ರಾಷ್ಟ್ರಪಿತ ಬಾಪೂಜೀಯ ತ್ಯಾಗ, ಬಲಿದಾನ, ಸಂದೇಶವನ್ನು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು : ಅಶೋಕ್ ಕುಮಾರ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ರಾಷ್ಟ್ರಪಿತ ಬಾಪೂಜೀಯ ತ್ಯಾಗ, ಬಲಿದಾನ, ಸಂದೇಶವನ್ನು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು : ಅಶೋಕ್ ಕುಮಾರ್ ಶೆಟ್ಟಿ

Share This

ಮಂಗಳೂರು: ದೇಶವೊಂದು ಪರಕೀಯರ ದಾಸ್ಯದಲ್ಲಿದ್ದು, ತಮ್ಮ ದೇಶದಲ್ಲಿ ತಮಗೆ ಸ್ವಾತಂತ್ರ್ಯವಿಲ್ಲದ ಜೀವನ, ಅನುಭವಿಸಲಾಗದ ಮಾನವೀಯ ಹಕ್ಕುಗಳು, ವಸಾಹತುಶಾಹಿ ಧೋರಣೆಯ ಆಡಳಿತ, ತಾನು ಹುಟ್ಟಿದ ತಾಯಿನಾಡಿನಲ್ಲಿ ತಾನು ನಿರ್ಬಂಧಿತನಾಗಿ ಬದುಕುವುದು ಅದೆಂತಹ ನೋವು, ಯಾತನೆ ಎಂಬುದು ಆಗ ಅನುಭವಿಸಿದವರಿಗೆ ಗೊತ್ತು. ನಮ್ಮ ಹಿರಿಯರ ಪರಾವಲಂಬನೆಯ ಬದುಕು ನಿಜಕ್ಕೂ ಅವಮಾನಕಾರಿಯಾಗಿತ್ತು. ತಮ್ಮ ಸ್ವಂತಿಕೆಯನ್ನು ಮರೆತು ಯುರೋಪಿಯನ್ನರ, ಅದರಲ್ಲೂ ಆಂಗ್ಲರ ಅಸಹ್ಯ, ಅಸಹನೀಯ, ಅಮಾನವೀಯ ದೌರ್ಜನ್ಯ, ದಬ್ಬಾಳಿಕೆಯಲ್ಲಿ ನಮ್ಮ ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರು ಬದುಕಿದ ಪರಿ ಮರೆಯುವದು ಹೇಗೆ ಹೇಳಿ.

ಮನುಷ್ಯ ಸ್ವಾವಲಂಭಿಯಲ್ಲ. ತನ್ನ ಜೀವನ ಕಟ್ಟಿಕೊಳ್ಳಲು ಅವಲಂಬಿತನಾಗಲೇ ಬೇಕು. ಆದರೆ ಆವಲಂಬನೆ ದುರುಪಯೋಗವಾಗಬಾರದು. ಗ್ರೀಕರು, ಪರ್ಷಿಯನ್ನರು, ಅರಬ್ಬರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದರು. ಸಂಪತ್ತಿನ ಲೂಟಿಗಾಗಿ ಘೋರಿ ಮತ್ತು ಘಜನಿ ಮಹಮ್ಮದ್ ಆಕ್ರಮಣ ಮಾಡಿದರು. ಮುಂದೆ ಡಚ್ಚರು, ಪೋರ್ಚುಗೀಸರು, ಫ್ರೆಂಚರು, ಇಂಗ್ಲೀಷರು ಬಂದರು. ವ್ಯಾಪಾರದ ಮೂಲಕ ಲಾಭ ಮಾಡುವ ಉದ್ದೇಶ ಇವರಿಗಿತ್ತು. ಲಾಭ ಹೆಚ್ಚಾದಂತೆ ಆಡಳಿತ, ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಯಿತು. ಡಚ್ಚರು ಮತ್ತು ಫ್ರೆಂಚರು ತಮ್ಮ ಬೇಳೆ ಬೇಯಿಸಿಕೊಂಡು ಹೋದರು. ಆದರೆ ಇಂಗ್ಲೀಷರು ವ್ಯಾಪಾರದಿಂದ ಆಡಳಿತ, ಆಡಳಿತದಿಂದ ರಾಜಕೀಯ ಹಿಡಿತ ಸಾಧಿಸಿ ಗಟ್ಟಿಯಾಗಿ ನೆಲೆಯೂರಿದರು.

ಬಿಳಿಯರು ಒಂದೆಡೆ ಸಂಪತ್ತನ್ನು ಲೂಟಿ ಮಾಡಿದರು. ಇನ್ನೊಂದೆಡೆ ಭಾರತೀಯ ರಾಜರು ಮತ್ತು ದೇಶಿಯ ಸಂಸ್ಥಾನಗಳ ದೌರ್ಬಲ್ಯವನ್ನು ಸರಿಯಾಗಿ ಬಳಸಿಕೊಂಡರು. ಭಾರತೀಯರೊಳಗೆ ಒಡೆದು ಆಳುವ ನೀತಿ ಅನುಸರಿಸಿದರು. ಆಡಳಿತ ಸುಧಾರಣೆ ಹೆಸರಲ್ಲಿ ಆಡಳಿತದ ನಿಯಂತ್ರಣ ಸಾಧಿಸಿದರು. ಆರ್ಥಿಕ ಸುಧಾರಣೆ ನೆಪದಲ್ಲಿ ದೇಶದ ಗುಡಿ ಮತ್ತು ಸಣ್ಣ ಕೈಗಾರಿಕೆಗಳನ್ನು ಮುಚ್ಚುವಂತೆ ಮಾಡಿದರು. ಜನರು ನಿರುದ್ಯೋಗಿಗಳಾದರು. ಇಂಗ್ಲೆಂಡ್ ಸಿದ್ಧ ವಸ್ತುಗಳು ಭಾರತದ ಮಾರುಕಟ್ಟೆಗೆ ಬಂದಿತು. ನಮ್ಮ ಕಚ್ಚಾವಸ್ತುಗಳು ಇಂಗ್ಲೆಂಡ್ ಗೆ ಸಾಗಿಸಲ್ಪಟ್ಟಿತು. ಭಾರತದ ಸಂಪತ್ತನ್ನು ಸುಲಭವಾಗಿ ಸಾಗಿಸಿದರು. ಶಿಕ್ಷಣದಲ್ಲಿ ಸುಧಾರಣೆ ತರುವ ನೆಪದಲ್ಲಿ ಕ್ರೈಸ್ತ ಮಿಷಿನರಿ ಚಟುವಟಿಕೆ ಹೆಚ್ಚಿತು. ಮೆಕಾಲೆ ವರದಿ ಜಾರಿಗೆ ತಂದು ಇಂಗ್ಲೀಷ್ ಶಿಕ್ಷಣದ ಮೂಲಕ ಪಾಶ್ಚಾತ್ಯ ಸಂಸ್ಕೃತಿ, ವಿಚಾರಧಾರೆಗಳನ್ನು ಭಾರತೀಯರಿಗೆ ಹೇಳಿ ಮತೀಯ ವೈಷಮ್ಯ ಹುಟ್ಟು ಹಾಕಿದರು. ಪತ್ರಿಕೆಗಳ ಮೇಲೆ ನಿರ್ಬಂಧ ಹೇರಿ ಆಂಗ್ಲರ ಆಳ್ವಿಕೆ ಬಗ್ಗೆ ಬೆಳಕು ಚೆಲ್ಲುವ ಆಂಗ್ಲ ಪತ್ರಿಕೆಗಳ ಪ್ರಕಟಣೆಗೆ ಅವಕಾಶ ನೀಡಿದರು. ಸೇನೆಯ ಉನ್ನತ ಹುದ್ದೆಗಳು ಇಂಗ್ಲೀಷರಿಗೆ ಮೀಸಲಿಟ್ಟರು. ಅವರ ಆದೇಶ ಪಾಲಿಸುವ ಸಿಪಾಯಿಗಳು ಭಾರತೀಯರಾಗಿದ್ದರು.

ನಮ್ಮ ದೇಶದಲ್ಲಿ ನಮ್ಮ ಪೂರ್ವಿಕರು ಅಸಹಾಯಕರಾಗಿ ಬದುಕಿದ್ದು ನೋಡಿದರೆ ಪರಿಸ್ಥಿತಿ ಭಾರತೀಯರ ಕೈ ಮೀರಿ ಹೋಗಿದ್ದಂತೂ ಸತ್ಯ. ಒತ್ತಡ ಅಥವಾ ಹೇರಿಕೆಯ ಜೀವನಕ್ಕೆ ಇತಿ ಮಿತಿ ಇದೆ. ಪರಕೀಯತೆಯ ಜೀವನ ತನ್ನತನವನ್ನು ಕೆಳೆದು ಕೊಂಡಿದ್ದು ಭಾರತೀಯರಿಗೆ ಮನವರಿಕೆಯಾಯಿತು. ಬ್ರಿಟಿಷರ ವಿರುದ್ಧ ಧ್ವನಿಯೆತ್ತುವ, ಜಾಗೃತಿ ಮೂಡಿಸುವ, ಹೋರಾಡುವ ಮನೋ ಭೂಮಿಕೆ ಸೃಷ್ಟಿಯಾಯಿತು. ಇದೇ ಸ್ವಾತಂತ್ರ್ಯ ಹೋರಾಟ.ಭಾರತೀಯರನ್ನು ಒಗ್ಗೂಡಿಸುವ, ಬ್ರಿಟಿಷ್ ಆಳ್ವಿಕೆಯನ್ನು ಪ್ರತಿಭಟಿಸುವ ನಾಯಕರು ಮುನ್ನೆಲೆಗೆ ಬಂದರು. ಮಂದಗಾಮಿಗಳು ತೀವ್ರವಾದಿಗಳು, ಗಾಂಧೀಜಿ ಮತ್ತು ಕ್ರಾಂತಿಕಾರಿಗಳೆನ್ನುವ ನಾಲ್ಕು ಸ್ತರಗಳ ನಾಯಕರು ಬಿಳಿಯರ ವಿರುದ್ಧ ಹೋರಾಡಿದರು.ಸ್ವಾತಂತ್ರವನ್ನು ಹಿಂದೆ ಪಡೆಯುವ ಹೋರಾಟ ದಲ್ಲಿ ನಾಯಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ದಾದಾಬಾಯಿ ನವರೋಜಿ, ಸುರೇಂದ್ರ ನಾಥ್ ಬ್ಯಾನರ್ಜಿ, ಗೋಪಾಲ ಕೃಷ್ಣ ಗೋಖಲೆ, ಎಮ್ ಜಿ ರಾನಡೆ, ಬಾಲ ಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ವಿ ಡಿ ಸಾವರ್ಕರ್, ಜವಾಹರ್ ಲಾಲ್ ನೆಹರು, ಮೋತಿಲಾಲ್ ನೆಹರು, ಅಂಬೇಡ್ಕರ್, ಸುಭಾಶ್ಚಂದ್ರ ಬೋಸ್ ಇನ್ನೂ ಅನೇಕರ ಹೆಸರನ್ನು ಹೇಳಬಹುದು.

ಆದರೆ ಗಾಂಧಿ ಯುಗದ ಪ್ರಭಾವ ಹೇಳಲೇ ಬೇಕು. ಗುಲಾಮಗಿರಿ, ವರ್ಣಭೇದ ನೀತಿಯ ಪರಿಚಯ ಗಾಂಧೀಜಿಗೆ ದಕ್ಷಿಣ ಆಫ್ರಿಕಾದಲ್ಲಿ ಆಗಿತ್ತು. ಅಲ್ಲಿಂದ ಹಿಂದಿರುಗಿದವರು ಬಿಳಿಯರ ದಬ್ಬಾಳಿಕೆ ವಿರುದ್ಧ ಅಹಿಂಸೆ, ಸತ್ಯಾಗ್ರಹ ಮೂಲಕ ಭಾರತೀಯರನ್ನು ಒಗ್ಗೂಡಿಸಿ ಆಂಗ್ಲರ ವಿರುದ್ಧ ಶಾಂತಿಯುತ ಸಮರವನ್ನು ಸಾರಿದರು. ವಿಭಿನ್ನ ಚಿಂತನೆ ಇದ್ದರೂ ಎಲ್ಲಾ ನಾಯಕರ ಉದ್ದೇಶ ಒಂದೇ ಆಗಿತ್ತು. ಅದು ಬ್ರಿಟಿಷರನ್ನು ಭಾರತದಿಂದ ಓಡಿಸುವುದೇ ಆಗಿತ್ತು.ಗಾಂಧೀಜಿಯ ನಾಯಕತ್ವ ಇಂಗ್ಲೀಷರನ್ನು ಕಂಗೆಡಿಸಿದ್ದಂತೂ ಸತ್ಯ. ಖಿಲಾಫತ್ ಚಳುವಳಿ, ರೌಲೆಟ್ ಕಾಯಿದೆ ವಿರೋಧ, ಉಪ್ಪಿನ ಸತ್ಯಾಗ್ರಹ, ಕಾನೂನು ಭಂಗ ಚಳುವಳಿ, ಅಸಹಕಾರ ಚಳುವಳಿ, ವಿದೇಶಿ ವಸ್ತು ಬಹಿಷ್ಕಾರ,ಚಲೇಜಾವ್ ಚಳುವಳಿ ಮೂಲಕ ಆಂಗ್ಲರ ನಿದ್ದೆಗೆಡಿಸಿದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.ಗಾಂಧಿ ಭಾರತದ ಸಮಸ್ಯೆಗಳ ಮೂಲ ಕಾರಣಗಳನ್ನು ಗುರುತಿಸಿ ಪರಿಹರಿಸಲು  ಪ್ರಯತ್ನಿಸಿದರು. ಅದನ್ನು ಪರಿಹರಿಸಲು ಪಾತಕಿಗಳಿಂದ ದೂರವಿರಬೇಕೆಂದು ಹೇಳಿದರು. ಸ್ವಾತಂತ್ರ್ಯ ತಂದು ಕೊಟ್ಟ ಕೀರ್ತಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲುವುದಾದರೂ ಅವರಲ್ಲಿ ಅಗ್ರಣಿ ನಮ್ಮ ರಾಷ್ಟ್ರ ಪಿತ, ನಮ್ಮ ಮಹಾತ್ಮ, ನಮ್ಮ ಪ್ರೀತಿಯ ಬಾಪೂಜೀಯವರು. ಅವರ ತ್ಯಾಗ, ಬಲಿದಾನ, ಜೀವನ ಸಂದೇಶವನ್ನು 75 ನೇ ಸ್ವಾತಂತ್ರ್ಯ ದಿನಾಚರಣೆಯಯಂದು ಪ್ರತಿಯೊಬ್ಬ ಭಾರತೀಯರು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಆಗಸ್ಟ್ 15 ನಾವೆಲ್ಲರೂ ಸಂಭ್ರಮಿಸುವ ರಾಷ್ಟ್ರೀಯ ದಿನ.ಆದರೆ ವರುಷ ಎಪ್ಪತ್ತೈದಾದರೂ ಸಮಸ್ಯೆಗಳು ಸವಾಲಾಗಿವೆ. ಕೋವಿಡ್ ಮಹಾ ಮಾರಿಯಿಂದ ಜನರ ಜೀವ ರಕ್ಷಣೆ, ಜನರಿಗೆ ಮೂಲ ಸೌಲಭ್ಯ ಒದಗಿಸಿ ಜೀವನ ರಕ್ಷಣೆ ಮಾಡುವುದು , ಗಡಿಯಲ್ಲಿ ಚೀನಾದ ಬೆದರಿಕೆ, ಪಾಕಿಸ್ತಾನದ ಕುತಂತ್ರ, ದೇಶದ ಒಳಗಿನ ದೇಶ ದ್ರೋಹಿಗಳು, ಇದೆಲ್ಲ ಎದುರಿಸುವ ಗುರುತರ ಜವಾಬ್ದಾರಿ ಸ್ಥಾಪಿತ ಸರ್ಕಾರದ ಮುಂದಿದೆ.

ಸ್ವಾತಂತ್ರ್ಯ ಪಡೆಯುವ ಸನ್ನಿವೇಶದಲ್ಲಿದ್ದ ಸಮಸ್ಯೆಗಳು ಈಗಲೂ ಇದೆ. ಅದಕ್ಕೆ ಗಾಂಧೀಜಿ ಹೇಳಿದ್ದ ಸಪ್ತ ಪಾತಕಗಳು ಕಾರಣ. ಅದು ತತ್ವ ರಹಿತ ರಾಜಕಾರಣ, ದುಡಿಮೆಯಿಲ್ಲದ ಸಂಪತ್ತು, ಆತ್ಮಸಾಕ್ಷಿಯಿಲ್ಲದ ಸಂತೋಷ, ಚಾರಿತ್ರ್ಯವಿಲ್ಲದ ಶಿಕ್ಷಣ, ನೀತಿಯಿಲ್ಲದ ವ್ಯಾಪಾರ, ಮಾನವೀಯತೆಯಿಲ್ಲದ ಜ್ಞಾನ, ತ್ಯಾಗವಿಲ್ಲದ ಪೂಜೆ ಕಾರಣವಾಗಿದೆ. ಇದನ್ನೆಲ್ಲಾ ಮೀರಿ ಬೆಳೆವ ನಾಯಕತ್ವ ಮತ್ತು ನಾಗರೀಕರು ಸಮಾಜದಲ್ಲಿ ಕಂಡು ಬಂದರೆ ಗಾಂಧೀಜಿ ಹೇಳಿದ್ದ ರಾಮ ರಾಜ್ಯ ಸ್ಥಾಪನೆ ಸಾಧ್ಯ. ಇದು ಸಾಧ್ಯವಾಗಲು ಇನ್ನೆಷ್ಟು ಸ್ಟಾತಂತ್ರ್ಯ ದಿನಾಚರಣೆ ಎದುರು ನೋಡಬೇಕೋ ಹೇಳಲಾಗದು. ಬರಹ: ಅಶೋಕ್ ಕುಮಾರ್ ಶೆಟ್ಟಿ

Pages