ಸುರತ್ಕಲ್ ಬಂಟರ ಸಂಘದಲ್ಲಿ ಸಹಾಯಹಸ್ತ, ವಿದ್ಯಾರ್ಥಿ ವೇತನ ವಿತರಣೆ
ಸುರತ್ಕಲ್: ಬಂಟರು ಸಂಘಟನಾತ್ಮಕವಾಗಿ, ಧಾರ್ಮಿಕವಾಗಿಯೂ ಬಲಶಾಲಿಯಾಗಿದ್ದರೂ ಸಮಾಜದಲ್ಲಿ ಪರಸ್ಪರ ಸ್ಪರ್ಧಾ ಮನೋಭಾವ ಕಡಿಮೆಯಾಗಬೇಕು. ಒಗ್ಗಟ್ಟು ಹೆಚ್ಚಾಗಬೇಕು. ಇದಕ್ಕಾಗಿ ಹಿರಿಯರ ಸಮ್ಮುಖದಲ್ಲಿ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ರೂಪಿಸಬೇಕಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಅವರು ಸುರತ್ಕಲ್ ಬಂಟರ ಸಂಘದ 22ನೇ ವಾರ್ಷಿಕ ಮಹಾಸಭೆಯ ಬಳಿಕ ನಡೆದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿವೇತನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಸುರತ್ಕಲ್ ಬಂಟರ ಸಂಘ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತಾ ಬಂದಿದೆ. 25ನೇ ವರ್ಷದ ಹೊಸ್ತಿಲಲ್ಲಿರುವ ಸಂಘ ಇನ್ನಷ್ಟು ಸಮಾಜಮುಖಿ ಸೇವೆ ಮಾಡುತ್ತಾ ಸಮಾಜದ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಲಿ. ಬಂಟರ ಸಂಘಗಳು ಇಂದು ದೇಶ ವಿದೇಶದಲ್ಲಿ ಕೂಡಾ ಇವೆ. ಆದರೆ ಇದೆಲ್ಲವನ್ನು ಒಂದೇ ವೇದಿಕೆಯಡಿ ತರುವ ಕೆಲಸ ನಡೆಯಬೇಕು. ಬಂಟರ ಸಮಾಜ ಎಲ್ಲೂ ಎಡವದಂತೆ ಎಚ್ಚೆತ್ತುಕೊಂಡು ಸಮಾಜದ ಪ್ರತಿಯೊಂದು ಕುಟುಂಬಕ್ಕೂ ಆಸರೆಯಾಗಬೇಕು ಎಂದು ಐಕಳ ಹರೀಶ್ ಶೆಟ್ಟಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿ.ಕೆ.ಸಮೂಹ ಸಂಸ್ಥೆಗಳ ಚೆಯರ್ ಮೆನ್ ಕರುಣಾಕರ ಎಮ್ ಶೆಟ್ಟಿ ಮಧ್ಯಗುತ್ತು ಮಾತನಾಡಿ, ಸುರತ್ಕಲ್ ಬಂಟರ ಸಂಘವು ಸಮಾಜದ ನೊಂದವರನ್ನು ಗುರುತಿಸಿ ಅವರಿಗೆ ಮನೆ, ಮಕ್ಕಳಿಗೆ ಶಿಕ್ಷಣ, ಆರ್ಥಿಕ ನೆರವು ನೀಡುವ ಕೆಲಸವನ್ನು ಮಾಡುತ್ತಿದೆ. ಇದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಸಮಾಜ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಈ ಸಂಘ ಇನ್ನಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲಿ. ವಿದ್ಯಾರ್ಥಿ ವೇತನ ಪಡೆದಿರುವ ಮಕ್ಕಳು ಅದರ ಸದ್ವಿನಿಯೋಗಪಡಿಸಿ ಜೀವನದಲ್ಲಿ ಮುಂದೆ ಬರಲಿ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಅವರು ಮಾತಾಡುತ್ತಾ, ಸಮಾಜದ ನೊಂದವರಿಗೆ ನೆರವಾಗುವ ಇಚ್ಛೆ ಇದ್ದಲ್ಲಿ ಯಾವ ರೀತಿ ಸ್ಪಂದಿಸಬಹುದು ಎನ್ನುವುದಕ್ಕೆ ಐಕಳ ಹರೀಶ್ ಶೆಟ್ಟಿ ಮತ್ತು ಸುಧಾಕರ ಪೂಂಜ ಅವರೇ ಉದಾಹರಣೆ. ಸುರತ್ಕಲ್ ಬಂಟರ ಸಂಘದ ಕೀರ್ತಿ ಪತಾಕೆ ಇದೇ ರೀತಿ ಜಗತ್ತಿನ ಉದ್ದಗಲಕ್ಕೆ ಪಸರಿಸಲಿ ಎಂದರು.
ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಧ್ಯಬೀಡು ದಿ. ರಾಘು ಸಿ. ಶೆಟ್ಟಿ ಸ್ಮರಣಾರ್ಥ 1 ಲಕ್ಷ ರೂ. ನಿರಂತರ ವಿದ್ಯಾರ್ಥಿ ವೇತನ ವಿತರಣೆ, ಬಂಟರ ಸಂಘದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ತೋಕೂರು ಚಂದ್ರಶೇಖರ ಶೆಟ್ಟಿ ಹಾಗೂ ಮಧ್ಯ ಶಶಿಕಲಾ ಶೆಟ್ಟಿ ಇವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಸುರತ್ಕಲ್ ಬಂಟರ ಸಂಘ ಹಾಗೂ ಮಧ್ಯಗುತ್ತು ಕರುಣಾಕರ ಶೆಟ್ಟಿ ಹಾಗೂ ದಾನಿಗಳ ಸಹಕಾರದೊಂದಿಗೆ ನಿರ್ಮಾಣಗೊಂಡಿರುವ ಮನೆಗಳ ಕೀಯನ್ನು ಹಸ್ತಾಂತರಿಸಲಾಯಿತು.
ಐಕಳ ಹರೀಶ್ ಶೆಟ್ಟಿ ಮತ್ತು ಸವಣೂರು ಸೀತಾರಾಮ ರೈ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅತಿಥಿಗಳಾಗಿ ಆಗಮಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ವಸಂತ ಶೆಟ್ಟಿ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಜಪೆ ಬಂಟರ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಪೆರಾರ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪಿ. ಶೆಟ್ಟಿ, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಚಿತ್ರಾ ಜೆ. ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ, ಪದಾಧಿಕಾರಿಗಳಾದ ಜತೆ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸಂಘಟನಾ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಬಾಳ ಜಗನ್ನಾಥ ಶೆಟ್ಟಿ ಕ್ರೀಡಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಕಾಟಿಪಳ್ಳ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಸ್ವಾಗತಿಸಿದರು. ಅನೂಪ್ ಶೆಟ್ಟಿ ಪ್ರಾರ್ಥಿಸಿದರು. ರಾಜೇಶ್ವರಿ ಡಿ ಶೆಟ್ಟಿ ಮತ್ತು ಸುಧಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಗ್ರಾಮವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಾ. ಪ್ರಿಯಾ ಹರೀಶ್ ಕಾರ್ಯಕ್ರಮ ನಿರ್ವಹಿಸಿದರು.