ಇದೊಂದು ಪತ್ರವನ್ನ ಯಡಿಯೂರಪ್ಪನವರಿಗೆ ತಲುಪಿಸಿ ಬಿಡಿ ಪ್ಲೀಸ್ : ವಸಂತ್ ಗಿಳಿಯಾರ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಇದೊಂದು ಪತ್ರವನ್ನ ಯಡಿಯೂರಪ್ಪನವರಿಗೆ ತಲುಪಿಸಿ ಬಿಡಿ ಪ್ಲೀಸ್ : ವಸಂತ್ ಗಿಳಿಯಾರ್

Share This

ಕುಂದಾಪುರ: ಇದನ್ನ ಯಡಿಯೂರಪ್ಪನವರಿಗೆ ಮತ್ತು ಪಕ್ಷದ ವರಿಷ್ಠರಿಗೆ ನೀವು ತಲುಪಿಸಬೇಕು. ಕಾರಣಕ್ಕಾಗಿಯೇ ಬರೆಯುತ್ತಿದ್ದೇನೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಒಬ್ಬ ಮತದಾರನಾಗಿ ಬರೆಯುತ್ತಿರುವ ಪತ್ರವಿದು.

ಯಡಿಯೂರಪ್ಪನವರೇ  ಕುಂದಾಪುರದಲ್ಲಿ ಹಾಲಾಡಿಯವರ ವಿರುದ್ಧ ಪ್ಲೇ ಕಾರ್ಡ್ ಹಿಡಿದಾಗ ನೀವೇ ಖುರ್ಚಿಯಿಂದ ಎದ್ದು ಬಂದು ಹಾಲಾಡಿ ಶ್ರೀನಿವಾಸ ಶೆಟ್ಟರು ನಮ್ಮ ಶಕ್ತಿ, ಅವರನ್ನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಅಬ್ಬರಿಸಿದಿರಿ. ಶೆಟ್ಟರಿಗೆ ಮೊದಲ ಸಲ ಬೆಂಗಳೂರಿಗೆ ಕರೆದು ಕೊನೆಯ ಹಂತದಲ್ಲಿ ಮಂತ್ರಿ ಪದವಿ ತಪ್ಪಿದಾಗ, ಶಾಸಕರ ಭವನದಲ್ಲಿ ಶೆಟ್ಟರ ಅಭಿಮಾನಿಗಳು ಜಮಾಯಿಸಿದಾಗ ಖುದ್ದು ನೀವೇ ಎದ್ದು ಬಂದಿರಿ, ಹಾಲಾಡಿ ಅಭಿಮಾನಿಗಳು ಆಕ್ರೋಶದಲ್ಲಿ ನಿಮಗೂ ಧಿಕ್ಕಾರ ಕೂಗಿದಾಗ ಹಾಲಾಡಿಯೇ ಹೊರಗೆ ಬಂದು ಅಬ್ಬರಿಸಿ ಬಿಟ್ಟಿದ್ದರು. ಅವರೊಂದಿಗೆ ಮಾತುಕತೆ ಮಾಡಿ ಹೊರ ಬಂದ ನೀವು ನಾಳೆಯೊಳಗೆ ಸಿಹಿ ಸುದ್ದಿ ಕೊಡುತ್ತೇವೆ ಎಂದಿರಿ.  ನಾಳೆ ಇಂದಿಗೂ ಬರಲಿಲ್ಲ, ನೀವು ಮರೆತಿರಿ, ಆದರೆ ನಾವು ಮರೆಯಲಿಲ್ಲ.


ನೀವು ಕಿಂಗ್ ಮೇಕರ್ ಸಾರ್...ಸದಾನಂದ ಗೌಡರನ್ನ ಮುಖ್ಯಮಂತ್ರಿ ಮಾಡಿದ್ದು ನೀವು, ಕೊನೆಗೆ ಅವರು ನಿಮ್ಮ ಮಾತು ಕೇಳದೆ ತಿರುಗಿ ಬಿದ್ದಾಗ ಹಟಕ್ಕೆ ಬಿದ್ದು ಜಗಧೀಶ್ ಶೆಟ್ಟರನ್ನ ತಂದು ಕೂರಿಸಿದಿರಿ, ಮೊನ್ನೆ ಬಸವರಾಜ ಬೊಮ್ಮಾಯಿಯೂ ನಿಮ್ಮ ಕೃಪೆಯಿಂದಲೇ ಮುಖ್ಯಮಂತ್ರಿಯಾದದ್ದು. ನಿಮ್ಮ ಸಂಪುಟದಲ್ಲಿ ಇದ್ದವರೆಲ್ಲಾ ಸುಭಗರ ಸ್ವಾಮಿ? ಒಮ್ಮೆಯೂ ಹಾಲಾಡಿಯವರನ್ನ ಮಂತ್ರಿಯಾಗಿಸಬೇಕು ಅಂತ ನಿಮಗೆ ಅನ್ನಿಸಲೇ ಇಲ್ಲವಾ? ಯಾಕೆ? ಹಾಲಾಡಿ ಬೇಕು ಎನ್ನುವುದಿಲ್ಲ, ಕೊಡದಿದ್ದರೆ ನಡೆಯೋತ್ತೆ ಎನ್ನುವ ನಿರ್ಲಕ್ಷ್ಯ ಅಲ್ಲವೇ?


ಅವತ್ತು ಹಾಲಾಡಿಗೆ ಅವಕಾಶ ತಪ್ಪಿಸಿದ್ದು ಕಲ್ಲಡ್ಕ ಪ್ರಭಾಕರ ಭಟ್ಟರು ಎಂಬ ಸುದ್ದಿ ಹೊರಬಿತ್ತಲ್ಲಾ? ಅದು ನೀವು ಹಾಲಾಡಿಯವರ ರೂಮಿನಿಂದ ಹೊರಗೆ ಬಂದಮೇಲೇ ಬಿದ್ದ ಸುದ್ದಿ..! ಅದರ ಮೂಲ ಯಾವುದು ಎಂಬುದನ್ನ ನಾನು ಬಲ್ಲೆ, ರಾಜಕಾರಣ ನನಗೆ ಬಹಳ ಸೊಗಸಾಗಿ ಅರ್ಥವಾಗುತ್ತದೆ. ಮಂತ್ರಿ ಮಂಡಲ ರಚನೆಯ ಹಿಂದಿನ ದಿವಸ ಹರತಾಳ ಹಾಲಪ್ಪ ಶಾಸಕರ ಭವನದ ಮುಂದೆ ವಾಕಿಂಗ್ ಮಾಡುತ್ತಿದ್ದರು. ಅವರನ್ನೇ ಕೇಳಿ ಬೇಕಿದ್ದರೆ, ಆಗ ಅವರ ಕೈ ತುಂಡಾಗಿತ್ತು, ಬಹಳ ಗಂಭೀರವಾಗಿ ಚರ್ಚಿಸುತ್ತಿದ್ದರು, ನನಗೆ ಅದೆಲ್ಲವೂ ನಂತರ ಅರ್ಥವಾಗಿತ್ತು. ನಿಮ್ಮ ವಿರುದ್ದ ಮತ್ತು ಹಾಲಪ್ಪ ವಿರುದ್ದ ಸಿಡಿದೆದ್ದಿದ್ದ ಬೇಳೂರು ಗೋಪಾಲ ಕೃಷ್ಣರು ಈಡಿಗ ಕೋಟಾದಡಿ ಮಂತ್ರಿಯಾಗಬೇಕಿತ್ತು. ಹಾಲಪ್ಪ ಗೆಳೆಯನ ಹೆಂಡತಿಯ ಸೆರಗೆಳೆದ ಆರೋಪ ಹೊತ್ತು ಕಳಂಕಿತರಾಗಿದ್ದರು. ಶತಾಯಗತಾಯ ಬೇಳೂರಿಗೆ ಸ್ಥಾನ ಕೊಡಕೂಡದು ಅದಕ್ಕೆ ಪರ್ಯಾಯವಾಗಿ ಬಿಲ್ಲವ ನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಕೊಡಬೇಕು ಎಂದು ಬಲವಾಗಿ ನಿಮ್ಮ ಕಿವಿ ಊದಿದ್ದು ಹರತಾಳು ಎಂಬುದನ್ನು ನಾನು ಬಲ್ಲೆ, ನಿಮಗೂ ಅದೇ ಬೇಕಿತ್ತು. ನಿಮ್ಮ ಕಾರಣದಿಂದಾಗಿಯೇ ಹಾಲಾಡಿಯವರಿಗೆ ಮಂತ್ರಿ ಸ್ಥಾನ ತಪ್ಪಿತ್ತು. ದೇವರ ಮುಂದೆ ನಿಂತು ಇದನ್ನು ನಿರಾಕರಿಸಬಲ್ಲಿರಾ?


ಮುಂದೆ ನೀವೇ ಹಾಲಾಡಿಯವರ ಮನೆಗೆ ಓಡೋಡಿ ಬಂದಿರಿ, ಆಗ ಶೋಭ ಕರಂದ್ಲಾಜೆ ಪರವಾಗಿ ಹಾಲಾಡಿ ಬೆಂಬಲ ಬೇಕಿತ್ತು. ರಾಜ್ಯದ ಪ್ರತೀ ನಾಯಕನೂ ನಿಮ್ಮ ಮನೆಗೇ ಬಂದರೆ ಅವತ್ತು ನೀವೇ ಹಾಲಾಡಿ ಮನೆಗೆ ಹೋಗಿ ವಿನಂತಿಸಿಕೊಂಡು ಬಿಟ್ಟಿರಿ, ಕೊಟ್ಟ ಮಾತು ತಪ್ಪಿಸದ ಹಾಲಾಡಿ ನೀವು ಹೇಳಿದಂತೆ ಕೆಲಸ ಮಾಡಿದರು, ದೊಡ್ಡ ಲೀಡ್ ಕೂಡ ತನ್ನ ಕ್ಷೇತ್ರದಲ್ಲಿ ಕೊಡಿಸಿದರು.  ಮೊನ್ನೆ ಏನೇನೋ ಕಸರತ್ತು ಮಾಡಿ ಸರ್ಕಾರ ಮಾಡಿದಾಗ ನೀವು ಹಾಲಾಡಿಯವರನ್ನ ನೆನಪಿಸಿಕೊಳ್ಳುತ್ತೀರಿ ಎಂದು ಭಾವಿಸಿದ್ದೆವು! ಆದರೆ ನೀವು ಮರೆತಿರಿ, ಎರಡನೆ ಸಲವೂ ಮತ್ತೆ ಅದೇ ನಿಲುವಿಗೆ ಅಂಟಿಕೊಂಡಿರಿ. ಯಡಿಯೂರಪ್ಪನವರೇ ನೀವು ಖಂಡಿತ ತಪ್ಪು ಮಾಡಿದ್ದೀರಿ. ನಿಮಗಿದನ್ನು ವಿವರಿಸಿ ಹೇಳುವವರು ಯಾರು? ನನಗೂ ಗೊತ್ತಿಲ್ಲ.


ಇನ್ನು ಬಾಜಪ ವರಿಷ್ಠರೆ ಗಮನಿಸಿ.. ಹಾಲಾಡಿ 1999 ರಲ್ಲಿ ಪ್ರತಾಪ ಶೆಟ್ಟರನ್ನ ಸೋಲಿಸದೇ ಇದ್ದಿದ್ದರೆ ಅವರು ಗೆದ್ದು ಮಂತ್ರಿಯಾಗಿರುತ್ತಿದ್ದರು.  ಆಗ ಇಡೀ ಉಡುಪಿ ಜಿಲ್ಲೆಯಲ್ಲಿ ಇದ್ದಿದ್ದೇ ಏಕೈಕ ಶಾಸಕ. ತಾನೂ ಗೆದ್ದು ಪಕ್ಷವನ್ನೂ ದೊಡ್ಡ ಎತ್ತರಕ್ಕೆ ಕೊಂಡೊಯ್ದ ಹಾಲಾಡಿಯವರು ನಿರ್ಮಲಾ ಸಿತಾರಾಮನ್ ರಾಜ್ಯಸಭೆಗೆ ಸ್ಪರ್ಧಿಸಿದಾಗ ತನ್ನ ಮತವನ್ನ ಮಾರಿಕೊಂಡಿದ್ದರೆ ಹಲವು ಕೋಟಿ ನಿರಾಯಸವಾಗಿ ಪಡೆಯಬಹುದಿತ್ತು. ಆಗ ಅವರು ಪಕ್ಷೇತರ ಶಾಸಕನಾಗಿದ್ದು, ಅಪವಾದವೂ ಬರುತ್ತಿರಲಿಲ್ಲ! ಲೇಹರ್ ಸಿಂಗ್ ನಿಮ್ಮ ಮನೆಗೇ ಬರುತ್ತೇನೆ ಎಂದಾಗ ಬರಗೊಡಲಿಲ್ಲ. ಆಗಲೂ ಬಾಜಪ ಪರವಾಗಿ ಕೆಲಸ ಮಾಡಿ ಎಲ್ಲಿಯೂ ಪಕ್ಷಕ್ಕೆ ಚ್ಯುತಿ ತರಲಿಲ್ಲ ಹಾಲಾಡಿ.


ನಿಮ್ಮ ಪಕ್ಷದಲ್ಲಿರುವ ಅತ್ಯಂತ ಪ್ರಾಮಾಣಿಕರಲ್ಲೇ ಪ್ರಾಮಾಣಿಕ ರಾಜಕಾರಣಿ ಎಂದರೆ ಹಾಲಾಡಿ, ಇಂತಹ ಸಚ್ಚಾರಿತ್ರ್ಯವಂತನಿಗೆ ಸಾರಿಯೂ ಗೌರವ ನೀಡದೇ ಇದ್ದರೆ ದೇವರೂ ನಿಮ್ಮನ್ನು ಕ್ಷಮಿಸುವುದಿಲ್ಲ. ಸಾರಿಯೂ ಹಾಲಾಡಿಗೆ ಅವಮಾನವಾದರೆ ಯಾರೂ ಪ್ರತಿಭಟಿಸುವುದಿಲ್ಲ, ಪಕ್ಷ ಬಿಡುವುದಿಲ್ಲ, ಟಯರ್ ಸುಡುವುದಿಲ್ಲ, ಗಲಾಟೆಯಾಗುವುದಿಲ್ಲ ಆದರೆ ಯಾರೆಲ್ಲ ಇದರ ಹಿಂದಿದ್ದೀರೋ ನಿಮ್ಮೆಲ್ಲರಿಗೂ ಹಾಲಾಡಿ ಅಭಿಮಾನಿಗಳ ಶಾಪ ತಾಕದೇ ಇರುವುದಿಲ್ಲ.  ಇನ್ನು ಬಾಕಿ ಉಳಿದ ಒಂದು ವರ್ಷ ಆರು ತಿಂಗಳ ಅವಧಿಯ ಮಂತ್ರಿ ಪದವಿ ಕೊಡದಿದ್ದರೆ ಹಾಲಾಡಿ ಏನು ಅಳುವುದಿಲ್ಲ, ಆದರೆ ಇಂಥಹ ಮನುಷ್ಯನಿಗೆ ಅವಕಾಶ ನೀಡುವ ಅವಕಾಶವಿದ್ದೂ ಅದನ್ನು ಕಳೆದುಕೊಂಡ ನಿಮ್ಮ ನಿಲುವುಗಳು ಮುಂದೊಂದು ದಿನ ಪಶ್ಚಾತಾಪಕ್ಕೆ ಕಾರಣವಾಗಲಿದೆ. ಇತಿಹಾಸದ ಪುಟದಲ್ಲಿ ಇದೊಂದು ಕಪ್ಪು ಚುಕ್ಕೆಯಾಗದಿದ್ದರೆ ಕೇಳಿ. ನಮ್ಮದೇನು ಆಗ್ರಹವಿಲ್ಲ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆ ಎಂದಾದರೆ ಏನೇನೂ ಅಭ್ಯಂತರವಿಲ್ಲ. ಸಾರಿ ಹಾಲಾಡಿಗೆ ಅವಕಾಶ ಕೊಟ್ಟರೆ ಕರಾವಳಿ ಮಾತ್ರವಲ್ಲ ರಾಜ್ಯದ ಕೋಟ್ಯಾಂತರ ಪ್ರಾಮಾಣಿಕ ಮನಸುಗಳು ನಿಮ್ಮನ್ನು ಮೆಚ್ಚಬಹುದು. ಆದಾಗದಿದ್ದರೆ ದೇವರೂ ಕ್ಷಮಿಸಲಾರ. ನಿಮ್ಮ ನಿರಂಕುಶ ಪ್ರಭುತ್ವಕ್ಕೆ ದೀಡ್ ಸಲಾಮ್!

Pages