ಮಂಗಳೂರು: ನಿರಾಶಾವಾದದ ಕವನಗಳು ಹೆಚ್ಚುತ್ತಿದ್ದು ಸಮಾಜದ
ಋಣಾಂಶಗಳನ್ನೇ ಕವಿಗಳು ವಸ್ತುವಾಗಿ ಬಳಸುತ್ತಿದ್ದಾರೆ.
ಪ್ರಸಕ್ತ ಸಮಾಜದ ಬದಲಾವಣೆ ಗಮನಿಸಿಯೇ
ಅವರು ಬರೆಯುತ್ತಾರಾದರೂ ಅದನ್ನು ಒಳಿತಿನೆಡೆಗೆ ಕೊಂಡೊಯ್ಯುವ ಧನಾತ್ಮಕ
ಚಿಂತನೆಯಿಂದ ಅರ್ಥಪೂರ್ಣ ಕವನಗಳನ್ನು ಕಟ್ಟಲು ಸಾಧ್ಯವಿದೆ ಎಂದು
ಕವಿ, ಸಾಹಿತಿ ಪ್ರೊ. ಭಾಸ್ಕರ ರೈ
ಕುಕ್ಕುವಳ್ಳಿ ಹೇಳಿದ್ದಾರೆ.
ಅವರು ದೇರಳಕಟ್ಟೆ
ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ಜರಗಿದ ಕನ್ನಡ ನಾಡು-ನುಡಿ
ವೈಭವದ 'ರತ್ನೋತ್ಸವ' ಕರಾವಳಿ ಕರ್ನಾಟಕದ ಸಾಹಿತ್ಯ
ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಂಗವಾಗಿ ಜರಗಿದ 'ಕವಿ-ಕಾವ್ಯಗಾನ ಕುಂಚ' ತ್ರಿಭಾಷಾ ಕವಿಗೋಷ್ಠಿಯ
ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕವಿಗಳು
ಆಶಾವಾದಿಗಳಾಗಿರಬೇಕು. ಜೀವನದಲ್ಲಿ ಸಂಭ್ರಮಿಸುವ ಕ್ಷಣಗಳನ್ನು ಅವರು ತಮ್ಮ ಕಾವ್ಯಗಳಲ್ಲಿ
ದಾಖಲಿಸಬೇಕು. ಸದಾ ಕನಸುಗಳನ್ನು ಹಂಚುವ
ಕವಿಗಳಿಗೆ ವಿಷಾದ ಸಲ್ಲದು ಎಂದರು.
ಕವಿಗಳಾದ
ಗೋಪಾಲಕೃಷ್ಣ ಭಟ್ ಕಟ್ಟತ್ತಿಲ, ವಿಶ್ವನಾಥ
ಶೆಟ್ಟಿ ತೀರ್ಥಹಳ್ಳಿ, ಹಂಝ ಮಲಾರ್, ಲತೀಶ್
ಎಂ. ಸಂಕೋಳಿಗೆ, ವಿಜಯಲಕ್ಷ್ಮಿ ಪ್ರಸಾದ್ ರೈ, ಅಕ್ಷಯ
ಆರ್. ಶೆಟ್ಟಿ, ವಸಂತಿ ನಿಡ್ಲೆ,
ಅಕ್ಷತಾರಾಜ್ ಪೆರ್ಲ, ಶ್ಯಾಮಿಲಿ ಪ್ರವೀಣ್
ಬೆದ್ರ ಮತ್ತು ವಾಣಿ ಲೋಕಯ್ಯ
ಕನ್ನಡ, ತುಳು ಮತ್ತು ಬ್ಯಾರಿ
ಕವನಗಳನ್ನು ಓದಿದರು.
ಗೋಷ್ಠಿಯಲ್ಲಿ
ಓದಿದ ಕವನಗಳನ್ನು ಗಾಯಕರಾದ ತೋನ್ಸೆ ಪುಷ್ಕಳಕುಮಾರ್
ಮತ್ತು ಸಂಗೀತ ಬಾಲಚಂದ್ರ ಸ್ವರ
ಬದ್ಧಗೊಳಿಸಿ ಹಾಡಿದರು. ಸತೀಶ್ ಸುರತ್ಕಲ್, ದೇವರಾಜ
ಆಚಾರ್, ನವಗಿರಿ ಗಣೇಶ್, ರಾಜೇಶ್
ಭಾಗವತ್ ಹಿಮ್ಮೇಳದಲ್ಲಿ ಸಹಕರಿಸಿದರು. ಕುಂಚ ಕಲಾವಿದ ಮುರಳೀಧರ
ಆಚಾರ್ ಸಾಂದರ್ಭಿಕ ಚಿತ್ರಗಳನ್ನು ರಚಿಸಿ ಗೋಷ್ಠಿಗೆ ಚಿತ್ತಾರದ
ರಂಗು ನೀಡಿದರು.
ಸಮ್ಮೇಳನದ
ಸರ್ವಾಧ್ಯಕ್ಷ ಡಾ.ನಾ ಡಿಸೋಜ
ಉಪಸ್ಥಿತರಿದ್ದರು. ದೇರಳಕಟ್ಟೆ ರತ್ನ ಎಜ್ಯುಕೇಶನ್ ಟ್ರಸ್ಟ್
ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ
ಉಳಿದೊಟ್ಟು ಮತ್ತು ಶಾಲಾ ಸಂಚಾಲಕಿ
ಸೌಮ್ಯಾ ಆರ್.ಶೆಟ್ಟಿ ಕವಿ-ಕಲಾವಿದರನ್ನು ಗೌರವಿಸಿದರು. ಶಿಕ್ಷಕರಾದ ನವೀನ್
ಮತ್ತು ರಮೇಶ್ ಪೆರಾಡಿ ನಿರೂಪಿಸಿದರು.