BUNTS NEWS : ಪ್ರತಿಭೆ ಎಂಬುದು ಜನ್ಮದತ್ತವಾಗಿ
ಬಂದಿರುವ ವಿಶೇಷ ಶಕ್ತಿ. ಅದನ್ನು ಬೇಕು ಎಂದವರೆಲ್ಲರೂ ಪಡೆದುಕೊಳ್ಳುವುದು ಕಷ್ಟ. ಎಲ್ಲರಿಗೂ ಅದು
ಒಲಿಯುವುದೂ ಇಲ್ಲ, ಒಲಿದವರೆಲ್ಲರಲ್ಲೂ ಪ್ರಕಾಶಿಸುವುದೂ ಇಲ್ಲ. ಅದಕ್ಕೆ ಸೂಕ್ತ ವೇದಿಕೆ, ಪರಿಶ್ರಮದ
ಗೊಬ್ಬರ ಸಿಕ್ಕಾಗ ಹುಲುಸಾಗಿ ಬೆಳೆದು ಎಲ್ಲರ ಗಮನ ಸೆಳೆಯಲು ಸಾಧ್ಯವಾಗುತ್ತದೆ. ಪರಿಶ್ರಮ, ಶ್ರದ್ಧೆಯಿಲ್ಲದೆ
ಯಾವ ಪ್ರತಿಭೆಯೂ ಬೆಳಕಾಗಿ ಪ್ರಭಾವ ಬೀರಲು ಸಾಧ್ಯವಿಲ್ಲ. ಜನ್ಮದತ್ತವಾಗಿ ಬಂದಿರುವ ಪ್ರತಿಭೆಯನ್ನು
ಪೂರಕ ವಾತಾವರಣದೊಂದಿಗೆ ಬೆಳೆಸಿಕೊಂಡು ಈಗ ಎಲ್ಲರ ಗಮನ ಸೆಳೆಯುವ ಯುವ ಸಾಧಕಿಯ ಸಾಲಲ್ಲಿ ಸುರತ್ಕಲ್‍ನ
ಬಿಂದಿಯಾ ಎಲ್. ಶೆಟ್ಟಿ ಕೂಡ ಒಬ್ಬರು.
ಈಕೆಯ ಪ್ರತಿಭೆಗೆ ಇತಿಮಿತಿಯಿಲ್ಲ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ
ಈಕೆ ಮೇರುಸ್ಥಾನದಲ್ಲಿ ನಿಲ್ಲುವವಳು. 2015-16ನೇ ಸಾಲಿನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 620 ಅಂಕ ಗಳಿಸಿ ರಾಜ್ಯದಲ್ಲಿ 6ನೇ ಸ್ಥಾನವನ್ನು
ತನ್ನದಾಗಿಸಿಕೊಂಡ ಸಾಧಕಿ.
ಸುರತ್ಕಲ್ ಕಟ್ಲ ಲೀಲಾಧರ ಬಿ. ಶೆಟ್ಟಿ ಮತ್ತು ಸುಜಾತಾ ಎಲ್. ಶೆಟ್ಟಿ
ದಂಪತಿಯ ಏಕೈಕ ಪುತ್ರಿಯಾಗಿರುವ ಈಕೆ ಸುರತ್ಕಲ್ ಇಡ್ಯಾದ
ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ಕಳೆದ ವರ್ಷವಷ್ಟೇ ಎಸೆಸೆಲ್ಸಿ ಮುಗಿಸಿದ್ದಾರೆ.
ಶಾಲೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದ ಈಕೆ ಬೆಸ್ಟ್ ಔಟ್‍ಗೋಯಿಂಗ್ ಸ್ಟೂಡೆಂಟ್
ಪ್ರಶಸ್ತಿಯನ್ನು ಪಡೆದುಕೊಂಡವರು. ಶಾಲಾ ವಿದ್ಯಾರ್ಥಿ ಸಂಘದ ನಾಯಕಿಯಾಗಿಯೂ ಸಮರ್ಥವಾಗಿ ಜವಾಬ್ದಾರಿಯನ್ನು ನಿಭಾಯಿಸಿ ಗಮನ ಸೆಳೆಯುವ ಮೂಲಕ ತನ್ನಲ್ಲಿ
ನಾಯಕತ್ವದ ಪ್ರತಿಭೆಯೂ ಇದೆ ಎಂದು ಸಾರಿದ್ದಾರೆ.
ಭರತನಾಟ್ಯ ಸೀನಿಯರ್ ವಿಭಾಗದಲ್ಲಿ 2014- 15ರಲ್ಲಿ ಶೇ. 95.5 ಅಂಕಗಳನ್ನು
ಪಡೆದು ಮಂಗಳೂರು ಕೇಂದ್ರಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಿದುಷಿ ಶ್ರೀಮತಿ ಪ್ರತಿಮಾ ಶ್ರೀಧರ್
ಅವರ ಶಿಷ್ಯೆಯಾದ ಈಕೆ ಅನೇಕ ಪ್ರಮುಖ ಮತ್ತು ಪ್ರತಿಷ್ಠಿತ
ವೇದಿಕೆಗಳಲ್ಲಿ ಭರತನಾಟ್ಯ ಕಾರ್ಯಕ್ರಮ ನೀಡಿದ್ದಲ್ಲದೆ, ಅನೇಕ ಕಡೆಗಳಲ್ಲಿ ಜರಗಿದ್ದ ಸ್ಪರ್ಧೆಗಳಲ್ಲಿ
ಬಹುಮಾನ ಗಳಿಸಿದ್ದಾರೆ. ಉತ್ತಮ ಯಕ್ಷಗಾನ ಕಲಾವಿದೆಯೂ ಆಗಿರುವ ಈಕೆ ಆ ಮೂಲಕ ಕರಾವಳಿಯ ಗಂಡುಕಲೆಯ
ಮೇಲೂ ಅಧಿಪತ್ಯ ಸ್ಥಾಪಿಸಲು ಮುಂದಾಗಿದ್ದಾರೆ. ರಾಕೇಶ್ ರೈ ಅಡ್ಕ ಅವರಿಂದ ಯಕ್ಷಗಾನವನ್ನು ಅಭ್ಯಸಿಸಿರುವ
ಆಕೆ ಹಲವಾರು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನವನ್ನೂ ನೀಡಿ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.
ಉತ್ತಮ ವಾಗ್ಮಿಯೂ ಆಗಿರುವ ಆಕೆ ಹಲವಾರು ಭಾಷಣ ಸ್ಪರ್ಧೆಗಳಲ್ಲೂ
ಬಹುಮಾನ ಗಳಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಡೆಸಿದ ತುಳು ಭಾಷಣ ಹಾಗೂ ರಸಪ್ರಶ್ನೆ
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಸಾಧಕಿ. ಲೇಖನ ಸ್ಪರ್ಧೆಯಲ್ಲೂ ಭಾಗವಹಿಸಿ ವಿಜೇತರಾದದ್ದಿದೆ.
ಈಕೆಯ ಸಾಧನೆಯ ಕ್ಷೇತ್ರ ಇಷ್ಟಕ್ಕೇ ಸೀಮಿತವಾಗುತ್ತಿಲ್ಲ. ನಿರೂಪಣೆಯಲ್ಲೂ
ಈಕೆಯದ್ದು ಎತ್ತಿದ ಕೈ. ಈಗಾಗಲೇ ಹಲವೆಡೆ ಕಾರ್ಯಕ್ರಮ ನಿರೂಪಿಸಿರುವ ಈಕೆ ಉತ್ತಮ ನಿರೂಪಕಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಈಕೆಯ ಕಲಾ ಪಯಣಕ್ಕೆ ಎಲ್ಲರ
ಬೆಂಬಲ ಅಗತ್ಯ. ಇಂಥ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವೂ ಆಗಿರಬೇಕು.
ಕಲೆಯಿಂದ
ಕಲಿಕೆಗೆ ತೊಂದರೆಯಿಲ್ಲ: ಕಲೆಯಿಂದ ನನ್ನ ಕಲಿಕೆಗೆ ಯಾವುದೇ ತೊಂದರೆಯಾಗುತ್ತಿಲ್ಲ
ಎಂದು ಹೇಳುವ ಆಕೆ, ಅದನ್ನು ಕಳೆದ ಬಾರಿಯ ಎಸೆಸೆಲ್ಸಿಯಲ್ಲಿ ಕೃತಿಯಲ್ಲಿ ತೋರಿಸಿ ಕೊಟ್ಟಿದ್ದಾರೆ. ಹೆತ್ತವರು ಮತ್ತು
ಶಿಕ್ಷಕರ ಸಂಪೂರ್ಣ ಸಹಕಾರ, ಪ್ರೋತ್ಸಾಹ ದಿಂದ ಇಂಥ ಸಾಧನೆ ಮಾಡುತ್ತಿದ್ದೇನೆ ಮತ್ತು ನೃತ್ಯ, ಯಕ್ಷಗಾನ ಸೇರಿದಂತೆ ಎಲ್ಲ ಕಲಾರೂಪದ ಗುರುಗಳ ಪಾಲು
ನನ್ನ ಯಶಸ್ಸಿನಲ್ಲಿ ಮಹತ್ವದ್ದು ಎಂದು ಕೃತಜ್ಞತಾ ಭಾವದಿಂದ ನುಡಿಯುತ್ತಿದ್ದಾರೆ.
- ಈಕೆಯ ಪ್ರತಿಭೆಗೆ ಇತಿಮಿತಿಯಿಲ್ಲ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಈಕೆ ಮೇರುಸ್ಥಾನದಲ್ಲಿ ನಿಲ್ಲುವವಳು. 2015-16ನೇ ಸಾಲಿನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 620 ಅಂಕ ಗಳಿಸಿ ರಾಜ್ಯದಲ್ಲಿ 6ನೇ ಸ್ಥಾನವನ್ನು ತನ್ನದಾಗಿಸಿಕೊಂಡ ಸಾಧಕಿ.
- ಭರತನಾಟ್ಯ ಸೀನಿಯರ್ ವಿಭಾಗದಲ್ಲಿ 2014- 15ರಲ್ಲಿ ಶೇ. 95.5 ಅಂಕಗಳನ್ನು ಪಡೆದು ಮಂಗಳೂರು ಕೇಂದ್ರಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
- ಉತ್ತಮ ಯಕ್ಷಗಾನ ಕಲಾವಿದೆಯೂ ಆಗಿರುವ ಈಕೆ ಆ ಮೂಲಕ ಕರಾವಳಿಯ ಗಂಡುಕಲೆಯ ಮೇಲೂ ಅಧಿಪತ್ಯ ಸ್ಥಾಪಿಸಲು ಮುಂದಾಗಿದ್ದಾರೆ.
- ಉತ್ತಮ ವಾಗ್ಮಿಯೂ ಆಗಿರುವ ಆಕೆ ಹಲವಾರು ಭಾಷಣ ಸ್ಪರ್ಧೆಗಳಲ್ಲೂ ಬಹುಮಾನ ಗಳಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಡೆಸಿದ ತುಳು ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಸಾಧಕಿ.