BUNTS NEWS, ಮಂಗಳೂರು: ಬಂಟರು ಧರ್ಮದ ರಕ್ಷಕರು. ಬಂಟರ ರಕ್ತದಲ್ಲಿ ನಾಯಕತ್ವ ಗುಣವಿದೆ. ಆದರೆ ಇಂದಿನ ಆಧುನಿಕತೆಯ
ವೇಗದಲ್ಲಿ ಬಂಟರು ತಮ್ಮತನವನ್ನು ಮರೆಯಬಾರದೆಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್
ಕುಮಾರ್ ರೈ ಮಾಲಾಡಿ ಹೇಳಿದರು.
ಅವರು ಗುರುಪುರ ಬಂಟರ
ಮಾತೃ ಸಂಘದ ಆಯೋಜನೆಯ ‘ಬಂಟ ಕಲಾವೀಳ್ಯಾ 2020’ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ
ಅತಿಥಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಂಟರ ಭವಿಷ್ಯದ ದೃಷ್ಠಿಯಿಂದ ಮೂರು ಜಿಲ್ಲೆಗಳ ಹಿರಿಯರು
ಒಂದುಗೂಡಿ ಬಂಟರ ಮಾತೃಸಂಘ ಸ್ಥಾಪಿಸಿದ್ದಾರೆ. ಅಂತಹ ಬಂಟರ ಮಾತೃ ಸಂಘವನ್ನು ಬೆಳೆಸುವುದು ಪ್ರತಿ ಬಂಟನ
ಕರ್ತವ್ಯ. ನಾಲ್ಕು ದಿನದ ಬದುಕಿನಲ್ಲಿ ಯಾರೂ ಶಾಶ್ವತವಲ್ಲ, ಎಲ್ಲರೂ ಒಂದಾಗಿ ಬಾಳ ಬೇಕೆಂದರು.
ಮಾತೃ ಸಂಘದ ಕಟ್ಟಡ
ಕಾಮಗಾರಿಗೆ ಸರ್ಕಾರದ ವಿವಿಧ ಇಲಾಖೆಗಳ ಅನುಮತಿ ಪಡೆಯುವಲ್ಲಿ ವಿಳಂಭವಾದ ಕಾರಣ ಕಟ್ಟಡ ಕಾಮಗಾರಿ ಆರಂಭವಾಗಿಲ್ಲ
ಹೊರತು ಮತ್ಯಾವುದೇ ಕಾರಣವಲ್ಲ. ಶೀಘ್ರದಲ್ಲಿ ಎಲ್ಲಾ ಇಲಾಖೆಗಳ ಅನುಮತಿ ದೊರೆಯಲಿದ್ದು ಕಟ್ಟಡ ಕಾಮಗಾರಿ
ಆರಂಭವಾಗಲಿದೆ. ಸರ್ವ ಬಂಟರೂ ಈ ಕಾರ್ಯದಲ್ಲಿ ತಮ್ಮಿಂದಾಗುವ ಸಹಾಯ ಮಾಡಬೇಕು ಎಂದು ಕೋರಿದರು.
ಗುರುಪುರ ಶ್ರೀ ಕ್ಷೇತ್ರ
ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸಭೆಯನ್ನುದ್ದೇಶಿಸಿ ಮಾತನಾಡಿ, ಗುರುಪುರ
ಬಂಟರ ಮಾತೃ ಸಂಘವು ಒಗ್ಗಟ್ಟಿನಿಂದ ಉತ್ತಮ ಸಮಾಜಮುಖಿ ಕಾರ್ಯ ಮಾಡುತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶೀಘ್ರದಲ್ಲಿ ಗುರುಪುರ ಬಂಟರ ಮಾತೃ ಸಂಘದ ನೂತನ ಕಟ್ಟಡ ಸ್ಥಾಪನೆಯಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಗುರುಪುರ
ಬಂಟರ ಮಾತೃ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲು ಗುತ್ತು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ
ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ
ಅಧ್ಯಕ್ಷ ಉಪೇಂದ್ರ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳ ಶೆಟ್ಟಿ, ಖ್ಯಾತ ಸಂಗೀತ
ನಿರ್ದೇಶಕ ಗುರುಕಿರಣ್, ಉದ್ಯಮಿ ರವಿ ರೈ ಕಳಸ, ವಿಜಯಕುಮಾರ್ ಶೆಟ್ಟಿ ಕೊಡಿಯಾಲ್ ಬೈಲ್, ಉಡುಪಿ ಮೋಹನದಾಸ
ಶೆಟ್ಟಿ, ಸತೀಶ್ ಶೆಟ್ಟಿ ಕಾರಮೊಗರು ಶೆಟ್ಟಿ, ವಿಶ್ವನಾಥ ಶೆಟ್ಟಿ ಮೂಡುಶೆಡ್ಡೆ, ಬಂಟರ ಮಾತೃ ಸಂಘದ
ವಸಂತ ಶೆಟ್ಟಿ, ತುಳುವ ಸಿರಿ ಅದ್ವಿಕಾ ಶೆಟ್ಟಿ, ಕಾವೂರು ಬಂಟರ ಸಂಘದ ಆನಂದ ಶೆಟ್ಟಿ, ಪುಷ್ಪರಾಜ ಶೆಟ್ಟಿ ಮೊಗರು, ಗುರುಪು ಬಂಟರ ಮಾತೃ ಸಂಘದ ಚಂದ್ರಹಾಸ ಶೆಟ್ಟಿ ನಾರಳ, ಸುಬ್ಬಯ್ಯ ಶೆಟ್ಟಿ ಗುರುಪುರ ಮತ್ತಿತರ
ಪ್ರಮುಖರು ಉಪಸ್ಥಿತರಿದ್ದರು.
ಬಂಟರಿಂದ – ಬಂಟರಿಗಾಗಿ
– ಬಂಟರಿಗೋಸ್ಕರ ವಿಷಯದಲ್ಲಿ ಚರ್ಚಾಗೋಷ್ಠಿ ನಡೆಯಿತು. ಚರ್ಚಾಗೋಷ್ಠಿಯಲ್ಲಿ ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಮಾಜಿ ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವಾ ಸಮನ್ವಯಕಾರರಾಗಿ ಚರ್ಚಾಗೋಷ್ಠಿ ನಡೆಸಿಕೊಟ್ಟರು.
ಹಿರಿಯ ನಿರೂಪಕ ನವೀನ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಾಕರ ಶೆಟ್ಟಿ
ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜತೆ ಕಾರ್ಯದರ್ಶಿ ಸತೀಶ್ ಅಡಪ ಬಂಟ ಸಮಾಜದ ವಿವಿಧ ಪ್ರಮುಖ ವಿಚಾರದ
ಬಗ್ಗೆ ಚರ್ಚೆ ನಡೆಸಿದರು.
ಗುರುಪುರ ಬಂಟರ ಮಾತೃ
ಸಂಘದ ಸಂಚಾಲಕ ಸುಂದರ್ಶನ್ ಶೆಟ್ಟಿ ಪೆರ್ಮಂಕಿ ಸ್ವಾಗತಿಸಿದರು. ಅಡ್ಯಾರ್ ಪುರುಷೋತ್ತಮ ಭಂಡಾರಿ ನಿರೂಪಿಸಿದರು.