BUNTS NEWS, ಪುತ್ತೂರು: ಕುಸಿದ ಮನೆಯಲ್ಲಿ ಪರೀಕ್ಷೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಲಿ? ಮನೆಯೇ ಇಲ್ಲದ ನಾನು ಓದುವುದಾದರೂ ಹೇಗೆ?" ಎಂದು ತನ್ನ ಅಳಲನ್ನು ಪುತ್ತೂರು ತಾಲೂಕಿನ ಬನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರುವ ಚಿಕ್ಕ ಮುಡ್ನೂರು ಗ್ರಾಮದ ಗೋಪಾಲ ಶೆಟ್ಟಿಯವರ ಮಗಳಾದ ಹತ್ತನೇ ತರಗತಿ ವಿದ್ಯಾರ್ಥಿನಿ ದೀಕ್ಷಾ ಹೇಳಿದ ಮಾತು ಪತ್ರಿಕೆಯಲ್ಲಿ ವರದಿಯಾಗಿತ್ತು.
ಈ ವರದಿಯನ್ನು ನೋಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಮಾಜಿ ಕೋಶಾಧಿಕಾರಿಗಳಾದ ಬಾಲಕೃಷ್ಣ ರೈ ಯವರ ಮೂಲಕ ಸಾಲೆತ್ತೂರು ಬಂಟರ ಸಂಘವನ್ನು ಸಂಪರ್ಕಿಸಿ ಗೋಪಾಲ ಶೆಟ್ಟಿಯವರ ಮನೆಗೆ ಹೋಗಿ ವಾಸ್ತವಾಂಶಗಳನ್ನು ಪರಿಶೀಲಿಸಿ ವರದಿ ನೀಡಲು ತಿಳಿಸಿದ್ದರು.
ಐಕಳ ಹರೀಶ್ ಶೆಟ್ಟಿಯವರ ನಿರ್ದೇಶನದಂತೆ ಪರಿಶೀಲನಾ ತಂಡವಾಗಿ ಸ್ಥಳಕ್ಕೆ ತೆರಳಿದ್ದ ಸಾಲೆತ್ತೂರು ಬಂಟರ ಸಂಘದ ಪದಾಧಿಕಾರಿಗಳು ಮಣ್ಣಿನ ಗೋಡೆ ಹಾಗೂ ಮಾಡಿಗೆ ಟರ್ಪಾಲು ಹಾಕಿರುವ ಬಿದಿರಿನ ಮಾಡಿನ ಶಿಥಿಲವಾದ ಪುಟ್ಟ ಮನೆಯ ಒಂದು ಬದಿ ಕುಸಿದು ಕುಟುಂಬವು ವಾಸ ಮಾಡಲು ಸಾಧ್ಯವೇ ಇಲ್ಲದೆ ನೆಲೆಯನ್ನು ಕಳೆದುಕೊಂಡಿರುವ ಬಗ್ಗೆ ಹಾಗೂ ಕುಟುಂಬದ ಯಜಮಾನ ಅಸೌಖ್ಯದಿಂದಿದ್ದು ತಾಯಿ ಬೀಡಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಕುಟುಂಬ ವನ್ನು ಹಾಗೂ ಮಕ್ಕಳ ವಿದ್ಯಾಭ್ಯಾಸ ದ ಖರ್ಚನ್ನು ನಿಭಾಯಿಸುತ್ತಿರುವ ಬಗ್ಗೆ ವರದಿ ಒಕ್ಕೂಟದ ಅಧ್ಯಕ್ಷರಿಗೆ ನೀಡಲಾಗಿತ್ತು.
ಈ ಬಗ್ಗೆ ತಕ್ಷಣ ಸ್ಪಂದಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ದೀಕ್ಷಾಳ ಮತ್ತು ಸಹೋದರನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಾಯ ಹಸ್ತ ನೀಡುವುದಾಗಿ ತಿಳಿಸಿರುವುದು ಮಾತ್ರವಲ್ಲದೆ ತಾತ್ಕಾಲಿಕ ಪರಿಹಾರ ಧನ ಸಹಾಯದ ಚೆಕ್ಕನ್ನು ಒಕ್ಕೂಟದ ಕಚೇರಿ ಕೊರೋನಾದ ಹಿನ್ನೆಲೆಯಲ್ಲಿ ಮುಚ್ಚಿದ್ದರೂ ಸಿಬ್ಬಂದಿಗಳನ್ನು ಕಳಿಸಿ ಧನಸಹಾಯದ ಚೆಕ್ಕನ್ನು ಸಿದ್ಧಮಾಡಿ ಸಂತ್ರಸ್ತರಿಗೆ ನೀಡುವರೆ ಕಳಿಸಿ ಕೊಟ್ಟಿರುತ್ತಾರೆ ಅದರಂತೆ ಸಾಲೆತ್ತೂರು ಬಂಟರ ಸಂಘದ ಅಧ್ಯಕ್ಷರಾದ ದೇವಪ್ಪ ಶೇಖ,ಪೀಲ್ಯಡ್ಕ ಇವರು ಗೋಪಾಲ ಶೆಟ್ಟಿಯವರ ಮನೆಗೆ ತೆರಳಿ ವಿತರಿಸಿದರು.
ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಾಜಿ ಕೋಶಾಧಿಕಾರಿಗಳಾದ ಶ್ರೀ ಬಾಲಕೃಷ್ಣ ರೈ ಕೊಲ್ಲಾಡಿ, ಜೊತೆಕಾರ್ಯದರ್ಶಿಯವರಾದ ಶ್ರೀ ಅಮರೇಶ್ ಶೆಟ್ಟಿ ತಿರುವಾಜೆ,ಶ್ರೀ ಅರವಿಂದ ರೈ ಮೂರ್ಜೆಬೆಟ್ಟು ,ಶ್ರೀಮತಿ ವಿಜಯಾ ಶೆಟ್ಟಿ ಸಾಲೆತ್ತೂರು, ಮಹಿಳಾ ಸಮಿತಿ ಅಧ್ಯಕ್ಷೆ, ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯರಮೇಶ್ ರವರು ಉಪಸ್ಥಿತರಿದ್ದರು.