ಪ್ರತಿಷ್ಠಿತ ಬಂಟ ಸಮುದಾಯದ ಧ್ರುವತಾರೆ ಎಸಿಪಿ ದಿನಕರ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪ್ರತಿಷ್ಠಿತ ಬಂಟ ಸಮುದಾಯದ ಧ್ರುವತಾರೆ ಎಸಿಪಿ ದಿನಕರ ಶೆಟ್ಟಿ

Share This
ಮಂಗಳೂರು: ತುಳುನಾಡು ಅಂದಾಕ್ಷಣ ತಟ್ಟನೆ ನೆನಪಿಗೆ ಬರುವುದು ಬಂಟ ಸಮುದಾಯ. ಮೂಲತಃ ಕೃಷಿಕರಾಗಿ, ಪ್ರಕೃತಿ ಮಾತೆಯ ಆರಾಧನೆಯೊಂದಿಗೆ ಬದುಕನ್ನು ಕಟ್ಟಿಕೊಂಡು, ಸಾಂಸ್ಕ್ರತಿಕ, ಧಾರ್ಮಿಕ, ಸಾಮಾಜಿಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ ಪ್ರತಿಷ್ಠಿತ ಸಮಾಜ ಬಂಟ ಸಮಾಜ.
ತುಳುನಾಡಿನ ಕಡಲ ತಡಿಯ ಊರು ಸುರತ್ಕಲ್. ಶ್ರೀ ಸದಾಶಿವ ಮಹಾಗಣಪತಿ ದೇವರ ದಿವ್ಯ ಸನ್ನಿಧಾನವಿರುವ ಪಾವನ ಕ್ಷೇತ್ರವಿದು. ಇಲ್ಲಿನ ಗೌರವದ ಪ್ರತಿಷ್ಠಿತ ಮನೆತನ ಪಡ್ರೆ. ಪಡ್ರೆಯ ಬೆರ್ಮು ಶೆಟ್ಟಿ ಸುಂದರಿ ಶೆಟ್ಟಿ ಸಾತ್ವಿಕ ದಂಪತಿಗಳು ಕೃಷಿಕರು, ಭೂಮಿ ತಾಯಿಯನ್ನು ನಂಬಿದರೆ ತಾಯಿ ಕೈ ಬಿಡಲಾರಳು ಅನ್ನೋ ನುಡಿಯಲ್ಲಿ ನಂಬಿಕೆಯಿಟ್ಟು, ಬೆವರನ್ನು ಬಸಿದು ಭೂಮಿ ತಾಯಿಯ ಮಡಿಲಲ್ಲಿ ಕೃಷಿಕರಾಗಿ ಯಶಸ್ಸನ್ನು ಕಂಡವರು.

ಈ ಸಾತ್ವಿಕ, ದೈವಭಕ್ತ ದಂಪತಿಗಳಿಗೆ ತೃತೀಯ ಪುತ್ರ ರತ್ನವಾಗಿ 1968ರ ಜೂನ್ ತಿಂಗಳ 1ರಂದು ಜಗದ ಬೆಳಕನ್ನು ಕಂಡವರು ದಿನಕರ ಶೆಟ್ಟಿ ಎಂಬ ಮಹಾನ್ ಸಾಧಕ.

ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ನಾನ್ನುಡಿಯಂತೆ, ಸ್ವಭಾವತಃ ಚುರುಕು ಮತ್ತು ಗಂಭೀರ ಸ್ವಭಾವದ ಹುಡುಗ ತುಸು ತುಂಟ ಸ್ವಭಾವವೂ ಮೇಳೈಸಿ ಬೆಳೆಯುತ್ತಿದ್ದ ದಿನಗಳು.

ತನ್ನ ಪ್ರಾಥಮಿಕ ಶಿಕ್ಷಣವನ್ನು ಕೆ.ಆರ್.ಇ.ಸಿ ಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಕೆ.ಆರ್.ಇ.ಸಿ ಪ್ರೌಢ ಶಾಲೆಯಲ್ಲಿ ಪೂರೈಸಿದರು. ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸುರತ್ಕಲ್ ಗೋವಿಂದ ದಾಸ್ ಕಾಲೇಜಿನಲ್ಲಿ ಬಿ.ಕಾಂ ಪದವೀಧರರಾದರು. ಬಳಿಕ ಸ್ನಾತಕೋತ್ತರ, ಮತ್ತು ಕಂಪ್ಯೂಟರ್ ಪದವೀಧರರಾಗಿ ಅತ್ಯಂತ ಪ್ರಬುದ್ಧತೆಯನ್ನು ಪಡೆದ ಸಾಧಕರಾದರು. ಶಾಲಾ ದಿನಗಳಲ್ಲಿ ಉತ್ತಮ ಫುಟ್ಬಾಲ್ ಆಟಗಾರರಾಗಿದ್ದು, ತುಳುನಾಡಿನ ಗಂಡು ಕಲೆ ಯಕ್ಷಗಾನ ಮತ್ತು ಸಂಗೀತವನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.

ಉದ್ಯೋಗಂ ಪುರುಷ ಲಕ್ಷಣಂ ಅನ್ನೋ ಮಾತಿದೆ. ಸದೃಢ ಕಾಯದ, ಗಟ್ಟಿ ಮನಸ್ಸಿನ, ಸುಸಂಸ್ಕ್ರತ ಯುವಕನಿಗೆ ತಂದೆಯ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಇಲ್ಲದಿರಲಿಲ್ಲ. ಆದರೆ ಆಗ ತಾನೇ ಚಿಗುರೊಡೆಯುತ್ತಿದ್ದ ಎಳೆ ಮೀಸೆ, ಗರಿಗೆದರಿದ ಕನಸುಗಳು, ತಾನೇನಾದರೂ ಸಾಧಿಸಬೇಕೆನ್ನುವ ಛಲ, ಸಮಾಜದ ಡೊಂಕುಗಳನ್ನು ತಿದ್ದುವ ಹಂಬಲ ಜೊತೆಗೆ ತಂದೆ ತಾಯಿಯ ಬೆಂಬಲ ಯುವಕ ದಿನಕರನನ್ನು ಪೋಲೀಸ್ ಇಲಾಖೆಯತ್ತ ಸೆಳೆಯಿತು.

ಅದರಂತೆ 1996 ಆಗಸ್ಟ್ ತಿಂಗಳ 18ರಂದು ಮೈಸೂರು ಕರ್ನಾಟಕ ಪೋಲಿಸ್ ಅಕಾಡೆಮಿಯಲ್ಲಿ ಮೂಲ ತರಬೇತಿಯನ್ನು ಪಡೆದರು. ಬಳಿಕ ಒಂದು ವರ್ಷ ಗುಲ್ಬರ್ಗದಲ್ಲಿ ಪ್ರಾಯೋಗಿಕ ತರಬೇತಿಯನ್ನು ಪಡೆದು ಸೇವೆಗೆ ಸಿದ್ಧರಾದ ನವ ಹುರುಪಿನ ಯುವ ಸೇನಾನಿಯಾಗಿ ಮೂಡಿ ಬಂದರು. ಮೊದಲೇ ಏನಾದರೂ ಒಳ್ಳೆಯದನ್ನು ಮಾಡುವ ತವಕ ಇಲಾಖೆಯಲ್ಲಿ ದಕ್ಷತೆಯಿಂದ ದುಡಿಯಬೇಕೆಂಬ ಹಂಬಲಕ್ಕೆ ಪೂರಕವಾಗಿ ಬೇರೆ ಬೇರೆ ಆರಕ್ಷಕ ಠಾಣೆಗಳಲ್ಲಿ ಪೋಲೀಸ್ ಉಪ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಾ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆದು ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು.

ಬದುಕಿನ ಪ್ರಮುಖ ಘಟ್ಟವಾದ ಸಾಂಸಾರಿಕ ಜೀವನಕ್ಕೆ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಅಗತ್ಯತೆ ಮತ್ತು ಕರ್ತವ್ಯವೂ ಹೌದು. ಅದರಂತೆ ತಮ್ಮ ಮನೆತನ, ಗೌರವ, ಪ್ರತಿಷ್ಠೆ, ವಿದ್ಯೆ ಉದ್ಯೋಗ ಎಲ್ಲದಕ್ಕೂ ಸರಿ ಸಮಾನವಾದ ಮನೆತನದ ಅನುರೂಪಿಯಾದ ಯುವತಿ ಅನಿತಾರವರನ್ನು ಗುರುಹಿರಿಯರ ಆಶೀರ್ವಾದದೊಂದಿಗೆ ಅಗ್ನಿ ಸಾಕ್ಷಿಯಾಗಿ, ಸಪ್ತಪದಿ ತುಳಿದು ಸಹಧರ್ಮಿಣಿಯಾಗಿ ಸ್ವೀಕರಿಸಿ ಸುಮಧುರ ದಾಂಪತ್ಯದ ಫಲವಾಗಿ ಮಗಳು ಋಣಿ, ಸುಪುತ್ರ ರಿಜು ರವರೊಂದಿಗಿನ ಪುಟ್ಟ ಸಂಸಾರ ರಥದ ಸಾರಥಿಯಾದರು.

ದಕ್ಷ ಮತ್ತು ಪ್ರಾಮಾಣಿಕ ಕರ್ತವ್ಯ ನಿಷ್ಠೆಗೆ ಉಡುಗೊರೆ ಎಂಬಂತೆ ಬೀದರ್ ನಲ್ಲಿ ಕರ್ತವ್ಯದಲ್ಲಿರುವಾಗಲೇ ಮುಂಬಡ್ತಿ ಸಿಕ್ಕಿದ್ದು ಪೋಲೀಸ್ ಉಪ ನಿರೀಕ್ಷಕರಿಂದ ಪೋಲೀಸ್ ನಿರೀಕ್ಷಕರಾಗಿ ಪದೋನ್ನತಿ ಹೊಂದಿದರು.

ಕರ್ನಾಟಕ ರಾಜ್ಯದ ಗುಲ್ಬರ್ಗ, ರಾಯಚೂರ್, ಬಳ್ಳಾರಿ ಮಂಗಳೂರಿನಲ್ಲಿ ಖಾಕಿ ತೊಟ್ಟ ಮೇಲೆ ಆ ಬಟ್ಟೆಯ ಮೇಲೆ ಯಾವುದೇ ಕಪ್ಪು ಚುಕ್ಕೆಯಾಗದಂತೆ ತನ್ನ ನೌಕರಿಗೆ ನ್ಯಾಯ ಸಿಗುವಂತೆ ದಕ್ಷರಾಗಿ ಪ್ರಾಮಾಣಿಕರಾಗಿ, ಅಷ್ಟೇ ನಿಷ್ಠುರ ಮತ್ತು ಖಡಕ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ, ಸಮಾಜ ಕಂಟಕರಿಗೆ ಸಿಂಹ ಸ್ವಪ್ನರಾಗಿ ಕರ್ತವ್ಯ ನಿರ್ವಹಿಸುತ್ತಾ, ಮೇಲಾಧಿಕಾರಿಗಳಿಂದ ಪ್ರಶಂಸೆ, ಮೆಚ್ಚುಗೆಗಳನ್ನೂ, ಕಿರಿಯರಿಂದ ಗೌರವಾಭಿಮಾನಗಳನ್ನೂ ಪಡೆದು ಸೈ ಅನ್ನಿಸಿಕೊಂಡರು.

ದಕ್ಷ ಪೋಲೀಸ್ ಅಧಿಕಾರಿ ದಿನಕರ ಶೆಟ್ಟಿಯವರ ಬದುಕಿನಲ್ಲಿ ಎದುರಾದ ದುರಂತ ಘಟನೆ ಮತ್ತು ಅದರಿಂದ ಪವಾಡ ಸದೃಶರಾಗಿ ಪಾರಾಗಿ ಬಂದ ಅವಿಸ್ಮರಣೀಯ ಘಟನೆಯೊಂದಿದೆ....ಅದು 2009ರ ಸೆಪ್ಟೆಂಬರ್ ನಲ್ಲಿ ಬಳ್ಳಾರಿಯಲ್ಲಿ ಕರ್ತವ್ಯದಲ್ಲಿದ್ದ ಸಮಯ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ವರುಣಾರ್ಭಟ, ಮಳೆಯ ರುದ್ರ ನರ್ತನದಿಂದಾಗಿ ಭೀಕರ ಪ್ರವಾಹ ಉಂಟಾಗಿತ್ತು. ಜನಜೀವನ ಅಸ್ತವ್ಯಸ್ತವಾಗಿತ್ತು. ತುಂಗಭದ್ರಾ ಮತ್ತು ಹಗರಿ ನದಿಗಳು ಒಟ್ಟಾಗಿ ಹರಿಯುವ ಬಳ್ಳಾರಿಯ ಸಿರಿಗುಪ್ಪಾದಲ್ಲಿ, ಪ್ರವಾಹದಲ್ಲಿ ಸಿಲುಕಿ ಸಾವಿನ ದವಡೆಯಲ್ಲಿದ್ದ ಶಾಲಾ ಶಿಕ್ಷಕರನ್ನು ರಕ್ಷಿಸುವ ಸಲುವಾಗಿ ತಾನೇ ಸ್ವತಃ ಕಾರ್ಯಾಚರಣೆಗಿಳಿದಾಗ, ನದಿ ನೀರಿನ ಪಾಲಾಗಿ ಬಿಟ್ಟಿದ್ದರು ದಿನಕರ ಶೆಟ್ಟಿಯವರು, ಪ್ರವಾಹದ ಕೆನ್ನೀರಿನಲ್ಲಿ ಕೊಚ್ಚಿ ಹೋದ ಪೋಲೀಸ್ ಅಧಿಕಾರಿ ದುರಂತ ಅಂತ್ಯ ಕಂಡ ಬಗ್ಗೆ ಮರುದಿನದ ಪತ್ರಿಕೆಗಳು ವರದಿ ಮಾಡಿದ್ದವು. ಆದರೆ ಭಗವಂತನ ಇಚ್ಚೆ ಬೇರೆಯೇ ಇತ್ತು, ಛಲವಾದಿ, ಸಾಹಸ ಪ್ರವೃತ್ತಿಯ ದಿನಕರ ಶೆಟ್ಟಿಯವರು, ಒಂದು ರಾತ್ರಿ ಒಂದು ದಿನ ನದಿ ನೀರಲ್ಲಿ ಕಳೆದು ಪತ್ತೆಯಾಗಿ ಹೆಲಿಕಾಪ್ಟರ್ ಮೂಲಕ ರಕ್ಷಿಸಲ್ಪಟ್ಟಾಗ ಇಡೀ ರಾಜ್ಯದ ಜನ ಸಂತಸದ ನಿಟ್ಟಿಸುರಿ ಬಿಟ್ಟದ್ದನ್ನು ಮರೆಯಲು ಸಾಧ್ಯವಿಲ್ಲ.

ಪ್ರವಾಹದ ವಿರುದ್ದದ ಸಾಹಸಮಯ ಕಾರ್ಯಾಚರಣೆ ಜೀವದ ಹಂಗು ತೊರೆದು ಪ್ರವಾಹ ಪಾಲಾಗುತ್ತಿರುವವರನ್ನು ರಕ್ಷಿಸಿದ ಕರ್ತವ್ಯ ನಿಷ್ಠೆಗಾಗಿ 2010 ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಂದ ಚಿನ್ನದ ಪದಕ ಮತ್ತು ಸಮಾಜದ ಘನತೆ ಗೌರವವನ್ನು ಎತ್ತಿ ಹಿಡಿದು, ಬಂಟ ಸಮುದಾಯದ ಕೆಚ್ಚೆದೆಯ ಸಾಹಸ ಪ್ರವೃತ್ತಿಯನ್ನು ರಾಜ್ಯಕ್ಕೆ ಪರಿಚಯಿಸಿದ ದಿನಕರ ಶೆಟ್ಟಿಯವರಿಗೆ ಮಾತೃಸಂಘ ಮಂಗಳೂರು ಇವರು ಚಿನ್ನದ ಪದಕ ನೀಡಿ ಗೌರವಿಸಿರುವುದು ಅವಿಸ್ಮರಣೀಯ.

ದಕ್ಷ ಪೋಲಿಸ್ ಅಧಿಕಾರಿ ದಿನಕರ ಶೆಟ್ಟಿಯವರಿಗೆ ಬಾಲ್ಯದಿಂದಲೂ ಬಡವರ ಬಗ್ಗೆ ವಿಶೇಷ ಪ್ರೀತಿ ಒಲವು, ಕಾಳಜಿ. ಇದರ ಪ್ರತೀಕವಾಗಿ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಬಳ್ಳಾರಿಯಲ್ಲಿ ಬಡವರಿಗಾಗಿ ಉಚಿತ ಕಣ್ಣಿನ ತಪಾಸಣೆ, ಐದು ನೂರು ಬಡ ಜನತೆಯ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಯಕ್ಷಗಾನ, ಭರತ ನಾಟ್ಯದಲ್ಲಿ ವಿಶೇಷ ಆಸಕ್ತಿ ಇರುವ ಶೆಟ್ಟರು, ಯಕ್ಷಗಾನ ತಂಡ, ಚೆಂಡೆ ತಂಡಗಳನ್ನು ರಾಜ್ಯದ ವಿವಿದೆಡೆ ಕರೆಯಿಸಿ, ಪ್ರದರ್ಶನಗಳನ್ನು ನೀಡಿ ಹುಟ್ಟೂರಿನ ಕಲೆಯ ಬಗ್ಗೆ ತನಗಿರುವ ಪ್ರೀತಿಯನ್ನು ತೋರಿಸಿದ್ದಾರೆ.

ತನ್ನೂರಿನ ಪಡ್ರೆ ಧರ್ಮ ದೈವ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ, ಬ್ರಹ್ಮ ಕಲಶ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ತನು ಮನ ಧನದ ಸಹಕಾರದೊಂದಿಗೆ ತಮಗಿರುವ ಧಾರ್ಮಿಕ ಶೃದ್ಧೆಯನ್ನು ಅನಾವರಣಗೊಳಿಸಿದ್ದವರು ದಿನಕರ ಶೆಟ್ಟಿಯವರು. ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಕಲಿಕಾ ಪರಿಕರಗಳು ಹಾಗೂ ಪ್ರೋತ್ಸಾಹ ಧನ ನೀಡಿ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ.

ಗುಲ್ಬರ್ಗಾದಲ್ಲಿ ಒಬ್ಬ ನಕ್ಸಲೇಟನ್ನು ಹಿಡಿದು, ಒಂಟಿ ಮಹಿಳೆಯರ ಸರಣಿ ಕೊಲೆಗಾರನನ್ನು ಹೆಡೆಮುರಿ ಕಟ್ಟಿ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಪ್ರಧಾನ ಭೂಮಿಕೆಯಲ್ಲಿದ್ದವರು ದಿನಕರ ಶೆಟ್ಟಿಯವರು.

ತಮ್ಮ ಕಠಿಣ ಪರಿಶ್ರಮದ ಅವಿರತ ದುಡಿಮೆ, ಸಾಹಸ ಪ್ರವೃತ್ತಿ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ದಕ್ಷತೆ, ಸಾಂಸ್ಕ್ರತಿಕ, ಧಾರ್ಮಿಕ, ಶೈಕ್ಷಣಿಕ, ಸಮಾಜ ಸೇವೆಗಾಗಿ ಮಂಗಳೂರಿನ ಬಂಟ್ಸ್ ಹಾಸ್ಟೇಲ್ ನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಸನ್ಮಾನಿಸಲ್ಪಟ್ಟ ದಿನಕರ ಶೆಟ್ಟಿಯವರನ್ನು, ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.

ತಾನು ಪ್ರತಿನಿಧಿಸಿದ ಇಲಾಖೆಯಲ್ಲಿ ತಮ್ಮದೇ ಆದ ಛಾಪನ್ನು ಒತ್ತಿ, ತಾನು ಹುಟ್ಟಿದ ಬಂಟ ಸಮುದಾಯಕ್ಕೆ ವಿಶೇಷ ಸ್ಥಾನ ಮಾನ ಗೌರವವನ್ನು ತಂದುಕೊಟ್ಟು, ತುಳುನಾಡ ಬಂಟರ ಕಣ್ಮಣಿಯಾಗಿ ಕಂಗೊಳಿಸುತ್ತಿರುವ ಬಂಟರ ಹೆಮ್ಮೆಯ ಕುವರ ಮಂಗಳೂರು ದಕ್ಷಿಣ ಎಸಿಪಿ ಶ್ರೀ ದಿನಕರ ಶೆಟ್ಟಿಯವರಿಗೆ ಇನ್ನಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಅತ್ಯುನ್ನತ ಪದವಿ ಪ್ರಾಪ್ತಿಯಾಗುವಂತೆ ಭಗವಂತನು ಅನುಗ್ರಹಿಸಲಿ ಎಂದು ಹಾರೈಸೋಣ ಅಲ್ಲವೇ. (ನೀತಾ ರಾಜೇಶ್ ಶೆಟ್ಟಿ ಪಾಲೆಮಾರ್)

Pages