ಮಂಗಳೂರು: ಗಣೇಶೋತ್ಸವವು ವಿವಿಧ ಜಾತಿ-ಧರ್ಮಗಳ ನಡುವೆ ಸೌಹಾರ್ದವನ್ನು ಬೆಸೆಯುವ ಹಬ್ಬವಾಗಿದ್ದು, ಈ ಮೂಲಕ ನಾವು ನಾಡು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದು ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ನ ಓಂಕಾರನಗರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಂಟ ಸಮಾಜದವರು ಕ್ರಿಯಾಶೀಲರು, ಸೃಜನ ಶೀಲರಾಗಿದ್ದು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ, ಕೆಲಸ, ಹೆಸರು ಮಾಡಿದ್ದಾರೆ. ನಾಡಿನ ಆರ್ಥಿಕ, ರಾಜಕೀಯ, ಸಾಮಾಜಿಕ ಬೆಳವಣಿಗೆಯಲ್ಲಿ ಯಶಸ್ವಿಯಾಗಿ ಭಾಗಿಯಾಗಿದ್ದಾರೆ. 100 ವರ್ಷಗಳ ಹಿಂದೆಯೇ ಸಮಾಜವನ್ನು ಬಲಿಷ್ಠವಾಗಿ ಕಟ್ಟುವ ಕೆಲಸದಲ್ಲಿ ಅವರು ತೊಡಗಿದ್ದಾರೆ. ಅಲ್ಲದೆ ಹಾಸ್ಟೆಲು, ಶಾಲೆಗಳನ್ನು ನಿರ್ಮಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ ಎಂದು ಸಚಿವ ದಿನೇಶ್ ಗೂಂಡೂರಾವ್ ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಮಾತನಾಡಿ, ಭವಿಷ್ಯದ ಭಾರತವು ಸಾಮರಸ್ಯದ ಭಾರತವಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು. ಮಂಗಳೂರಿನ ಶಾಸಕ ಜೆ.ಆರ್.ಲೋಬೋ ಅವರು ಮಾತನಾಡಿ ಗಣೇಶೋತ್ಸವವು ಜಾತಿ-ಧರ್ಮದ ಎಲ್ಲೆ ಮೀರಿ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯಕ್ರಮ ಎಂದರು.
ಮುಖ್ಯ ಅತಿಥಿಗಳಾಗಿ ಡಾ|ಫಾ|ರವಿ ಸಂತೋಷ್ ಕಾಮತ್ ಎಸ್.ಜೆ, ಖ್ಯಾತ ವೈದ್ಯ ಡಾ|ಹಂಸರಾಜ್ ಆಳ್ವ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಎಸ್.ಎಲ್.ಭೋಜೆಗೌಡ ಪಾಲ್ಗೊಂಡು ಶುಭ ಹಾರೈಸಿದರು. ವಿವಿಧ ಕ್ಷೇತ್ರಗಳ ಸಾಧಕರಾದ ಮೋಹನ್ ರಾವ್, ಶಂಕರ್ ಮೋಹನ್ ಪೂಂಜ, ಕರುಣಾಕರನ್, ಸೀತಾರಾಮ ಜಾಣು ಶೆಟ್ಟಿ, ಕೃಷ್ಣ ಕುಮಾರ್ ಪೂಂಜ ಹಾಗೂ ದೀಕ್ಷಾ ಪೂಂಜ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಕೋಶಾಧಿಕಾರಿ ಕೃಷ್ಣರಾಜ ಸುಲಾಯ, ಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿ, ಎನ್.ರವಿರಾಜ ಶೆಟ್ಟಿ, ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿ, ಕಾರ್ಯದರ್ಶಿ ಮೇಘನಾಥ ಶೆಟ್ಟಿ ಶಶಿರಾಜ್ ಶೆಟ್ಟಿ ಕೊಳಂಬೆ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನದ ಆಡಳಿತ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಪುರುಷೋತ್ತಮ ಭಂಡಾರಿ ಅಡ್ಯಾರು ಹಾಗೂ ವಿಜಯಭಾರತಿ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ವಂದಿಸಿದರು.