BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ವಾರ್ಷಿಕ ಮಹಾಸಭೆಯು 2021ರ ಸೆಪ್ಟೆಂಬರ್ ತಿಂಗಳಲ್ಲಿ ಮುಂಬಯಿಯಲ್ಲಿ ನಡೆಯಲಿದ್ದು ಈ ಬಗ್ಗೆ ಪೂರ್ವಭಾವಿ ಸಭೆಯು ಜೂನ್ 22ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಂಗಳೂರಿನ ಕಚೇರಿಯಲ್ಲಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದು, ಮಹಾಸಭೆಯು ಸೇರಿ ಕೆಲವು ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಯಿತು. ಕೊರೊನಾ ಸಮಯದ ಎಪ್ರಿಲ್-ಮೇ ತಿಂಗಳಿನಲ್ಲಿ ನೀಡಲಾದ ಆರ್ಥಿಕ ಧನ ಸಹಾಯದ ಮೊತ್ತಕ್ಕೆ ಮಂಜೂರಾತಿ ನೀಡಲಾಯಿತು. ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ದಾನವಾಗಿ ನೀಡಿದ ಕರ್ನಿರೆ ಬಳ್ಕುಂಜೆ ಗ್ರಾಮದ ಒಂದು ಎಕರೆ ಜಮೀನಿನ ದಾಖಲೆ ಸರಿಪಡಿಸುವ ಬಗ್ಗೆ ಹಾಗೂ ಒಕ್ಕೂಟದ ಹೆಸರಿನಲ್ಲಿ ನೋಂದಣಿ ಮಾಡುವ ಕುರಿತು ನಿರ್ಣಯಿಸಲಾಯಿತು.
ಒಕ್ಕೂಟದ ಮಹಾಸಭೆಯನ್ನು ಸಪ್ಟೆಂಬರ್ ತಿಂಗಳಿನಲ್ಲಿ ಮುಂಬಯಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಅಲ್ಲದೆ ವೈದ್ಯಕೀಯ ನೆರವು ಹಾಗೂ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಧನಸಹಾಯ ಕೋರಿ ಬಂದ ಅರ್ಜಿಯನ್ನು ಪರಿಶೀಲಿಸಿ ಅರ್ಹ ಫಲಾನು ಭವಿಗಳಿಗೆ ಮಂಜೂರು ಮಾಡಲಾಯಿತು. ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.