ಮಂಗಳೂರು: ತುಳುನಾಡಿನ ಪರಿಸರ ಮತ್ತು ಕೃಷಿ ಸಂಸ್ಕೃತಿಯನ್ನು ಕಾಪಾಡದೇ ಹೋದಲ್ಲಿ ತುಳುನಾಡಿ ಸಂಸ್ಕೃತಿ ಹಾಗೂ ತುಳುವಿಗೆ ಭವಿಷ್ಯವಿಲ್ಲವೆಂದು ಉಡುಪಿ ಸರಕಾರಿ ಮಹಾವಿದ್ಯಾಲಯದ ಕನ್ನಡ ಸ್ತಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ಶನಿವಾರ ನಡೆದ ಬಿಸು ಸಮ್ಮಿಲನ ಕಾರ್ಯಕ್ರಮದಲ್ಲಿ 'ಬಿಸು ಪರ್ಬದ ಪೊರ್ಲು ತಿರ್ಲ್' ಕುರಿತು ಉಪನ್ಯಾಸ ನೀಡಿದರು.
ಇಂದಿನ ಜಾಗತೀಕರಣ-ವ್ಯಾಪಾರೀಕರಣದ ಕಾಲಘಟ್ಟದಲ್ಲಿ ತುಳುನಾಡು ಮತ್ತು ತುಳು ಭಾಷೆ ಉಳಿಯಬೇಕಾದರೆ ನಮ್ಮ ಕೃಷಿ ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ತುಳುವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ 'ಬಿಸು'ವಿನಂತಹ ಆಚರಣೆಗಳನ್ನು ಸಾಮೂಹಿಕವಾಗಿ ಮಾಡುವ ಅಗತ್ಯವಿದೆ. ತುಳುವರ ಹೊಸ ವರ್ಷ ಆರಂಭದ ದಿನ ಬಿಸುವಾಗಿದ್ದು ಯಾವುದೇ ರೀತಿಯ ಕೆಲಸ ಆರಂಭಿಸಲು ಶುಭದಿನವಾಗಿದೆ ಎಂದರು.
ಈ ಸಂದರ್ಭ ಬ್ರಿಗೇಡಿಯರ್ ನಿರಂಜನ್ ಹೆಗ್ಡೆ ನಿಟ್ಟೆಗುತ್ತು, ರಾಧಾಕೃಷ್ಣ ಶೆಟ್ಟಿ, ಪ್ರಗತಿಪರ ಕೃಷಿಕ ರಮಾನಾಥ ಅತ್ತಾರ್, ಭಾಷಾ ಉಪನ್ಯಾಸಕಿ ಡಾ. ಸಾಯಿಗೀತಾ ಹೆಗ್ಡೆ, ಕ್ರೀಡಾಪಟು ಹಾಗೂ ಯುವ ಕೃಷಿಕೆ ಪ್ರತಿಭಾ ಶೆಟ್ಟಿ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಶಂಕರ ಶೆಟ್ಟಿ, ಬೆಂಗಳೂರಿನ ಹಿರಿಯ ಸಾಮಾಜಿಕ ಮಾರ್ಗದರ್ಶಕರಾದ ಶಶಿಕಲಾ ಅಡಪ್ಪ, ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಜತೆ ಕಾರ್ಯದರ್ಶಿ ಹೇಮನಾಥ ಶೆಟ್ಟಿ, ಕೋಶಾಧಿಕಾರಿ ಮನಮೋಹನ್ ಶೆಟ್ಟಿ, ಸಂಚಾಲಕ ಜಯರಾಮ ಸಾಂತ, ಸಹ ಸಂಚಾಲಕ ಉಮೇಶ್ ರೈ ಮತ್ತಿತರರು ಉಪಸ್ಥಿತರಿದ್ಧರು.