ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು
ಪ್ರದರ್ಶನ ವೇದಿಕೆಯು ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುವ ಆರನೇ ವರ್ಷದ ನುಡಿಹಬ್ಬ
‘ಯಕ್ಷಗಾನ ತಾಳಮದ್ದಳೆ ಸಪ್ತಾಹ-2018’ ಇದೇ ನ.9ರಿಂದ 12ರ ವರೆಗೆ ನಗರದ ಎಸ್.ಡಿ.ಎಂ. ಲಾ ಕಾಲೇಜು
ಸಭಾಂಗಣದಲ್ಲಿ ಜರಗಲಿದೆ. ಈ ಸಂದರ್ಭದಲ್ಲಿ ನೀಡಲಾಗುವ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ-2018’ಕ್ಕೆ
ಖ್ಯಾತ ಉದ್ಯಮಿ ಹಾಗೂ ಕಲಾಪೋಷಕ ಎ.ಕೆ. ಜಯರಾಮ ಶೇಖ ಮತ್ತು ‘ಯಕ್ಷಾಂಗಣ ಪ್ರಶಸ್ತಿ-2018’ ವಾರ್ಷಿಕ
ಗೌರವಕ್ಕೆ ಯಕ್ಷಗಾನ ಗುರು ಹಾಗೂ ಬಡಗುತಿಟ್ಟಿನ ಹಿರಿಯ ಭಾಗವತ ತೋನ್ಸೆ ಜಯಂತ ಕುಮಾರ್ ಆಯ್ಕೆಯಾಗಿದ್ದಾರೆ.
ಎ.ಕೆ.
ಜಯರಾಮ ಶೇಖ: ಅರ್ಕುಳ ಕುಂಪಣಮಜಲು ಎ.ಕೆ. ಬಾಬು ಶೇಖ ಮತ್ತು ಮಿಜಾರು ಲಕ್ಷ್ಮೀ ಬಿ. ಶೇಖ ದಂಪತಿಗೆ
ಜನವರಿ 15, 1944ರಂದು ಜನಿಸಿದ ಎ.ಕೆ. ಜಯರಾಮ ಶೇಖರಿಗೆ ಈಗ 75ರ ಹರೆಯ. ಕೇವಲ ಎಂಟನೆ ತರಗತಿ ಕಲಿತು
ಭಾರತ್ ಮೋಟಾರ್ಸ್ ಬಸ್ ನಿರ್ವಾಹಕನಾಗಿ ಬದುಕು ಪ್ರಾರಂಭಿಸಿದ ಅವರು ಬಳಿಕ ಶ್ರೇಷ್ಠ ಉದ್ಯಮಿಯಾಗಿ ಬೆಳೆದರು.
1981ರಲ್ಲಿ ಸ್ವತಃ ಬಸ್ ಮಾಲಕರಾಗಿ ಮಹೇಶ್ ಮೋಟಾರ್ಸ್ ಸಂಸ್ಥೆಯನ್ನು ಸ್ಥಾಪಿಸಿದರು. ವಾಹನ ಕಾರ್ಮಿಕ
ಸಂಘದ ಜತೆ ಕಾರ್ಯದರ್ಶಿಯಾಗಿ, ದ.ಕ. ಜಿಲ್ಲಾ ಬಸ್ ಮಾಲಕ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕರ್ನಾಟಕ
ರಾಜ್ಯ ಬಸ್ ಮಾಲಕರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯಕ್ಷಗಾನ
ಕಲಾಭಿಮಾನಿಯಾಗಿರುವ ಜಯರಾಮ ಶೇಖರು ತಮ್ಮ ಮಾವ ಹಿರಿಯ ಅರ್ಥಧಾರಿ ದಿ| ಎ.ಕೆ. ನಾರಾಯಣ ಶೆಟ್ಟರ ಹೆಸರಿನಲ್ಲಿ
ಯಕ್ಷಗಾನ ಕಾರ್ಯಕ್ರಮವನ್ನು ಸಂಘಟಿಸುತ್ತಿದ್ದಾರೆ. 1979ರಲ್ಲಿ ನವಶಕ್ತಿ ಫಿಲಂ ಪ್ರೈ. ಲಿ. ಬೆಂಗಳೂರು
ಇವರು ಪಿ. ಲಂಕೇಶ್ ಅವರ ನಿರ್ದೇಶನದಲ್ಲಿ ತಯಾರಿಸಿದ
‘ಎಲ್ಲಿಂದಲೋ ಬಂದವರು’
ಕನ್ನಡ ಚಲನಚಿತ್ರದ ನಿರ್ಮಾಪಕರಾಗಿಯೂ ಅವರು ಗಮನಸೆಳೆದಿದ್ದಾರೆ. ಫರಂಗಿಪೇಟೆಯಲ್ಲಿ ತಾನು ಕಲಿತ ಅನುದಾನಿತ
ಶ್ರೀರಾಮ ವಿದ್ಯಾ ಸಂಸ್ಥೆಯ ಅಭಿವೃದ್ಧಿ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಅದರ ಶತಮಾನೋತ್ಸವ
ಸಮಿತಿಯ ಕಾರ್ಯಾಧ್ಯಕ್ಷರಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಕಾರಣಕರ್ತರೆನಿಸಿದ್ದಾರೆ.
ಕಲಾಪೋಷಕರ
ನೆಲೆಯಲ್ಲಿ 2018-19ನೇ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಎ.ಕೆ. ಜಯರಾಮ ಶೆಟ್ಟರನ್ನು ಆಯ್ಕೆ
ಮಾಡಲಾಗಿದ್ದು, ತಾಳಮದ್ದಳೆ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಈ ಪುರಸ್ಕಾರ ನೀಡಿ ಅವರನ್ನು ಸನ್ಮಾನಿಸಲಾಗುವುದು.
ತೋನ್ಸೆ ಜಯಂತ ಕುಮಾರ್: ಸಂಚಾರಿ ಯಕ್ಷಗಾನ ಭಂಡಾರ ಬಿರುದಾಂಕಿತ ತೋನ್ಸೆ
ಕಾಂತಪ್ಪ ಮಾಸ್ತರ್ ಮತ್ತು ಚೆಲುವಮ್ಮ ದಂಪತಿಗೆ ಸಪ್ಟೆಂಬರ್ 7, 1946ರಲ್ಲಿ ಜನಿಸಿದ ತೋನ್ಸೆ ಜಯಂತ
ಕುಮಾರ್ ಹಂಗಾರ ಕಟ್ಟೆ ಚೇತನಾ ಪ್ರೌಢಶಾಲೆಯಲ್ಲಿ ಭೋಧಕೇತರ ಸಿಬಂದಿಯಾಗಿ 38 ವರ್ಷ ಸೇವೆ ಸಲ್ಲಿಸಿ
2004ರಲ್ಲಿ ನಿವೃತ್ತರಾದರು. ಹಂಗಾರಕಟ್ಟೆ ಯಕ್ಷಗಾನ
ಕಲಾ ಕೇಂದ್ರದಲ್ಲಿ ಭಾಗವತ ರ್ನಾಣಪ್ಪ ಉಪ್ಪೂರು ಮತ್ತು ಮದ್ದಳೆಗಾರ ಬೆಳಿಂಜೆ ತಿಮ್ಮಪ್ಪ ನಾಯ್ಕರ ಶಿಷ್ಯನಾಗಿ
ಯಕ್ಷಗಾನ ಹಿಮ್ಮೇಳದಲ್ಲಿ ಪರಿಣತಿ ಹೊಂದಿ ಮುಂದೆ ಯಕ್ಷರಂಗದ ಶ್ರೇಷ್ಠ ನಿರ್ದೇಶಕ ಹಾಗೂ ಭಾಗವತರಾಗಿ
ಬೆಳೆದರು. ಕೃಷ್ಣ, ಮೀನಾಕ್ಷಿ, ದ್ರೌಪದಿ, ಹನುಮಂತ ಇತ್ಯಾದಿ ಪಾತ್ರಗಳ ಮೂಲಕ ಬಡಗುತಿಟ್ಟಿನ ವೇಷಧಾರಿಯಾಗಿಯೂ
ಹೆಸರು ಗಳಿಸಿದರು. ಸುಮಾರು 15 ಯಕ್ಷಗಾನ ತಂಡಗಳನ್ನು ಹಾಗೂ ತರಬೇತಿ ಶಿಬಿರಗಳನ್ನು ಸ್ಥಾಪಿಸಿ ನೂರಾರು
ಬಾಲಕ-ಬಾಲಕಿಯರಿಗೆ ಯಕ್ಷಗಾನವನ್ನು ಕಲಿಸಿ, ಕಲಾವಿದರನ್ನಾಗಿಸಿದ ಜಯಂತ ಕುಮಾರ್ ಉಡುಪಿ ಜಿಲ್ಲೆಯ ಕೆಲವು
ಪ್ರೌಢಶಾಲೆಗಳಲ್ಲಿ ಈಗಲೂ ಗುರುವಾಗಿ ತರಬೇತಿ ನೀಡುತ್ತಿದ್ದಾರೆ.
ಕರ್ನಾಟಕವಲ್ಲದೆ
ದೆಹಲಿ, ಸಿಂಗಾಪುರಗಳಲ್ಲೂ ಯಕ್ಷಗಾನ ಕಾರ್ಯಕ್ರಮಗಳನ್ನು ನೀಡಿರುವ ತೋನ್ಸೆ ಜಯಂತ ಕುಮಾರ್ 1996ರಲ್ಲಿ
ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರಿಂದ ಪುರಸ್ಕøತರಾಗಿದ್ದಾರೆ. 2007ರಲ್ಲಿ ಕರ್ನಾಟಕ ಜಾನಪದ ಮತ್ತು
ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೆ ಕರ್ನಾಟಕ ನಾಟಕ ಅಕಾಡೆಮಿಯ ರಂಗವಲ್ಲಿ ಪ್ರಶಸ್ತಿ,
ಉಡುಪಿ ಯಕ್ಷಗಾನ ಕಲಾರಂಗದ ಭಾಗವತ ನಾರ್ಣಪ್ಪ ಉಪ್ಪೂರ ಪ್ರಶಸ್ತಿ, ಕಲ್ಕೂರ ಪ್ರತಿಷ್ಠಾನದ ಶೇಣಿ ಸಂಸ್ಮರಣಾ
ಪ್ರಶಸ್ತಿ, ಬೆಂಗಳೂರು ಕಲಾಕದಂಬ ಆರ್ಟ್ ಸೆಂಟರ್‍ನಿಂದ ಗುಂಡ್ಮಿ ಕಾಳಿಂಗ ನಾವಡ ಪ್ರಶಸ್ತಿ ಇತ್ಯಾದಿ
ಗೌರವಗಳಿಗೆ ಪಾತ್ರರಾಗಿದ್ದಾರೆ.
ಯಕ್ಷಗಾನ
ರಂಗದ ಸವ್ಯಸಾಚಿಯೆಂದು ಹೆಸರು ಗಳಿಸಿದ ತೋನ್ಸೆ ಜಯಂತ ಕುಮಾರ್ ಅವರಿಗೆ ನವೆಂಬರ್ 15ರಂದು ಜರಗುವ ತಾಳಮದ್ದಳೆ
ಸಪ್ತಾಹದ ಸಮಾರೋಪ ಸಮಾರಂಭದಲ್ಲಿ 2018-19ನೇ ಸಾಲಿನ ಯಕ್ಷಾಂಗಣ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು
ಎಂದು ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.