ಬಂಟ್ಸ್ ನ್ಯೂಸ್, ಸುರತ್ಕಲ್: ಸಂಘದ ಪ್ರತಿಯೋರ್ವ ಪದಾಧಿಕಾರಿಯೂ, ಸದಸ್ಯನೂ ಸಲ್ಲಿಸಿರುವ ಅರ್ಪಣಾ ಮನೋಭಾವದ ಸೇವೆಯಿಂದಾಗಿ ಸಂಘವು ಈ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ ಎಂದು ಸಂಘದ ಅಧ್ಯಕ್ಷ ಸುಧಾಕರ ಎಸ್.ಪೂಂಜಾ ತಿಳಿಸಿದ್ದಾರೆ.

ಅವರು ಸಮಾಜ ಸೇವಾ ವಿಭಾಗದಲ್ಲಿ ಬಂಟರ ಸಂಘ (ರಿ) ಸುರತ್ಕಲ್ ಸೇವಾ ಸಂಸ್ಥೆಗೆ 2020ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಸುರತ್ಕಲ್ ಬಂಟರ ಸಂಘವು ಸದಾ ಕ್ರಿಯಾಶೀಲವಾಗಿರುವ ಒಂದು ಸಂಘಟನೆಯಾಗಿದ್ದು, ಸಮಾಜಮುಖಿ ಸೇವೆಗಳಿಂದ ಮನೆಮಾತಾಗಿದೆ. ಇಂಥ ಸಂಘಟನೆಗಳಿಗೆ ಪ್ರಶಸ್ತಿ ನೀಡುವ ಮೂಲಕ ಜಿಲ್ಲಾಡಳಿತವೂ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ಘನತೆ ತಂದು ಕೊಟ್ಟಿದೆ. ಜತೆಗೆ ವಿವಿಧ ರೀತಿಯ ಸಮಾಜಮುಖಿ ಸೇವೆಗಳಿಂದ ಜನರ ಮನಸ್ಸು ಗೆದ್ದಿದ್ದ ಈ ಸಂಘಕ್ಕೆ ಅರ್ಹವಾಗಿಯೇ ಈ ಪ್ರಶಸ್ತಿ ಸಂದಿದೆ ಎಂದು ಸಂತೋಷವನ್ನು ಹಂಚಿಕೊಂಡರು.
ನೆಹರೂ ಮೈದಾನದಲ್ಲಿ ಜರಗಿದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜಾ ಅವರು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವರಿಂದ ಸ್ವೀಕರಿಸಿದರು. ದ.ಕ ಜಿಲ್ಲಾಧಿಕಾರಿ ಡಾ| ಕೆ.ವಿ ರಾಜೇಂದ್ರ, ಶಾಸಕರಾದ ಡಾ| ವೈ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಮೇಯರ್ ದಿವಾಕರ್ ಪಾಂಡೇಶ್ವರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸರ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಮುಂಚೂರು, ನಿಕಟ ಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ ಹಾಗೂ ಪದಾಧಿಕಾರಿಗಳು ಜೊತೆಗಿದ್ದರು.