ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ..! - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ..!

Share This
ಬರಹ: ಶರೋನ್ ಶೆಟ್ಟಿ ಐಕಳ
ಬಂಟ್ಸ್ ನ್ಯೂಸ್: ಸಮಸ್ಯೆಗಳು ಮನುಷ್ಯನಿಗಲ್ಲದೆ ಇನ್ನೇನು ಮರಕ್ಕೆ ಬರುತ್ತ್ಯೇ?!’ ಇದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡವರಿಗೆ ತಿಳಿದವರು ಹೇಳುವ ಮಾತು. ಹೌದು, ಮಾನವನಾಗಿ ಜನಿಸಿದ ಮೇಲೆ ಪ್ರತಿಯೊಬ್ಬರಿಗು ಸಾಯೋವರೆಗೂ ಸಮಸ್ಯೆ ತಪ್ಪೋದಿಲ್ಲ. ಹಾಗಂತ ಮರಗಳಿಗೆ ಸಮಸ್ಯೆಗಳು ಇರುವುದಿಲ್ಲವೆಂದಲ್ಲ. ಅವುಗಳಿಗೂ ಸಮಸ್ಯೆಗಳಿರುತ್ತವೆ. ಆದರೆ ಅವುಗಳು ತಮ್ಮ ಸಮಸ್ಯೆಗಳನ್ನು ಮೀರಿ ಬೆಳೆಯುತ್ತವೆ!

ಆದರೆ ಬುದ್ಧಿವಂತನೆನಿಸಿಕೊಂಡ ಮನುಷ್ಯ ಮಾಡುವುದೇನು? ಚಿಕ್ಕ ಪುಟ್ಟ ಕಷ್ಟಗಳಿಗಂಜಿ ಆತ್ಮಹತ್ಯೆಯಂತಹ ದುರ್ಭರ ನಿರ್ಣಯವನ್ನು ತೆಗೆದುಕೊಳ್ಳುತ್ತಾನೆ. ತನ್ನವರು, ಸ್ನೇಹಿತರು, ಪರಿಜನರು, ತನ್ನನ್ನೇ ನೆಚ್ಚಿಕೊಂಡವರು ಇವರ್ಯಾರೂ ಅವರ ನೆನೆಪಿಗೆ ಬರುವುದಿಲ್ಲ. ತಮ್ಮ ಒಂದು ಕ್ಷಣದ ದುಡುಕು ನಿರ್ಧಾರದಿಂದಾಗಿ ತಮ್ಮನ್ನು ಪ್ರೀತಿಸುವವರನ್ನು ಜೀವನಪರ್ಯಂತ ದುಃಖದ ಒಡಲಿಗೆ ನೂಕಿ ನಡೆಯುತ್ತಾರೆ.
ಆತ್ಮಹತ್ಯೆಯೆಂಬುದು ಒಂದು ಸಾಂಕ್ರಾಮಿಕ ರೋಗದಂತಾಗಿದೆ. ಚಿಣ್ಣರಿಂದ - ಹಣ್ಣು ಹಣ್ಣು ಮುದುಕರವರೆಗೂ ರೋಗ ಹರಡಿಕೊಂಡು ಬಿಟ್ಟಿದೆ. ಬಡವರು ಬಡತನದ ಬೇಗೆಯಿಂದ ಬಸವಳಿದು ಆತ್ಮಹತ್ಯೆ ಮಾಡಿಕೊಂಡರೆ, ತಿಂದುಟ್ಟು ಮಲಗಿದರೂ ತಲೆ ತಲೆಲಾಂತರಕಾಗುವಷ್ಟು ಆಸ್ತಿ ಇದ್ದವರೂ ಆತ್ಮಹತ್ಯೆ ಮಾಡಿಕೊಳ್ಳುತಾರಲ್ಲ ಏನನ್ನಬೇಕು ಇದಕ್ಕೆ? ಹೆಚ್ಚೇಕೆ ಡಾಕ್ಟರ್, ಇಂಜಿನಿಯರ್, ಸಿ. ಕಲಿತು ಪ್ರತಿಷ್ಠಿತ ಕಂಪನಿಗಳಲ್ಲಿ ಕೈತುಂಬಾ ಸಂಪಾದನೆ ಹೊಂದಿದವರೂ ಕೂಡಾ ಆತ್ಮಹತ್ಯೆಗೆ ಶರಣಾಗುತ್ತಾರೆ!
ಅಷ್ಟೊಳ್ಳೆ ಕೆಲಸದಲ್ಲಿದ್ದವರೂ ಇಂತಹ ಒಂದು ಮೂರ್ಖ ನಿರ್ಧಾರ ತೆಗೆದುಕೊಳ್ಳುತಾರೆ ಎಂದಾದರೆ ಹೆತ್ತವರು, ಸಮಾಜ, ನಮ್ಮ ಶಿಕ್ಷಣ ವ್ಯವಸ್ತೆ ಅವರಿಗೆ ಕಲಿಸುವುದೇನು? ಎಷ್ಟು ಕಲಿತರೇನು ಬದುಕುವುದನ್ನು ಕಲಿಯಲಿಲ್ಲವಲ್ಲ, ಬದುಕ ಪ್ರೀತಿಸುವುದನ್ನು ಕಲಿಯಲಿಲ್ಲವಲ್ಲ, ಸಮಸ್ಯೆಗಳಿಗೆ ಎದೆಯೊಡ್ಡುವ ಛಾತಿ ಇಲ್ಲವಲ್ಲ ಎಂದು ಖೇದವಾಗುತ್ತದೆ.
ದೇವಾನು ದೇವತೆಗಳಿಗೂ ಕಷ್ಟಗಳಿದ್ದವು. ಆದರೆ ಅವರೆಲ್ಲರೂ ಕಷ್ಟಗಳನ್ನ ಧೈರ್ಯದಿಂದ ಎದುರಿಸಿ ಬದುಕಿ ಸಾಧಿಸಿ ತೋರಿಸಿದರು. ಪುರಾಣ ಕಾವ್ಯಗಳು ಇದನ್ನೇ ಸಾರಿ ಸಾರಿ ಹೇಳುತ್ತವೆ. ರಾಮ-ಸೀತೆ, ಪಾಂಡವರು-ದ್ರೌಪದಿ, ನಳ-ದಮಯಂತಿ, ವಿಕ್ರಮಾದಿತ್ಯ, ಸತ್ಯಹರಿಷ್ಚಂದ್ರ ಜೀವನದ ನಿದರ್ಶನಗಳೇ ಇದಕ್ಕೆ ಸಾಕ್ಷಿ. ರಾಜ-ರಾಣಿ, ದೇವ ದೇವತೆಯರನ್ನೂ ಸಮಸ್ಯೆಗಳು  ಬಿಡಲಿಲ್ಲ. ಹಾಗಂತ ಅವರಾರೂ ಆತ್ಮಹತ್ಯೆಗೆ ಶರಣಾಗಲಿಲ್ಲ. ಬದಲಾಗಿ ಕಷ್ಟಗಳನ್ನೆದುರಿಸಿ ಜಗಕೇ ಮಾದರಿಯಾಗಿ ಬದುಕಿ ತೋರಿಸಿದರು.
ಭೂಮಿಯ ಒಡಲಿಗೆ ಬಿದ್ದ ಒಂದು ಚಿಕ್ಕ ಬೀಜ ಕೂಡ ತಾನಿರುವ ಪರಿಸರದ ಅಡೆತಡೆಯನ್ನು ಮೀರಿ ಬೆಳೆದು, ಹೆಮ್ಮರವಾಗಿ ಖಗ-ಮೃಗಗಳಿಗೆ ಆಶ್ರಯವನ್ನೀಯುತ್ತದೆ. ಅಂತಹದರಲ್ಲಿ ಮನುಷ್ಯನೆನಿಸಿಕೊಂಡವನು ಕಷ್ಟಗಳ ಮುಂದೆ ಕೈಚೆಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯೆ? ಈಸಬೇಕು, ಇದ್ದು ಜೈಸಬೇಕು. ಪ್ರಪಂಚದಲ್ಲಿ ಸಮಸ್ಯೆಗಳಿಲ್ಲದ ಜೀವಿಯೇ ಇಲ್ಲ. ಸಮಸ್ಯೆಗಳ ಮೂಲದಲ್ಲೇ ಅದರ ಸಮಾಧಾನವೂ ಇರುತ್ತದೆ ಎಂಬುದನ್ನು ಮರೆಯಬಾರದು.
ನಮ್ಮ ಕಷ್ಟಗಳನ್ನ, ಸಮಸ್ಯೆಗಳನ್ನ ನಮ್ಮ ಪ್ರೀತಿಪಾತ್ರರೊಂದಿಗೆ  ಮುಕ್ತವಾಗಿ ಹಂಚಿಕೊಳ್ಳಬೇಕು. ನಮ್ಮನ್ನು ತಪ್ಪು ತಿಳಿದುಕೊಳ್ಳುತ್ತಾರೆ, ಅಪಹಾಸ್ಯ ಮಾಡುತ್ತಾರೆ, ಆಡಿಕೊಂಡು ನಗುತ್ತಾರೆ ಅನ್ನೋ ಪೂರ್ವಾಗ್ರಹಗಳನ್ನ ಬಿಟ್ಟು ಬಿಡಬೇಕು. ಆಪ್ತ ಸಮಾಲೋಚನೆಯಿಂದ ಸಮಸ್ಯೆಗಳು ಪರಿಹಾರವಾಗದಿದ್ದರೂ ಮನಸ್ಸಂತು ಹಗುರಾಗುವುದು. ಹಗುರವಾದ ಮನಸ್ಸು ತನ್ನಿಂದ ತಾನೆ ಸಮಸ್ಯೆಗಳಿಗೆ ಪರಿಹಾರವನ್ನ ಹುಡುಕಲು ಶುರುವಿಟ್ಟುಕೊಳ್ಳುತ್ತದೆ
ಆಗ ತಾನೇ ನಡೆಯಲು ಕಲಿತ ಮಗು ಮೊದಲನೇ ಹೆಜ್ಜೆಯಲ್ಲೇ ಎಡವಿ ಬೀಳುತ್ತದೆ, ಪೆಟ್ಟಾಗುತ್ತದೆ. ಹಾಗೆಂದು ಮಗು ನಡೆಯಲು ಕಲಿಯುವುದನ್ನು ಬಿಡುತ್ತದೆಯೇ? ಮಗು ಮತ್ತೆ ಪ್ರಯತ್ನಿಸುತ್ತದೆ, ಎಡವುತ್ತದೆ, ಬೀಳುತ್ತದೆ, ಎಳುತ್ತದೆ, ಓಡುತ್ತದೆ. ಮುಂದೊಂದು ದಿನ ಓಟದಲ್ಲಿ ಚಿನ್ನದ ಪದಕವನ್ನೇ ಗೆಲ್ಲುತ್ತದೆ. ಮಗು ಮೊದಲನೇ ಪ್ರಯತ್ನದಲ್ಲೇ ಕುಸಿದು ಕುಳಿತಿದ್ದರೆ? ಸ್ವಲ್ಪ ಯೋಚಿಸಿ, ಮಗು ಬೇರೆ ಯಾರೋ ಅಲ್ಲ. ನಾವೇ! ನಾವೆಲ್ಲರೂ ಬಿದ್ದವರೇ. ಬೀಳುವುದು ಸಹಜ, ಎದ್ದು ನಡೆವವನೇ ಮನುಜ.
ಮನಸ್ಸೇ ಹಾಗೆ. ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಹೆದರುತ್ತದೆ, ತಲ್ಲಣಿಸುತ್ತದೆ. ಮನಸ್ಸಿಗೆ ಅಗಾಧವಾದ ಶಕ್ತಿಯಿದೆ ನಾವದನ್ನು ಗುರುತಿಸಿರುವುದಿಲ್ಲ. ಜಗತ್ತಿನಲ್ಲಿಪರಿಹಾರವೇ ಇಲ್ಲದ ಸಮಸ್ಯೆಎಂಬುದು ಇಲ್ಲವೇ ಇಲ್ಲ. ಹಾಗಿದ್ದರೆ ಅದು ಸಮಸ್ಯೆಯೇ ಅಲ್ಲ. ಮನಸ್ಸನ್ನ ಗಟ್ಟಿಯಾಗಿಸಿಕೊಳ್ಳಿ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಾಗ ಧೃತಿಗೆಡದಿರಿ. ಧೈರ್ಯವಾಗಿರಿ. ನಮಗಿಂತಲೂ ಕಷ್ಟದಲ್ಲಿ ಇರುವವರು ಪ್ರಪಂಚದಲ್ಲಿ ಇದ್ದಾರೆ. ಅವರೆಲ್ಲರೂ ಬದುಕನ್ನು ಪ್ರೀತಿಸುತ್ತಿದ್ದಾರೆ ನೆನಪಿಡಿ.
ಕಡೆದಾಗಿ ದಾಸರು ಹೇಳಿದ್ದನ್ನು ಮರೆಯದಿರಿ. ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ.... ಏಕೆಂದರೆ, ಮಾನವ ಜನ್ಮ ದೊಡ್ಡದು ಇದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ.....ಬರಲೇ.....
ಬರಹ: ಶರೋನ್ ಶೆಟ್ಟಿ ಐಕಳ www.buntsnews.com 

Pages