BUNTS NEWS, ಮಂಗಳೂರು: ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ ಫೆ.2ರಂದು ನಡೆಯುವ ಬಂಟ ಕಲಾವೀಳ್ಯ ಸಾಂಸ್ಕೃತಿಕ ಸ್ಪರ್ಧೆಯು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದ್ದು ಬಂಟರ ಭಾವೈಕ್ಯದ ಸಂಗಮವಾಗಿ ಮೂಡಿ ಬರಲಿ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ಕುಮಾರ್ ರೈ ಮಾಲಾಡಿ ತಿಳಿಸಿದರು.
ಅವರು ಬಂಟ್ಸ್ ಹಾಸ್ಟೆಲ್ ಅಮೃತೋತ್ಸವ ಕಟ್ಟಡದಲ್ಲಿ ರಾಷ್ಟ್ರೀಯ ಬಂಟ ಕಲಾವಿದರ ಸ್ಪರ್ಧಾ ಸಮ್ಮಿಲನ ಬಂಟ ಕಲಾವೀಳ್ಯ 2019 ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಕಾರ್ಯಕ್ರಮಕ್ಕೆ ಬಂಟರ ಮಾತೃ ಸಂಘದಿಂದ ನೆರವು ನೀಡಲಾಗುವುದೆಂದರು.
ಗುರುಪುರ ಬಂಟರ ಮಾತೃ ಸಂಘದ ಮಾಜೀ ಅಧ್ಯಕ್ಷ ಸುದರ್ಶನ್ ಶೆಟ್ಟಿ ಪೆರ್ಮಂಕಿ ಮಾತನಾಡಿ, ಸ್ಪರ್ಧೆಯ ರೂಪುರೇಶೆಗಳನ್ನು ಸಭೆಯ ಮುಂದಿಟ್ಟರು. ಫೆ.2ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 11 ರವರೆಗೆ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಬಳಿ ಇರುವ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಬಂಟರ ಕಲಾವೀಳ್ಯ ಸ್ಪರ್ಧೆ ಜರಗಲಿದೆ. ಸುಮಾರು 15 ತಂಡಗಳು ಭಾಗವಹಿಸಲಿದೆ. ದೂರದಿಂದ ಬರುವ ತಂಡಗಳಿಗೆ ವಸತಿ ಉಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲ್ ಗುತ್ತು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಂಟರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ್ ಶೆಟ್ಟಿ ಗುರುಪುರ ಬಂಟರ ಮಾತೃ ಸಂಘದ ಪದಾಧಿಕಾರಿಗಳಾದ ಓಂ ಪ್ರಕಾಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ನಾರಾಳ, ಸತೀಶ್ ಶೆಟ್ಟಿ, ಜಯರಾಮ ಶೆಟ್ಟಿ ವಿಜೇತ ಮೊದಲಾದವರು ಉಪಸ್ಥಿತರಿದ್ದರು.
ಆನಂದ ಶೆಟ್ಟಿ ಕಾವೂರು, ಚಂದ್ರಹಾಸ ಶೆಟ್ಟಿ ರಂಗೋಲಿ, ಸುಧಾಕರ ಎಸ್ ಪೂಂಜಾ, ಸುನೀಲ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಕಿರಣ್ ಪ್ರಸಾದ್ ರೈ, ಲೀಲಾಧರ ಶೆಟ್ಟಿ ಮೊದಲಾದವರು ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಬೇರೆ ಬೇರೆ ಬಂಟರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಉದಯ ಶೆಟ್ಟಿ ವಂದಿಸಿದರು. ಸುದರ್ಶನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.