ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ದೂರು ಸಲ್ಲಿಕೆ
ಬಂಟ್ಸ್ ನ್ಯೂಸ್, ಉಡುಪಿ/ಮುಂಬಯಿ : ಕೆಲ ದಿನದಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ಬಗ್ಗೆ ಅವರ ಘನತೆಗೆ ಧಕ್ಕೆ ಬರುವಂತೆ ಅವಹೇಳನಕಾರಿ ಸುದ್ದಿಯನ್ನು ವಾಟ್ಸಪ್ ಸೋಷಿಯಲ್ ಮೀಡಿಯಾ ಮುಖಾಂತರ ಯಾರೋ ವಿಕೃತ ಮನಸ್ಸಿನ ವ್ಯಕ್ತಿಗಳು ವೈರಲ್ ಮಾಡುತ್ತಿದ್ದು, ಈ ಬಗ್ಗೆ ವಿಶ್ವದೆಲ್ಲೆಡೆಯ ಎಲ್ಲಾ ಬಂಟರ ಸಂಘದ ಅಧ್ಯಕ್ಷರುಗಳು, ಪದಾಧಿಕಾರಿಗಳು ಆಕೋಶ ವ್ಯಕ್ತಪಡಿಸಿ ಈ ಕೃತ್ಯವನ್ನು ಖಂಡಿಸಿದ್ದು, ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ.
ಈಗಾಗಲೇ ಎಸ್ಪಿ ಅವರು ತಂಡ ರಚನೆ ಮಾಡಿ ತಪ್ಪಿತಸ್ಥರನ್ನು ಕೂಡಲೇ ಹುಡುಕುವಲ್ಲಿ ಕಾರ್ಯಪ್ರವೃತ್ತರಾಗಿದ್ದು ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿದ್ದು ಶೀಘ್ರದಲ್ಲಿ ಕೃತ್ಯವೆಸಗಿದವರು ಪತ್ತೆಯಾಗಲಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಬಂಟರನ್ನು ಒಗ್ಗೂಡಿಸಿ ಉಡುಪಿ ಮತ್ತು ಮುಂಬಯಿಯಲ್ಲಿ ವಿಶ್ವ ಮಟ್ಟದ ಬಂಟರ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಮಾತ್ರವಲ್ಲದೆ ಸೂರು ಇಲ್ಲದ ಬಡ ಸರ್ವ ಜಾತಿ ಬಾಂಧವರಿಗೆ ನೂರಕ್ಕೂ ಮಿಕ್ಕಿ ಮನೆ ನಿರ್ಮಿಸುವ ಯೋಜನೆಯ ಆಶ್ರಯದಾತರಾದ ಐಕಳ ಹರೀಶ್ ಶೆಟ್ಟಿಯವರ ಬಗ್ಗೆ ಕಿಡಿಗೇಡಿಗಳು ಮಾಡಿರುವ ಅಪಪ್ರಚಾರವನ್ನು ವಿಶ್ವದೆಲ್ಲಡೆಯ ಬಂಟ ಸಮುದಾಯದ ಗಣ್ಯರು, ಬಂಟ ಸಮುದಾಯದ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.