ನಾಗರ ಪಂಚಮಿ ವಿಶೇಷತೆ : ಬರಹ – ಅಶೋಕ್ ಕುಮಾರ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನಾಗರ ಪಂಚಮಿ ವಿಶೇಷತೆ : ಬರಹ – ಅಶೋಕ್ ಕುಮಾರ್ ಶೆಟ್ಟಿ

Share This

ಮಂಗಳೂರು: ಕಲಿಯುಗದಲ್ಲಿ ನಾಗನಿಗೆ ವಿಶೇಷ ಆರಾಧನೆ ಮಾಡುತ್ತೇವೆ. ನಾಗನ ಮೇಲೆ ಬಹಳ ಭಯ ಮತ್ತು ಭಕ್ತಿ ಹೊಂದಿದ್ದೇವೆ. ನಾಗ ಶಾಪಕ್ಕೆ ಒಳಗಾಗಬಾರದೆಂಬುದೇ ಪ್ರತಿಯೊಬ್ಬರ ಇಚ್ಛೆ. ನಾಗರ ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ನಂಬಿಕೆ ಇದೆ. ತಾನಾಗಿ ನಾಗ ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ತನಗೆ ತೊಂದರೆ ಕೊಟ್ಟವರಿಗೆ ಕಾಡುತ್ತದೆ ಎಂದು ನಂಬಿಕೆ ಇದೆ. ಕೆಲವರಿಗೆ ಕನಸಿನಲ್ಲಿ ಕಾಡಿದರೆ, ಇನ್ನೂ ಕೆಲವರಿಗೆ ದಿನ ನಿತ್ಯ ಕಾಡುವುದುಂಟು.

ನಾಗನ ಬೇಡಿಕೊಂಡರೆ ಸಂತಾನ ಭಾಗ್ಯ ಲಭಿಸುವುದೆಂದು ನಂಬಿಕೆ ಇದೆ. ನಾಗನಿದ್ದಲ್ಲಿ ನಿಧಿ ಇರುತ್ತದೆ ಎಂದು ನಂಬಿದ್ದೇವೆ. ಹಿಂದೆ ಅಮೂಲ್ಯ ನವರತ್ನಗಳನ್ನು ಶತ್ರುಗಳಿಂದ ರಕ್ಷಿಸಲು ನಾಗನ ಸ್ಥಾನದಲ್ಲಿ ಇಟ್ಟಿರಬಹುದು ಎಂದು ನಂಬಲಾಗಿದೆ.ಯಾರ ಭಯವಿಲ್ಲದೆ ದೇವರ ಆಭರಣ ರಕ್ಷಣೆಗೆ ನಾಗ ಸಾನಿಧ್ಯ ಸೂಕ್ತವಾದ ಸ್ಥಳ ಎಂದು ನಂಬಿದ್ದರು. ನಾಗರ  ಪಂಚಮಿ ಹೆಣ್ಣು ಮಕ್ಕಳ ಹಬ್ಬ ಎನ್ನುವರು. ಹೆಣ್ಣು ಮಕ್ಕಳನ್ನು ತವರಿಗೆ ಕರೆದು ಉಡುಗೊರೆ ನೀಡಿ ಆಶೀರ್ವದಿಸಿ ಕಳಿ ಸುವ ಸಂಪ್ರದಾಯವಿದೆ. ಭರತ ಖಂಡದ ಉದ್ದಗಲದಲ್ಲಿ ನಾಗಾರಾಧನೆ ಮಾಡುತ್ತಾರೆ. ನಾಗನಿಗೆ ಹಾಲು, ಎಳನೀರು ಅಭಿಷೇಕ ಮಾಡುತ್ತಾರೆ.ತನು ಹಾಕುವುದು, ಆಶ್ಲೇಷ ಬಲಿ,ನಾಗ ಮಂಡಲ ಇತ್ಯಾದಿ ಸೇವೆ, ಹರಕೆಗಳನ್ನು ನೀಡಿ ನಾಗಾರಾಧನೆ ಮಾಡುವುದು ರೂಢಿಯಲ್ಲಿದೆ.


ತ್ರಿಮೂರ್ತಿಗಳಲ್ಲಿ ವಿಷ್ಣು ಮತ್ತು ಶಿವನನ್ನು ಕಲಿಯುಗದಲ್ಲಿ ಆರಾಧನೆ ಮಾಡುತ್ತೇವೆ. ಇವರಿಬ್ಬರ ಸಾಮೀಪ್ಯದಲ್ಲಿ ನಾಗನಿರುವುದು ವಿಶೇಷತೆ. ಪುರಾಣಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಉಲ್ಲೇಖಗಳಿವೆ. ಬ್ರಹ್ಮನಿಗೆ ಬಂದ ಶಾಪದಿಂದ ಪೂಜೆ, ಪುನಸ್ಕಾರದಿಂದ ವಂಚಿತನಾದ. ಸೃಷ್ಟಿಕರ್ತ ಬ್ರಹ್ಮ ತನ್ನ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಯಿತು.ಅಂದರೆ ತಪ್ಪಿಗೆ ತಕ್ಕ  ಶಿಕ್ಷೆ  ದೇವರನ್ನು ಬಿಡಲಿಲ್ಲ.ಇನ್ನು ಹುಲು ಮಾನವರ ಪಾಡೇನು.


ಹಿಂದು ಧರ್ಮದಲ್ಲಿ ನಾಗರ ಹಾವನ್ನು ದೇವರೆಂದು ನಿತ್ಯ ಪೂಜಿಸುತ್ತೇವೆ. ಸಮುದ್ರ ಮಥನ ಮಾಡುವಾಗ ಮೊದಲು ಹೊರ ಬಂದ ವಿಷವನ್ನು ಶಿವನು ಕುಡಿದು, ತನ್ನ ಗಂಟಲಿನಲ್ಲಿ ಇಟ್ಟು ಕೊಂಡನು. ಇದರಿಂದ ಸೃಷ್ಟಿ ನಾಶವಾಗುವುದನ್ನು ತಡೆದನು ಎನ್ನಲಾಗಿದೆ. ಶಿವನ ಕುತ್ತಿಗೆಯ ಮೇಲಿನ ಸರ್ಪವು ಜನನ ಮತ್ತು ಪುನರುತ್ಥಾನದ ಕಾಲ ಚಕ್ರವನ್ನು ಪ್ರತಿನಿಧಿಸುತ್ತದೆ.ಸಮುದ್ರ ಮಥನದಲ್ಲಿ ಸರ್ಪನ ಭಕ್ತಿಯನ್ನು ಮೆಚ್ಚಿದ ಶಿವ ಪಾರ್ವತಿಯನ್ನು ವಿವಾಹವಾಗುವಾಗ ಹಾವುಗಳನ್ನು ಆಭರಣವಾಗಿ ಧರಿಸಿದ್ದನಂತೆ.


ನಾಗರ ಹಾವಿನ ತಲೆಯಲ್ಲಿ ಅಮೂಲ್ಯವಾದ ಮಾಣಿಕ್ಯ ಇದೆ. ಅದರ ಪ್ರಭೆ ಶಿವ ಪಾರ್ವತಿಗೆ ರಾತ್ರಿ ವೇಳೆ ಬೆಳಕಾಗುತ್ತದೆಯೆಂದು ಹೇಳಲಾಗಿದೆ. ನಾಗರ ಹಾವು ಭಯವನ್ನು ಪ್ರತಿನಿಧಿಸುತ್ತದೆ. ಶಿವನ ಕೊರಳಿನಲ್ಲಿರುವ ಹಾವು ಭಯ ಮತ್ತು ಮರಣವನ್ನು ನಿಯಂತ್ರಿಸುತ್ತದೆ ಎನ್ನುವರು.ಸರ್ಪ ಶಿವನ ಕೊರಳಿಗೆ ಮೂರು ಸುತ್ತು ಸುತ್ತಿಕೊಂಡಿದೆ.ಇದು ವರ್ತಮಾನ, ಭವಿಷ್ಯ ಮತ್ತು ಭೂತ ಕಾಲವನ್ನು ಪ್ರತಿನಿದಿಸುತ್ತದೆಂಬ ನಂಬಿಕೆ ಇದೆ. ಹಾವು ದುಷ್ಟ ಮತ್ತು ರಾಕ್ಷಸ ಸ್ವಭಾವ ಸೂಚಿಸುತ್ತದೆ. ಶಿವ ಹಾವಿನ ದುಷ್ಟ ಶಕ್ತಿಯನ್ನು ನಿಯಂತ್ರಿಸುತ್ತಾನೆ.ವಾಸುಕಿ ಶಿವನಿಗೆ ಶರಣಾಗಿ ಶಿವನ ಆಜ್ಞೆ ಪಾಲಿಸುವುದು ಪರಿವರ್ತನೆ. ಶಿವನ ಗಂಟಲಿನಲ್ಲಿದ್ದ ವಿಷವನ್ನು ವಾಸುಕಿ ಹೀರಿ  ಕೊಂಡಿತೆಂಬ ಉಲ್ಲೇಖವಿದೆ.


ಶೇಷ ನಾಗ ಎಲ್ಲಾ ಗ್ರಹಗಳು ಮತ್ತು ಬ್ರಹ್ಮಾ0ಡವನ್ನು ಹಿಡಿದಿಟ್ಟುಕೊಂಡಿದ್ದಾನೆಂದು ಹೇಳಲಾಗಿದೆ. ಮಹಾ ವಿಷ್ಣು ಆದಿಶೇಷನ ಮೇಲೆ ಪವಡಿಸಿದ್ದಾನೆ. ಶೇಷ ನಾಗ ಸರ್ಪಗಳ ರಾಜ. ಕಾಳ ಸ್ವರೂಪ ಶೇಷ ನಾಗ ಮತ್ತು ಲಕ್ಷ್ಮೀ ದೇವಿಯ ಜೊತೆ ಯೋಗ ನಿದ್ರೆಯ ಭಂಗಿಯಲ್ಲಿ ವಿಷ್ಣು ಪವಡಿಸಿರುತ್ತಾನೆ. ಹೀಗಾಗಿ ಅನಂತ ಶಯನ ಎನ್ನುವರು. ಸಾವಿರ ತಲೆಯ ವಿಷಪೂರಿತ ಹಾವಿನ ಮೇಲೆ ವಿಶ್ರಾಂತಿ ಮಾಡಲು ವಿಷ್ಣುವಿಗೆ ಮಾತ್ರ ಸಾಧ್ಯ. ಶೇಷ ನಾಗನನ್ನು ಆನಂದ ಎನ್ನುವರು. ಆನಂದ ಎಂದರೆ ಅಂತ್ಯವಿಲ್ಲದವನು. ಪ್ರಳಯವಾದರೂ ಶೇಷನಿಗೆ ಅಂತ್ಯವಿಲ್ಲ. ಅವನು ಅಮರ. ಅವನು ಬ್ರಹ್ಮಾ0ಡದ ತಳಹದಿ.


ಹಿಂದು ಧರ್ಮ ಸತ್ಯದ ನೆಲೆಗಟ್ಟಿನಲ್ಲಿದೆ. ನಾಗನನ್ನು ಸತ್ಯ ದೇವತೆ ಎನ್ನುವರು. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ ಪಂಚಮಿಯಂದು ನಾಗರ ಪಂಚಮಿ ಆಚರಣೆ. ಸಾಮಾನ್ಯವಾಗಿ ಜುಲಾಯಿ ಅಥವಾ ಅಗೋಸ್ಟ್ ತಿಂಗಳಲ್ಲಿ ನಾಗರ ಪಂಚಮಿ ಬರುತ್ತದೆ. ಈ ಅವಧಿಯಲ್ಲಿ ಮಳೆ ಹೆಚ್ಚಾಗಿ ಬಿಲದಲ್ಲಿರುವ, ಹುತ್ತದಲ್ಲಿರುವ ಹಾವುಗಳ ಓಡಾಟ ಜಾಸ್ತಿ ಇರುತ್ತದೆ.ಈ ಭಯದಿಂದ ಪಂಚಮಿಯಂದು ನಾಗನಿಗೆ ಹಾಲು, ಎಳ ನೀರಿನ ಅಭಿಷೇಕ ಮಾಡಿ ಸಂತೃಪ್ತಿ ಪಡಿಸುವ ಸಂಪ್ರದಾಯವಿದೆ.


ನಾಗರ ಪಂಚಮಿಯಂದು ಮಳೆಯಿದ್ದರೆ ಒಳ್ಳೆಯ ಮಳೆಗಾಲ ಎಂಬ ನಂಬಿಕೆ ಇದೆ. ಈ ದಿನ ಭೂಮಿಯ ಮಣ್ಣನ್ನು ಅಗೆಯುವುದಿಲ್ಲ.ನಾಗರ ಪಂಚಮಿ ನಂತರ ಸಾಲು ಸಾಲು ಹಬ್ಬಗಳು ಬರುತ್ತವೆ. ನಾಗರ ಪಂಚಾಮಿ ಬಂದ ದಿನವೇ ಉಳಿದ ಹಬ್ಬಗಳು ಬರುತ್ತವೆ. 2020 ರಲ್ಲಿ ನಾಗರ ಪಂಚಮಿ ಶನಿವಾರ ಬರುವುದರಿಂದ ಎಲ್ಲಾ ಹಬ್ಬಗಳು ಶನಿವಾರವೇ ಬರುತ್ತದೆ.


ಶ್ರೀ ಕೃಷ್ಣ ಕಾಳಿಯ ಮರ್ಧನ ಮಾಡಿ ಜನರನ್ನು ರಕ್ಷಿಸಿದನು. ಯಮುನಾ ನದಿ ತೀರದಲ್ಲಿ ಆಡುತ್ತಿದ್ದ ಬಾಲ ಕೃಷ್ಣನ ಚೆಂಡು ನದಿಗೆ ಬಿದ್ದಿತು. ಅದನ್ನು ಎತ್ತಿಕೊಳ್ಳಲು ಹೋಗಿ ನದಿಗೆ ಜಾರಿದ ಕೃಷ್ಣನ ಮೇಲೆ ಆಕ್ರಮಣ ಮಾಡಿದ ಕಾಳಿಯನ ಮರ್ಧಿಸಿ  ಶರಣಾಗುವಂತೆ ಮಾಡಿದ ಶ್ರೀ ಕೃಷ್ಣನನನ್ನು ಕೊಲ್ಲಬೇಡವೆಂದು ಬೇಡಿದನು.ಕಾಳಿಯನಿಗೆ ಬುದ್ಧಿ ಹೇಳಿ ಜನರಿಗೆ ತೊಂದರೆ ಕೊಡ ಬೇಡವೆಂದು ಬಿಟ್ಟನೆಂಬ ಉಲ್ಲೇಖವಿದೆ. ಆ ದಿನ ಶುಕ್ಲ ಪಕ್ಷದ ಪಂಚಮಿಯ ದಿನ. ಭಯಾನಕ ಸರ್ಪವನ್ನು ಗೆದ್ದ ಸಂತೋಷ ನೆನಪಿಸಿಕೊಳ್ಳಲು ನಾಗರ ಪಂಚಮಿ ಆಚರಿಸುತ್ತಾರೆಂಬ ಪ್ರತೀತಿ ಇದೆ.


ಋಷಿ ಕಶ್ಯಪ ಮಹಾ ಮುನಿಗೆ ಹದಿಮೂರು ಪತ್ನಿಯರು. ಅದರಲ್ಲಿ ಕದ್ರು ಮತ್ತು ವಿನುತಾ ಕೂಡ ಇಬ್ಬರು. ಇವರಿಬ್ಬರ ಸೇವೆಯಿಂದ ಪುನೀತನಾದ ಕಶ್ಯಪರ ವರದಿಂದ ಮಕ್ಕಳನ್ನು ಪಡೆದರು ಕದ್ರು ಮತ್ತು ವಿನುತಾ. ಒಂದು ದಿನ ಮೋಸದ ಪಂಥದಲ್ಲಿ ಕುದ್ರು ವಿನುತಾಳನ್ನು ಚರಣ ದಾಸಿ ಮಾಡಿಕೊಂಡಳು. ಇದಕ್ಕೆ ತನ್ನ ಮಕ್ಕಳು ಸರ್ಪಗಳ ಸಹಾಯ ಕೇಳುತ್ತಾಳೆ. ಅವರು ಒಪ್ಪದಾಗ ಅವರಿಂದ ಬಲವಂತವಾಗಿ ವಚನ ಪಡೆಯುತ್ತಾಳೆ. ವಿನುತಾ ಮತ್ತು ಅವಳ ಮಗನಿಗೆ ಶಿಕ್ಷೆ ಕೊಡುವುದು ದುರುದ್ದೇಶವಾಗಿರುತ್ತದೆ.


ಇದು ವಿನುತಳ ಮಗ ಗರುಡನಿಗೆ ತಿಳಿಯುತ್ತದೆ.ಕದ್ರು ತಾಯಿ ಸಮಾನಳಾದ್ದರಿಂದ ಅವಳಿಗೆ ಏನು ಮಾಡಲಾಗದೆ ಸರ್ಪಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ. ದ್ವೇಷದಿಂದ ಸಹಸ್ರ, ಸಹಸ್ರ ಸರ್ಪಗಳನ್ನು ಕುಕ್ಕಿ ಕುಕ್ಕಿ ಮುಕ್ಕ ತೊಡಗುತ್ತಾನೆ. ಗರುಡನ ಪ್ರಾಣ ಭಯದಿಂದ ಶೇಷ ಪಾತಾಳ ಸೇರುತ್ತಾನೆ. ಅನಂತ ವೈಕುಂಠದಲ್ಲಿ ಹರಿಗೆ ತಲ್ಪವಾಗುತ್ತಾನೆ.ನಾಗಗಳು ಶಿವನ ಕೊರಳು, ಕೈಕಾಲು ಸುತ್ತಿಕೊಂಡು ಆಶ್ರಯ ಪಡೆಯುತ್ತವೆ. ಕಾಳಿಯ ನಂದ ಗೋಕುಲದ ಯಮುನೆಯಲ್ಲಿ ಅಡಗಿಕೊಳ್ಳುತ್ತದೆ. ಶಂಖಪಾಲ, ಭೂಧರ, ಅನಘ ಮತ್ತು ಇತರೆ ಸರ್ಪಗಳು ಅಡಗಿಕೊಳ್ಳುತ್ತವೆ. ವಾಸುಕಿ ಮಹಾ ಸರ್ಪ ಗರುಡನ ಭಯದಿಂದ ಕರ್ನಾಟಕದ ತುಳುನಾಡನ್ನು ಸೇರಿಕೊಳ್ಳುತ್ತದೆ.


ಕರಾವಳಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಸರ್ಪವನ್ನು ಭಯ, ಭಕ್ತಿಯಿಂದ ನಿತ್ಯ ಆರಾಧಿಸುತ್ತಿದ್ದಾರೆ. ಇದಕ್ಕೆ ಕಾರಣವಿದೆ. ನಾಗರ ಕುಲ ತುಳುನಾಡಿನ ಉದ್ದಗಲದಲ್ಲಿದೆ. ನಾಗ ಬನ ನಿರ್ಮಿಸಿ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡುವ ಸಂಪ್ರದಾಯವಿದೆ. ನಾಗನ ನಡೆಯಲ್ಲಿ ಮನೆ ಸಹಿತ ಯಾವ ಕಟ್ಟಡ ನಿರ್ಮಾಣ ಮಾಡುವುದಿಲ್ಲ. ಕೃಷಿ ಕಾಯಕದ  ರೈತರು ಭೂಮಿಯ ಕೆಲಸದಲ್ಲಿ ತೊಡಗಿರುವಾಗ, ಮನೆ ನಿವೇಶನ, ಕಟ್ಟಡ ನಿವೇಶನಕ್ಕೆ ಭೂಮಿ ಅಗೆಯುವಾಗ ತಿಳಿದು, ತಿಳಿಯದೆ ಮಾಡುವ ತಪ್ಪುಗಳಿಗೆ ಕ್ಷಮೆ ಕೊಡಲು ನಾಗನಿಗೆ ಪೂಜೆ ಸಲ್ಲಿಸುತ್ತಾರೆ.


ತುಳುನಾಡಿನ ಸಹ್ಯಾದ್ರಿ ಮಡಿಲಿನ ಧಾರಾ ನದಿಯ ಪಕ್ಕದಲ್ಲಿ ಇರುವ ಬಿಲದ್ವಾರ ಗುಹೆಯಲ್ಲಿ ವಾಸುಕಿ ಅಡಗಿಕೊಳ್ಳುತ್ತದೆ. ಇದನ್ನು ತಿಳಿದ ಗರುಡ ವಾಸುಕಿಯೊಂದಿದೆ ಘೋರ ಯುದ್ಧ ಮಾಡುತ್ತಾನೆ. ಮಕ್ಕಳ ನಡುವೆ ಆಗುತ್ತಿರುವ ಯುದ್ಧ  ತಿಳಿದು ಅಪ್ಪ ಕಶ್ಯಪರು ಬರುತ್ತಾರೆ. ಯುದ್ಧ ಸಮಾಪ್ತಿ ಮಾಡಲು ಆದೇಶ ನೀಡುತ್ತಾರೆ. ಮಹಾ ಶಿವ ಭಕ್ತ ವಾಸುಕಿಯಿಂದ ಲೋಕ ಕಲ್ಯಾಣ ಕೆಲಸ ನಡೆಯಬೇಕಿರುವುದನ್ನು ಗರುಡನಿಗೆ ಹೇಳುತ್ತಾರೆ. ಗರುಡ ತನ್ನ ಹಸಿವು ನೀಗಿಸಲು ಕೇಳಿಕೊಳ್ಳುತ್ತಾನೆ. ಮನಿಲಾ ದ್ವೀಪಕ್ಕೆ ಹೋಗಿ ಅಲ್ಲಿರುವ ದುಷ್ಟ ಬೇಡರು ಮತ್ತು ಹಾವುಗಳನ್ನು ತಿನ್ನಲು ಕಶ್ಯಪ ಸೂಚಿಸುತ್ತಾರೆ.


ಗರುಡನ ಭಯದಿಂದ ಹೇಗೆ ಮುಕ್ತಿ ಹೊಂದಲಿ ಎಂದು ಕಶ್ಯಪರನ್ನು ವಾಸುಕಿ ಕೇಳಿಕೊಳ್ಳುತ್ತಾನೆ. ಶಿವನನ್ನು ಕುರಿತು ತಪಸ್ಸು ಮಾಡಲು ಹೇಳುತ್ತಾನೆ. ಶಿವನ ತಪಸ್ಸಿನಿಂದ ಶಿವನನ್ನು ಒಲಿಸಿಕೊಳ್ಳುತ್ತಾನೆ. ವಾಸುಕಿ ಭಕ್ತಿ ಮೆಚ್ಚಿ ಶಿವ ವಾಸುಕಿಗೆ ಅಭಯ ನೀಡುತ್ತಾನೆ. ಹೆದರಬೇಡ, ಮುಂದಿನ ಕಲ್ಪದಲ್ಲಿ ಸರ್ಪ ಕುಲದ ರಕ್ಷಣೆಗಾಗಿ ಸುಬ್ರಮಣ್ಯ ಸ್ವಾಮಿಯ ನನ್ನ ಮಗನಾಗಿ ಜನಿಸುತ್ತೀಯ. ಆ ದಿನ ಸನ್ನಿಹಿತ ಆಗುವವರೆಗೆ ಅಲ್ಲಿಯೇ ಇದ್ದು ತಪಸ್ಸು ಮಾಡು ಎನ್ನುತ್ತಾನೆ. ಅನೇಕ ವರ್ಷಗಳ ಧೀರ್ಘ ತಪಪಸ್ಸಿನ ಫಲವಾಗಿ ಸುಬ್ರಮಣ್ಯ ಸ್ವಾಮಿ ತಾರಕಾಸುರನನ್ನು ಕೊಂದು ತನ್ನ ರಕ್ತ ಸಿಕ್ತ ಆಯುಧವನ್ನು ಧಾರಾ ನದಿಯ ನೀರಿನಲ್ಲಿ ತೊಳೆಯುತ್ತಾನೆ. ಅಂದಿನಿಂದ ಆ ನದಿ ಕುಮಾರಧಾರ ಎನ್ನುವ ನಾಮಾಧೇಯದಿಂದ ಕರೆಯಲ್ಪಡುತ್ತದೆ.


ಇಂದ್ರ ತನ್ನ ಮಗಳಾದ ದೇವಸೇನೆಯೊಂದಿಗೆ ಬಂದು ವಿವಾಹವಾಗಲು ಕೋರಿಕೆ ಇಡುತ್ತಾನೆ. ಷಣ್ಮುಖನ ಒಪ್ಪಿಗೆ ಪಡೆದು ಸಕಲ ದೇವರುಗಳ ಸಮಕ್ಷಮದಲ್ಲಿ ಕುಮಾರಧಾರ ತಟದಲ್ಲಿ ಚಂಪಾ ಷಷ್ಠಿಯ ದಿನ ಮದುವೆ ನಡೆಯುತ್ತದೆ. ಮುಂದೆ ವಾಸುಕಿ ಇಚ್ಛೆಯಂತೆ ದೇವಸೇನೆ ಮತ್ತು ವಾಸುಕಿಯ ಜೊತೆಯಲ್ಲಿ ಕುಕ್ಕೆಯಲ್ಲಿ ನೆಲೆಸಲು ಸುಬ್ರಮಣ್ಯ ಇಚ್ಛಿಸಿದಾಗ ವಿಶ್ವಕರ್ಮ ಮೂರ್ತಿ ಮಾಡಿ ಕೊಡುತ್ತಾನೆ. ಬ್ರಹ್ಮ ಅದನ್ನು ಪ್ರತಿಷ್ಠಾಪಿಸುತ್ತಾನೆ.


ಸುಬ್ರಮಣ್ಯ ದೇವರನ್ನು ಧರೆಗೆ ಇಳಿಸಿದ ವಾಸುಕಿಯನ್ನು ತುಳುನಾಡಿನ ಮನೆ ಮನೆಗಳಲ್ಲಿ ನಾಗ ಬ್ರಹ್ಮ ಅನ್ನುವ ಹೆಸರಲ್ಲಿ ಪೂಜಿಸಲಿ ಎಂದು ಸಕಲ ದೇವರುಗಳು ವಾಸುಕಿಯನ್ನು ಹರಸುತ್ತಾರೆ. ಸುಬ್ರಮಣ್ಯ ಕುಕ್ಕೆಯಲ್ಲಿ ನೆಲೆಸಲು ಕಾರಣನಾದ ಗರುಡ ಬರದೆ ಕುಕ್ಕೆ ಸುಬ್ರಮಣ್ಯದಲ್ಲಿ ರಥ ಎಳೆಯುವುದಿಲ್ಲ. ನಾಡಿನ ಸಮಸ್ತ ಜನರಿಗೆ ನಾಗರ ಪಂಚಮಿಯ ಶುಭಾಶಯಗಳು. ನಾಗ ಬ್ರಹ್ಮ ನಿಮ್ಮ ಇಷ್ಟಾರ್ಥವನ್ನು ನೆರವೇರಿಸಲಿ. ಬರಹ: ಅಶೋಕ್ ಕುಮಾರ್ ಶೆಟ್ಟಿ

Pages