ತುಳು ಭಾಷೆಯ ಪ್ರಪ್ರಥಮ ಶಾಸನ ದಕ ಜಿಲ್ಲೆಯ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಪತ್ತೆ…! - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ತುಳು ಭಾಷೆಯ ಪ್ರಪ್ರಥಮ ಶಾಸನ ದಕ ಜಿಲ್ಲೆಯ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಪತ್ತೆ…!

Share This
BUNTS NEWS, ಮಂಗಳೂರು: ತುಳು ಭಾಷಾ ಲಿಪಿಯ ಪ್ರಪ್ರಥಮ ಶಾಸನವೊಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಪತ್ತೆಯಾಗಿದೆ.
ಬಹಳಷ್ಟು ಪುರಾತನವಾಗಿರುವ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಗರ್ಭಗುಡಿ ಹಾಗೂ ದೇವಳದ ತುಳಸಿಕಟ್ಟೆಯ ಬಳಿ ಹಳೆಯ ಶಾಸನವಿದ್ದು ಇದುವರೆಗೆ ಶಾಸನದೊಳಗಿನ ವಿಚಾರವನ್ನು ತಿಳಿಯಲಾಗಿರಲಿಲ್ಲ. ಇತ್ತಿಚೇಗಷ್ಟೆ ಈ ಶಾಸನದ ಬಗ್ಗೆ ತಿಳಿದ ಶಿರ್ವದ ಎಂಎಸ್.ಆರ್.ಎಸ್. ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ. ಟಿ.ಮುರುಗೇಶಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಶಾಸನದ ಬಗ್ಗೆ ಅಧ್ಯಯನ ನಡೆಸಿದ್ದು ಶಾಸನದಲ್ಲಿನ ಲಿಪಿಯನ್ನು, ಮಾಹಿತಿಯನ್ನು ಬೆಳಕಿಗೆ ತಂದಿದ್ದಾರೆ.

ಶಾಸನದ ಮಹತ್ವ: ಶಾಸನ ಆಳುಪರ ಚರಿತ್ರೆ ಮತ್ತು ತುಳು ಸಾಹಿತ್ಯ ಹಾಗೂ ತುಳು ಲಿಪಿ ಅಧ್ಯಯನದ ದೃಷ್ಠಿಯಿಂದ ಅತ್ಯಂತ ಮಹತ್ವದ ದಾಖಲೆಯಾಗಿದೆ. ಈ ಶಾಸನ 1 ನೇ ಕುಲಶೇಖರ ಆಳುಪೇಂದ್ರನ ಕುರಿತಾಗಿ ದೊರೆಯುವ ಪ್ರಪ್ರಥಮ ಶಾಸನವಾಗಿದೆ. ಇದುವರೆಗೆ ಕ್ರಿ.ಶ. 1162 ರ ಕೊರ್ಸಿ-ಕಾಲ್ತೋಡು ಶಾಸನವನ್ನು ಆತನ ಪ್ರಥಮ ಶಾಸನವೆಂದು ಭಾವಿಸಲಾಗಿತ್ತು. ಆದರೆ, ಕುಲಶೇಖರದ ತುಳು ಶಾಸನ ಆತನ ಆಳ್ವಿಕೆಯ ಕ್ರಿ.ಶ. 1159ರ ಕಾಲಕ್ಕೆ ಸಂಬಂಧಿಸಿರುವುದರಿಂದ, ಇದೇ ಆತನ ಪ್ರಥಮ ಶಾಸನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಾಸನದಲ್ಲಿ ಶುದ್ಧ ತುಳು ಪದಗಳಾದ ಧನುಪುಳೇ, ರತ್ನತೆಂದ್, ಸಕ್, ಪದರಾಡ್, ಪದಿರಾಡ್, ದಿಕ್ಕ್, ಲೋಕೊಂತಮಾಂತ ಮುಂತಾದ ಪದಗಳನ್ನು ಬಳಸಲಾಗಿದೆ. ಆದ್ದರಿಂದ ಈ ಶಾಸನವನ್ನು ತುಳು ಭಾಷೆಯ ಅತ್ಯಂತ ಪ್ರಾಚೀನ ಹಾಗೂ ಪ್ರಪ್ರಥಮ ಶಾಸನವೆಂದು ಪರಿಗಣಿಸಬಹುದಾಗಿದೆ. ಈ ಶಾಸನ ಶೋಧ, ತುಳು ಭಾಷೆಯನ್ನು ಸಂವಿಧಾನದ ಎಂಟನೇ  ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಹೋರಾಟಕ್ಕೆ ಪ್ರಬಲ ಆಧಾರವಾಗಿದೆ.

ತುಳು ಲಿಪಿ ಮತ್ತು ತುಳು ಭಾಷೆಯಲ್ಲಿ ಬರೆದ ಅತ್ಯಂತ ಪ್ರಾಚೀನ  ಶಾಸನ ಮಂಗಳೂರಿನ ಕುಲಶೇಖರದ ಶ್ರೀವೀರನಾರಯಣ ದೇವಾಲಯದಲ್ಲಿ ಪತ್ತೆಯಾಗಿದೆ. ಆಳುಪ ಚಕ್ರವರ್ತಿ 1 ನೇ ಕುಲಶೇಖರನ ಕಾಲದ ಈ ಶಾಸನವನ್ನು ಸಂಪೂರ್ಣವಾಗಿ ತುಳು ಭಾಷೆಯಲ್ಲಿ ರಚಿಸಲ್ಪಟ್ಟಿರುವುದು ತುಳು ಭಾಷೆ ಹಾಗೂ ಸಂಸ್ಕøತಿಯ ಅಧ್ಯಯನಕ್ಕೆ ಭದ್ರವಾದ ಬುನಾದಿಯನ್ನು ಒದಗಿಸಿದೆ.

ಈ ಶಾಸನ “ಶ್ರೀ ಹರಿಯೇ ನಮಃ ಎಂಬ ಒಂದು ಸಾಲಿನ ಪ್ರಾರ್ಥನಾ ಶ್ಲೋಕದೊಂದಿಗೆ ಆರಂಭವಾಗಿದೆ. ನಂತರ ಶಾಸನದಲ್ಲಿ ಸೌರ ಪಂಚಾಗದ ರೀತ್ಯಾ ಕಾಲಮಾನವನ್ನು ಉಲ್ಲೇಖಿಸಲಾಗಿದೆ. ಶಾಸನೋಕ್ತ ವಿವರದ ಪ್ರಕಾರ “ಸಕ್ ಪದರಾಡ್ ಅಂದರೆ ಶಕ 12, ಮೇಘ ಮಾಸ, ಕೃಷ್ಣ ಪಕ್ಷ ದಲ್ಲಿ ಧನುಪುಳೇ (9ನೇ ರಾಶಿ) ಅಂದರೆ 9ನೇ ದಿನ ಕಳೆದು ಎಂದು ಅರ್ಥವಿಸಿಕೊಂಡಲ್ಲಿ  ಈ ಶಾಸನದ ಕಾಲ ಕ್ರಿ.ಶ. 1159, ಫೆಬ್ರವರಿ 10, ಶನಿವಾರ ಕ್ಕೆ ಸರಿಹೊಂದುತ್ತದೆ. ನಂತರ ಶಾಸನ “ಪದಿರಾಡ್ ಊರು ಸೀಮೆಲ ಎಂದು ಉಲ್ಲೇಖಿಸಿದ್ದು, ಈ ದೇವಾಲಯ 12 ಊರುಗಳಿಗೆ ಪಿತೃ ದೇವತೆಯಾಗಿತ್ತೆಂದು ತಿಳಿಸುತ್ತದೆ. ಶಾಸನದ 9 ನೇ ಸಾಲಿನಲ್ಲಿ “ಕುಳೆ [ಸೇಖರ] ಲೋಕೋಂತಮಾಂತ’ ಎಂಬ ಉಲ್ಲೇಖವಿದೆ. ಅಂದರೆ ಭುವನ ಅಥವಾ ಲೋಕ ವಿಖ್ಯಾತ ಕುಲಶೇಖರನೆಂದು, ಆಳುಪ ದೊರೆಯನ್ನು ಕೊಂಡಾಡಲಾಗಿದೆ. ಮುಂದಿನ ಸಾಲುಗಳು ನೆಲದಲ್ಲಿ ಹುಗಿದು ಹೋಗಿವೆ. ಶಾಸನದ ಮೂಲ ಉದ್ದೇಶ ‘ಧರ್ಮಸೇನಜ’ ಎಂಬ ವ್ಯಕ್ತಿ ತಾನು ಮಾಡಿದ ಯಾವುದೋ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೊಂಡದ್ದನ್ನು ದಾಖಲಿಸುವುದು ಶಾಸನದ ಮೂಲ ಉದ್ದೇಶವಾಗಿದೆ.

Pages