ಕೊಲ್ನಾಡು: ರಾಜ್ಯಮಟ್ಟದ ಕೃಷಿ ಮೇಳದ ಎರಡನೇ ದಿನವಾದ ಶನಿವಾರ ಶ್ರೀ ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ಹುಭಾಶಿಕ ಕೊರಗರ ಯುವ ವೇದಿಕೆ ರಂಗನಕೆರೆ ಬಾರ್ಕೂರು ಇವರ ತಂಡದಿಂದ ಕೊರಗರ ಡೋಲು ಕುಣಿತ ಹಾಗೂ ಜಾನಪದ ಕಲಾ ವೈವಿಧ್ಯ ನಡೆಯಿತು.
ಅಳಿವಿನಂಚಿನ ಕೊರಗ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಸ್ಥಳದಲ್ಲೇ ಡೋಲು ತಯಾರಿ ಹಾಗೂ ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ ಕೃಷಿ ಮೇಳಕ್ಕೆ ಆಗಮಿಸಿದ ಆಸಕ್ತರ ಗಮನ ಸೆಳೆಯಿತು. ಮೂಲ ನಿವಾಸಿಗಳಾದ ಕೊರಗ ಸಮುದಾಯದ ಹೇಗೆ ತುಳಿತಕ್ಕೊಳಗಾಯಿತು ಮತ್ತು ಕೊರಗ ಭಾಷೆ, ಸಂಸ್ಕೃತಿ ಉಳಿವು ಹೇಗೆ ಎಂಬ ಬಗ್ಗೆ ಸೂಕ್ಷ್ಮವಾಗಿ ತಿಳಿಸಿಕೊಡಲಾಯಿತು.
ಕೊರಗ ಸಮುದಾಯದ ಯುವ ಮನಸುಗಳು ಸೇರಿ ನಿರ್ಮಿಸಿದ ಹುಭಾಶಿಕ ಬಳಗವು ರಾಜ್ಯಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿದ್ದು ಅಳಿವಿನ ಅಂಚಿನ ಕೊರಗರ ಸಂಪ್ರದಾಯ, ಅಪರೂಪದ ಕೊರಗ ಭಾಷೆಯನ್ನು ಹೊರಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಗಮನಾರ್ಹ ಕೆಲಸ ಮಾಡುತ್ತಿದೆ.
ಕೊರಗರ ಹೆಣ್ಣುಮಕ್ಕಳು ಮೈನೆರೆಯುವಾಗ, ಮಗು ಹುಟ್ಟುವಾಗ, ಹೆಣ್ಣುಮಕ್ಕಳು ಮದುವೆ ಸಂದರ್ಭದಲ್ಲಿ, ಸಂತೋಷದ ದಿನಗಳಲ್ಲಿ, ಭೇಟೆಯಾಡುವಾಗ, ಹಿಂದಿನ ಕಾಲದಲ್ಲಿ ಮದುವೆ ಮತ್ತಿತರ ಶುಭ ಕಾರ್ಯಕ್ಕಾಗಿ ಹತ್ತಾರು ಕಿ. ಮೀ. ದೂರ ನಡೆಯುವಾಗ ಆಯಾಸ ತೀರಿಸಲು ನುಡಿಸುತ್ತಿದ್ದ ಕೊಳಲು, ಡೋಲು ವಾದ್ಯಗಳನ್ನು ಕೃಷಿ ಮೇಳದ ವೇದಿಕೆಯಲ್ಲಿ ಪರಿಚಯಿಸಲಾಯಿತು. ಒಂದೂವರೆ ಗಂಟೆಗಳ ಕಾಲ ನಡೆದ ಕಾರ್ಯಕ್ರಮ ನೆರೆದಿದ್ದವರ ಶ್ಲಾಘನೆಗೆ ಪಾತ್ರವಾಯಿತು. ಹುಭಾಶಿಕ ತಂಡದ ಮುಖ್ಯಸ್ಥರನ್ನು ಕೃಷಿ ಮೇಳದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.