ಮಂಗಳೂರು: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಚಾರ್ಯ ಮಠ ವಠಾರ, ಶ್ರೀ ವೆಂಕಟರಮಣ ದೇವಸ್ಥಾನ, ರಥಬೀದಿ, ಇದರ ಅತ್ಯಂತ ಪುರಾತನ ಉತ್ಸವ ಮಂಗಳೂರು ಶಾರದೆ 96ನೇ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಶಾರದಾ ಮಾತೆಯ ವಿಗ್ರಹ ಮಹಾಮಾಯ ತೀರ್ಥದಲ್ಲಿ ಜಲಸ್ತಂಭನ ವಿಜೃಂಭಣೆಯಿಂದ ಜರಗಿತು.
ಮಂಗಳೂರು ಶಾರದೆಯ ವೈಶಿಷ್ಟ್ಯವೆಂದರೆ ಶಾರದಾ ಮಾತೆಯ ಶೋಭಾಯಾತ್ರೆ. ಶ್ರೀದೇವಿಯ ಉತ್ಸವ ಸ್ಥಾನದಿಂದ ಹೊರಟು ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಪುಷ್ಪದಿಂದ ಅಲಂಕೃತಗೊಂಡ ಲಾಲಕಿಯಲ್ಲಿ ಆಸೀನಳಾಗಿ, ಭಕ್ತರು ಆ ಲಾಲಕಿಯನ್ನು ತಮ್ಮ ಭುಜದಲ್ಲಿರಿಸಿ ಶೋಭಾಯಾತ್ರೆಯ ಉದ್ದಕ್ಕೂ ಕೊಂಡೊಯ್ಯುವ ದೃಶ್ಯ ಅತ್ಯಂತ ಮನೋಹರ.
ಲಾಲಕಿಯಲ್ಲಿ ವಿರಾಜಮಾನವಾಗಿರುವ ಶಾರದೆಯನ್ನು ವೀಕ್ಷಿಸಲು ಶೋಭಾಯಾತ್ರೆ ಸಾಗುವ ಬೀದಿಗಳ ಇಕ್ಕೆಲಗಳಲ್ಲೂ ಸಹಸ್ರಾರು ಭಕ್ತಾದಿಗಳು ನೆರೆದಿರುತ್ತಾರೆ. ಆಕರ್ಷಕ ಸುಡುಮದ್ದು ಪ್ರದರ್ಶನ, ವಿವಿಧ ಟ್ಯಾಬ್ಲೋಗಳು, ವಾದ್ಯವೃಂದ, ಹುಲಿವೇಷ ಕುಣಿತ ಮೆರವಣಿಗೆಗೆ ಮತ್ತಷ್ಟು ರಂಗು ತಂದುಕೊಡುತ್ತದೆ.
ಮಂಗಳೂರು ಶಾರದೆಯ ಆಕರ್ಷಣೆಯೇ ಹುಲಿವೇಷ. ಇಲ್ಲಿ ವೇಷ ಹಾಕಿದ ತಂಡಗಳಿಗೆ ವಿಶೇಷ ಮರ್ಯಾದೆ ನೀಡುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಹುಲಿವೇಷಧಾರಿಗಳು ಧಾರ್ಮಿಕ ಕಟ್ಟುಪಾಡುಗಳಲ್ಲಿ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ರಾತ್ರಿ 8 ಗಂಟೆಗೆ ಶ್ರೀ ಶಾರದಾ ಮಾತೆಯ ಬೃಹತ್ ವಿಸರ್ಜನಾ ಶೋಭಾಯಾತ್ರೆಯು ಉತ್ಸವ ಸ್ಥಾನದಿಂದ ಹೊರಟು ಶ್ರೀ ಮಹಾಮ್ಮಾಯಿ ದೇವಸ್ಥಾನ, ಗದ್ದೆಕೇರಿ, ಕೆನರಾ ಹೈಸ್ಕೂಲ್ ಹಿಂಬದಿ ರಸ್ತೆಯಿಂದ ನವಭಾರತ ವೃತ್ತ ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರಾ ಟಾಕೀಸ್, ಬಸವನಗುಡಿ, ಚಾಮರಗಲ್ಲಿ ರಥಬೀದಿಯಾಗಿ ಶ್ರೀ ಮಾಹಾಮಾಯಾ ತೀರ್ಥದಲ್ಲಿ ವಿಸರ್ಜನೆಗೊಂಡಿತು. ಚಿತ್ರ: ಮಂಜು ನೀರೇಶ್ವಾಲ್ಯ