ಗುತ್ತಿನಮನೆ ಅನುಪಮಾ ಶೆಟ್ಟಿಯ ನಿಗೂಢ ಕೊಲೆ: ಪಂಜುರ್ಲಿಯ ಧರ್ಮದ ತೀರ್ಪಿಗೆ ಸೆರೆಯಾದ ಅಪರಾಧಿಗಳು..! - BUNTS NEWS WORLD

ಗುತ್ತಿನಮನೆ ಅನುಪಮಾ ಶೆಟ್ಟಿಯ ನಿಗೂಢ ಕೊಲೆ: ಪಂಜುರ್ಲಿಯ ಧರ್ಮದ ತೀರ್ಪಿಗೆ ಸೆರೆಯಾದ ಅಪರಾಧಿಗಳು..!

Share This
BUNTS NEWS, ಮಂಗಳೂರು: ಅಂದು ನೆತ್ತರಕೆರೆಯ ಪಂಜುರ್ಲಿ ದೈವದ ವರ್ಷವಾಧಿ ಕೋಲದ ದಿನ. ಊರಿಗೆ ಊರೇ ಕೋಲ ನೋಡಲು ತೆರಳಿತ್ತು. ಆದರೆ ಅಂದಿನ ರಾತ್ರಿ ನೆತ್ತರಕೆರೆಯ ಪ್ರತಿಷ್ಠಿತ ಗುತ್ತಿನಮನೆಯಲ್ಲಿ ನಡೆಯಬಾರದ ಘಟನೆ ನಡೆದಿತ್ತು. ಕೋಲಕ್ಕೆ ಹೊರಡಲು ಸಿದ್ದವಾಗಿದ್ದ ಗುತ್ತಿನಮನೆ ಯಜಮಾನಿ ಅನುಪಮಾ ಶೆಟ್ಟಿಯ ನಿಗೂಢ ರೀತಿಯಲ್ಲಿ ಹತ್ಯೆಯಾಗಿತ್ತು. ಜೊತೆಗೆ ಆಕೆಯ ಮಗು ‘ಪುಟ್ಟ’ ಮರೆಯಾಗಿತ್ತು…!
ಸರಿಸುಮಾರು 25 ವರ್ಷಗಳ ನಂತರ ಧರ್ಮ ದೈವ ಪಂಜುರ್ಲಿಯು ನೀಡಿದ ಮಾತಿನಂತೆ ಈ ಘಟನೆಗೆ ಸಂಬಂಧಿಸಿದ ಎಲ್ಲಾ ಅಪರಾಧಿಗಳು ಸೆರೆಯಾಗುತ್ತಾರೆ. ಹೌದು ಇದು ಇತ್ತಿಚೇಗೆಯಷ್ಟೇ ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ‘ಅನುಕ್ತ’ ಸಿನಿಮಾ ಕತೆಯಿದು.

ಪ್ರಾರಂಭದಲ್ಲಿ ಭಾಸ್ಕರ ಶೆಟ್ಟಿ ಕೊಲೆಯಿಂದ ಆರಂಭವಾಗುವ ಸಿನಿಮಾ ಹಲವು ಕುತೂಹಲಕಾರಿ ತಿರುವು ಪಡೆಯುತ್ತದೆ. ಕ್ಷಣ ಕ್ಷಣಕ್ಕೂ ನಿಗೂಢತೆ, ಅಪರಾಧಿಗಳು ಯಾರೆಂಬ ತಿಳಿಯುವ ಕಾತರವನ್ನು ಪ್ರೇಕ್ಷಕರಲ್ಲಿ ಸಿನಿಮಾ ಮೂಡಿಸುತ್ತದೆ. ಚಿತ್ರದ ನಾಯಕ ನಟನಾಗಿ ಕಾರ್ತಿಕ್ ಅತ್ತಾವರ, ನಟಿಯಾಗಿ ಸಂಗೀತಾ ಭಟ್, ಅನುಪಮಾ ಶೆಟ್ಟಿಯಾಗಿ ಕನ್ನಡದ ಹಿರಿಯ ನಟಿ ಅನುಪ್ರಭಾಕರ್, ಧರ್ಮಣ್ಣ ಶೆಟ್ಟಿ ಪಾತ್ರದಲ್ಲಿ ಬಹುಭಾಷಾ ನಟ ಸಂಪತ್ ಕುಮಾರ್, ಶ್ರೀಧರ್, ಮಠ ಕೊಪ್ಪಳ, ಪೊಲೀಸ್ ಪೇದೆಯಾಗಿ ರಮೇಶ್ ರೈ ಕುಕ್ಕುವಳ್ಳಿ ಹಾಗೂ ಇನ್ನಿತರ ಪ್ರಮುಖ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.

ತುಳುನಾಡಿನ ದೈವರಾಧನೆಯಲ್ಲಿ ಬರೋ ದೈವದ ನುಡಿ, ತೀರ್ಪುಗಳು ಎಂದಿಗೂ ಸುಳ್ಳಾಗಲಾರದೆಂಬ ಜನರ ನಂಬಿಕೆಯನ್ನು ಚಿತ್ರದ ಕಥೆಯ ಜತೆ ಸಮೀಕರಿಸಲಾಗಿದೆ. ಒಟ್ಟಿನಲ್ಲಿ ‘ಅನುಕ್ತ’ ಒಂದು ಉತ್ತಮ ಥ್ರೀಲ್ಲರ್ ಸಿನಿಮಾವಾಗಿದ್ದು ಈಗಾಗಲೇ ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸಿನಿಮಾದ ನಿಗೂಢತೆಯ ಕಥೆಗೆ ತಕ್ಕಂತೆ ಬರೋ ಹಿನ್ನೆಲೆ ಸಂಗೀತ, ಬೆಳಕಿನ ಸಂಯೋಜನೆ ಹಾಗೂ ಕ್ಯಾಮೇರಾ ವರ್ಕ್ ಸಿನಿಮಾದ ಕಥೆಗೆ ಜೀವ ತುಂಬುವಲ್ಲಿ ಉತ್ತಮ ಪಾತ್ರವಹಿಸಿದೆ. ‘ಅನುಕ್ತ’ ಸಿನಿಮಾ ದೇಯಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗಿದ್ದು, ಹರೀಶ್ ಬಂಗೇರ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಅಶ್ವಥ ಸ್ಯಾಮುಯಲ್ ಅವರು ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. ಬರಹ: ರವಿರಾಜ್ ಕಟೀಲು

Pages