ಮಂಗಳೂರು: ಎನ್.ಎನ್.ಎಮ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೂಡಿಬರುತ್ತಿರುವ 'ಪಿಲಿ' ತುಳು ಚಲನಚಿತ್ರದ ಚಿತ್ರೀಕರಣ ಮುಗಿದಿದ್ದು, ಸಿನಿಮಾ ಈಗ ಡಬ್ಬಿಂಗ್ ಹಂತದಲ್ಲಿದೆ.
ಭರವಸೆಯ ಯುವ ನಟ ಭರತ್ ಭಂಡಾರಿಯವರು ಕಥೆ ಬರೆದು, ಮೊದಲ ಬಾರಿಗೆ ನಾಯಕ ನಟನಾಗಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರ ಇದಾಗಿದೆ. ಈ ಚಿತ್ರದ ಛಾಯಾಗ್ರಹಣ ಮತ್ತು ನಿರ್ದೇಶನದ ಹೊಣೆಯನ್ನು ಹೊತ್ತಿರುವವರು ‘ಮೈನೇಮ್ ಈಸ್ ಅಣ್ಣಪ್ಪ ಚಿತ್ರದ ನಿರ್ದೇಶಕ, ಮಯೂರ್ ಆರ್.ಶೆಟ್ಟಿ ಇವರು.
ಎಕ್ಕಸಕ, ಪಿಲಿಬೈಲ್ ಯಮುನಕ್ಕ ಸೇರಿದಂತೆ ಹಲವಾರು ತುಳು ಕನ್ನಡ ಚಿತ್ರಗಳಿಗೆ ಸಹ ನಿರ್ದೇಶಕರಾಗಿ, ಛಾಯಾಗ್ರಾಹಕರಾಗಿ, ಚಿತ್ರ ಸಾಹಿತಿಯಾಗಿ ಹೆಸರು ಮಾಡಿರುತ್ತಾರೆ. ತುಳುನಾಡಿನ ಸಂಸ್ಕೃತಿ, ಆಚರಣೆ ಮತ್ತು ನಂಬಿಕೆಗಳಲ್ಲಿ ಒಂದಾಗಿರುವ ಹುಲಿ ಕುಣಿತದ ಕಥಾವಸ್ತುವನ್ನು ಹೊಂದಿರುವಂತಹ ಚಿತ್ರ ‘ಪಿಲಿ’ ಸಿನಿಮಾ.
ತುಳುನಾಡಿನಲ್ಲಿ ಹುಲಿ ಕುಣಿತಕ್ಕೆ ಅದರದ್ದೇ ಆದ ಗೌರವ ಮತ್ತು ಇತಿಹಾಸ ಇದೆ. ಆ ಗೌರವಕ್ಕೆ ಧಕ್ಕೆ ಬಂದಾಗ, ಆಚರಣೆಯಲ್ಲಿ ಆಗುವಂತಹ ಲೋಪಗಳಿಗೆ ಏನೆಲ್ಲ ದೋಷ, ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಈ ಚಿತ್ರದ ಮೂಲಕ ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಇಂತಹ ಒಂದು ಗಟ್ಟಿತನವಿರುವ ಕಥೆಯ ಜೊತೆಗೆ, ಕೌಟುಂಬಿಕ ಮನರಂಜನೆ, ಹಾಸ್ಯ, ಪ್ರೀತಿ ಪ್ರೇಮ, ಸುಂದರ ಹಾಡುಗಳ ಜೊತೆಗೆ ಮೈ ನವಿರೇಳಿಸುವ ಸಾಹಸ ಮತ್ತು ಕತೆಯಲ್ಲಿ ಕೊನೆವರೆಗೂ ಸಾಗುವ ನಿಗೂಢತೆ ಇವೆಲ್ಲವೂ ಪ್ರೇಕ್ಷಕರಿಗೆ ಪರಿಪೂರ್ಣ ಮನರಂಜಂನೆಯನ್ನು ನೀಡುತ್ತದೆ ಎಂದು ಚಿತ್ರದ ನಿರ್ದೇಶಕ ಮಯೂರ್ ಶೆಟ್ಟಿ ಹೇಳುತ್ತಾರೆ.
ಈ ಚಿತ್ರದಲ್ಲಿ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್‌ರವರು ಒಂದು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ನಾಯಕನಾಗಿ ಭರತ್ ಭಂಡಾರಿ ಅಭಿನಯಿಸಿದ್ದಾರೆ. ತಾರಾ ಬಳಗದಲ್ಲಿ ಸ್ವಾತಿ ಶೆಟ್ಟಿ, ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ನವೀನ್.ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ದೀಪಕ್‌ರೈ ಪಾಣಾಜೆ, ಚೇತನ್ ರೈ ಮಾಣಿ ಸೇರಿದಂತೆ ಹಲವಾರು ಪ್ರಭುದ್ಧ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ.
ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಸುಂದರವಾದ ನಾಲ್ಕು ಹಾಡುಗಳಿಗೆ ಮಯೂರ್ ಆರ್.ಶೆಟ್ಟಿ, ಡಿ.ಬಿ.ಸಿ ಶೇಖರ್ ಮತ್ತು ಕೆ.ಕೆ. ಪೇಜಾವರ್ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರಕ್ಕೆ ಸಂದೇಶ್ ಬಿಜೈ ಸಂಭಾಷಣೆ ಬರೆದಿದ್ದು, ನಿರ್ದೇಶನ ತಂಡದಲ್ಲಿ ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಸಂದೇಶ್ ಬಿಜೈ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ. ಪ್ರಚಾರ ಕಲೆ ವಿನ್ಯಾಸ ದೇವಿ ರೈ ಯವರದ್ದಾಗಿದೆ.
ತುಳುನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಸೇರಿದಂತೆ ಮಂಗಳೂರಿನ ಸುತ್ತಮತ್ತ ಇರುವಂತಹ ಹಲವಾರು ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಚಿತ್ರ ಬಹಳ ಸುಂದರವಾಗಿ ಮೂಡಿಬಂದಿದ್ದು ಚಿತ್ರ ತಂಡಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ. ಮಾತ್ರವಲ್ಲದೆ ಈ ಚಿತ್ರವು ತುಳು ಚಿತ್ರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ನಂಬಿಕೆ ಚಿತ್ರ ತಂಡದ್ದಾಗಿದೆ. ಈ ಚಿತ್ರದ ಕೊನೆಯ ಹಂತದ ತಾಂತ್ರಿಕ ಕೆಲಸಗಳು ಭರದಿಂದ ಸಾಗಿದ್ದು ಡಿಸೆಂಬರ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆಗೊಳಿಸುವ ಯೋಚನೆ ಚಿತ್ರ ತಂಡಕ್ಕಿದೆ.