ಗುಜರಾತ್ ಅಂಕಲೇಶ್ವರದ ಶ್ರೀ ಗುಮನ್ ದೇವ್ ಮಂದಿರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ
Bunts News, ಭರೂಚ್ (ಗುಜರಾತ್): ಸುಮಾರು ಐನೂರು ವರ್ಷಗಳ ಇತಿಹಾಸದ ಗುಜರಾತ್ ಭರೂಚ್ ಜಿಲ್ಲೆಯ ಅಂಕಲೇಶ್ವರದ ನವೀಕೃತ ಗುಮನ್ ದೇವ್ ಮಂದಿರದಲ್ಲಿ ಉದ್ಯಮಿ ರವಿನಾಥ್ ವಿಶ್ವನಾಥ್ ಶೆಟ್ಟಿ ಮತ್ತು ಭಾರತಿ ರವಿನಾಥ್ ಶೆಟ್ಟಿಯವರ ಯಜಮಾನಿಕೆಯಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳಿಂದ ನಡೆಯಲಿರುವ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಶುಭಮುಹೂರ್ತವು ಮೆ.10 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ ಸಂಜೆ ಶ್ರೀರಾಮಚಂದ್ರ, ಲಕ್ಷ್ಮಣ, ಸೀತಾ ಮಾತೆಯ ಮೂರ್ತಿಯ ಭವ್ಯ ಶೋಭಾಯಾತ್ರೆ ಮತ್ತು ರಾತ್ರಿ ವಾಸ್ತು ಹೋಮ ಮತ್ತು ಗಣಹೋಮದೊಂದಿಗೆ ನಡೆಯಿತು.
ಮರುದಿನ ಮುಂಜಾನೆ ನವಗ್ರಹ ಹೋಮ, ತತ್ವಾಕಲಶಾಭಿಷೇಕ, ಮಧ್ಯಾಹ್ನ ಮಹಾಪ್ರಸಾದ, ನಂತರ ಮಲ್ಲಯುದ್ದ (ಕುಸ್ತಿ) ಸಂಜೆ 4 ಗಂಟೆಗೆ ಮದ್ವಭಾಗ್ ಸೊಸೈಟಿಯಿಂದ ಜಲಧಾರ ಚೋಕಡಿ, ಜಿ.ಐ.ಡಿ.ಸಿ. ಅಂಕಲೇಶ್ವರದಿಂದ ಗುಮನ್ ದೇವ್ ಮಂದಿರಕ್ಕೆ ಭವ್ಯ ಶೋಭಾಯಾತ್ರೆಯು ನಡೆಯಿತು.
ಸಂಜೆ ಚಕ್ರಭ್ವ ಮಂಡಲ ಪೂಜೆ, ರಾಮದೇವತಾ ಕಲಶಾಧಿವಾಸ, ಅಧಿವಸ ಹೋಮ ನಂತರ ಶೀ ಒಡಿಯೂರು ಗುರುದೇವ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ಮಾಡುತ್ತಾ, ಧಾರ್ಮಿಕ ಕ್ಷೇತ್ರಗಳಲ್ಲಿ ಇಂತಹ ಕಾರ್ಯವು ಸದಾ ನಡೆಯುತ್ತಿರಲಿ, ಧಾರ್ಮಿಕ ಕಾರ್ಯದಿಂದ ಮಾನವನ ಬದುಕು ಪಾವನಗೊಳ್ಳುವುದು ಮಾತ್ರವಲ್ಲದೆ ಮನಸ್ಸಿಗೆ ನೆಮ್ಮದಿಯನ್ನು ಉಂಟುಮಾಡುವುದು. ಈ ಕಾರ್ಯದಲ್ಲಿ ಇಂದು ನನಗೆ ಬಾಗವಹಿಸಲು ಬಹಳ ಸಂತೋಷವಾಗುತ್ತಿದೆ ಎನ್ನುತ್ತಾ ಇಂತಹ ಕಾರ್ಯದಲ್ಲಿ ಎಲ್ಲರೂ ಬಾಗವಹಿಸಬೇಕೆಂದರು, ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಶ್ರೀ ಗುರುದೇವಾನಂದ ಸ್ವಾಮೀಜಿಯವರು ರವಿನಾಥ್ ವಿ. ಶೆಟ್ಟಿಯವರ ಸ್ವಗ್ರಕ್ಕೆ ಬೇಟಿಯಿತ್ತು ಪಾದಪೂಜೆ ಹಾಗೂ ವಿಶೇಷ ಪೂಜೆ ನಡೆಯಿತು, ಈ ಸಂದರ್ಭದಲ್ಲಿ ರವಿನಾಥ ವಿ. ಶೆಟ್ಟಿ ದಂಪತಿ ಮಾತ್ರವಲ್ಲದೆ ಅವರ ತಾಯಿ ತೋನ್ಸೆ ಪಡುಮನೆ ಲಕ್ಷ್ಮಿ ವಿ. ಶೆಟ್ಟಿ ಮಕ್ಕಳಾದ ಡಾ. ಆಶ್ನಾ ಆರ್. ಶೆಟ್ಟಿ, ಆಸ್ಥ ಆರ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಂದು ರಾತ್ರಿ ಭಜನೆ ಹಾಗೂ ಗರ್ಭನೃತ್ಯ ಜರಗಿತು.
ಪೂಜಾವಿಧಿಗಳು ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿ ಇವರ ಪೌರೋಹಿತ್ಯದಲ್ಲಿ ವೇದಮೂರ್ತಿ ಡಾ. ಡಿ. ಶಂಕರನ್ ವಾಸುದೇವ್ ಭಟ್ಟಾಚಾರ್ಯ ಆಗಮ ಪಂಡಿತ ಮತ್ತು ಶ್ರೀ ರಾಮಕರ್ಣ ಶುಕ್ಲಾ ಇವರ ಉಪಸ್ಥಿತಿಯಲ್ಲಿ ನಡೆಯಿತು. ಭಕ್ತಾದಿಗಳು ಸಹಸ್ರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದವನ್ನು ಸ್ವೀಕರಿಸಿದರು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಅಧ್ಯಕ್ಷ ಚಂದ್ರಶೇಖರ ಪೂಜಾರಿ,ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್, ಥಾಣೆಯ ಧೀರಜ್ ಹೋಟೇಲಿನ ಮಾಲಕ ಶೇಖರ ಶೆಟ್ಟಿ, ರವಿ ದೇವಾಡಿಗ, ಗುಜರಾತಿನ ಅನೇಕ ರಾಜಕೀಯ ಮುಖಂಡರುಗಳು,ಉಧ್ಯಮಿಗಳು, ಸಮಾಜ ಸೇವಕರು, ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.