ಬಂಟ್ಸ್ ನ್ಯೂಸ್, ಮಂಗಳೂರು : ತುಳುನಾಡಿನ ಹೆಮ್ಮೆಯ ಪ್ರತೀಕ, ಎಲ್ಲಾ ಸಮಾಜದ ಕಷ್ಟಕ್ಕೆ ಧ್ವನಿಯಾಗಿದ್ದ ಬಡವರ ಬಂಧು ದಿ. ಮುಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಸವಿನೆನಪಿಗಾಗಿ ಲೈಟ್ ಹೌಸ್ ಹಿಲ್’ನ ರಸ್ತೆಗೆ ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಲಾಯಿತು.



ಮಂಗಳೂರು ಮಹಾನಗರದ ಮೇಯರ್ ದಿವಾಕರ್ ಪಾಂಡೇಶ್ವರ ಅವರು ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ ಫಲಕವನ್ನು ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಒಬ್ಬ ಶಾಸಕನಾಗಿ ಕೊಟ್ಟ ಮಾತು ಉಳಿಸಿಕೊಂಡ ತೃಪ್ತಿಯಿದೆ. ಇದಕ್ಕಾಗಿ ಸಹಕರಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ರಾಜ್ಯಾದ್ಯಕ್ಷರಾದ ಸಂಸದ ನಳಿನ್ ಕಮಾರ್ ಕಟೀಲ್ ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದರು. ತುಳುನಾಡಿನಲ್ಲಿ ಇನ್ನು ಮುಂದೆ ಮುಲ್ಕಿ ಸುಂದರ್ ರಾಮ್ ಶೆಟ್ಟಿಯವರ ಹೆಸರು ಅಜರಾಮರವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜದ ಬಂಧುಗಳು, ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿಗಳು ಮತ್ತಿತರ ಪ್ರಮುಖರು ಇದ್ದರು.