ಬಂಟ್ಸ್ ನ್ಯೂಸ್, ಸುರತ್ಕಲ್: ಸಮಾಜ ಸೇವಾ ವಿಭಾಗದಲ್ಲಿ ಬಂಟರ ಸಂಘ (ರಿ) ಸುರತ್ಕಲ್ ಸೇವಾ ಸಂಸ್ಥೆಗೆ 2020ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಸುರತ್ಕಲ್ ಬಂಟರ ಸಂಘವು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲ ಸಂಘವಾಗಿ ಗುರುತಿಸಿಕೊಂಡಿದ್ದು, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹಲವಾರು ಬಹುಮಾನ, ಪ್ರಶಸ್ತಿ ಗೆದ್ದು ಜನಮನ್ನಣೆ ಗಳಿಸಿದೆ. ಜತೆಗೆ ಸುಮಾರು 19 ಗ್ರಾಮಗಳನ್ನು ಒಗ್ಗೂಡಿಸಿ ಸಮಾಜಸೇವೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಮಾಜದ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಧನ, ವಿದ್ಯಾರ್ಥಿವೇತನ, ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು, ಉದ್ಯೋಗ, ಸಾಮಾಜಿಕ ಸ್ವಾಸ್ಥ್ಯ ಇತ್ಯಾದಿ ಸೇವೆಗಳನ್ನು ನಡೆಸುತ್ತಿದೆ. ಇದಕ್ಕಾಗಿ ಹಲವಾರು ವ್ಯವಸ್ಥಿತ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಅರ್ಹರಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಗಮನ ಸೆಳೆದಿದೆ. ವಿಧವೆಯರಿಗೆ, ಭಿನ್ನ ಸಾಮರ್ಥ್ಯದವರಿಗೆ ಹಾಗೂ ಅಂಗವಿಕಲರಿಗೆ ವಿವಿಧ ರೀತಿಯ ನೆರವು ನೀಡಿದೆ. ಕೊರೊನಾ ಸಂದರ್ಭದಲ್ಲಿ ದೂರದೂರದ ತಮ್ಮ ಹುಟ್ಟೂರುಗಳಿಗೆ ತೆರಳಲಾಗದವರಿಗೆ ಸಂಘದಲ್ಲಿ ಉಚಿತವಾಗಿ ಆಶ್ರಯ ನೀಡುವ ವ್ಯವಸ್ಥೆಯನ್ನೂ ಮಾಡಿ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದೆ. ಕೋವಿಡ್ 19ರ ಸಮಸ್ಯೆಯ ಸಂದರ್ಭದಲ್ಲಿ ಸಂಘವು ಜಾತಿ, ಮತ ಭೇಧವಿಲ್ಲದೆ ಬಡತನದಲ್ಲಿದ್ದ ಕುಟುಂಬಗಳಿಗೆ ಆಹಾರದ ಕಿಟ್ನ್ನು ವಿತರಿಸಿತ್ತು.
ಜತೆಗೆ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ನೇತ್ರ ತಪಾಸಣೆ ಮುಂತಾದ ಶಿಬಿರಗಳನ್ನು ನಡೆಸುವ ಮೂಲಕ ನೂರಾರು ಮಂದಿಯ ಆರೋಗ್ಯ ಸಮಸ್ಯೆಗಳಿಗೂ ಸ್ಪಂದಿಸಿದೆ.
ನೆಹರೂ ಮೈದಾನದಲ್ಲಿ ಜರಗಿದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜಾ ಅವರು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವರಿಂದ ಸ್ವೀಕರಿಸಿದರು. ದ.ಕ ಜಿಲ್ಲಾಧಿಕಾರಿ ಡಾ| ಕೆ.ವಿ ರಾಜೇಂದ್ರ, ಶಾಸಕರಾದ ಡಾ| ವೈ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಮೇಯರ್ ದಿವಾಕರ್ ಪಾಂಡೇಶ್ವರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸರ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಮುಂಚೂರು, ನಿಕಟ ಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ ಹಾಗೂ ಪದಾಧಿಕಾರಿಗಳು ಜೊತೆಗಿದ್ದರು.