ತಾಯ್ನೆಲದ ಸಂಸ್ಕಾರದಿಂದ ಬದುಕು ಹಸನು: ಭಾಸ್ಕರ ರೈ ಕುಕ್ಕುವಳ್ಳಿ - BUNTS NEWS WORLD

ತಾಯ್ನೆಲದ ಸಂಸ್ಕಾರದಿಂದ ಬದುಕು ಹಸನು: ಭಾಸ್ಕರ ರೈ ಕುಕ್ಕುವಳ್ಳಿ

Share This

ಬಾಲ್ಯೊಟ್ಟುಗುತ್ತು ಸಾಧಕರ ಸಮ್ಮಾನ - ಗುತ್ತಿನ ಗೌರವ ಪ್ರದಾನ

Bunts News, ಮಂಗಳೂರು: ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಹುಟ್ಟಿದ ಮನೆ, ಊರು, ಸ್ನೇಹಿತರು, ಬಂಧು-ಬಳಗ ಎಲ್ಲರ ಕೊಡುಗೆಯೂ  ಗಮನಾರ್ಹವಾಗಿದ್ದು ಬಾಳಿನುದ್ದಕ್ಕೂ ನೆನಪಲ್ಲಿರುತ್ತದೆ. ನಮ್ಮ ಕರ್ಮಕ್ಷೇತ್ರ ಎಲ್ಲೇ ಇದ್ದರೂ ತಾಯ್ನೆಲದ ಸಂಸ್ಕಾರ ನಮ್ಮ ಬೆನ್ನಿಗಿದ್ದು ಬದುಕನ್ನು ಹಸನಾಗಿಸುತ್ತದೆ ಎಂದು ಯಕ್ಷಗಾನ ವಿದ್ವಾಂಸ, ಸಾಹಿತಿ ಮತ್ತು ಸಂಘಟಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಅವರು ಪುತ್ತೂರು ತಾಲೂಕು ಇರ್ದೆ ಗ್ರಾಮದ ಬಾಲ್ಯೊಟ್ಟು ಗುತ್ತು ತರವಾಡಿನ ಸಾಂಗತ್ಯದಲ್ಲಿ ಹುಟ್ಟೂರ ಸಾಧಕರಿಗೆ ನೀಡಿದ 'ಗುತ್ತಿನ ಗೌರವ' ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮನುಷ್ಯ ಎಷ್ಟೇ ದೊಡ್ಡವನಾದರೂ ಕೌಟುಂಬಿಕ ಸಂಬಂಧಗಳನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗಿದ್ದು ಎಲ್ಲಾ ಸಾಧನೆಗಳಿಗೂ ಮೂಲ ಎಂದು ಹೇಳಿದರು.

ಮತ್ತೋರ್ವ ಸಾಧಕ ಪುತ್ತೂರಿನ ಖ್ಯಾತ ವೈದ್ಯ ಡಾ. .ಕೆ. ರೈ ಅವರು ಮಾತನಾಡಿ, ವೈದ್ಯಕೀಯವನ್ನು ಕೇವಲ ವೃತ್ತಿಯಾಗಿ ಭಾವಿಸದೆ ಸೇವಾ ಮನೋಭಾವದಿಂದ ದುಡಿದುದರಿಂದ ಜನರ ಪ್ರೀತಿ-ವಿಶ್ವಾಸ ಗಳಿಸಲು ಸಾಧ್ಯವಾಗಿದೆ. ಕುಟುಂಬದ ಹಿರಿಯರ ಹಾರೈಕೆ ಸೇವೆಗೆ ಶಕ್ತಿ ತುಂಬಿದೆ ಎಂದರು. ಬಾಲ್ಯೊಟ್ಟು ಗುತ್ತು ಯಜಮಾನ ಬಾಳಪ್ಪ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಬಾಲ್ಯೊಟ್ಟು ಗುತ್ತು ತರವಾಡಿನ ವಿವಿಧ ಶಾಖೆಗಳ ಹಿರಿಯರಾದ ಬಿ.ವಿಠಲ ರೈ ಕುಕ್ಕುವಳ್ಳಿ, ಬಾಲಕೃಷ್ಣ ರೈ ಕೆಲ್ಲಾಡಿ, ನಾರಾಯಣ ರೈ ದರ್ಕಾಸು ಮತ್ತು ಬಾಲಕೃಷ್ಣ ಆಳ್ವ ಅಂಗರಾಜೆ ಅವರು ಡಾ. .ಕೆ.ರೈ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಸನ್ಮಾನಿಸಿದರು. ರಮಾಕಾಂತಿ ಕೆ.ರೈ ಉಪಸ್ಥಿತರಿದ್ದರು. ಬಿ.ಜಗನ್ನಾಥ ರೈ ಮತ್ತು ಧನಂಜಯ ರೈ ಬಾಲ್ಯೊಟ್ಟು ಸನ್ಮಾನಿತರನ್ನು ಅಭಿನಂದಿಸಿದರು.

'ಸಾಂಗತ್ಯ' ಗೃಹಪ್ರವೇಶದ ಸಂದರ್ಭದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಚಂದ್ರಶೇಖರ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಕರುಣಾಕರ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಸಮಾರಂಭದ ಅಂಗವಾಗಿ ನಿಶಾನ್ ರೈ ಮಠಂದಬೆಟ್ಟು , ಶ್ರೀನಿವಾಸ್ ಮತ್ತು ತಂಡದವರಿಂದ 'ಸಂಗೀತ ಸೌರಭ' ಮತ್ತು'ನೃತ್ಯ ವೈಭವ' ಕಾರ್ಯಕ್ರಮ ಜರಗಿತು.

Pages