BUNTS NEWS, ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆ
ದ್ವೇಷದಿಂದ ಅಥವಾ ರಾಜಕೀಯ ಲಾಭ
ಪಡೆಯುವ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ತನ್ನ
ಹೆಸರಿನಲ್ಲಿ ಸುಳ್ಳು ಸುದ್ದಿ ಪಸರಿಸುತ್ತಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ
ಪೊಲೀಸ್ ಇಲಾಖೆಗೆ ಬಂಟರ ಯಾನೆ
ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್
ಕುಮಾರ್ ರೈ ದೂರು ನೀಡಿದ್ದಾರೆ.
ತನ್ನನ್ನು ಎಲ್ಲಾ
ರಾಜಕೀಯ ಪಕ್ಷದ ಅಭ್ಯರ್ಥಿಗಳೂ
ಸಂಪರ್ಕಿಸಿದ್ದಾರೆ. ಆದರೆ ಚುನಾವಣೆಯಲ್ಲಿ ತಾನು
ತಟಸ್ಥ ಧೋರಣೆ ಅನುಸರಿಸುವುದಾಗಿ ಸ್ಪಷ್ಟಪಡಿಸಿದ್ದೇನೆ.
ಸಂಘವು ಯಾವುದೇ ವ್ಯಕ್ತಿ, ಪಕ್ಷ
ಅಥವಾ ಜಾತಿಯನ್ನು ಬೆಂಬಲಿಸಿ ಇಂದಿನವರೆಗೆ ಯಾವುದೇ ಹೇಳಿಕೆಯನ್ನು ಕೊಟ್ಟಿರುವುದಿಲ್ಲ
ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ
ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಅಥವಾ
ಇತರ ದುರುದ್ದೇಶದಿಂದ ನನ್ನ ಹೆಸರನ್ನು ಬಳಸಿ
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಪಸರಿಸುತ್ತಿದ್ದಾರೆ.
ನಾನು 110 ವರ್ಷಗಳ ಇತಿಹಾಸವಿರುವ ಜಗತ್ತಿನ
ಎಲ್ಲಾ ಬಂಟರ ಸಂಘಗಳಿಗೆ ಮಾತೃ
ಸಂಘವಾಗಿರುವ ಬಂಟರ
ಯಾನೆ ನಾಡವರ ಮಾತೃ ಸಂಘದ
ಅಧ್ಯಕ್ಷನಾಗಿರುತ್ತೇನೆ. ಎಲ್ಲಾ ರಾಜಕೀಯ ಪಕ್ಷದ
ನೇತಾರರೂ, ಅಭ್ಯರ್ಥಿಗಳೂ ನನ್ನನ್ನು ಸಂಪರ್ಕಿಸಿದ್ದು ಅವರಿಗೆ ಚುನಾವಣೆಯಲ್ಲಿ ನಾನು
ತಟಸ್ಥ ಧೋರಣೆಯನ್ನು ಅನುಸರಿಸುವುದಾಗಿ ಈ ಮೊದಲೇ ತಿಳಿಸಿರುತ್ತೇನೆ.
ಬಂಟ ಸಮಾಜ
ಬಾಂಧವರು ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ
ಇದ್ದಾರೆ. ಸಂಘವು ಎಲ್ಲಾ ರಾಜಕೀಯ
ಪಕ್ಷಗಳೊಂದಿಗೆ ಮತ್ತು ರಾಜಕೀಯ ವ್ಯಕ್ತಿಗಳೊಂದಿಗೆ
ಉತ್ತಮ ಬಾಂಧವ್ಯವನ್ನು ಹೊಂದಿದ್ದು, ರಾಜಕೀಯವಾಗಿ
ತಟಸ್ಥವಾಗಿರುವುದು ಸಂಘದ ನಿರ್ಧಿಷ್ಟವಾದ ಧೋರಣೆಯಾಗಿದೆ. ಸಂಘವು ಯಾವುದೇ ವ್ಯಕ್ತಿಯನ್ನು
ಪಕ್ಷವನ್ನು ಅಥವಾ ಜಾತಿಯನ್ನು ಬೆಂಬಲಿಸಿ ಇಂದಿನವರೆಗೆ ಯಾವುದೇ ಪತ್ರಿಕಾ ಪ್ರಕಟಣೆ
ಅಥವಾ ಇತರ ಮಾಧ್ಯಮಗಳಲ್ಲಿ ಹೇಳಿಕೆಯನ್ನು ಕೊಟ್ಟಿರುವುದಿಲ್ಲ
ಎಂದು ಹೇಳಿದ್ದಾರೆ.
ಸಾಮಾಜಿಕ
ಜಾಲತಾಣದ ಸಂದೇಶದಲ್ಲಿರುವಂತೆ ವಿಶ್ವ ಬಂಟರ ಹಾಗೂ
ನಾಡವರ ಸಂಘ ಎಂಬುದು ಅಸ್ತಿತ್ವದಲ್ಲಿಯೇ
ಇರುವುದಿಲ್ಲ. ನಾನು 8 ತಿಂಗಳ ಮೊದಲೇ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತೇನೆ. ಈಗ ಅಧ್ಯಕ್ಷರಾಗಿ ಬೇರೆಯವರು
ಕಾರ್ಯನಿರ್ವಹಿಸುತ್ತಿದ್ದಾರೆ.
ಎಲ್ಲಾ ಜಾತಿ ಮತ ಬಾಂಧವರು ಸಾಮರಸ್ಯದ ಜೀವನವನ್ನು ನಡೆಸಬೇಕೆಂದು
ಮಾತೃ ಸಂಘವು ನಿರಂತರ
ಕಾರ್ಯಕ್ರಮ ಹಮ್ಮಿಕೊಂಡು
ಬಂದಿದೆ. ಪರಸ್ಪರ ಸಾಮರಸ್ಯದ ಜೀವನಕ್ಕೆ
ಧಕ್ಕೆ ತರುವಂತಹ ಮತ್ತು ನನ್ನ
ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳ ಮೂಲಕ
ಮಾಡುತ್ತಿದ್ದಾರೆ. ಈ ಸಂದೇಶಕ್ಕೆ ಮತ್ತು
ನನಗೆ ಯಾವುದೇ ಸಂಬಂಧವಿಲ್ಲ. ಇದನ್ನು
ಯಾರೂ ನಂಬಬಾರದು. ಈ ಬಗ್ಗೆ ನಾನು
ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಯವರಿಗೆ ಹಾಗೂ
ಪೊಲೀಸ್ ಇಲಾಖೆಗೆ ದೂರು
ನೀಡಿರುತ್ತೇನೆ. ಪ್ರಜ್ಞಾವಂತರಾದ ನಾಗರಿಕರು ಈ ದುಷ್ಕರ್ಮಿಗಳ ಒಳಸಂಚಿಗೆ
ಬಲಿಯಾಗಬಾರದು. ನನ್ನಂತವರು ಇಂತಹ ಸಂದೇಶವನ್ನು ಸಾಮಾಜಿಕ
ಜಾಲತಾಣಗಳಲ್ಲಿ ಕಳುಹಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಬೇಕೆಂದು
ಮಾಲಾಡಿ ಅಜಿತ್ ಕುಮಾರ್ ರೈ ಕೋರಿದ್ದಾರೆ.