BUNTS NEWS, ಮಂಗಳೂರು: ತವಿಷ್ ಎಂಟರ್ಪ್ರೈಸಸ್ ಲಾಂಛನದಲ್ಲಿ ರಾಮಕೃಷ್ಣ
ಶೆಟ್ಟಿ ನಿರ್ಮಿಸಿದ ಗಂಗಾಧರ ಕಿರೋಡಿಯನ್ ನಿರ್ದೇಶನದ
‘ಪುಂಡಿಪಣವು’ ತುಳು ಚಲನಚಿತ್ರದ ಬಿಡುಗಡೆ
ಸಮಾರಂಭವು ಜ್ಯೋತಿ ಚಿತ್ರಮಂದಿರದಲ್ಲಿ ನಡೆಯಿತು.
ಸಮಾರಂಭವನ್ನು
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ
ಅಜಿತ್ ಕುಮಾರ್ ರೈ ಮಾಲಾಡಿ
ದೀಪ ಬೆಳಗಿಸಿ ಉದ್ಘಾಟಿಸಿದರು.
ಪ್ರಾದೇಶಿಕ ಭಾಷೆಯಲ್ಲೀಗ ತುಳು
ಚಿತ್ರರಂಗ ಅಗ್ರ
ಪಂಕ್ತಿಯಲ್ಲಿದೆ. ತುಳು ಸಿನಿಮಾರಂಗದಲ್ಲಿ
ಅನೇಕ ಸಿನಿಮಾಗಳು ನಿರ್ಮಾಣವಾಗುತ್ತಿದೆ. ನಮ್ಮ ಭಾಷೆ,
ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವ ಕಾರ್ಯಗಳು
ತುಳು ಸಿನಿಮಾಗಳಿಂದ ನಡೆಯುತ್ತಿದೆ
ಎಂದವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ
ಅಕಾಡೆಮಿಯ ಅಧ್ಯಕ್ಷ ಎ.ಸಿ
ಭಂಡಾರಿ ಅವರು ಮಾತನಾಡಿ, ಪ್ರತೀ
ವರ್ಷ ತುಳು ಸಿನಿಮಾಗಳ ಬಿಡುಗಡೆಯ
ಸಂಖ್ಯೆಯೂ ಹೆಚ್ಚುತ್ತಿದೆ. ಸದಭಿರುಚಿಯ ತುಳು ಸಿನಿಮಾಗಳ ಜತೆಗೆ
ಸಮಾಜಕ್ಕೆ ಸಂದೇಶ ನೀಡುವ ಸಿನಿಮಾಗಳು
ಮೂಡಿ ಬರಲಿ ಎಂದು ಹಾರೈಸಿದರು.
ಖ್ಯಾತ ಚಲನಚಿತ್ರ ನಿರ್ಮಾಪಕ ಡಾ. ಸಂಜೀವ ದಂಡೆಕೇರಿ,
ಪ್ರಕಾಶ್ ಪಾಂಡೇಶ್ವರ್, ಸಂಗೀತ ನಿರ್ದೇಶಕ ಚಂದ್ರಕಾಂತ್
ಎಸ್.ಪಿ, ನಿರ್ಮಾಪಕ
ರಾಮಕೃಷ್ಣ ಶೆಟ್ಟಿ,
ನಿರ್ದೇಶಕ ಗಂಗಾಧರ ಕಿರೋಡಿಯನ್, ವಿ.ಜಿ ಪಾಲ್, ತಮ್ಮ ಲಕ್ಷ್ಮಣ್, ವಿಜಯ
ಕುಮಾರ್ ಕೊಡಿಯಾಲ್ಬೈಲ್, ಕಿಶೋರ್ ಡಿ
ಶೆಟ್ಟಿ, ತುಳು ಚಲನ ಚಿತ್ರ
ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್
ಬ್ರಹ್ಮಾವರ, ರಾಜ್ಯ ಪತ್ರಕರ್ತರ
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ
ಶೆಟ್ಟಿ ಬಾಳ, ಮಧು
ಸುರತ್ಕಲ್, ಆರ್.ಎನ್ ಶೆಟ್ಟಿ
ಕಳವಾರು, ಸತೀಶ್ ಶೆಟ್ಟಿ ಎಕ್ಕಾರು,
ಕೀರ್ತಿರಾಜ ಶೆಟ್ಟಿ, ವಸಂತ ಪೂಜಾರಿ,
ಅಶೋಕ ಮಾಡ, ಸುಧೀರ್ ಭಂಡಾರಿ,
ಜಯಶೀಲ, ಜಯಾನಂದ ಅಮೀನ್, ಸುರೇಶ್
ದೇವಾಡಿಗ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.
ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ
ನಿರ್ವಹಿಸಿದರು.
ಪುಂಡಿಪಣವು
ತುಳು ಚಲನ ಚಿತ್ರವು ಮಂಗಳೂರಿನಲ್ಲಿ
ಜ್ಯೋತಿ, ಪಿವಿಆರ್, ಬಿಗ್ ಸಿನಿಮಾಸ್, ಸಿನಿಪೊಲೀಸ್
ಉಡುಪಿಯಲ್ಲಿ ಆಶೀರ್ವಾದ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಮೂಡಬಿದ್ರೆಯಲ್ಲಿ
ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್, ಮಣಿಪಾಲದಲ್ಲಿ ಐನಾಕ್ಸ್, ಬಿಗ್
ಸಿನಿಮಾಸ್, ಸುಳ್ಯದಲ್ಲಿ ಸಂತೋಷ್, ಸುರತ್ಕಲ್ನಲ್ಲಿ
ನಟರಾಜ್ ಮೊದಲಾದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ.
ಪುಂಡಿಪಣವು
ಸಿನಿಮಾದಲ್ಲಿ ತುಳುನಾಡಿನ ಶ್ರೀಮಂತ ಸಂಸ್ಕೃತಿಯ ಸೊಬಗಿದೆ.
ಗುತ್ತಿನ ಮನೆ ಸಹಿತ ಹಲವು
ಜನಪದೀಯ ವಿಷಯಗಳನ್ನು ಹೊಂದಿರುವ ಈ ಚಿತ್ರದಲ್ಲಿ ತುಳುನಾಡಿನ
ಮಣ್ಣಿನ ಪರಿಮಳವಿದೆ. ಮರೆಯಾಗುತ್ತಿರುವ ಕೆಲವೊಂದು ವಿಚಾರಗಳನ್ನು ಪುಂಡಿಪಣವು ಸಿನಿಮಾ ಹೊಸ ತಲೆಮಾರಿನ
ಯುವ ಜನತೆಗೆ ತಿಳಿಸಿಕೊಡುವ ಪ್ರಯತ್ನ
ಮಾಡಲಾಗಿದೆ. ಪುಂಡಿಪಣವು ಸಿನಿಮಾಕ್ಕೆ ಕಾರ್ಕಳ ಶಿರೂರು ಮಠ,
ಹಿರಿಯಡ್ಕ ಮೊದಲಾದ ಕಡೆಗಳಲ್ಲಿ ಒಂದೇ
ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ದೇಶಕ ಗಂಗಾಧರ
ಕಿರೋಡಿಯನ್ ತಿಳಿಸಿದರು.
ಪುಂಡಿಪಣವು ಕಥೆ
ಸಾರಾಂಶ
: ಮಾಲಾಡಿ, ಪೇಜಾವರ, ಬಂಗಾಡಿ, ಮುಗೇರ
ಪಾಲೆಮಾರ್ ಈ ಐದು ಮಾಗಣೆಗಳಿಗೆ
ನಾಗಲಾಡಿಯ ನಾಗದೇವರು, ದೈವ ಪಂಜುರ್ಲಿ ಮೂಲ
ಶಕ್ತಿಗಳು. ಇದಕ್ಕೆ ಸಂಬಂಧಪಟ್ಟ ಜಾಗದಲ್ಲಿ
ಯಾರೇ ವಾಸವಾಗಿದ್ದರೂ ಅವರು ಬಾಡಿಗೆ ರೂಪದಲ್ಲಿ
ಪ್ರತಿವರ್ಷ ಸೋಣ ಸಂಕ್ರಮಣ ದಂದು
ಪುಂಡಿಪಣವು ದೈವ ದೇವರಿಗೆ ಸಲ್ಲಿಸಬೇಕು.
ಒಂದು ವೇಳೆ ಏನಾದರೂ ತೊಂದರೆಗಳಿಂದ
ಪುಂಡಿಪಣವು ಸಲ್ಲಿಸಲು ಅಸಾಧ್ಯವಾದಾಗ ದೈವ ದೇವರ ಕ್ಷಮೆ
ಇದೆ. ಅನ್ಯಾಯ ಅಹಂಕಾರದಿಂದ ಸಲ್ಲಿಸದೇ
ಹೋದಾಗ ಅವರಿಗೆ ಮಹಾಶಕ್ತಿಗಳಿಂದ ಸಿಗುವ
ಶಿಕ್ಷೆಯಿಂದ ಬುದ್ಧಿ ಕಲಿತು ದೈವ
ದೇವರಿಗೆ ಶರಣಾಗುವ ಕಥೆಯೇ ಪುಂಡಿಪಣವು.