ರಾಜಕೀಯ ವಿಮರ್ಶೆ : "ರಾಜಕೀಯದ ಕನ್ನಡಿಯಲ್ಲಿ ನಾಯಕರ ಮುಖಗಳು" - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ರಾಜಕೀಯ ವಿಮರ್ಶೆ : "ರಾಜಕೀಯದ ಕನ್ನಡಿಯಲ್ಲಿ ನಾಯಕರ ಮುಖಗಳು"

Share This

ರಾಜಕೀಯ ಎಂದರೆ ಹಾಗೆ. ಒಂದು ಚೌಕಟ್ಟಿನ ಕನ್ನಡಿಯೊಳಗೆ ನಾಯಕರ ಚಿತ್ರ ಅನಾವರಣಗೊಳಿಸಿ, ವಿಜೃಂಭಿಸುವಂತೆ ಮಾಡುವುದು. ಪ್ರಜಾಪ್ರಭುತ್ವದ ರಾಜಕೀಯದಲ್ಲಿ ರಾಜಕೀಯ ಪಕ್ಷಗಳ ರಾಜಕೀಯ ಫ್ರೇಮ್ ಒಳಗೆ ನಾಯಕರ ಭಾವಚಿತ್ರ ಅಂಟಿಸಿ ಮತದಾರರಿಗೆ ಪ್ರದರ್ಶಿಸುವುದು. ಮಕ್ಕಳ ದಿನಾಚರಣೆಯ ದಿನ ದಿನಪತ್ರಿಕೆಗಳ ಒಂದು ಪುಟದಲ್ಲಿ ಮಕ್ಕಳ ಚಿತ್ರವನ್ನು ಪ್ರಕಟಿಸಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಿದರೆ, ರಾಜಕೀಯ ನಾಯಕರ ಭಾವಚಿತ್ರವನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ದಿನ ಚಲಾವಣೆಯಲ್ಲಿರುವಂತೆ ನೋಡಿ ಕೊಳ್ಳುವುದು. ಅದು ಪ್ರಿಂಟ್ ಮೀಡಿಯಾ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸದಾ ಬರುವಂತೆ ಮಾಡಿ ಪಕ್ಷದ ನಾಯಕರ ಚಿತ್ರಗಳನ್ನು ಮತದಾರ ಮಹಾ ಪ್ರಭುಗಳಿಗೆ ತೋರಿಸುತ್ತಾ, ನಾಯಕರು ಮತದಾರ ಪ್ರಭುಗಳ ಆಳುಗಳಂತೆ ತೋರಿಸಿ ಜನ ಬೆಂಬಲ ಗಿಟ್ಟಿಸುವ ಪ್ರಯತ್ನ ಮಾಡುತ್ತಾ ಇರುವುದು. ಅಂದರೆ ಮರದಲ್ಲಿರುವ ಹಣ್ಣು ಉದುರಿಸಲು ಗೊಂಚಲಿಗೆ ಕಲ್ಲು ಹೊಡೆಯುತ್ತಾ ಹಣ್ಣು ಉದುರಿಸುವ ಪ್ರಯತ್ನದಂತೆ ಎಂದು ಅನಿಸುತ್ತದೆ.


ಭಾರತೀಯರು ಪರಕೀಯರ ದಾಸ್ಯದಲ್ಲಿ ಅನುಭವಿಸಿದ ಯಾತನೆ ಹೇಳಲು ಪದಗಳೇ ಇಲ್ಲ. ನಮ್ಮ ದೇಶದಲ್ಲಿ ನಾವು ಪರಕೀಯರಂತೆ ಬಾಳ ಬೇಕಾದ ಪರಕೀಯರ ದೌರ್ಜನ್ಯ ಮಾನವೀಯತೆಯ ಎಲ್ಲೆ ಮೀರಿತ್ತು. ಜನರ ಬದುಕು ಅಸಹಿಷ್ಣುತೆಯಿಂದ ಕೂಡಿದ್ದು, ಅಸಹಾಯಕರಾಗಿ ಆಂಗ್ಲರ ದೌರ್ಜನ್ಯ ಎದುರಿಸಿ ನಮ್ಮತನ ಕಳೆದುಕೊಂಡು ಬದುಕವುದು ಯಾರಿಗೆ ಬೇಕು ಹೇಳಿ. ಇಂತಹ ದಬ್ಬಾಳಿಕೆ ವಿರುದ್ಧ ರಾಷ್ಟ್ರೀಯ ಏಕತೆ, ಸಮಗ್ರತೆ, ಭಾವೈಕ್ಯತೆ ಪ್ರತಿಪಾದಿಸುವ ನಾಯಕರು, ಹೋರಾಟಗಾರರು ಇಂಗ್ಲೀಷರ ವಿರುದ್ಧ ಸಿಡಿದೆದ್ದರು. ಮುಷ್ಕರ, ಚಳುವಳಿ, ಸತ್ಯಾಗ್ರಹ, ಅಹಿಂಸೆ ಅಲ್ಲದೆ ಸಂಘರ್ಷ, ಹಿಂಸೆ ಹೀಗೆ ಅನೇಕ ತಂತ್ರಗಾರಿಕೆಯಿಂದ ಬ್ರಿಟಿಷರನ್ನು ಭಾರತದಿಂದ ಓಡಿಸುವ ಪ್ರಯತ್ನ ನಡೆಯಿತು. ಸ್ವಾತಂತ್ರ್ಯ ಹೋರಾಟದ ಅನೇಕ ಪರ್ಯಾಯ ವಿಧಾನಗಳ ಮೂಲಕ ಬಿಳಿಯರ ಅವಿವೇಕಿತನದ ಆಡಳಿತದಿಂದ ದೇಶಿಯರನ್ನು ಪಾರು ಮಾಡುವ ಪ್ರಯತ್ನದಲ್ಲಿ ಅಂತಿಮ ಯಶಸ್ಸು ದೊರಕಿತು.


ಬೇರೆ, ಬೇರೆ ಸೈದ್ಧಾಂತಿಕ ಹಿನ್ನೆಲೆಯ ನಾಯಕರು ವೈಯಕ್ತಿಕವಾಗಿ ಅಥವಾ ಪಕ್ಷ ಸಂಘಟನೆ ಮಾಡಿ ಹೋರಾಡಿದರು. ಅದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಒಳಗೆ ಬಂದು ಹೋರಾಡಿದವರೇ ಹೆಚ್ಚು.ಕಾಂಗ್ರೇಸ್ ಪಕ್ಷದ ಧೋರಣೆ ವಿರೋಧಿಸಿ ಅನೇಕರು ಪಕ್ಷದಿಂದ ಹೊರ ಬಂದು ತಮ್ಮದೇ ಆದ ರೀತಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಒಮ್ಮೆ ಮೋತಿಲಾಲ್ ನೆಹರು ಕಾಂಗ್ರೇಸ್ ಬಿಟ್ಟು ಸ್ವರಾಜ್ಯ ಪಕ್ಷ ಸ್ಥಾಪನೆ ಮಾಡಿದ್ದರು.


ದೇಶ ಪ್ರೇಮದ ಅಪ್ರತಿಮ ವೀರರನ್ನು ಕ್ರಾಂತಿಕಾರಿಗಳೆಂದು ಬಿಂಬಿಸಿದ್ದು ವಿಪರ್ಯಾಸವೇ ಸರಿ. ಮಂದಾಗಮಿಗಳು, ತೀವ್ರವಾದಿಗಳು, ಕ್ರಾಂತಿಕಾರಿಗಳೆಂದು ವರ್ಗಿಕರಿಸಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿದ್ಯಾರ್ಥಿಗಳ ಪಠ್ಯ ವಿಷಯದಲ್ಲಿ ಸೇರಿಸುವ ಬದಲು ಎಲ್ಲಾ ನಾಯಕರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಪರಿಚಯಿಸುವುದು ಸೂಕ್ತ ಅನಿಸುತ್ತೆ. ಎಷ್ಟೇ ಸ್ವಾತಂತ್ರ್ಯ ಹೋರಾಟಗಾರರಿದ್ದರೂ ಮಹಾತ್ಮ ಗಾಂಧೀಜಿ ಮಾತ್ರ ಜನ ಮಾನಸದಲ್ಲಿ ಅಗ್ರಗಣ್ಯ ನಾಯಕರಾಗಿ ಉಳಿಯುತ್ತಾರೆ.


ಸ್ವಾತಂತ್ರೋತ್ತರ ಸರ್ಕಾರ ರಚನೆ, ನಂತರ ನಡೆದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ವಾತಂತ್ರ್ಯ ಚಳುವಳಿಯಲ್ಲಿ ಮಾಡಿದ ಸಂಘಟನಾತ್ಮಕ ಹೋರಾಟವನ್ನು ಪರಿಗಣಿಸಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತಂದರು ಮತದಾದಾರರು. ಆದರೆ ಅದೇ ಕಾಂಗ್ರೇಸ್ ನೆಹರು ಕುಟುಂಬದ ಪಕ್ಷವೆಂಬಂತೆ ಬಿಂಬಿತವಾಗುತ್ತಾ ಹೋಯಿತು. ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೀಗೆ ಒಬ್ಬರ ನಂತರ ಒಬ್ಬರಂತೆ ಕಾಂಗ್ರೇಸ್ ಪಕ್ಷದ ವಾರಿಸುದಾರರಂತೆ ಕಂಡು ಬಂದರು. ಒಂದು ಸಮಯ ಕಾಂಗ್ರೇಸ್ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡಿದರೆ ಗೆಲುವು ನಿಶ್ಚಿತ ಎಂಬ ರಾಜಕೀಯ ಪ್ರಾಬಲ್ಯವಿತ್ತು. ಇಂದಿರಾ ಗಾಂಧಿ ಅಧಿಕಾರದಲ್ಲಿದ್ದಾಗ ಕಾಂಗ್ರೇಸ್ ವಿಭಜನೆಯಾಗಿ, ಇಂದಿರಾ ಕಾಂಗ್ರೇಸ್ ಆದರೂ ಗೆಲುವು ಅವರಿಗೆ ಸಿಕ್ಕಿತ್ತು. ಇಂದಿರಾ ಕಾಂಗ್ರೇಸ್ ಹೆಸರಲ್ಲಿ ಕುರಿಯನ್ನು ಅಭ್ಯರ್ಥಿಯಾಗಿ ನಿಲ್ಲಿಸಿದರೆ ಗೆಲ್ಲುವುದೆಂದು ರಾಜಕೀಯ ಪಡಸಾಲೆಯ ವ್ಯಂಗ್ಯವಾಗಿತ್ತು. ಕುಟುಂಬ ರಾಜಕೀಯ ಒಂದು ಹಂತದವರೆಗೆ ಸಾಧ್ಯ. ಧೀರ್ಘ ಕಾಲ ಕುಟುಂಬ ರಾಜಕಾರಣ ನಡೆಯದು. ಒಂದು ವೇಳೆ ಕುಟುಂಬ ರಾಜಕಾರಣ ಮುಂದುವರಿಯುತ್ತಾ ಹೋದರೆ,ಇದು ಸರ್ವಾಧಿಕಾರಕ್ಕೆ ಕಾರಣವಾಗಿ ಜನ ಸಾಮಾನ್ಯರ ಮಾತಿಗೆ ಬೆಲೆ ಸಿಗದೇ ಹೋದೀತು. ಕಾಂಗ್ರೇಸ್ ನಲ್ಲಿ ಇದೇ ಸನ್ನಿವೇಶ ನಿರ್ಮಾಣವಾಗಿ ಜನರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲು ತುರ್ತು ಪರಿಸ್ಥಿತಿಯನ್ನು ಇಂದಿರಾ ಗಾಂಧಿ ಜನರ ಮೇಲೆ ಹೇರಿದರು. ಇದೇ ಅವರಿಗೆ ಮುಳುವಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್ ಅಧಿಕಾರ ಕಳೆದು ಕೊಂಡಿತು. ವ್ಯಕ್ತಿ ಪ್ರತಿಷ್ಠೆ ಹೆಚ್ಚುತ್ತಾ ಹೋದರೆ, ಸಾಮೂಹಿಕ ಮಾತಿಗೆ ಬೆಲೆ ಸಿಗುವುದಿಲ್ಲ. ನೆಹರು ಕುಟುಂಬವೇ ಕಾಂಗ್ರೇಸ್ ಪಕ್ಷದ ಸ್ಥಾಪಕರು ಎಂಬ ಭಾವನೆ ಜನರ ಮೇಲೆ ಹೇರ ತೊಡಗಿದ ರಾಜಕೀಯ ಫಲಾನುಭವಿಗಳು ಕಾಂಗ್ರೇಸ್ ಪಕ್ಷದ ಪ್ರಸಕ್ತ ಸ್ಥಿತಿಗೆ ಕಾರಣರಾದರು.ನೆಹರು ಕುಟುಂಬ ಹಾಗೂ ಕಾಂಗ್ರೇಸ್ ಪಕ್ಷದ ರಾಜಕೀಯ ಹಿಡಿತದಿಂದ ಪಾರಾಗಲು ಜನತಾ ಪರಿವಾರಗಳು, ಬೇರೆ, ಬೇರೆ ಪಕ್ಷಗಳು ಒಂದಾದವು. ಜನ ಸಂಘ ಭಾರತೀಯ ಜನತಾ ಪಕ್ಷವಾಗಿ ಇತರ ಪಕ್ಷಗಳನ್ನು ಸೇರಿ ಆಡಳಿತದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಯಿತು. ಕಾಂಗ್ರೇಸ್ ಪಕ್ಷದ ಆಡಳಿತ ವಿರೋಧಿ ಅಲೆಯಲ್ಲಿ ಅನೇಕರು ಆಡಳಿತದ ಚುಕ್ಕಾಣಿ ಹಿಡಿದರು. ಮೊರಾರ್ಜಿ ದೇಸಾಯಿ, ಚಂದ್ರಶೇಖರ್, ವಾಜಪೇಯಿ, ದೇವೇಗೌಡ, ಅರ್ಜುನ್ ಸಿಂಗ್ ಪ್ರಧಾನಿಗಳಾದರು. ಆದರೆ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಗಳಾಗಿ ಉತ್ತಮ ಆಡಳಿತ ನೀಡಿ,ಭಾರತೀಯ ಜನತಾ ಪಕ್ಷವನ್ನು ಹೆಚ್ಚು ಮತದಾರರು ಬೆಂಬಲಿಸುವಂತೆ ಮಾಡಿದರು. ದೇಶಾಭಿಮಾನ, ಭಾರತೀಯ ಪರಂಪರೆಯ ಪ್ರತಿಪಾದನೆ ಮತ್ತು ಅನುಷ್ಠಾನಎಲ್ಲಾ ಕ್ಷೇತ್ರದಲ್ಲಿ ಭಾರತೀಯತೆಯ ಸೊಗಡು, ನಮ್ಮ ದೇಶದಲ್ಲಿ ನಮ್ಮ ಆಡಳಿತವನ್ನು ಜನರು ಒಪ್ಪುತ್ತಾ ಹೋದರು. ಆಗಿನ ಜನ ಸಂಘ ಈಗ ಭಾರತೀಯ ಜನತಾ ಪಕ್ಷವಾಗಿ ಅತಿ ಹೆಚ್ಚು ಪ್ರಾಥಮಿಕ ಸದಸ್ಯರನ್ನು ಹೊಂದಿರುವ ಪ್ರಪಂಚದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿದೆ.


ಒಂದೇ ಪಕ್ಷ ದೇಶದ ಆಡಳಿತ ನಡೆಸುತ್ತಾ ಬಂದಿದೆ. ಬದಲಾವಣೆ ಮಾಡಬಾರದೇಕೆ ಎಂದು ಜನರು ಯೋಚಿಸಿದರು. ಬೇರೊಂದು ರಾಷ್ಟ್ರೀಯ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ದೇಶದ ಅಭಿವೃದ್ಧಿ ಸಾಧ್ಯ. ಭಾರತಕ್ಕೆ ಬಾಹ್ಯ ಬೆದರಿಕೆ ಎದುರಿಸಿ ಅವರ ಹುಟ್ಟಡಗಿಸುವ ಪ್ರಧಾನಿಯೊಬ್ಬರನ್ನು ಜನರು ಗುರುತಿಸಿ ಅಧಿಕಾರಕ್ಕೆ ತಂದರು. ಅವರೇ ಸನ್ಮಾನ್ಯ ಶ್ರೀ ನರೇಂದ್ರ ದಾಮೋದರ ಮೋದಿ. ಇವರ ಮೇಲೆ ಜನ ವಿಶ್ವಾಸ ಇಟ್ಟರು ಇವರನ್ನು ಜನರು ಪ್ರೀತಿಸಿದರು. ಕುಟುಂಬ ವ್ಯಾಮೋಹ ಇವರ ಹತ್ತಿರ ಸುಳಿಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡರು. ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನರು. ತಾನು ತಿನ್ನಲ್ಲ, ಬೇರೆಯವರಿಗೆ ತಿನ್ನಲು ಬಿಡಲ್ಲ ಅನ್ನುವ ಜಾಯಮಾನದವರು. ರಾಜಕೀಯ ಮಾಡಿ ರಾಜಕಾರಣಿಗಳು ದೇಶದ ಸಂಪತ್ತನ್ನು ಲೂಟಿ ಮಾಡಲು ಬಿಡುವುದಿಲ್ಲ. ನೆಹರು ಕುಟುಂಬ ರಾಜಕೀಯ ತಲೆಮಾರಿನಿಂದ ಬಂದದ್ದು, ಆದರೆ ಮೋದಿ ಪ್ರಸಕ್ತ ರಾಜಕೀಯ ಸಂಕೀರ್ಣ ಸನ್ನಿವೇಶದಲ್ಲಿ ಮೂಡಿ ಬಂದ ಜನ ನಾಯಕ, ಜನರ ಸೇವಕ. ಯಾವುದೇ ರಾಜಕೀಯ ಹಿನ್ನಲೆಯಿಲ್ಲದೆ ದೇಶ ಮತ್ತು ಜನರ ಬಗ್ಗೆ ಅತಿಯಾದ ಕಾಳಜಿಯಿದ್ದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಅಧಿಕಾರಕ್ಕೆ ಬರಬಹುದು. ಆದರೆ ಅವರಿಗೆ ಒಂದು ರಾಜಕೀಯ ಪಕ್ಷದ ನೆಲೆ ಬೇಕು. ರಾಜಕೀಯ ಪಕ್ಷದ ಪ್ರಣಾಳಿಕೆ ದೇಶದ ಪರವಾಗಿದ್ದರೆ, ಜನರು ಬಿಟ್ಟು ಕೊಡರು ಎಂಬುದಕ್ಕೆ ಭಾರತೀಯ ಜನತಾ ಪಕ್ಷವೇ ಉದಾಹರಣೆ. ಆದರೆ ನಾಯಕತ್ವ ವಹಿಸಿವವರು ಸಾಚ್ಚಾರಿತ್ರ್ಯ ವ್ಯಕ್ತಿತ್ವ ಹೊಂದಿರಬೇಕು. ಅವರನ್ನು ಮತದಾರರು ಗುರುತಿಸುತ್ತಾರೆ. ಅವರೇ ಪ್ರಧಾನಿ ನರೇಂದ್ರ ಮೋದಿಯವರು. ಈಗಲೂ ಏಕ ವ್ಯಕ್ತಿ ರಾಜಕೀಯ ಚೌಕಟ್ಟಿನ ಕನ್ನಡಿಯೊಳಗೆ ಮೋದಿ ಕಾಣುತ್ತಿದ್ದಾರೆ. ಮೋದಿಯವರ ಹೆಸರು, ವ್ಯಕ್ತಿತ್ವ, ಪಕ್ಷದ ಧ್ಯೇಯೋದ್ದೇಶಗಳು, ಪ್ರಣಾಳಿಕೆ ನೋಡಿ ಮೋದಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಿದ್ದಾರೆ. ಎರಡನೇ ಅವಧಿಯಲ್ಲಿ ಅಭೂತಪೂರ್ವ ಗೆಲುವು ಮೋಧೀಜಿ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಸಿಕ್ಕಿದೆ.


ಪ್ರಸಕ್ತ ರಾಜಕೀಯ ವಿದ್ಯಮಾನದಲ್ಲಿ ಮೋದಿಜಿಯವರಿಗೆ ಸರಿ ಸಾಟಿ ಯಾರಿಲ್ಲ. ಪಕ್ಷ ಕೊಟ್ಟ ಅವಕಾಶವನ್ನು ಮೋದಿ ಸರಿಯಾಗಿ ಬಳಸಿಕೊಂಡಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದ ಆಡಳಿತ ನೀಡುತ್ತಿದ್ದಾರೆ. ತಮ್ಮ ಕೆಲಸದ ಮೂಲಕ ಜನರ ಪ್ರೀತಿ, ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಮೋದಿಯಿಲ್ಲದಿದ್ದರೆ ದೇಶದ ಭವಿಷ್ಯದ ಗತಿಯೇನು ಎಂದು ನಿತ್ಯ ಹರಸುವ ದೊಡ್ಡ ಜನವರ್ಗವೇ ಇದೆ. ಯುವಕರ ಕಣ್ಮಣಿಯಾಗಿದ್ದಾರೆ. ಯುವಕರಲ್ಲಿ ಯಾರಿಗೆ ಮತ ಹಾಕುತ್ತೀರಿ ಎಂದರೆ ಮೋದಿಗೆ ಎನ್ನುತ್ತಾರೆ.


ರಾಜಕೀಯ ಹಣ ಮಾಡುವ ಉದ್ಯೋಗ ಆಗುತ್ತಿದೆ. ರಾಜಕೀಯಕ್ಕೆ ಬರುವುದು ಹಣ ಮಾಡಲು ಎಂಬ ಪೈಪೋಟಿ ಆರಂಭವಾಗಿದೆ. ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರೆಂದು ವ್ಯಂಗ್ಯ ಮಾಡುತ್ತಾರೆ. ಇದನ್ನು ಅಲ್ಲಗಳೆಯುವಂತಿಲ್ಲ. ರಾಜಕೀಯಕ್ಕೆ ಬರುವಾಗ ಏನೂ ಇಲ್ಲದವರು ಲೆಕ್ಕವಿಲ್ಲದಷ್ಟು ಗಳಿಸುವ ಆಸ್ತಿ, ಹಣ, ಒಡವೆ, ಬಂಗಲೆ ಎಲ್ಲಿಂದ ಬಂತು ಎಂಬುದು ಯಕ್ಷ ಪ್ರಶ್ನೆ. ರಾಜಕೀಯ, ರಾಜಕಾರಣ ಎಂದರೆ ಭ್ರಷ್ಟಾಚಾರ ಎನ್ನುವಂತೆ ಜನರ ತೆರಿಗೆ ಹಣ ಲೂಟಿ ಮಾಡಿದವರು ಸಿಕ್ಕಿ ಬೀಳುವುದು ಬಹಳ ಕಡಿಮೆ. ಒಮ್ಮೆ ಅಧಿಕಾರಕ್ಕೆ ಬಂದರೆ ತಾನು ತಿಂದು ಯಾರಿಗೂ ಗೊತ್ತಾಗದಂತೆ ಒರೆಸಿಕೊಳ್ಳುವ ರಾಜಕೀಯ ಪಟ್ಟು ಕಲಿಯುತ್ತಾರೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ದಾಮೋದರ ಮೋದಿ ಶುದ್ಧ ಹಸ್ತರು ಎಂಬುದಕ್ಕೆ ಜನರಿಗೆ ಅವರ ಮೇಲೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಇವರು ತಮ್ಮ ರಾಜಕೀಯ ವರ್ಚಸ್ಸಿನಿಂದ ರಾಜಕೀಯಕ್ಕೆ ಹೊಸ ವ್ಯಾಖ್ಯಾನ ಬರೆದರು ಎಂದು ಹೇಳುವವರು ಇದ್ದಾರೆ. ಎಲ್ಲರೂ ಇವರಂತೆ ಆಗರು. ಆದರೆ ಪ್ರಯತ್ನ ಮಾಡಲು ಅಡ್ಡಿಯಿಲ್ಲವಲ್ಲ. ವಿರೋಧ ಪಕ್ಷದವರು ಮೋದಿ ರಾಜಕೀಯದಲ್ಲಿ ಆಲದ ಮರವಾಗಿ ಬೆಳೆಯುತ್ತಿದ್ದಾರೆ. ಆಲದ ಮರದ ಅಡಿಯಲ್ಲಿ ಏನೂ ಬೆಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ವಿರೋಧಿಗಳ ಚುಚ್ಚು ಮಾತುಗಳು ದೂರವಾಗಲು ಮೋದಿ ತಮ್ಮ ಸರ್ಕಾರದಲ್ಲಿ ಹೊಸ ಯುವ ನಾಯಕರನ್ನು ಸಜ್ಜುಗೊಳಿಸುತ್ತಿದ್ದಾರೆ. ಮೋದಿಯವರ ಕಾರ್ಯ ವೈಖರಿ ನೋಡಿ ಬೆಳೆಯಬೇಕು. ನಾನು ಮೋದಿ ರಾಜಕೀಯ ದ್ರುವ ತಾರೆ ಎನ್ನುತ್ತೇನೆ. ಏಕೆಂದರೆ ಅವರು ಬೆಳಕಾಗಿ ಮಿನುಗುತ್ತಾರೆ. ಅವರನ್ನು ಹಿಂಬಾಲಿಸಲು ಕಷ್ಟವಾಗದು. ಆದರೆ ಹಿಂಬಾಲಿಸುವ ತಾಳ್ಮೆ ಇರಬೇಕು. ಅವರ ಪಕ್ಷ ನಿಷ್ಠೆ, ದೇಶಾಭಿಮಾನ, ಜನರ ಮೇಲಿನ ಪ್ರೀತಿ, ವಿಶ್ವಾಸ, ಗೌರವ, ಭಾವೈಕ್ಯತೆ, ಪಾರದರ್ಶಕತೆ, ದೂರ ದೃಷ್ಟಿ, ವಿಶಾಲ ಮನೋಭಾವ, ಭ್ರಷ್ಟಾಚಾರ ಮುಕ್ತ ಆಡಳಿತ, ಸದಾ ದೇಶ ಸೇವೆಗೆ ಮುಡಿಪಾಗಿಟ್ಟ ರಾಜಕೀಯ, ಜನರ ಕಷ್ಟ ಗಳನ್ನು ಆಲಿಸುವ ಗುಣ, ರಾಜಕೀಯದಲ್ಲಿ ಶುದ್ಧ ಹಸ್ತರು, ದೇಶವಾಸಿಗಳ ಸಮೃದ್ಧಿ ಜೀವನವೇ ಆಡಳಿತದ ಗುರಿ ಹೊಂದಿರುವ ಪ್ರಧಾನಿ ದೇಶದ ಜನರ ಕಣ್ಮಣಿ. ಮೋದಿಯವರ ರಾಜಕೀಯ ಚಾಣಾಕ್ಷತನವನ್ನು ವಿದೇಶಿ ನಾಯಕರು ಮೆಚ್ಚುತ್ತಾರೆ. ರಾಜ ಕಟ್ಟಿದ ಸಾಮ್ರಾಜ್ಯ ನಾಶವಾಗಿದ್ದು ಚರಿತ್ರೆಯಲ್ಲಿ ಓದಬಹುದು. ಆದರೆ ರಾಜಕಾರಣಿಗಳು ದೇಶವನ್ನು ನಾಶ ಮಾಡಿದರೆ ಜನ ಕ್ಷಮಿಸರು. ಅಂತಹವರು ಜನರ ಮನಸಿನಿಂದ ದೂರವಾಗುತ್ತಾರೆ. ರಾಜಕೀಯ ಪಕ್ಷವಿಲ್ಲದೆ ರಾಜಕೀಯ ಸಾಧ್ಯವಿಲ್ಲ. ಪಕ್ಷೇತರರಾಗಿ ಸ್ಪರ್ಧೆ ಮಾಡಿ ಅಲ್ಲೊಬ್ಬ, ಇಲ್ಲೊಬ್ಬರು ಗೆಲ್ಲಬಹುದು. ಕಾರಣದಿಂದ ರಾಜಕೀಯ ಪಕ್ಷಗಳ ಜವಾಬ್ದಾರಿ ಹೆಚ್ಚಿದೆ. ಅಭ್ಯರ್ಥಿ ಆಯ್ಕೆ ಮಾಡುವಾಗ ಆಸೆ, ಆಮಿಷಗಳು, ಜಾತಿ, ಮತ ಭೇದ ವಿಲ್ಲದೆ ಅತ್ಯಂತ ಅರ್ಹರನ್ನು ಆರಿಸಿ ಚುನಾವಣೆಗೆ ಸ್ಪರ್ಧಿಗಳನ್ನಾಗಿ ಮಾಡಿದರೆ ಪ್ರಜಾಪ್ರಭುತ್ವ ಗೆಲ್ಲುತ್ತದೆ. ಇದೆಲ್ಲ ಆಗುವುದು ಬರಿ ಭ್ರಮೆ ಅನಿಸುತ್ತೆ. ಏನೇ ಆಗಲಿ ವ್ಯಕ್ತಿ ಹೆಸರಲ್ಲಿ ಚುನಾವಣೆ ಗೆಲ್ಲುವುದು ಬಹಳ ಅಪಾಯ. ಅವರ ನಂತರ ಇನ್ನಾರು ಎಂಬ ಸಂದೇಹ ಮೂಡಬಾರದು. ಅದಕ್ಕೆ ಒಬ್ಬ ಮೋದಿಯಲ್ಲ, ಮೋದಿಯಂತಹ ನೂರು, ಸಾವಿರ ಮೋದಿಯಂತಹ ವ್ಯಕ್ತಿ ಗಳು ರಾಜಕೀಯ ಪಕ್ಷಗಳಿಗೆ ಅನಿವಾರ್ಯ. ಫಕೀರನಿಗೆ ಫಿಕಿರ್ ಇಲ್ಲ ಎನ್ನುವ ಗಾದೆ ಮಾತಿದೆ. ನಮ್ಮ ಪ್ರಧಾನಿಗೆ ಫಿಕಿರ್ ಇಲ್ಲ. ಆದರೆ ಕುಟುಂಬ ವ್ಯಾಮೋಹ ಹೊಂದಿರುವ ರಾಜಕಾರಣಿಗಳು ಉತ್ತಮ ಆಡಳಿತ ನೀಡುವರೇ.ಉತ್ತಮ ಆಡಳಿತ ನೀಡುವ ಮನಸ್ಸು ಇದ್ದರೆ ಅವರ ಕಚ್ಚೆ, ಬಾಯಿ, ಹಸ್ತ ಶುದ್ಧವಾಗಿರಬೇಕು. ಇಂತಹ ಗುಣ ಇಲ್ಲದವರು ಜನ ನಾಯಕರ ಸೋಗಿನಲ್ಲಿ ಗೆಲ್ಲುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಮೋಸ. ಜನರು ಜಾಗೃತರಾಗಿ ಎನ್ನುತ್ತಾ ಲೇಖನವನ್ನು ಮುಗಿಸುತ್ತೇನೆಬರಹ: ಅಶೋಕ್ ಕುಮಾರ್ ಶೆಟ್ಟಿ

Pages