೆ. ಈಗ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮೂಲಕವಾಗಿ ಈ ಗೌರವ ಗ್ರಂಥ ಸಮರ್ಪಣೆಯಾಗುತ್ತಿರುವುದು ಇದು ನನ್ನ ಪಾಲಿಗೆ ಬಹುದೊಡ್ಡ ಗೌರವ ಎಂದು ಭಾವಿಸಿಕೊಂಡಿರುವೆ ಎಂದು ಈ ಸಂದರ್ಭದಲ್ಲಿ ನುಡಿದರು.

ಕರ್ನಾಟಕ ಮಲ್ಲದ ಸಂಪಾದಕ, ಖ್ಯಾತ ಪತ್ರಿಕೋದ್ಯಮಿ ಚಂದ್ರಶೇಖರ ಪಾಲೆತ್ತಾಡಿ ಅವರು ಈ ಗ್ರಂಥದ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಲಿದ್ದು, ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಹಾಗೂ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಈ ಗೌರವ ಗ್ರಂಥದ ಸಂಪಾದಕರಾಗಿ ಕೆಲಸ ಮಾಡಲಿದ್ದಾರೆ. ಸಂಪಾದಕ ಮಂಡಳಿಯಲ್ಲಿ ಬಂಟರವಾಣಿಯ ಪ್ರಧಾನ ಸಂಪಾದಕರಾದ ಅಶೋಕ ಪಕ್ಕಳ, ಸಂಪಾದಕರಾದ ಪ್ರೇಮನಾಥ ಮುಂಡ್ಕೂರು, ಸಂಘಟಕ ಕರ್ನೂರು ಮೋಹನ ರೈ, ಪತ್ರಕರ್ತರಾದ ಜಗನ್ನಾಥ ಬಾಳ ಹಾಗೂ ಪತ್ರಕರ್ತ ದಿನೇಶ್ ಕುಲಾಲ್ ಇವರು ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಲಿದ್ದಾರೆ. ಸಲಹಾ ಮಂಡಳಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾಗಿರುವ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿಗಳಾಗಿರುವ ಜಯಕರ ಶೆಟ್ಟಿ, ಇಂದ್ರಾಳಿ, ಕೋಶಾಧಿಕಾರಿಯಾಗಿರುವ ಉಳ್ತೂರು ಮೋಹನದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲು ಇವರು ಕಾರ್ಯನಿರ್ವಹಿಸಲಿದ್ದಾರೆ. 

ಡಾ.ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉಳ್ತೂರು ಮೋಹನದಾಸ ಶೆಟ್ಟಿ ಅವರು ಧನ್ಯವಾದ ಸಮರ್ಪಿಸಿದರು.

Pages