ಸಮಾಜದಲ್ಲಿ ವಿಶ್ವಾಸದಿಂದ ಕೆಲಸ ಮಾಡುವವರ ಜತೆಗಿದ್ದೇನೆ : ಕನ್ಯಾನ ಸದಾಶಿವ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸಮಾಜದಲ್ಲಿ ವಿಶ್ವಾಸದಿಂದ ಕೆಲಸ ಮಾಡುವವರ ಜತೆಗಿದ್ದೇನೆ : ಕನ್ಯಾನ ಸದಾಶಿವ ಶೆಟ್ಟಿ

Share This

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಯೋಜನೆ ಕಾರ್ಯಕ್ರಮ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಪಟ್ಲ ಫೌಂಡೇಶನ್ ಟ್ರಸ್ಟ್ ಉತ್ತಮ ಸಮಾಜ ಸೇವೆ ಮಾಡುತ್ತಿದ್ದು ಸರ್ವ ರೀತಿಯ ಬೆಂಬಲವನ್ನು ಎಲ್ಲರೂ ನೀಡಬೇಕು. ಯಾರೂ ಸಮಾಜಕ್ಕಾಗಿ ವಿಶ್ವಾಸ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೋ ನಾನು ಅವರ ಜತೆಗಿರುತ್ತೇನೆ ಎಂದು ಉದ್ಯಮಿ ಕೂಳೂರು ಸದಾಶಿವ ಶೆಟ್ಟಿ ಕನ್ಯಾನ ಹೇಳಿದರು.
ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಸಹಯೋಗದಲ್ಲಿ ಡಿ. 4ರಂದು ಮುಲ್ಕಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ನಿವೇಶನದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನಡೆಯುವ ಸಮಾಜ ಕಲ್ಯಾಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯ ಮಧ್ಯಮ ವರ್ಗದ ಬಡ ಕುಟುಂಬದಲ್ಲಿ ಜನಿಸಿ ಶಿಕ್ಷಣ ಪಡೆಯಲು ಕಷ್ಟವಾದಾಗ ಬಂಟರ ಸಂಘವು ಆರ್ಥಿಕ ಸಹಾಯ ಮಾಡಿ ಬೆಂಬಲಿಸಿ ಬೆಳೆಸಿದೆ. ಇದೀಗ ನಾನು ಆರ್ಥಿಕವಾಗಿ ಬಲವಾದಾಗ ನಮ್ಮ ಬಂಟ ಸಮಾಜ ಹಾಗೂ ಇತರ ಸಮಾಜಕ್ಕೆ ತನ್ನಿಂದಾಗುವ ಸಹಾಯ ಮಾಡುತ್ತಿದ್ದೇನೆ. ಐಕಳ ಹರೀಶ್ ಶೆಟ್ಟಿ ಅವರ ಮೂಲಕ ಒಕ್ಕೂಟದ ಇರುವಿಕೆ ವಿಶ್ವಕ್ಕೆ ತಿಳಿಯಿತು. ಅವರ ಸಮಾಜ ಸೇವಾ ಕಾರ್ಯದಲ್ಲಿ ನಾನು ಎಂದಿಗೂ ಬೆಂಬಲ ನೀಡುವೆ. ಕೇವಲ ಭವನದ ಕೆಲಸ ಮಾತ್ರವಲ್ಲದೆ ಮುಂದಿನ ಕೆಲವೇ ವರ್ಷಗಳಲ್ಲಿ ಬಿಪಿಎಲ್ ಕಾರ್ಡಿನ ಬಂಟರು ಎಪಿಎಲ್ ಕಾರ್ಡ್ ಹೊಂದುವಷ್ಟು ಬೆಳವಣಿಗೆ ಹೊಂದಲೆಂದು ಆಶಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, ಮನುಷ್ಯರು ದೇವರನ್ನು ಕಂಡಿಲ್ಲ. ಆದರೆ ಕೂಳೂರು ಸದಾಶಿವ ಶೆಟ್ಟಿ ಕನ್ಯಾನರಂತಹ ಮಹಾದಾನಿಗಳ ರೂಪದಲ್ಲಿ ದೇವರನ್ನು ಕಾಣುತ್ತಿದ್ದೇವೆ. ಒಕ್ಕೂಟದ ಬೆಳವಣಿಗೆಯಲ್ಲಿ ಉದ್ಯಮಿಗಳಾದ ಕೆ. ಪ್ರಕಾಶ್ ಶೆಟ್ಟಿ, ಆನಂದ ಶೆಟ್ಟಿ ಮತ್ತಿತರ ಅನೇಕ ದಾನಿಗಳ ಪಾತ್ರವಿದೆ. ಆಶ್ವಿನಿ ಅಕ್ಕುಂಜೆ ಅವರಿಗೆ ಪ್ರಶಸ್ತಿ ಬಂದಿರುವುದು ಎಲ್ಲಾ ಸಮಾಜಕ್ಕೆ ಹೆಮ್ಮೆ. ನಾನು ನನಗಾಗಿ ಬೇಡಿಲ್ಲ, ಉಳ್ಳವರಿಂದ ದಾನ ಪಡೆದು ಇಲ್ಲದವರಿಗೆ ನೀಡಿದ್ದೇನೆ. ಮುಂದೆಯೂ ದಾನಿಗಳ ಸಹಕಾರ ಹಾಗೂ ಕಟೀಲು ಶ್ರೀದೇವಿಯ ಆರ್ಶಿವಾದದಿಂದ ಒಕ್ಕೂಟವು ಸಮಾಜದ ಎಲ್ಲರಿಗೂ ಸಹಾಯ ಮಾಡುವಂತಾಗಲಿ ಎಂದರು. 

ಶ್ರೀ ಕ್ಷೇತ್ರ ಕಟೀಲಿನ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣರು ಮಾತನಾಡಿ, ಕೂಳೂರು ಸದಾಶಿವ ಶೆಟ್ಟಿ ಅವರಂತಹ ಮನಸ್ಸು ಎಲ್ಲರಿಗೂ ಬಂದರೆ ಸಮಾಜದ ಎಲ್ಲರ ಸಮಸ್ಯೆಯನ್ನು ಪರಿಹರಿಸಬಹುದು. ಬಿಪಿಎಲ್ ಕಾರ್ಡಿನವರು ಎಪಿಎಲ್ ಕಾರ್ಡ್ ಹೊಂದುವಷ್ಟು ಅಭಿವೃದ್ಧಿ ಮಾಡಲು ಎಲ್ಲರೂ ಬಯಸಿದರೆ ಸಮಾಜ ರಾಮರಾಜ್ಯವಾಗುತ್ತದೆ. ಕಷ್ಟದವರ ಕಣ್ಣೀರೋರೆಸುವ ಕೆಲಸವನ್ನು ಐಕಳರು ಒಕ್ಕೂಟದ ಮೂಲಕ ಮಾಡುತ್ತಿದ್ದಾರೆ. ಕೇವಲ ಬಂಟರಲ್ಲದೇ ಎಲ್ಲಾ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಮೆಚ್ಚುಗೆ ವಿಷಯ. ಕೇವಲ ಪೂಜೆ, ಪುನಸ್ಕಾರ ಮಾತ್ರವಲ್ಲದೆ ದಾನ ಧರ್ಮದ ಕೆಲಸವು ಮಾಡಿದಾಗ ಹಿಂದೂ ಸಮಾಜವೂ ಉದ್ಧಾರವಾಗುತ್ತದೆ. ಒಕ್ಕೂಟದ ಸಮಾಜಮುಖಿ ಕಾರ್ಯಗಳಿಗೆ ಕಟೀಲು ಶ್ರೀದೇವಿಯು ಒಳಿತನ್ನು ಮಾಡಲೆಂದು ಆಶೀರ್ವದಿಸಿದರು. 

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಪಟ್ಲ ಫೌಂಡೇಶನ್ ಹಾಗೂ ಒಕ್ಕೂಟ ಬೇರೆಯಲ್ಲ. ಒಂದೇ ರೀತಿಯ ಸಮಾಜಸೇವೆ ಮಾಡುತ್ತಿದೆ. ಐಕಳರ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಕಟೀಲು ಶ್ರೀದೇವಿ ಹಾಗೂ ಪಾವಂಜೆ ಸುಬ್ರಹ್ಮಣ್ಯ ದೇವರು ಮತ್ತಷ್ಟು ಶಕ್ತಿ ನೀಡಿ ಬೆಳೆಸಲಿ ಎಂದು ಹಾರೈಸಿದರು. 

ಎಮ್ ಆರ್ ಜಿ ಗ್ರೂಪ್ ನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಬಂಜಾರ ಮಾತನಾಡಿ, ಮೂಲ್ಕಿ ನಮ್ಮ ಸಮಾಜದ ಒರ್ವ ಮಹಾನ್ ದಾನಿ, ಮಹಾನುಭಾವ ಸುಂದರ ರಾಮ್ ಶೆಟ್ಟಿ ಅವರು ಊರು. ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜದ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಿರುವುದು ಸಂತೋಷದ ತಂದಿದೆ. ಇಂದಿನ ಯುವಜನತೆಗೆ ಶಿಕ್ಷಣದ ಜತೆ ಕೌಶಲ್ಯ ತರಬೇತಿಯ ಅಗತ್ಯವಿದೆ. ಹರೀಶಣ್ಣ ಒಕ್ಕೂಟದ ಮೂಲಕ ಅರ್ಥ ಪೂರ್ಣ ಕಾರ್ಯ ಮಾಡುತ್ತಿದ್ದಾರೆ. ಎಲ್ಲಾ ವಲಯದ ಬಂಟರನ್ನು ಒಗ್ಗೂಡಿಸಿ ಆರ್ಥಿಕ ಹಿಂದುಳಿದವರನ್ನು ಗುರುತಿಸಿ ಸಹಾಯ ಮಾಡುವ ಕಾರ್ಯ ನಿರಂತರವಾಗಿ ನಡೆಯಲೆಂದು ಹಾರೈಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಎಲ್ಲಾ ಸಮಾಜದವರಿಗೂ ಸಹಾಯ ನೀಡುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಟ್ಟಡ ನನ್ನ ಕ್ಷೇತ್ರದಲ್ಲಿ ಸ್ಥಾಪನೆಯಾಗಲಿರುವುದು ಸಂತೋಷ ತಂದಿದೆ. ಈಗಾಗಲೇ ಮಹಾನ್ ಚೇತನ ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ ಭವನವೂ ಇಲ್ಲಿ ಸ್ಥಾಪನೆಯಾಗಲಿರುವುದು ಹೆಮ್ಮೆ ತಂದಿದೆ. ಒಕ್ಕೂಟದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ತನ್ನಿಂದ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. 

ಎಮ್ ಎಲ್ ಸಿ ಮಂಜುನಾಥ ಭಂಡಾರಿ ಮಾತನಾಡಿ, ನಾಲ್ಕು ಜನರಿಗೆ ಸಹಾಯ ಮಾಡುವವರು ಬಂಟರು. ಇಂದು ಒಕ್ಕೂಟ ಹಾಗೂ ಪಟ್ಲ ಫೌಂಡೇಶನ್ ಕಷ್ಟದಲ್ಲಿರುವವರ ಬೆನ್ನೆಲುಬಾಗಿ ಸೇವೆ ಮಾಡುತ್ತಿದೆ ಎಂದರು. 

ಒಕ್ಕೂಟದ ಜತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಒಕ್ಕೂಟದ ನೂತನ ಕಟ್ಟಡ ನಿರ್ಮಾಣದ ಭೂಮಿಗೆ ಶ್ರೀದೇವಿಯ ಆಗಮನವಾಗಿರುವುದು ಸಂತೋಷ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಮೇಜರ್ ಧ್ಯಾನ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕ್ರತ ಕ್ರೀಡಾಪಟು ಅಶ್ವಿನಿ ಅಕ್ಕುಂಜೆ, 2022ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ನೃತ್ಯಗುರು ಪಿ. ಕಮಲಾಕ್ಷ ಆಚಾರ್, ತಾಳಮದ್ದಳೆ ಅರ್ಥಧಾರಿ ಡಾ. ಪ್ರಭಾಕರ ಜೋಷಿ, ದೈವ ನರ್ತಕ ಗುಡ್ಡ ಪಾಣಾರ, ಬಡಗುತಿಟ್ಟಿನ ಸ್ತ್ರೀ ವೇಷಧಾರಿ ಎಂ.ಎ ನಾಯ್ಕ್, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಸಂಗೀತ ಕ್ಷೇತ್ರದ ವಿದ್ವಾನ್ ಎಂ.ನಾರಾಯಣ, ಸಮಾಜ ಸೇವಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ದೇವಿದಾಸ್ ಶೆಟ್ಟಿ, ಕ್ರೀಡಾ ಕ್ಷೇತ್ರದ ಸಾಧಕಿ ಸಾನ್ವಿ ಶೆಟ್ಟಿ ಮತ್ತು ಯುವವಾಹಿನಿ ಘಟಕದ ಅಧ್ಯಕ್ಷ ಉದಯ ಅಮೀನ್ ಮಟ್ಟು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ರೀಡಾಪಟು ಅಶ್ವಿನಿ ಅಕ್ಕುಂಜೆ ಮಾತನಾಡಿ, ಕ್ರೀಡಾಕ್ಷೇತ್ರದಲ್ಲಿ ಬೆಳೆಯಲು ಬಂಟರ ಸಂಘವು ನಿರಂತರವಾಗಿ ನೀಡಿದ ಬೆಂಬಲವನ್ನು ಸ್ಮರಿಸಿದರು. 

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಡಾ| ಪ್ರಭಾಕರ ಜೋಷಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರಶಸ್ತಿ ಪಡೆಯಲು ಅರ್ಹರಾದ ಅನೇಕರಿದ್ದಾರೆ. ಒಕ್ಕೂಟವು ನಾಡಿನ ಸಾಧಕರ ನೆಲೆಯಲ್ಲಿ ಗುರುತಿಸಿ ಸನ್ಮಾನಿಸಿ ಗೌರವಿಸಿದಕ್ಕೆ ಚಿರರುಣಿಯಾಗಿದ್ದೇನೆ. ಕೇವಲ ಬಂಟರಲ್ಲದೇ ಬೇರೆ ಸಮಾಜದವರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡುವ ಮೂಲಕ ಒಕ್ಕೂಟವು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ. ಒಕ್ಕೂಟದ ಸಮಾಜಮುಖಿ ಕಾರ್ಯಕ್ರಮಗಳಿಗೆ ಶುಭವಾಗಲಿ, ಕೀರ್ತಿ ವೃದ್ಧಿಸಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಶಿಕ್ಷಣ, ಮದುವೆ, ಮನೆ‌ ನಿರ್ಮಾಣ, ಕ್ರೀಡೆ, ವೈದ್ಯಕೀಯ ಮೊದಲಾದ ಫಲಾನುಭವಿಗಳಿಗೆ ಸರಿಸುಮಾರು 40 ಲಕ್ಷ ರೂಪಾಯಿಯ ಚೆಕ್ ಗಳನ್ನು ವಿತರಿಸಲಾಯಿತು. 

ಸನ್ಮಾನ ಪತ್ರವನ್ನು ಆರ್ ಜೆ ನಯನ ಶೆಟ್ಟಿ, ರಾಜೇಶ್ವರಿ ಡಿ. ಶೆಟ್ಟಿ, ಡಾ| ಮಂಜುಳಾ ಶೆಟ್ಟಿ, ದೀಪ ಶೆಟ್ಟಿ, ಸುಧಾ ಶೆಟ್ಟಿ, ಸಾಯಿನಾಥ್ ಶೆಟ್ಟಿ ಮುಂಡ್ಕೂರು, ಡಾ| ಪ್ರೀಯಾ ಹರೀಶ್ ಶೆಟ್ಟಿ, ಶರತ್ ಶೆಟ್ಟಿ ಕಿನ್ನಿಗೋಳಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರಾದ ಅರವಿಂದ ಪೂಂಜಾ, ಮಾಜೀ ಸಚಿವ ಬಿ ರಮಾನಾಥ ರೈ, ಮಂಜುನಾಥ ಭಂಡಾರಿ, ಮುಂಡ್ಕೂರು ಮೋಹನದಾಸ ಶೆಟ್ಟಿ, ಮುಂಡ್ಕೂರು ರತ್ನಾಕರ ಶೆಟ್ಟಿ, ಸಿಎ ಸದಾಶಿವ ಶೆಟ್ಟಿ, ಹಾಲಾಡಿ ಆದರ್ಶ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಸಂತೋಷ್ ಶೆಟ್ಟಿ ಪುಣೆ, ಗಿರೀಶ್ ಶೆಟ್ಟಿ ತೆಳ್ಳಾರ್, ಒಕ್ಕೂಟದ ನಿರ್ದೇಶಕರು, ಮಹಾ ಪೋಷಕರು, ಪೋಷಕರು, ಪಟ್ಲ ಫೌಂಡೇಶನ್ ಟ್ರಸ್ಟ್ ನ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ವಲಯ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಶೆಟ್ಟಿ ಕೋಲ್ಕೆಬೈಲು ಹಾಗೂ ಮತ್ತಿತರ ಪ್ರಮುಖರು ಭಾಗವಹಿಸಿದ್ದರು. 

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು , ಪ್ರಿಯಾ ಹರೀಶ್ ಶೆಟ್ಟಿ ನಿರೂಪಿಸಿದರು. 

ಶ್ರೀ ದೇವಿ ಭಜನಾ ಮಂದಿರ ಮೂಡಶೆಡ್ಡೆ ವತಿಯಿಂದ ಸಂತೋಷ್ ಶೆಟ್ಟಿ ಶೆಡ್ಡೆ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಂತರ ಪಾವಂಜೆ ಮೇಳದವರಿಂದ 'ಸಂಪೂರ್ಣ ಶ್ರೀ ದೇವಿ ಮಹಾತ್ಮೆ' ಯಕ್ಷಗಾನ ಜರಗಿತು. ಸಮಾರಂಭದಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ಪ್ರಸಾದ ರೂಪದಲ್ಲಿ 'ಅನ್ನಸಂತರ್ಪಣೆ' ನಡೆಯಿತು.

Pages