ಕೃಷಿ ಪ್ರೇಮಿಗಳನ್ನು ಸೆಳೆಯುತ್ತಿರುವ "ಪಾರಂಪರಿಕ ಕೃಷಿ ಗ್ರಾಮ" - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕೃಷಿ ಪ್ರೇಮಿಗಳನ್ನು ಸೆಳೆಯುತ್ತಿರುವ "ಪಾರಂಪರಿಕ ಕೃಷಿ ಗ್ರಾಮ"

Share This
ಕೊಲ್ನಾಡು: ರಾಜ್ಯಮಟ್ಟದ ಕೃಷಿ ಮೇಳ ಕೃಷಿ ಸಿರಿ-2022ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಯೋಜಿತ ಪಾರಂಪರಿಕ ಕೃಷಿ ಗ್ರಾಮ ಭಾರೀ ಜನಾಕರ್ಷಣೆಗೆ ಪಾತ್ರವಾಗಿದೆ. ಮೇಳದ ಮೊದಲ ದಿನದಿಂದಲೇ ಕೃಷಿ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದ್ದ ಪಾರಂಪರಿಕ ಗ್ರಾಮದಲ್ಲಿ ಎರಡನೇ ದಿನದಂದು ಜನಜಾತ್ರೆಯೇ ನೆರೆದಿತ್ತು. ಅಬಾಲ ವೃದ್ಧರಾದಿಯಾಗಿ ಮೇಳಕ್ಕೆ ಬಂದ ಎಲ್ಲರೂ ಕೃಷಿ ಗ್ರಾಮದಲ್ಲಿನ ಗ್ರಾಮೀಣ ಸೊಗಡನ್ನು ಕಣ್ತುಂಬಿಕೊಳ್ಳುತ್ತಿದ್ದು ಆಯೋಜಕರು ಮತ್ತು ಸಂಘಟಕರ ಶ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಪಾರಂಪರಿಕ ಗ್ರಾಮದಲ್ಲಿ ತುಳುನಾಡಿನ ಗುತ್ತಿನ ಮನೆಯನ್ನು ನಿರ್ಮಿಸಲಾಗಿದ್ದು ಗುತ್ತಿನ ಮನೆಯ ಆವರಣದಲ್ಲಿ ಹಿಂದಿನ ಕಾಲದಲ್ಲಿ ಭತ್ತವನ್ನು ಸಂರಕ್ಷಣೆ ಮಾಡುತ್ತಿದ್ದ ದೇಶೀಯ ವಿಧಾನ (ತುಪ್ಪೆ), ಭತ್ತದ ಬೈಹುಲ್ಲು ಸಂಗ್ರಹಣೆ ಮತ್ತಿತರ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯುತ್ತಿದೆ. ವಿವಿಧ ತಳಿಯ ಗೋವುಗಳು, ಆಡು ಕುರಿ ಸಾಕಣೆ, ಚಮ್ಮಾರನ ಕುಟೀರ, ಮುಟ್ಟಾಳೆ ತಯಾರಿ, ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ, ಮಾರಾಟಕ್ಕಿಟ್ಟ ಮಣ್ಣಿನ ಪಾತ್ರೆಗಳು, ಅರಣ್ಯ ಇಲಾಖೆಯ ನರ್ಸರಿ ಇತ್ಯಾದಿ ಜನರ ಆಕರ್ಷಣೆಯನ್ನು ಹೆಚ್ಚಿಸಿವೆ.

ಉಡುಪಿ ಜಿಲ್ಲೆಯ ಕಡ್ತಲದ ಶೀನ ಪರವರಿಂದ ಮೀನು ಹಿಡಿಯುವ ಕುತ್ತರಿ ತಯಾರಿ, ನದಿಯ ಬದಿಯಲ್ಲಿ ಸಿಗುವ ಓಂಟೆ ಜಾತಿಯ ಸಸ್ಯದಿಂದ ಕುತ್ತರಿ ತಯಾರಿ, ಅತ್ತೂರು ಪದವಿನ ನಾರಾಯಣ ಕುಲಾಲ್, ಸುಂದರಿ ಕುಲಾಲ್ ದಂಪತಿಯಿಂದ ಸ್ಥಳದಲ್ಲೇ ಮಣ್ಣಿನ ಪಾತ್ರೆ, ಕಾವಲಿ, ಇತ್ಯಾದಿ ಪರಿಕರಗಳ ತಯಾರಿ ಜನಮನ ಸೆಳೆಯುತ್ತಿವೆ.
ಎಕ್ಕಾರಿನ ಸುಮತಿ ಕುಲಾಲ್ ಮತ್ತು ಸತೀಶ್ ತೆಂಗಿನ ಗರಿಯಿಂದ ಮಡಲು ಹೆಣೆಯುವುದು, ಆದರ್ಶ್ ರಿಂದ ದೈವಾರಾಧನೆಯಲ್ಲಿ ಬಳಸುವ ಸಿರಿ, ಅಣಿ ತಯಾರಿ ಪ್ರಾತ್ಯಕ್ಷಿಕೆ, ದೈವಾರಾಧನೆಯಲ್ಲಿ ಬಳಸುವ ತತ್ರ ತಯಾರಿಯಲ್ಲಿ ವಿಶ್ವನಾಥ್, ಹಾಗೂ ದೈವದ ಮಣಿಸರ ಆಭರಣ ತಯಾರಿಯಲ್ಲಿ ಮಂಜುನಾಥ್ ಓಂತಿಬೆಟ್ಟು ಪಾರಂಪರಿಕ ಗ್ರಾಮದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲೇ ಪಕ್ಕದಲ್ಲಿ ಅಡಿಕೆ ಹಾಳೆಯಿಂದ ಮುಟ್ಟಲೆ ತಯಾರಿಸುವಲ್ಲಿ ಕೊರಗ ಪಾಣಾರ ಮತ್ತು ಚಾಪೆ ಹೆಣೆಯುವ ಕಾಯಕದಲ್ಲಿ ಮರ್ಣೇ ಗ್ರಾಮದ ನಿವಾಸಿ ಗುಲಾಬಿ ಪಾಣಾರ ಜನರ ಆಕರ್ಷಣೆಗೆ ಪಾತ್ರರಾಗಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಕೃಷಿ ಮೇಳದಲ್ಲಿ ಕೃಷಿಯ ಜೊತೆಗೆ ತುಳುನಾಡಿನ ಅನನ್ಯ ಸಂಸ್ಕೃತಿ, ಸಂಪ್ರದಾಯ, ಅಪರೂಪದ ಕಲೆಗಳನ್ನೂ ಉಳಿಸಿ ಬೆಳೆಸುವ ಪ್ರಯತ್ನ ನಡೆದಿದ್ದು ಮೇಳಕ್ಕೆ ಆಗಮಿಸುವ ಕೃಷಿ ಆಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎರಡನೇ ದಿನದಂದು ಸಾವಿರಾರು ಮಂದಿ ಪಾರಂಪರಿಕ ಕೃಷಿ ಗ್ರಾಮವನ್ನು ಸಂದರ್ಶಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಸಂಘಟಕರು ಮತ್ತು ಆಯೋಜಕರ ಶ್ರಮ ಸಾರ್ಥಕವಾಗಿದೆ.

ಪಾರಂಪರಿಕ ಕಲಾ ಗ್ರಾಮಕ್ಕೆ ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ಡಾ. ಕಿಶೋರ್ ಕುಮಾರ್ ಸಿಕೆ ಭೇಟಿ ನೀಡಿದರು. ಕೃಷಿ ಮೇಳದ ಅಧ್ಯಕ್ಷ ವಿಜಯ ಶೆಟ್ಟಿ ಕೊಲ್ನಾಡ್, ಗೌರವಾಧ್ಯಕ್ಷ ಜಿ ಆರ್ ಪ್ರಸಾದ್, ಕೋಶಾಧಿಕಾರಿ ಜಗದೀಶ್ ಪೈ, ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಜೊತೆ ಕೋಶಾಧಿಕಾರಿ ಸಂತೋಷ್ ಹೆಗ್ಡೆ, ಜೊತೆ ಕಾರ್ಯದರ್ಶಿಗಳಾದ ಸೋಮಪ್ಪ ನಾಯ್ಕ್, ಚಂದ್ರಹಾಸ್ ಕುಂದರ್, ಸಂಚಾಲಕರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಎ. ಕೃಷ್ಣ ಶೆಟ್ಟಿ ತಾರೆಮಾರ್, ಪ್ರಶಾಂತ್ ಜಿ ಪೈ, ರತ್ನಾಕರ್ ಕುಳಾಯಿ, ವಿನೋದ್ ಸಾಲಿಯಾನ್ ಬೆಳ್ಳಾಯರು, ಸಲಹೆಗಾರರಾದ ಮೂಲ್ಕಿ ಜೀವನ್ ಕೆ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕುರ, ತುಕಾರಾಂ ಪೂಜಾರಿ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

Pages